ನಮ್ಮ ಹೆಮ್ಮೆಯ ಭಾರತ (ಭಾಗ 69 - 70)

ನಮ್ಮ ಹೆಮ್ಮೆಯ ಭಾರತ (ಭಾಗ 69 - 70)

೬೯.ಭಾರತದ ಪ್ರಥಮ ಚಂದ್ರಯಾನ ದೇಶದ ಅಭಿಮಾನದ ಪ್ರತೀಕ
ಚಂದ್ರಯಾನ-೧, ಭಾರತದ ಪ್ರಥಮ ಮಾನವರಹಿತ ಚಂದ್ರಲೋಕದ ಅಭಿಯಾನ. ಈ ಯಾನವನ್ನು ೨೨ ಅಕ್ಟೋಬರ್ ೨೦೦೮ರಂದು, ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧಾವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಹಾರಿಸಿತು. ೧೪ ನವಂಬರ್ ೨೦೦೮ರಂದು, ಚಂದ್ರನ ಪರೀಕ್ಷಾ ಘಟಕವು ಚಂದ್ರಯಾನ ಪರಿಭ್ರಮಕದಿಂದ ಪ್ರತ್ಯೇಕಗೊಂಡು, ಚಂದ್ರನಲ್ಲಿ ಇಳಿಯಿತು. ಅದು ಭೂಮಿಯಿಂದ ೩,೮೬,೦೦೦ ಕಿಮೀ ದೂರ ಪ್ರಯಾಣ ಮಾಡಿತ್ತು.

ಈ ರೀತಿಯಲ್ಲಿ ಭಾರತವು ಚಂದ್ರನಲ್ಲಿ ಪರೀಕ್ಷಾ ಘಟಕವನ್ನು ಇಳಿಸಿದ ನಾಲ್ಕನೆಯ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆ ಚಂದ್ರಯಾನವು ಚಂದ್ರನ ಪರ್ವತಗಳು ಮತ್ತು ಕಂದಕಗಳ ೭೦,೦೦೦ಕ್ಕಿಂತ ಅಧಿಕ ಫೋಟೊಗಳನ್ನು ಇಸ್ರೋಗೆ ಕಳಿಸಿಕೊಟ್ಟಿತು. ಅದಲ್ಲದೆ, ಚಂದ್ರನ ಮಣ್ಣಿನ ರಾಸಾಯನಿಕ ಮತ್ತು ಖನಿಜಾಂಶಗಳ ಬಗ್ಗೆ ಮಾಹಿತಿಯನ್ನೂ ರವಾನಿಸಿತು.

ಭಾರತದ ೧೪೦ ಮಿಲಿಯನ್ ಡಾಲರ್ ವೆಚ್ಚದ ಚಂದ್ರಯಾನ-೨ ಅಭಿಯಾನ ಭಾಗಶಃ ಯಶಸ್ವಿಯಾಯಿತು. ಅದೇ ಬಾಹ್ಯಾಕಾಶ ಕೇಂದ್ರದಿಂದ ೧೫ ಜುಲಾಯಿ ೨೦೧೯ರಂದು ಇಸ್ರೋ ಉಡಾಯಿಸಿದ ೧೪೨ ಅಡಿ ಉದ್ದದ ರಾಕೆಟ್ ಚಂದ್ರ ಪರಿಭ್ರಮಕ, ವಿಕ್ರಮ್ ಲೂನಾರ್ ಲ್ಯಾಂಡರ್ ಮತ್ತು ೬-ಚಕ್ರಗಳ ರೋವರ್ - ಇವನ್ನು ಹೊತ್ತೊಯ್ದಿತು. ಚಂದ್ರನಲ್ಲಿ ಇಳಿಯಬೇಕಾಗಿದ್ದ ವಿಕ್ರಮ್ ಲೂನಾರ್ ಲ್ಯಾಂಡರ್, ಚಂದ್ರನ ಮೇಲ್ಮೈಗೆ ಕೇವಲ ೫೦೦ ಮೀಟರ್ ಬಾಕಿಯಿರುವಾಗ, ಭೂನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಡಿದುಕೊಂಡು ಚಂದ್ರನ ನೆಲಕ್ಕೆ ಅಪ್ಪಳಿಸಿತು. ಆದರೆ, ಅದಕ್ಕಿಂತ ಮುಂಚೆಯೇ ಲೂನಾರ್ ಲ್ಯಾಂಡರಿನಿಂದ ಕಳಚಿಕೊಂಡಿದ್ದ ಚಂದ್ರ ಪರಿಭ್ರಮಕ ಏಳು ವರುಷಗಳ ಅವಧಿ ಚಂದ್ರನನ್ನು ಪರಿಭ್ರಮಿಸುತ್ತಾ ಭೂನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನಿಸಲಿದೆ ಎಂಬುದು ಸಮಾಧಾನದ ಸಂಗತಿ.   
 
೭೦.ಮಂಗಳ ಪರಿಭ್ರಮಕ ಮಿಷನ್ ಭಾರತದ ಬಾಹ್ಯಾಕಾಶ ಸಾಧನೆಯ ಮೈಲಿಗಲ್ಲು
ಮಂಗಳ ಗ್ರಹಕ್ಕೆ ಭಾರತದ ಪ್ರಥಮ ಅಭಿಯಾನ ಮಂಗಳಯಾನವು ೫ ನವಂಬರ್ ೨೦೧೩ರಂದು ಉಡಾಯಿಸಲ್ಪಟ್ಟಿತು. ಆಕಾಶಕ್ಕೆ ಜಿಗಿದ ೩೫೦ ಟನ್ ತೂಕದ ಇಸ್ರೋದ ರಾಕೆಟ್ ಮಾನವರಹಿತ ಘಟಕವನ್ನು ಮಂಗಳ ಗ್ರಹಕ್ಕೆ ಹೊತ್ತೊಯ್ದಿತು.

ವಿವಿಧ ಗ್ರಹಗಳತ್ತ ಭಾರತದ ಅಭಿಯಾನದ ವಿನ್ಯಾಸ, ಯೋಜನೆ, ಕಾರ್ಯಾಚರಣೆ ಮತ್ತು ಮೇಲುಸ್ತುವಾರಿಗೆ ಅಗತ್ಯವಾದ ತಂತ್ರಜ್ನಾನಗಳನ್ನು ಅಭಿವೃದ್ಧಿ ಪಡಿಸುವುದು ಪ್ರಥಮ ಮಂಗಳಯಾನದ ಪ್ರಧಾನ ಉದ್ದೇಶವಾಗಿತ್ತು.

ಅದೇ ವರುಷ ಯುಎಸ್‌ಎ ದೇಶದ “ನಾಸಾ" ಸಂಸ್ಥೆ ಹಾರಿಸಿದ ಇಂತಹದೇ ವಾಹಕ ಯೋಜನೆಯ ವೆಚ್ಚಕ್ಕೆ ಹೋಲಿಸಿದಾಗ, ಇಸ್ರೋದ ಮಂಗಳಯಾನ ಯೋಜನೆಯ ವೆಚ್ಚ ಅದಕ್ಕಿಂತ ೯ ಪಟ್ಟು ಕಡಿಮೆ ಅಂದರೆ ೭೪ ಮಿಲಿಯ ಡಾಲರ್.    

ಫೋಟೋ ೧: ಇಸ್ರೋದ ೨ನೇ ಚಂದ್ರಯಾನ ಉಡ್ಡಯನ

ಫೋಟೋ ೨: ಇಸ್ರೋದ ಮಂಗಳ ಪರಿಭ್ರಮಕ ಮಿಷನ್