ನಸುಕಲಿ ಚಂದ್ರಮನ .....
ಎಂದಿನಂತೆ ಆಫೀಸಿಗೆ ಹೊರಡುವ ದಾರಿಯಲ್ಲಿ ಇಂದೂ ನಡೆದಿದ್ದೆ. ಈಚಿನ ದಿನಗಳಲ್ಲಿ ತುಸು ಬಿಸಿಲು ಹೆಚ್ಚು; ಹೀಗಾಗಿ ಬೆಳಗಿನ ಹೊತ್ತಲೆ ಸೂರ್ಯ ಆಗಲೆ ಪ್ರಖರನಾಗಿ ಬೆವರಿಳಿಸುವ ದಿನಗಳು. ಆದರೆ ಇಂದೇಕೊ ಸ್ವಲ್ಪ ಕನಿಕರ ತೋರುತ್ತ ತುಸುವೆ ತಂಪಾಗಿರುವಂತೆ ಕಂಡಿತು. ಹಾಗೆ ತಲೆಯೆತ್ತಿ ನೋಡಿದಾಗ ಅಪರೂಪಕ್ಕೆ ಹಗಲಲಿ ಕಣ್ಣಿಗೆ ಬೀಳುವ ಚಂದ್ರಮನ ಅರ್ಧ ಚಂದ್ರಾಕೃತಿ ಮಸುಕುಮಸುಕಾಗಿ ಕಣ್ಣಿಗೆ ಬಿತ್ತು. ನನಗೆ ನೆನಪಿರುವಂತೆ ಕೇವಲ ಕೆಲವೆ ದಿನಗಳಲ್ಲಿ ಮಾತ್ರ, ಅದೂ ತೀರ ಬೆಳಿಗ್ಗೆ ಅಥವಾ ಸಂಜೆ ಸೂರ್ಯನು ಮುಳುಗುವ ಮುನ್ನ ಚಂದ್ರಮ ಕಣ್ಣಿಗೆ ಬೀಳುತ್ತಿದ್ದುದು. ಅದು ಬಿಟ್ಟರೆ ಬಹುಶಃ ರಂಜಾನಿನ ದಿನಗಳಲ್ಲಿರಬೇಕು - ಒಂದು ದಿನ ಮಧ್ಯಾಹ್ನದ ಹೊತ್ತಿನಲ್ಲೆ ತುಂಬು ಚಂದಿರನ ಬಿಂಬ ಕಣ್ಣಿಗೆ ಬಿದ್ದಿದ್ದಿದ್ದು. ಇಂದು ಶಶಾಂಕನ ಈ ಸ್ವರೂಪ ಕಣ್ಣಿಗೆ ಬೀಳುತ್ತಿದ್ದಂತೆ 'ವಾಹ್' ಅನಿಸಿ ಚಳಿಯ ಹೋಗಲಾಡಿಸಿಕೊಳ್ಳಲು ಎಳೆ ಬಿಸಿಲಿನ ಮಜ್ಜನಕ್ಜೆ ಬಂದ ಚಂದ್ರಮನಿರಬಹುದೆ ಎಂಬ ಭಾವ ಮನಃಪಟಲದಲ್ಲಿ ಹಾದು ಹೋಯ್ತು. ಅದೆ ಖದರಿನಲ್ಲಿ ಒಂದೆರಡು ಪದಗಳ ಗುನುಗು ಮೂಡತೊಡಗಿದಾಗ 'ಅರೆರೆ..ಇದೊಂದು ಶಿಶುಗೀತೆಯಾಗಬಹುದಲ್ಲಾ?' ಎನಿಸಿ ಅದನ್ನು ಹಾಗೆ ನಡೆಯುತ್ತಲೆ ಪೋನಿನ ಎಡಿಟರಿನಲ್ಲಿ ಟೈಪಿಸತೊಡಗಿದೆ. ನಾನು ಹಾದು ಹೋಗುವ ಉದ್ಯಾನವನ ದಾಟಿ, ಆಫೀಸಿನ ಬಾಗಿಲು ತಲುಪುವಷ್ಟರ ಹೊತ್ತಿಗೆ ಒಂದು ಪುಟ್ಟ ಪದ್ಯದ ಹಂದರ ಸಿದ್ದವಾಗಿತ್ತು. ಅದನ್ನೆ ಈಗ ತುಸು ತಿದ್ದಿ ತೀಡಿ ಶಿಶುಗೀತೆಯಾಗಿ ಹಾಕುತ್ತಿದ್ದೇನೆ ಸಂಪದದಲ್ಲಿ -ಚಂದ್ರಮನಿಗೊಂದು ಧನ್ಯವಾದ ಹೇಳುತ್ತ :-)
ನಸುಕಲಿ ಚಂದ್ರಮನ .....
_______________________________
ಹಗಲಲಿ ಕಾಣುವ ಚಂದ್ರನ ಗೋಳ
ಯಾರಿಗೆ ಹೇಳೋಣ?
ಚಳಿಯಾಯ್ತೆಂದು ಸ್ನಾನಕೆ ಬಂದನೆ
ಬನ್ನಿರಿ ಕೇಳೋಣ ||
ಬಿಚ್ಚಿದ ಕಿತ್ತಳೆ ತೊಳೆಯಂತಿಹನು
ಗಗನದಲಿಹ ಮಗುವಾ?
ಕಿಲಿಕಿಲಿ ಬೊಚ್ಚಲು ಬಿಚ್ಚಿತೆ ಬಾಯಿ
ನಗೆಯರಳಿ ತುಟಿಯಗಲ ||
ಮರೆತಿಲ್ಲ ದಿವಸ ದಿನಗೂಲಿ ಕೆಲಸ
ಬರಿ-ಅರ್ಧರ್ಧವೆ ಮಜ್ಜನಕೆ
ಕಣ್ಬೆಳಕೆಲ್ಲ ತಿರುಗಿಸಿರುವೆ ಕತ್ತಲಿಗೆ
ಒಡ್ಡಿರುವೆನು ಮೈ ತುಸು ಗಳಿಗೆ ||
ಬೆಳಗಿನ ಸೂರ್ಯನ ಬಡಾಯಿ ಕಮ್ಮಿ
ಬಿಸಿ ನೆನೆದರು ಕರಗುವೆನೆ?
ಕಾವಿಗೆ ಕರಿದು ಕಪ್ಪಾಗಿಸೊ ಮೊದಲೆ
ಮರೆಯಾಗುವೆ ಹಗಲಲ್ಲ ಮನೆ ||
ಕರಗುವ ಮೊದಲೆ ಜರುಗುವೆನಿಲ್ಲಿಂದ
ಸರಸರ ಜಳಕದೆ ಬಿಸಿಲ ಮಳೆ
ಹರುಷದ ಕೊಡ ತುಂಬಿರಲು ಕೊಡುವೆನು
ಹರಿದ ಸುಧೆಗೆ ತಂಪಾಗೊ ಇಳೆ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ನಸುಕಲಿ ಚಂದ್ರಮನ .....
>>ನಾನು ಹಾದು ಹೋಗುವ ಉದ್ಯಾನವನ ದಾಟಿ, ಆಫೀಸಿನ ಬಾಗಿಲು ತಲುಪುವಷ್ಟರ ಹೊತ್ತಿಗೆ...
-ಬಾಗಿಲು ತೆರೆದಿತ್ತಾ? ಇಂದು ಸೂರ್ಯೋದಯಕ್ಕಿಂತ ಮೊದಲೇ ಆಫೀಸಿಗೆ ಬಂದಿರೋ ಹೇಗೆ? :)
ಕಿತ್ತಳೆ ತೊಳೆಯಂತಿಹ ನಸುಕಿನ ಚಂದ್ರಮನ ಬಗ್ಗೆ ಕವಿತೆ ಚೆನ್ನಾಗಿದೆ.
In reply to ಉ: ನಸುಕಲಿ ಚಂದ್ರಮನ ..... by ಗಣೇಶ
ಉ: ನಸುಕಲಿ ಚಂದ್ರಮನ .....
ಗಣೇಶ್ ಜಿ, ಅಷ್ಟೊತ್ತಿಗಾಗಲೆ ಸೂರ್ಯೋದಯವಾಗಿಹೋಗಿದ್ದರು ಇನ್ನು ಬಿಸಿಲೇರಿರಲಿಲ್ಲ. ಸೂರ್ಯನ ಬೆಳಕಿನ ನಡುವೆಯೆ ಮಸುಕಾಗಿ ನಗುತ್ತಿದ್ದ ಚಂದ್ರನ ಚಿತ್ರಣ ಇದು (ಸುಮಾರು ಎಂಟು ಗಂಟೆ ಸಮಯ). ದಿನಾ ಮಗನನ್ನು ಸ್ಕೂಲಿಗೆ ಬಿಡಲು ಸ್ವಲ್ಪ ಬೇಗನೆ ಹೊರಡುವುದರಿಂದ, ಆಫೀಸು ಕೂಡ ಬೇಗ ತಲುಪುತ್ತೇನೆ :-)
.
ಅಂದ ಹಾಗೆ, ಸಿಂಗಪುರದ ಎಂಟು ಗಂಟೆಯೆಂದರೆ, ನಿಜವಾಗಿ (ಭೌಗೋಳಿಕ ಲೆಕ್ಕಾಚಾರದ ಪ್ರಕಾರ ಅಕ್ಷಾಂಶ ರೇಖಾಂಶದ ಸ್ಥಾನವನ್ನನುಸರಿಸಿ ಹೇಳುವುದಾದರೆ) - ಏಳು ಗಂಟೆ...ಆದರೆ ವಾಣಿಜ್ಯ ಕಾರಣಗಳಿಗಾಗಿ ಬಹಳ ಹಿಂದೆಯೆ ಗಡಿಯಾವನ್ನು ಒಂದು ಗಂಟೆ ಮುಂದಕ್ಕೆ ತಿರುಗಿಸಿಕೊಂಡು ಬಿಟ್ಟಿದ್ದಾರೆ - ಹಾಂಕಾಂಗಿನ ಸಮಯದ ಜತೆ ಸಮೀಕರಿಸಲು! ಹೀಗಾಗಿ ಕೆಲವು ದಿನ ಬೆಳಿಗ್ಗೆ ಏಳಾದರು ಕತ್ತಲಿರುವುದು ಕಾಣುತ್ತದೆ :-)
In reply to ಉ: ನಸುಕಲಿ ಚಂದ್ರಮನ ..... by nageshamysore
ಉ: ನಸುಕಲಿ ಚಂದ್ರಮನ .....
ಚೆನ್ನಾಗಿದೆ.
In reply to ಉ: ನಸುಕಲಿ ಚಂದ್ರಮನ ..... by Premashri
ಉ: ನಸುಕಲಿ ಚಂದ್ರಮನ .....
ಧನ್ಯವಾದಗಳು ಪ್ರೇಮಾಶ್ರೀಯವರೆ :-)
ಉ: ನಸುಕಲಿ ಚಂದ್ರಮನ .....
ಚಂದ್ರ ಎಲ್ಲರಿಗೂ ಮುದವೀಯುವ ವಸ್ತು! ಮಕ್ಕಳ ಹಾಡು ಚೆನ್ನಾಗಿದೆ.
In reply to ಉ: ನಸುಕಲಿ ಚಂದ್ರಮನ ..... by kavinagaraj
ಉ: ನಸುಕಲಿ ಚಂದ್ರಮನ .....
ಮಕ್ಕಳ ಹಾಡಿಗೆ ಹೆಚ್ಚೆಚ್ಚು ಸ್ಪೂರ್ತಿಯಾದ ಕೆಲವೆ ವಸ್ತುಗಳಲ್ಲಿ ಚಂದ್ರ ಪ್ರಮುಖ - ಪುಟಾಣಿಗಳಿಗೆ ಅವನನ್ನು ತೋರಿಸುತ್ತ ಊಟ ಮಾಡಿಸುವುದರಿಂದ ಹಿಡಿದು. ಧನ್ಯವಾದಗಳು ಕವಿಗಳೆ :-)