ನರೇಂದ್ರ ಮೋದಿಯವರು ನಿಮಗೆ ಗೊತ್ತೇ?

ನರೇಂದ್ರ ಮೋದಿಯವರು ನಿಮಗೆ ಗೊತ್ತೇ?

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ನಿತಿನ್ ಅಗರ್ ವಾಲ್, ಕನ್ನಡಕ್ಕೆ: ಜಿ.ಎಂ. ಕೃಷ್ಣಮೂರ್ತಿ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೧೦.೦೦, ಮುದ್ರಣ: ೨೦೨೪

ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಎರಡು ಅವಧಿಗಳನ್ನು ಮುಗಿಸಿ ಮೂರನೇ ಅವಧಿಯಲ್ಲಿ ಸಾಗುತ್ತಿರುವ ನರೇಂದ್ರ ದಾಮೋದರದಾಸ್ ಮೋದಿಯವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳು ಬಂದಿವೆ. ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನಿಯಾದ ಸಂದರ್ಭದಲ್ಲಿ ನಿತಿನ್ ಅಗರ್ ವಾಲ್ ಅವರು ಆಂಗ್ಲ ಭಾಷೆಯಲ್ಲಿ ಬರೆದ ಕೃತಿಯು ‘ನರೇಂದ್ರ ಮೋದಿಯವರು ನಿಮಗೆ ಗೊತ್ತೇ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದವಾಗಿದೆ. ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದವರು ಜಿ.ಎಂ.ಕೃಷ್ಣಮೂರ್ತಿಯವರು. ಈ ಪುಸ್ತಕ ಮಕ್ಕಳಿಗೆ ಓದಲು ಬಹಳ ಅನುಕೂಲಕರವಾಗಿದೆ ಏಕೆಂದರೆ ಇದರ ಅಕ್ಷರಗಳು ದೊಡ್ಡ ಗಾತ್ರದಲ್ಲಿದ್ದು, ಚಿತ್ರಗಳಿಂದ ಕೂಡಿದೆ.

ನರೇಂದ್ರ ಮೋದಿಯವರು ಬಾಲಕರಾಗಿದ್ದಾಗ ಮತ್ತು ಹದಿಹರೆಯದಲ್ಲಿದ್ದಾಗ ಚಹಾ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದರು, ಅವರು ಶಾಲೆಯಲ್ಲಿ ಚರ್ಚಾ ಸ್ಪರ್ಧೆಯಲ್ಲಿ ಮತ್ತು ರಂಗಭೂಮಿಯಲ್ಲಿ ಅತ್ಯಂತ ಆಸಕ್ತಿಯನ್ನು ಇರಿಸಿಕೊಂಡಿದ್ದರು, ಅವರು ಏಕಾಂತ ಜೀವನದ ಕಡೆಗೆ ಆಕರ್ಷಿತರಾಗಿದ್ದರು. ಒಮ್ಮೆ ಅವರು ಹಿಮಾಲಯದ ಕಡೆಗೆ ತೆರಳಲು ಮನೆ ಬಿಟ್ಟು ಹೊರಟು ಬಂದಿದ್ದರು ಎನ್ನುವಂತಹ ಆಸಕ್ತಿದಾಯಕ ಮತ್ತು ಅಪರೂಪದ ಮಾಹಿತಿಯಿಂದ ಈ ಪುಸ್ತಕ ಮೂಡಿಬಂದಿದೆ. 

ಈ ಪುಸ್ತಕದಲ್ಲಿ ಯಾರು ಈ ಮೋದಿ?, ಅವರ ಬೆಳವಣಿಗೆಯ ಕಾಲ, ಆರಂಭದ ಜೀವನ, ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ದಿನಗಳು, ಸಾರ್ವತ್ರಿಕ ಚುನಾವಣೆಯ ಸಂದರ್ಭ, ದೇಶ ಒಪ್ಪುವಂತಹ ಪ್ರಧಾನಿ, ಭವಿಷ್ಯತ್ಕಾಲದ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಲಾಗಿದೆ. ಇದರ ಜೊತೆಗೆ ಅವರ ಜೀವನದ ಘಟನೆಗಳನ್ನು ತಿಳಿಸುವ ಕಾಲಾನುಕ್ರಮ ಮತ್ತು ರಸ ಪ್ರಶ್ನೆಗಳನ್ನು ಪುಸ್ತಕದ ಕೊನೆಯಲ್ಲಿ ನೀಡಲಾಗಿದೆ.

“ತುಪಾಕಿಯ (ಗನ್) ನ್ನು ಹಿಡಿದುಕೊಂಡರೆ ನೀವು ಭೂಮಿಯನ್ನು ಕೆಂಪಗೆ ಮಾಡಬಹುದು, ಆದರೆ ನಿಮ್ಮ ಬಳಿ ಒಂದು ನೇಗಿಲು ಇದ್ದರೆ ನೀವು ಭೂಮಿಯನ್ನು ಹಸಿರು ಮಾಡಬಹುದು.” ಎನ್ನುವಂಥಹ ಹಲವಾರು ನರೇಂದ್ರ ಮೋದಿಯವರ ನುಡಿಗಳು ಈ ಕೃತಿಯಲ್ಲಿವೆ. ಈ ಕೃತಿಯು ನರೇಂದ್ರ ಮೋದಿಯವರ ಜೀವನ ಗಾಥೆಯನ್ನು ಹೇಳುವುದಕ್ಕೆ ಮೀಸಲಾದರೂ ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್), ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಫೇಸ್ಬುಕ್, ಟ್ವಿಟರ್ (ಈಗ ಎಕ್ಸ್) ಮೊದಲಾದ ಸಾಮಾಜಿಕ ಜಾಲತಾಣಗಳು, ಸಾರ್ಕ್, ಸ್ವಚ್ಛ್ ಭಾರತ್ ಅಭಿಯಾನ್ ಮೊದಲಾದ ವಿಷಯಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಸುಮಾರು ೧೪೦ ಪುಟಗಳ ಈ ಕೃತಿಯು ವಿದ್ಯಾರ್ಥಿಗಳಿಗೆ ವಿಷಯ ಸಂಗ್ರಹಣೆ ಮತ್ತು ಪ್ರಬಂಧ, ಭಾಷಣದಂತಹ ಕಾರ್ಯಗಳಿಗೆ ತುಂಬಾ ನೆರವು ನೀಡಬಲ್ಲದು.