ನವರಾತ್ರಿ ಎಂಟನೇ ದಿನದ ಆರಾಧನೆ : ಮಹಾ ಗೌರಿ

ನವರಾತ್ರಿ ಎಂಟನೇ ದಿನದ ಆರಾಧನೆ : ಮಹಾ ಗೌರಿ

*ಶ್ವೇತೇ ವೃಕ್ಷೇ ಸಮಾರೂಢಾ* *ಶ್ವೇತಾಂಬರಧರಾ ಶುಚಿಃ|*

*ಮಹಾಗೌರಿ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ||*

ಅಮೋಘವಾದ ಶಕ್ತಿಯನ್ನು ಪಡೆದ ‘ಮಹಾಗೌರಿ’ ನವರಾತ್ರಿಯ ಅಷ್ಟಮಿಯ ದಿನದ ರೂಪ. ಪರಮ ಪಾವಿತ್ರ್ಯ, ಶುದ್ಧತೆ, ಸ್ವಚ್ಛತೆಯ ಪ್ರತಿರೂಪ ದೇವಿಯದು. *ತಪಸ್ಯೇನೆ ಮಹಾನ್ ಗೌರಃ* ಅಂದರೆ ತೇಜಸ್ಸನ್ನು ಪ್ರಾಪ್ತ ಮಾಡಿಕೊಂಡವಳು. ತಪಸ್ಸಿನಲ್ಲಿ ಸಿದ್ಧಿಯನ್ನು ಪಡೆದವಳು, ಯಾರ ಪ್ರಸಾದದಿಂದ ಪಡೆದವಳೋ ಅವಳೇ ಮಹಾಗೌರೀ ದೇವಿ. ಶ್ವೇತವರ್ಣದ ಅತ್ಯಂತ ಸುಂದರಾಂಗಿ.ಶ್ವೇತವಸ್ತ್ರಧಾರಿಣಿಯಾಗಿ ಅಭಯವನ್ನು ನೀಡುವವಳು. ಚತುರ್ಭುಜೆ. ತ್ರಿಶೂಲ, ಅಭಯ, ಡಮರುಗ, ವರಮುದ್ರೆ ಕರದಲ್ಲಿ ಧರಿಸಿದ ಮಹಾಮಾತೆ. ವೃಷಭವಾಹನೆ, ಶಾಂತಸ್ವರೂಪಿಣಿ. ಬಿಳಿಯ ಬಣ್ಣದ ಆಭರಣಪ್ರಿಯೆ.

ಪುರಾಣದ ಮಾಹಿತಿಯಂತೆ ಘೋರತಪಸ್ಸಿನ ಫಲವಾಗಿ ಪಾರ್ವತಿ ದೇವಿಯ ಶರೀರವು ಮಳೆಗಾಳಿ ಧೂಳಿನಿಂದಾಗಿ ಮಲಿನವಾಯಿತು. ಕಪ್ಪು ಬಣ್ಣ ಆವರಿಸಿದ ಶರೀರವನ್ನು ಪರಶಿವನು ಮೆಚ್ಚಿದ ಸಂದರ್ಭದಲ್ಲಿ ಶಿವನ ಜಟೆಯಿಂದ ಇಳಿದ ಪರಮಪಾವನೆ ಗಂಗೆ ತಾಯಿ ಪಾರ್ವತಿಯ ಶರೀರವನ್ನು ಶುಚಿಗೊಳಿಸಿದಳಂತೆ. ದಿವ್ಯಕಾಂತಿಯನ್ನು ನೀಡಿದಳಂತೆ. ಹಾಗಾಗಿ ಮಹಾಗೌರ, ಗೌರ ಬಿಳಿ, ಮಹಾಗೌರಿಯಾದಳು. ಇಂದು ಆಯುಧಪೂಜೆಯನ್ನು ಸಹ ಮಾಡಿ ಕೃತಾರ್ಥರಾಗುತ್ತೇವೆ. ತೆಂಗಿನಕಾಯಿ, ಸೀಮೆಅಕ್ಕಿಯ ಪಾಯಸ, ಅನ್ನ ವಿಶೇಷವಾಗಿ ನೈವೇದ್ಯವಿಂದು. ತೆಂಗು ಎನ್ನುವುದು ಜೀವನವನ್ನು ಸೂಚಿಸುತ್ತದೆ ಎನ್ನುವ ಪ್ರತೀತಿ. ಮನದ ಕಲ್ಮಶಗಳ ತೊಳೆಯುವ ಮಾತೆ. ಆಳವಾದ ತಪಸ್ಸು,ಕಠಿಣ ಪರಿಶ್ರಮದ ಸಂಕೇತವೇ ಮಹಾಗೌರೀ ದೇವಿ.

ಮಾತೆ ಸಕಲರ ಪಾಲಿನ ‘ಅನ್ನಪೂರ್ಣೆ’ ಯು ಹೌದು. ಜಗದಂಬಿಕೆ ಶಿವಸತಿ ಪಾರ್ವತಿ ಮಹಾಗೌರಿ, ಶಾರದಾದೇವಿಯನ್ನು ಉಪವಾಸ ವ್ರತಗಳನ್ನಾಚರಿಸಿ, ಹೋಮಹವನಾದಿಗಳಿಂದ ಪೂಜಿಸಿ, ಧ್ಯಾನಿಸಿ ಸಲಹೆಂದು ಪ್ರಾರ್ಥಿಸೋಣ. ಶ್ರೀ ಮಾತೆಯನ್ನು ಪೂಜಿಸಿದರೆ ಸಮಸ್ತ ಶ್ರೇಯಸ್ಸು, ಅಲೌಕಿಕ ಸಿದ್ಧಿಗಳು, ಪಾಪಗಳಿಗೆ ಕ್ಷಮೆ ನೀಡುವಳೆಂದು ಪ್ರತೀತಿ. ನಾವೆಲ್ಲರೂ ಮಾತೆಯ ಕೃಪೆಗೆ ಪಾತ್ರರಾಗೋಣ.

*ಆಶಾಪಾಶಕ್ಲೇಶವಿನಾಶಂ ವಿದಧಾನಾಂ*

*ಪಾದಾಂಭೋಜಧ್ಯಾನಪರಾಣಾಂ ಪುರುಷಾಣಾಂ|*

*ಈಶಾಂ ಈಶಾರ್ಧಂಗಹರಾಂ ತಾಮಭಿರಾಮಾಂ*

*ಗೌರೀಂ ಅಂಬಾಂ ಅಂಬುರುಹಾಕ್ಷೀಂ ಅಹಮೀಡೇ||*

 

ಶ್ರೀ ದುರ್ಗಾ ದೇವಿ ಸ್ತೋತ್ರ

ನಮಸ್ತೇ ಶರಣ್ಯೇ ಶಿವೇ ಸಾನುಕಂಪೇ|

ನಮಸ್ತೇ ಜಗದ್ವ್ಯಾಪಿಕೇ ವಿಶ್ವರೂಪೇ|

ನಮಸ್ತೇ ಜಗದ್ವಂದ್ಯ ಪಾದಾರವಿಂದೇ|

ನಮಸ್ತೇ ಜಗತ್ತಾರಿಣಿ ತ್ರಾಹಿದುರ್ಗೇ||

ಅನಾಥಸ್ಯ ದೀನಸ್ಯ ತೃಷ್ಣಾತುರಸ್ಯ ಭಯಾರ್ತಸ್ಯ ಭಿತಸ್ಯ ಬದ್ಧಸ್ಯ ಜಂತೋ|

ತ್ವಮೇಕಾ ಗತಿರ್ದೇವಿ ನಿಸ್ತಾರಹಂತ್ರಿ ನಮಸ್ತೇ ಜಗತ್ಕಾರಿಣಿ ತ್ರಾಹಿದುರ್ಗೇ||

*ಓಂ ದೇವಿ ಮಹಾಗೌರ್ಯ್ಯೆ ನಮಃ*

ಸಂಗ್ರಹ--ರತ್ನಾ ಕೆ.ಭಟ್ ತಲಂಜೇರಿ

(ಆಕರ: ಪುರಾಣಮಾಲಿಕಾ ಮತ್ತು ಆದಿಶಂಕರಾಚಾರ್ಯ ವಿರಚಿತಶ್ರೀ ಗೌರಿ ಸ್ತೋತ್ರ.).

ಚಿತ್ರ ಕೃಪೆ: ಇಂಟರ್ನೆಟ್ ತಾಣ