ನಾಗರೀಕತೆಯ ಬೆನ್ನೇರಿ ಸಂಸ್ಕೃತಿಯ ಶಿಕಾರಿ!
ಸುಮಾರು ಐದಾರು ವರ್ಷಗಳ ಹಿಂದೆ ಸಂಜೆ ಹೊತ್ತು ಉಡುಪಿಯ ರಥಬೀದಿ ಸಮೀಪದ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರಬೇಕಾದರೆ ಯಾರೋ ಒಬ್ಬರು ನನ್ನನ್ನು ನೋಡಿ "ನಮಸ್ಕಾರ ಸರ್, ನೀವು ವಕೀಲ್ರಲ್ವಾ?!, ಪೃಥ್ವಿರಾಜ್ ಹೆಗ್ಡೆಯವರಲ್ವಾ?" ಅಂದ್ರು! "ನಿಮ್ಮನ್ನೆಲ್ಲೋ ನೋಡಿದ ಹಾಗಿದೆಯಲ್ಲಾ!" ಅಂತ ಹೇಳಿ ಕೈ ನೀಡಿದೆ. ಪರಸ್ಪರ ಕೈ ಕುಲುಕಿಕೊಂಡೆವು!
"ನಾನು ಫೋಟೋಗ್ರಾಫರ್! ನಿಮ್ಮಮಿಸಸ್ ಬ್ಯಾಂಕಲ್ಲಿರುವಾಗ ಅವ್ರನ್ನ ನೋಡಿದ್ದೆ! "ನೀವೂ ವಕೀಲ್ರಂತ ಆಗಲೇ ಗೊತ್ತು!........" ಇತ್ಯಾದಿ ಇತ್ಯಾದಿ..
"ನಾನು ವಾಕಿಂಗ್ ಹೊರಟವ! ಆಫೀಸ್ ಕ್ಲೋಸ್ ಮಾಡಿಲ್ಲ ಸರ್! ಮತ್ತೆ ಆಫೀಸಿಗೆ ಹೋಗ್ಬೇಕು! ಇನ್ನೊಂದಿನ ಸಿಗೋಣ! ನಮಸ್ಕಾರ!" ಅಂತ ಹೇಳಿ ಅವರಿಂದ ಬೀಳ್ಕೊಂಡು ಬಿರುಸಿನ ಹೆಜ್ಜೆ ಹಾಕಿದೆ! ಆಮೇಲೆ ಆ ಮನುಷ್ಯ ಹತ್ತಿಪ್ಪತ್ತು ಬಾರಿ ನನಗೆ ಕಾಣ ಸಿಕ್ಕಿದರು! ನೋಡಿದ್ರೂ ಪರಿಚಯವೇ ಇಲ್ಲದವರಂತೆ ನನ್ನನ್ನು ಕಡೆಗಣ್ಣಿಂದ ನೋಡಿಯೂ ನೋಡದಂತೆ ದೂರ ಸರಿದು ಹೋಗಿ ಬಿಡುತ್ತಾರೆ! ನಾನೂ "ನಮಸ್ಕಾರ" ಅಂತ ಹೇಳುವುದಿಲ್ಲ! ಅವರೂ "ನಮಸ್ಕಾರ" ಹೇಳುವುದಿಲ್ಲ! ಹೀಗೇ ಐದಾರು ವರ್ಷಗಳೇ ಕಳೆದು ಹೋದವು!
ಇಂತವರ ಭೇಟಿ ನಿಮ್ಮ ಜೀವನದಲ್ಲೂ ಆಗಿರಬಹುದು! ಇವರ ಸಮಸ್ಯೆ ಏನೆಂದರೆ ಇವರು ಆರಂಭದಲ್ಲಿ ಮೇಲೆ ಬಿದ್ದು ಬಂದು ಪರಿಚಯ ಮಾಡಿಸಿಕೊಳ್ತಾರೆ! ಆಮೇಲೆ "ನಿನಗಿಂತ ನಾನೇ ದೊಡ್ಡವ! ನಾನ್ಯಾಕೆ ಮೊದಲು ನಮಸ್ಕಾರ ಕೊಡಬೇಕು!" ಅಂತ ಇವರೊಳಗೊಂದು ಸಣ್ಣ ಅಹಂಕಾರ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಿಧಾನಕ್ಕೆ ನಾಗರ ಹಾವಿನಂತೆ ತಲೆಯೆತ್ತುವುದಕ್ಕೆ ಶುರುವಿಟ್ಟಿರುತ್ತದೆ!
ಇಂತವರೇನೂ ದೊಡ್ಡ ಕಟುಕರೂ ಅಲ್ಲ, ದೊಡ್ಡ ಕೆಡುಕರೂ ಅಲ್ಲ! ಔದಾರ್ಯದ ಬಾವಿಯ ನೀರನ್ನು ಇಗೋ (Ego) ಎಂಬ ಪಾಚಿ ಆವರಿಸಿದ್ದೇ ಇವರ ಔದಾರ್ಯ ಬೆಳಕನ್ನು ಕಾಣದಿರುವುದಕ್ಕೆ ಕಾರಣ! ಇದೇ ಇವರ ಹಾಗೂ ಇವರಂತವರ ನಿಜವಾದ ಪ್ರಾಬ್ಲೆಮ್ಮು! ಪಾಚಿಯನ್ನು ತೆಗೆದು ಸ್ವಚ್ಚಗೊಳಿಸಿದರೆ ಕುಡಿಯುವ ನೀರಿಗೆ ಬೇರೇನೂ ಸಮಸ್ಯೆ ಇರುವುದಿಲ್ಲ! ಸ್ನೇಹವನ್ನು ಬೆಳೆಸುವಲ್ಲಿ ಇಂತಹ ಕೆಟ್ಟ ಮನಸ್ಥಿತಿ ವೈರಿಯಂತೆ ಕಾಡುತ್ತದೆ. ಇಂತವರ ಮೇಲೆ ಕೆಟ್ಟ ಭಾವನೆ ಮೂಡಿ, ಇಂತವರನ್ನು ದೂರವಿಡುವುದಕ್ಕೆ ಮುಗ್ದ ಮನಸ್ಸು ಬಯಸಿದರೂ ತಪ್ಪಿಲ್ಲ. ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?
- ಮೌನಮುಖಿ(ಆತ್ರಾಡಿ ಪೃಥ್ವಿರಾಜ ಹೆಗ್ಡೆ), ಉಡುಪಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ