ನಮ್ಮ ಹೆಮ್ಮೆಯ ಭಾರತ (15 - 16)

ನಮ್ಮ ಹೆಮ್ಮೆಯ ಭಾರತ (15 - 16)

೧೫. ಭಾರತದ ಉಡುಪುಗಳ ವೈವಿಧ್ಯತೆಗೆ ಜಗತ್ತಿನಲ್ಲಿ ಸಾಟಿಯಿಲ್ಲ.
ಭಾರತದಲ್ಲಿ ಸಾಂಪ್ರದಾಯಿಕ ಉಡುಪು ಪ್ರದೇಶದಿಂದ ಪ್ರದೇಶಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಬದಲಾಗುತ್ತದೆ. ಭಾರತದ ಹಲವು ಬುಡಕಟ್ಟಿನವರ ಮತ್ತು ಈಶಾನ್ಯ ರಾಜ್ಯಗಳ ಜನರ ಉಡುಪುಗಳಂತೂ ವರ್ಣಮಯ.

ಪ್ರತಿಯೊಬ್ಬನು ಧರಿಸುವ ಉಡುಪು ಆತನ/ ಆಕೆಯ ವಾಸಸ್ಥಳ, ಸ್ಥಳೀಯ ಪದ್ಧತಿ, ಹವಾಮಾನ ಮತ್ತು ಸಾಮಾಜಿಕ ಅಂತಸ್ತು ಅವಲಂಬಿಸಿ ಬದಲಾಗುತ್ತದೆ. ಭಾರತದ ಉದ್ದಗಲದಲ್ಲಿ ಮಹಿಳೆಯರು ಸೀರೆ ಧರಿಸುವುದು ಸಾಮಾನ್ಯ; ಆದರೆ ಅದನ್ನು ಉಡುವ ರೀತಿ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ!

ಉತ್ತರ ಭಾರತದಲ್ಲಿ ಮಹಿಳೆಯರು ಸಲ್ವಾರ ಕಮೀಜ್ ಮತ್ತು ದುಪ್ಪಟ್ಟಾ ಧರಿಸುವುದು ಸಾಮಾನ್ಯ. ದಕ್ಷಿಣ ಭಾರತದ ಹುಡುಗಿಯರು ಉದ್ದಲಂಗ ಮತ್ತು ರವಕೆ ಧರಿಸುವುದು ಸಾಮಾನ್ಯ.

ಪುರುಷರು ಧರಿಸುವುದು ಪೈಜಾಮಾ, ಕುರ್ತಾ; ಪ್ಯಾಂಟ್ ಅಥವಾ ಧೋತಿ ಮತ್ತು ಷರಟು. ಪುರುಷರ ತಲೆಗೆ ಕೆಲವು ಪ್ರದೇಶಗಳಲ್ಲಿ ಮುಂಡಾಸು; ಕೆಲವು ಸಮುದಾಯಗಳಲ್ಲಿ ಟೋಪಿ. ನಗರಗಳಲ್ಲಿ ಪಾಶ್ಚಾತ್ಯ ಉಡುಗೆ ಧರಿಸುವುದು ಸಾಮಾನ್ಯ.

೧೬.ಜಗತ್ತಿನ ಅತಿ ದೊಡ್ಡ ಬಂಗಾರದ ಮಾರುಕಟ್ಟೆ ಭಾರತ
ಪ್ರಾಚೀನ ಕಾಲದಿಂದಲೂ ಭಾರತೀಯರಿಗೆ ಬಂಗಾರದ ಮೋಹ. ಶತಮಾನಗಳಿಂದಲೂ ಬಂಗಾರ ಎಂಬುದು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿದೆ. ಬಂಗಾರದ ಒಡವೆ ಧರಿಸದ ಮಹಿಳೆ ಭಾರತದಲ್ಲಿ ತೀರಾ ಅಪರೂಪ. ಬಂಗಾರದ ಆಭರಣಗಳು ಸಂಪತ್ತಿನ, ಸಮೃದ್ಧಿಯ ಮತ್ತು ಸಾಮಾಜಿಕ ಸ್ಥಿತಿಗತಿಯ ಸಂಕೇತವಾಗಿವೆ.

ಭಾರತವನ್ನು ಆಳಿದ ನೂರಾರು ರಾಜಮಹಾರಾಜರು, ಚಕ್ರವರ್ತಿಗಳು ಮತ್ತು ರಾಜಮನೆತನಗಳು ತಮ್ಮ ಸಂಪತ್ತನ್ನು ಬಂಗರದ ರೂಪದಲ್ಲೇ ಶೇಖರಿಸಿ ಇಡುತ್ತಿದ್ದರು. ಹಲವು ರಾಜಮನೆತನಗಳ ನಡುವೆ ಸಂಪತ್ತಿನ ವಿನಿಮಯಕ್ಕೆ ಬಳಕೆ ಆಗುತ್ತಿದ್ದದ್ದು ಬಂಗಾರ. ಮೊಘಲ ರಾಜರ ಮತ್ತು ಹೈದರಾಬಾದಿನ ನಿಜಾಮರ ಬಂಗಾರದ ಸಂಗ್ರಹವಂತೂ ಕಣ್ಣು ಕೋರೈಸುವಂತಿತ್ತು.

ನೆರೆ, ಭೂಕಂಪ, ಬಿರುಗಾಳಿಯಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಸಂಪತ್ತನ್ನು ರಕ್ಷಿಸಿಕೊಳ್ಳಲು ಅದನ್ನು ಬಂಗಾರದ ರೂಪದಲ್ಲಿ ಶೇಖರಿಸುವುದು ಅಗತ್ಯವಾಗಿತ್ತು. ಅದಲ್ಲದೆ, ಶತಮಾನಗಳ ಕಾಲ, ಗ್ರಾಮೀಣ ಭಾರತದಲ್ಲಿ, ಜಮೀನಿನ ಹೊರತಾಗಿ ಉಳಿತಾಯದ ಒಂದೇ ಒಂದು ವಿಧಾನ ಬಂಗಾರದ ರೂಪದಲ್ಲಿ ಕಾದಿಡುವುದು.

ಭಾರತೀಯ ಸಮಾಜದಲ್ಲಿ ಮದುವೆಯ ಸಂದರ್ಭದಲ್ಲಿ ಮದುಮಗ-ಮದುಮಗಳಿಗೆ ಬಂಗಾರ ಕೊಡುವುದು ಪದ್ಧತಿ. ಸಾಮಾನ್ಯ ಆದಾಯದ ಕುಟುಂಬಗಳು ಮಕ್ಕಳು ಹುಟ್ಟಿದ ನಂತರ ಆಗಾಗ ಬಂಗಾರ ಖರೀದಿಸಿ, ಸಂಗ್ರಹಿಸಿ ಇಟ್ಟು ಕೊಳ್ಳುತ್ತಾರೆ.

ದೇವಸ್ಥಾನಗಳಲ್ಲಿಯೂ ದೇವರಿಗೆ ವಿವಿಧ ಆಭರಣಗಳ ರೂಪದಲ್ಲಿ ಬಂಗಾರವನ್ನು ಶೇಖರಿಸಿ ಇಡುವ ಪದ್ಧತಿಯಿದೆ. ಉದಾಹರಣೆಗೆ, ತಿರುವನಂತಪುರದ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಶತಮಾನಗಳ ಕಾಲ ರಹಸ್ಯ ಕೋಣೆಗಳಲ್ಲಿ ಬಂಗಾರವನ್ನು ಸಂಗ್ರಹಿಸಿ ಇಡಲಾಗಿತ್ತು. ಕೊನೆಗೆ, ಕೆಲವು ವರುಷಗಳ ಮುಂಚೆ ಆ ರಹಸ್ಯ ಕೋಣೆಗಳ (ಒಂದು ಕೋಣೆಯ ಹೊರತಾಗಿ) ಬಾಗಿಲುಗಳನ್ನು ಒಡೆದಾಗ, ಅಲ್ಲಿತ್ತು ರೂಪಾಯಿ ಒಂದು ಲಕ್ಷ ಕೋಟಿಗಿಂತ ಅಧಿಕ ಮೌಲ್ಯದ ಬಂಗಾರ ಇತ್ಯಾದಿ ಸಂಪತ್ತು! ಇದನ್ನು ತಿಳಿದಾಗ ಇಡೀ ಜಗತ್ತೇ ಬೆರಗಾಯಿತು.

ಅಂತೂ ಭಾರತೀಯರಿಗೆ ಬಂಗಾರವೆಂದರೆ ಪಂಚಪ್ರಾಣ. ಇದರಿಂದಾಗಿ ಭಾರತವು ಜಗತ್ತಿನ ಅತ್ಯಂತ ದೊಡ್ಡ ಬಂಗಾರದ ಮಾರುಕಟ್ಟೆಯಾಗಿದೆ. ೨೦೧೫ರಿಂದೀಚೆಗೆ ಭಾರತವು ಪ್ರತಿ ಆರ್ಥಿಕ ವರುಷದಲ್ಲಿ ೬೦೦ - ೭೦೦ ಟನ್ ಬಂಗಾರ ಆಮದು ಮಾಡಿಕೊಳ್ಳುತ್ತಿದೆ!