ನರರಾಕ್ಷಸರ ಅಂತ್ಯವೆಂದು..?
"ಹೆಣ್ಣು ಬರಿ ಕಾಮದ,ಭೋಗದ ವಸ್ತುವೇ?ಪುಟ್ಟ ಹೆಣ್ಣು ಹಸುಳೆಯಿಂದ ಹಿಡಿದು ಮುದುಕಿಯವರೆಗೂ ಬೇಕಾಗಿರುವುದು ಅವಳ ದೈಹಿಕ ಸುಖ ಮಾತ್ರವೇ?" ಇಂತದ್ದೊಂದು ಪ್ರಶ್ನೆ ಪ್ರತಿ ದಿನವೂ ಮೂಡಿ ಮರೆಯಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಪುಷ್ಠಿ ಒದಗಿಸುವಂತೆ ದಿನನಿತ್ಯವೂ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ 'ಆಸಿಫಾ'ಳ ಘಟನೆ ಮನಕಲಕುವಂತದು, ಅದು ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸಿತು.ಮುಗ್ಧ ಮಗುವಿನ ಮೇಲೆ ನಡೆದ ಈ ಹಸಿ ಹಸಿ ಕ್ರೌರ್ಯ ನರರಾಕ್ಷಸರ ದರ್ಶನ ಮಾಡಿಸಿಬಿಟ್ಟಿತು.
ಹೆಣ್ಣಾಗಿ ಹುಟ್ಟುವುದೇ ತಪ್ಪೇ? ಎಂಬ ಪ್ರಶ್ನೆ ಮನದಾಳದಿಂದ ಕೇಳಿ ಬರುತ್ತಲಿದೆ.
ಪ್ರಚೋದನಕಾರಿ ಬಟ್ಟೆ, ಅವಳ ಹಾವ-ಭಾವ,ಓಡಾಡುವ ಸಮಯ ಇವೆಲ್ಲವೂ ಅತ್ಯಾಚಾರಕ್ಕೆ ಕಾರಣ ಎನ್ನುವ ಬುದ್ದಿಜೀವಿಗಳೇ ಹೇಳಿ..,ಎಂಟು ವರ್ಷದ ಪುಟ್ಟ ಕಂದನಲ್ಲಿ ಅದಾವ ಪ್ರಚೋದನಕಾರಿ ಅಂಶವಿತ್ತು?ಅತ್ಯಾಚಾರಿಗಳಿಗೆ ಪ್ರಚೋದಿಸುವ ಅದ್ಯಾವ ಹಾವ-ಭಾವದಿಂದ ಅವಳು ನಿಮ್ಮನ್ನು ಸೆಳೆದಿದ್ದಳು? ಬುದ್ದಿ ಬಲಿಯದ ಆ ಮಗು ಅದೇನು ಪಾಪ ಮಾಡಿತ್ತು?
ಇಂತಹಾ ಪಾಶವೀ ಕೃತ್ಯಕ್ಕೆ ಧರ್ಮಗಳ ಹೆಸರು ಬಳಸಿ, ಕೋಮುಗಲಭೆಗೆ ಕಾರಣರಾಗಲು ಹೊರಟಿರುವಿರಲ್ಲಾ, ನಿಮಗಿಂತಾ ಸಮಯಸಾಧಕರು ಮತ್ತಾರಾದರೂ ಇರುವರೇ? ಪುಟ್ಟ ಕಂದಮ್ಮನ ಮೇಲೆ ಗಂಡಸ್ತನದ ಶೌರ್ಯ ತೋರಿಸಿ ಸರದಿಯಂತೆ ವಿಜೃಂಭಿಸಿದಿರಲ್ಲಾ ನಿಮಗಿಂತಾ ಅಧಮರು ಇರಲು ಸಾದ್ಯವೇ? ಅಧಿಕಾರದ ಅಮಲು,ಹಣದ ಮದದಿಂದ ಕೊಬ್ಬಿ ಹೋಗಿರುವ ನೀವು ನರರಾಕ್ಷಸರಲ್ಲದೇ ಮತ್ತೇನು? ವಿದ್ಯಾವಂತರಾಗಿ ಸರ್ಕಾರದ ಹುದ್ದೆಯಲ್ಲಿದ್ದು, ದುಷ್ಟರನ್ನು ಶಿಕ್ಷಿಸಬೇಕಾದ ನೀವೇ ಮೃಗಕ್ಕಿಂತಲೂ ಕಡೆಯಾಗಿ ವರ್ತಿಸಿದಾಗ 'ರಕ್ಷಕ'ರಲ್ಲಿ ನಂಬಿಕೆ ಇಡುವುದಾದರೂ ಹೇಗೆ?
ಇಂದು ನಮ್ಮಿಂದ ಬಹಳ ದೂರದಲ್ಲಿ ನಡೆದ ಘಟನೆ ನಾಳೆ ನಮ್ಮ ಸುತ್ತ-ಮುತ್ತ ನಡೆಯಬಹುದು. ಅಷ್ಟೇ ಏಕೆ? ನಮ್ಮ ಮನೆಯ ಹೆಣ್ಣುಮಕ್ಕಳೇ ಬಲಿಯಾಗಬಹುದು..ಯಾರದೋ ಸಮಸ್ಯೆಂದು ನಾವು ಸ್ಪಂದಿಸದಿದ್ದರೆ ನಾವು ಆ ಘಟನೆಗೆ ಕುಮ್ಮಕ್ಕು ಕೊಟ್ಟಂಟೆಯೇ ಅಲ್ಲವೇ?
ಒಂದೊಮ್ಮೆ ನನಗೆ ಅನಿಸಿದ್ದು, ಒಂದು ವೇಳೆ ಆಸಿಫಾ ಬದುಕುಳಿದಿದ್ದರೆ ಅವಳಿಗೆ ಮಾನವೀಯತೆ, ಮನುಷ್ಯತ್ವದ ಮೇಲೆ ನಂಬಿಕೆಯೇ ಹೋಗಿಬಿಡುತ್ತಿತ್ತು.'ದೊಡ್ಡ ಜನರ ಸಣ್ಣ ಮನಸ್ಸು'ಗಳು ಪುಟಾಣಿಯ ಗಾಯದ ಮೇಲೆ ಬರೆ ಎಳೆಯುತ್ತಿದ್ದವು.
ರಾಕ್ಷಸರ ಅಪರಾವತಾರ ತಾಳಿ ಈ ಕೃತ್ಯ ನಡೆಸಿರುವವರೇ ಉತ್ತರಿಸಿ,ಆ ಮಗುವಿನ ಮೇಲೆ ವಿಜೃಂಭಿಸುವಾಗ ನಿಮಗೆ ನಿಮ್ಮ ಮಕ್ಕಳ ಭವಿಷ್ಯ ನೆನಪಾಗಲಿಲ್ಲವೇ? ನಿಮ್ಮ ತಾಯಿ,ತಂಗಿ,ಹೆಂಡತಿ, ಮಕ್ಕಳೇ ಈ ಜಾಗದಲ್ಲಿದ್ದಿದ್ದರೆ ಎಂಬ ಕನಿಷ್ಟ ಚಿಂತನೆಯೂ ಬರಲಿಲ್ಲವೇ? ನಿಮಗೆ ಹೇಗೆ ಈ ವಿಚಾರಗಳು ಬರಲು ಸಾಧ್ಯ? ನೀವು ಮಾನವತ್ವವನ್ನು ತೊರೆದು ರಾಕ್ಷಸರಾದವರು ಅಲ್ಲವೇ?
ನ್ಯಾಯ ಪಾಲಕರೇ ಉತ್ತರಿಸಿ, ಈ ಅನ್ಯಾಯ ನಿಮ್ಮ ಮನೆಯ ಮಗಳಿಗೇ ಆಗಿದ್ದರೆ,ಜಾತಿ,ಮತ,ಪಂಥ,ಧರ್ಮದ ಆಧಾರದ ಮೇಲೆ ಕೋಮುಗಲಭೆಯನ್ನು ಸೃಷ್ಟಿಸಿ ಅದನ್ನು ಲಾಭಕ್ಕಾಗಿ ಬಳಸಿಕೊಂಡು, ಅಪರಾಧಿಗಳನ್ನು ಪಾರು ಮಾಡುತ್ತಿದ್ದಿರಾ?
ನ್ಯಾಯ ದೇವತೆಯ ಕಣ್ಣು ಕುರುಡಾಗಿದೆ. ದೇಗುಲ,ಮಸೀದಿ,ಚರ್ಚಿನಲ್ಲಿನ ದೇವರುಗಳು ಕಲ್ಲಾಗಿದ್ದಾರೆ. ನರರಾಕ್ಷಸರ ಈ ಅಟ್ಟಹಾಸಕ್ಕೆ ತೆರೆ ಎಳೆಯಲು ದೇವರು ಬರುವರೇ? ಗುರುತು-ಪರಿಚಯವಿರುವ ಮನುಷ್ಯರನ್ನೇ ನಂಬಲು ಸಾಧ್ಯವಿಲ್ಲದ ಸ್ಥಿತಿ ಇರುವಾಗ, ಕಾಣಿಸದ ದೇವರನು ನಂಬಿ ಕೈ ಕಟ್ಟಿ ಕೂರಲು ಸಾಧ್ಯವೇ?
ಇಂತವೇ ಎಷ್ಟೋ ನುಡಿನಮನಗಳು ನಿನಗೆ ಸಂದಿರಬಹುದು,ಕಂದಾ..
ನಿನಗಷ್ಟೇ ಅಲ್ಲಾ, ನಿನ್ನಂತೆ ಅನ್ಯಾಯಕ್ಕೆ ಒಳಗಾಗಿರುವ ನಿನ್ನ ಸಹೋದರಿಯರಿಗೂ ಸಂದಿರಬಹುದು.'RIP' ಪ್ರತಿಭಟನೆಗಳಿದು ಸುಮ್ಮನಾಗಬಹುದು,ಒಂದಷ್ಟು ದಿನ ಕಳೆದ ಮೇಲೆ ಮರೆತೂ ಹೋಗಬಹುದು. ಏಕೆಂದರೆ, ಇಲ್ಲಿಯವರೆಗೂ ಆಗಿರುವುದೆಲ್ಲಾ ಇಂತವೇ...
ಕೈಲಾಗದ ಹೇಡಿಯಂತೆ ನಾನೂ ಸಹಾ ಒಂದಿಷ್ಟನ್ನು ಗೀಚಿ,ಸಹಾನುಭೂತಿ ತೋರಿಸುತ್ತೇನೆ, ನನ್ನ ಮಿತಿಯಲ್ಲಿ ನನಗೆ ಮಾಡಲಾಗುವುದು ಇಷ್ಟನ್ನೇ..
ಎಲ್ಲರಂತೆ ನಾನು "RIP" ಎನ್ನುವುದಿಲ್ಲ, ಏಕೆಂದರೆ ಇಂತಾ ನರರೂಪದ ರಾಕ್ಷಸರ ಅಟ್ಟಹಾಸವನ್ನು ತಡೆಯುವ ಶಕ್ತಿ ನಿನ್ನ ಹೆಸರಿಗೆ ಬರಲಿ,ಆತ್ಮಶಾಂತಿಯಿಲ್ಲದೆ ಆ ನರರಾಕ್ಷಸರು ಒದ್ದಾಡುವ ದಿನಗಳು ಹತ್ತಿರವಾಗಲಿ..
ನೀನು ನರಳಿ, ಇಂಚಿಂಚೂ ಹಿಂಸೆ ಅನುಭವಿಸಿ ಸತ್ತಿರುವ ಪರಿಸ್ಥಿತಿಯನ್ನು ಅವರೂ ಅನುಭವಿಸಲಿ, ಈಗ ಕಲ್ಲಾಗಿರುವ ದೇವರು ಮುಂದೆಯೂ ಕಲ್ಲಾಗಿಯೇ ಇದ್ದುಬಿಡಲಿ. ಅವರವರ ಕರ್ಮಫಲವನ್ನು ಅವರು ಈಗಲೇ ಅನುಭವಿಸಲಿ..
ಪುರಾಣದ ರಾಕ್ಷಸರು ಶಾಪಗ್ರಸ್ತರು,ಅವರಿಗೆ ಸಾವಿನ ನಂತರ ಸ್ವರ್ಗ ಇಲ್ಲವೇ ಮೋಕ್ಷ ಪ್ರಾಪ್ತಿಯಾಗಿಬಿಡುತ್ತದೆ. ಆದರೆ ಈ ನರರಾಕ್ಷಸರು ಗೋಮುಖ ವ್ಯಾಘ್ರರು, ಇವರು ಶಾಪಗ್ರಸ್ತರಾಗಿಯೇ ಉಳಿದು ಬಿಡಲಿ..
ಈ ವಿಕೃತ ಆಸೆ ನನಗಂತೂ ಇದೆ,ಏಕೆಂದರೆ ನಲುಗಿ ನರಳಿದ ಆ ಪುಟ್ಟ ಕಂದಮ್ಮನ ಸಾವು ಕಣ್ಣಿಗೆ ಕಟ್ಟಿದಂತಾಗುತ್ತಿದೆ.ಮುಂದಿನ ತಲೆಮಾರಿನ ಭೀಕರತೆಯನ್ನು ನೆನೆದಲ್ಲಾ ಈ ಬಯಕೆ. ನಿನ್ನ ಸಾವಿನ ಭೀಕರತೆಯನ್ನು ನೆನೆದೇ ಕಂದಾ..
ಮುಂದೆ, ಹುಟ್ಟಿದರೆ ಹೆಣ್ಣಾಗಿಯೇ ಹುಟ್ಟು,ಇಂತಹಾ ನರರಾಕ್ಷಸರನ್ನು ಅಂತ್ಯಗೊಳಿಸುವ ಶಕ್ತಿ ಸ್ವರೂಪಿಣಿಯಾಗಿ..
-ವಿಭಾ ವಿಶ್ವನಾಥ್
Comments
ಉ: ನರರಾಕ್ಷಸರ ಅಂತ್ಯವೆಂದು..?
ಆಸಿಫಾಳ ಹಂತಕರು ವಧಾರ್ಹರು. ಇಂದು ಮಾಧ್ಯಮಾದಮರ ಮತ್ತು ಮಾಧ್ಯಮಹಾದರಿಗಳ 'ಸೆಲೆಕ್ಟಿವ್' ಪ್ರತಿಭಟನೆಗಳೂ ಕ್ಷಮಾರ್ಹವಲ್ಲ. ಪ್ರತಿಭಟನೆಗಳೂ ಮಾನವೀಯ ಅಂತಃಕರಣಗಳನ್ನು ಬದಿಗಿಟ್ಟು, ರಾಜಕೀಯೀಕರಣಗೊಳ್ಳುತ್ತಿರುವುದನ್ನೂ ಜನ ಗುರುತಿಸಬೇಕಿದೆ. ಸತ್ತವರ ಜಾತಿ, ಹಿನ್ನೆಲೆ ಮುಂತಾದವನ್ನು ಗುರುತಿಸಿ ಕೆಲವನ್ನು ಮಾತ್ರ ಪ್ರತಿಭಟಿಸುವವರೂ ಕುತ್ಸಿತರೇ ಆಗುತ್ತಾರೆ. ನಿಷ್ಪಕ್ಷಪಾತ ಮಾಧ್ಯಮಗಳ ಅಗತ್ಯ ಇಂದು ಬಹಳವಾಗಿದೆ.
ಉ: ನರರಾಕ್ಷಸರ ಅಂತ್ಯವೆಂದು..?
ವಿಭಾ ಮೇಡಂ, ನಿಮ್ಮ ಲೇಖನ ಓದಿ ಕಣ್ಣುತುಂಬಿತು.
೨ ದಿನಗಳ ಕಾಲ ಸತತವಾಗಿ, ಆ ಹೆಣ್ಣು ಮಗಳಿಗೆ ಮಾದಕ ದ್ರವ್ಯ ಕೊಟ್ಟು, ಸರತಿಯ ಮೇಲೆ ಅತ್ಯಾಚಾರ ಮಾಡಿ, ಕೊನೆಗೆ ಆ ಮಗುವಿನ ಜರ್ಜರಿತ ಶರೀರವನ್ನ ಕಲ್ಲುಗಳಿಂದ ಜಜ್ಜಿ, ಅಮಾನುಷವಾಗಿ ಕೊಲೆ ಮಾಡಿದ್ದು ನಮ್ಮ ವಿವೇಚನೆಗೆ ದಕ್ಕುತ್ತಿಲ್ಲ.
ಹೆಣ್ಣಾಗಿ ಹುಟ್ಟಿದ ತಮ್ಮ ನೋವು ಚೆನ್ನಾಗಿ ಅರ್ಥವಾಗುತ್ತೆ. ಇಂದು ದೂರದ ಜಮ್ಮುವಿನ ಆಸಿಫಾ, ನಾಳೆ ನಮ್ಮೂರ ಪುಟ್ಟ ಮಗು, ನಾಳೆ ನಮ್ಮ ಮನೆಯದೇ ಆದ ಪುಟಾಣಿ ಕಂದ... ಯಾರು ಬೇಕಾದರೂ ಬಲಿಯಾಗಬಹುದು ಕಾಮ ಪಿಪಾಸುಗಳ ಅಟ್ಟಹಾಸಕ್ಕೆ.
ಮನ ಕಲಕುವ, ಚಿತ್ತ ಛಿದ್ರವಾಗೋ ಲೇಖನಕ್ಕೆ ತಮಗೆ ವಂದನೆಗಳು.