ನಾಡ ಪ್ರಭು ಕೆಂಪೇಗೌಡ ಮತ್ತು ಕವಿ ಬಂಕಿಮ ಚಂದ್ರರಿಗೆ ನಮೋ ನಮಃ
ನಾವು ಈ ದಿನ (ಜೂನ್ ೨೭) ದಂದು ಇಬ್ಬರು ಮಹಾನ್ ವ್ಯಕ್ತಿಗಳನ್ನು ಸ್ಮರಿಸಲೇ ಬೇಕಾದ ದಿನ. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹಾಗೂ ಭಾರತ ಸ್ವಾತಂತ್ರ್ಯ ಯೋಧರ ನರನಾಡಿಗಳಲ್ಲಿ ತಮ್ಮ ‘ವಂದೇ ಮಾತರಂ’ ಹಾಡಿನ ಮೂಲಕ ದೇಶಭಕ್ತಿಯ ಸಂಚಲನ ಮೂಡಿಸಿದ ಕವಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನ. ನಾವು ಸದಾ ಸ್ಮರಿಸಬೇಕಾದ ಈ ಎರಡು ಮಹಾನ್ ವ್ಯಕ್ತಿಗಳಿಗೆ ಅಕ್ಷರ ನಮನ ಸಲ್ಲಿಸೋಣ.
ನಾಡಪ್ರಭು ಕೆಂಪೇಗೌಡರ ಜನನ ೧೫೧೦ ಜೂನ್ ೨೭ರಂದು ಯಲಹಂಕದಲ್ಲಿ ಆಗುತ್ತದೆ. ವಿಜಯನಗರ ಅರಸರ ಸಾಮಂತ ರಾಜ (ನಾಡಪ್ರಭು)ರಾಗಿದ್ದ ಯಲಹಂಕದ ಕೆಂಪನಂಜೇ ಗೌಡ ಹಾಗೂ ಅವರ ಧರ್ಮಪತ್ನಿ ಲಿಂಗಾಂಬೆಯವರ ಸುಪುತ್ರರಾಗಿ ಜನ್ಮ ತಾಳುತ್ತಾರೆ. ತಮ್ಮ ಕುಲದೇವತೆ ಕೆಂಪಮ್ಮರ ವರದ ಫಲಶ್ರುತಿಯೇ ತಮ್ಮ ಪುತ್ರ ಎಂದು ನಂಬಿದ್ದ ದಂಪತಿಗಳು ತಮ್ಮ ಮಗನನ್ನು ಕೆಂಪ, ಕೆಂಪಯ್ಯ, ಕೆಂಪಣ್ಣ ಎಂದು ಕರೆಯಲು ಪ್ರಾರಂಭಿಸುತ್ತಾರೆ. ತಮ್ಮ ಐದನೇ ವಯಸ್ಸಿನಲ್ಲಿ ವಿಜಯನಗರದ ಅರಸ ಕೃಷ್ಣ ದೇವರಾಯರ ಸಾಮರ್ಥ್ಯದ ಬಗ್ಗೆ ಕೇಳಿದ ಕೆಂಪೇಗೌಡರು ಅವರಂತೆಯೇ ವೀರ ಯೋಧನಾಗಬೇಕೆಂದು ಮನಸ್ಸಿನಲ್ಲಿಯೇ ಪ್ರಮಾಣ ಮಾಡುತ್ತಾರೆ.
ಬಾಲ್ಯದಲ್ಲೇ ಬಹಳ ಚುರುಕಾಗಿದ್ದ ಕೆಂಪಯ್ಯ ತಮ್ಮ ಗುರುಗಳಿಂದ ವಿವಿಧ ರೀತಿಯ ಶಿಕ್ಷಣಗಳನ್ನು ಪಡೆದು, ಮುಂದೆ ರಾಜನಾಗಲು ಅರ್ಹ ಎಂದು ಹೆಸರು ಪಡೆಯುತ್ತಾರೆ. ೧೫೨೮ರಲ್ಲಿ ತಮ್ಮ ಸೋದರ ಮಾವನ ಮಗಳಾದ ಚೆನ್ನಮ್ಮ (ಚೆನ್ನಾಂಬ) ಳನ್ನು ಮದುವೆಯಾಗುತ್ತಾರೆ. ಅವರ ತಂದೆಯವರಾದ ಕೆಂಪನಂಜರಿಗೆ ವಯಸ್ಸಾದಾಗ ಅವರು ತಮ್ಮ ಮಗನಾದ ಕೆಂಪೇಗೌಡರಿಗೆ ನಾಡ ಪ್ರಭು ಆಗುವ ಎಲ್ಲಾ ಅರ್ಹತೆಗಳು ಇವೆಯೆಂದು ತಿಳಿದು ಅವರಿಗೆ ೧೫೩೧ರಲ್ಲಿ ತಮ್ಮ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಡುತ್ತಾರೆ. ವಿಜಯನಗರದ ಅರಸರಾದ ಕೃಷ್ಣ ದೇವರಾಯರ ನಿಧನದ ನಂತರ ಬಹಳಷ್ಟು ಸಾಮಂತ ರಾಜರು ಸ್ವತಂತ್ರರಾಗಲು ಬಯಸುತ್ತಾರೆ. ಆದರೆ ಸಮರ್ಥ ಆಡಳಿತಗಾರನಾಗುವ ಲಕ್ಷಣಗಳನ್ನು ಬಾಲ್ಯದಲ್ಲೇ ತೋರ್ಪಡಿಸಿದ್ದ ಕೆಂಪೇಗೌಡರು ವಿಜಯನಗರದ ಅರಸರ ಮೇಲಿನ ವಿಶ್ವಾಸದಿಂದ ಸಾಮಂತರಾಗಿಯೇ ಮುಂದುವರೆಯ ಬಯಸುತ್ತಾರೆ. ಕೃಷ್ಣ ದೇವರಾಯರ ಸಮಯದಲ್ಲಿ ಹಂಪಿಯಲ್ಲಿ ಇದ್ದ ವೈಭವವನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡರಿಗೆ ವಿಜಯನಗರದ ಹಂಪಿಯ ರೀತಿಯಲ್ಲೇ ಒಂದು ನಗರ ನಿರ್ಮಾಣ ಮಾಡಬೇಕೆಂಬ ಮನಸ್ಸಾಗುತ್ತದೆ.ಇದಕ್ಕಾಗಿ ಸ್ಥಳ ಹುಡುಕಿ, ಅದರ ನಿರ್ಮಾಣದ ಕಾರ್ಯದಲ್ಲಿ ತೊಡಗುತ್ತಾರೆ. ಈಗ ನಾವಿರುವ ಬೆಂಗಳೂರು ನಗರದ ನಿರ್ಮಾಣವನ್ನು ಕೆಂಪೇಗೌಡರು ಮಾಡಿದ್ದು. ಆದುದರಿಂದಲೇ ಅವರನ್ನು ಬೆಂಗಳೂರಿನ ನಿರ್ಮಾತೃ ಎನ್ನುತ್ತಾರೆ. ನಗರ ನಿರ್ಮಾಣಕ್ಕೆ ಹಣ ಸಾಕಾಗದೇ ಇದ್ದಾಗ ತಮ್ಮ ಪ್ರಜೆಗಳಿಂದ ಧನ ಸಂಗ್ರಹಿಸುತ್ತಾರೆ. ವಿಜಯನಗರದ ಅರಸರಿಂದಲೂ ಧನ ಸಹಾಯವನ್ನು ಅಪೇಕ್ಷಿಸಿ, ಅದನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಹೊಸದಾದ ಸುಸಜ್ಜಿತ ನಗರದ ನಿರ್ಮಾಣವಾಗುತ್ತದೆ.
ಮೊಲವೊಂದು ನಾಯಿಯನ್ನು ಓಡಿಸಿಕೊಂಡು ಹೋಗುವುದನ್ನು ನೋಡಿದ ಅಪರೂಪದ ಪುಣ್ಯ ಸ್ಥಳವನ್ನೇ ಕೆಂಪೇಗೌಡರು ತಮ್ಮ ನಗರ ನಿರ್ಮಾಣಕ್ಕಾಗಿ ಬಳಸಿಕೊಂಡರು ಎಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಕೆಂಪೇಗೌಡರು ಹೊಸ ನಗರದಲ್ಲಿ ಹಲವಾರು ಕೋಟೆಗಳು, ಸುಮಾರು ೬೪ ಪೇಟೆಗಳು, ಹತ್ತಕ್ಕೂ ಮಿಕ್ಕಿದ ಕೆರೆಗಳು, ಕಲ್ಯಾಣಿಗಳು, ಉದ್ಯಾನವನಗಳು, ರಸ್ತೆಯ ಅಕ್ಕಪಕ್ಕ ಮರಗಳು, ದೇವಾಲಯಗಳು ಮತ್ತು ಅವುಗಳಿಗೆ ನೆರವು ಹೀಗೆ ಇವರು ಮಾಡಿದ ಕೆಲಸ ಕಾರ್ಯಗಳು ಒಂದೋ ಎರಡೋ?. ಈ ಸಂಗತಿಗಾಗಿಯೇ ನಾವಿಂದು ಕೆಂಪೇಗೌಡರನ್ನು ನಾಡಗೌಡ ಅಥವಾ ನಾಡ ದೊರೆ ಎಂದು ಕರೆಯುತ್ತೇವೆ. ೧೫೬೯-೭೦ರ ಸುಮಾರಿಗೆ ಕೆಂಪೇಗೌಡರ ನಿಧನವಾಗುತ್ತದೆ. ಅವರು ಅಂದು ನಿರ್ಮಿಸಿದ ನಗರವನ್ನು ನಾವು ಇನ್ನಷ್ಟು ಚೆನ್ನಾಗಿಡಬೇಕಾಗಿದೆ. ಈಗಾಗಲೇ ಹಲವಾರು ಕೆರೆಗಳು, ಕಲ್ಯಾಣಿಗಳು ನಮ್ಮ ಮೂರ್ಖ ಅಭಿವೃದ್ಧಿ ಕೆಲಸಗಳು ಹಾಗೂ ಅಸುರಕ್ಷಿತ ನಗರೀಕರಣದಿಂದಾಗಿ ನಾಶವಾಗಿವೆ. ಇನ್ನಾದರೂ ಈ ಮಹಾತ್ಮರ ಸ್ಮರಣೆಗಾಗಿ ನಾಡ ರಕ್ಷಣೆ ಮಾಡುವ.
ಬಂಕಿಮ ಚಂದ್ರ ಚಟ್ಟೋಪಾಧ್ಯಾಯ: ‘ವಂದೇ ಮಾತರಂ' ಹಾಡು ಕೇಳಿದ ಯಾರಿಗಾದರೂ ತಮ್ಮ ಮೈನವಿರೇಳದಿದ್ದಲ್ಲಿ ಅವರಲ್ಲಿ ದೇಶಭಕ್ತಿಯೇ ಇಲ್ಲವೆಂದು ಧಾರಾಳವಾಗಿ ಹೇಳಬಹುದಾಗಿದೆ. ಅಂತಹ ಕವಿತೆಯನ್ನು ಹಾಗೂ ಇನ್ನೂ ಅನೇಕ ಕವಿತೆಗಳನ್ನು ಬರೆದ ಮಹಾನ್ ಕವಿ, ಲೇಖಕ ಬಂಕಿಮ ಚಂದ್ರ ಚಟ್ಟೋಪಾಧ್ಯಾಯರ ಜನ್ಮ ದಿನ ಜೂನ್ ೨೭, ೧೮೩೮.
ಸಂಪ್ರದಾಯಸ್ಥ ಬಂಗಾಳೀ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬಂಕಿಮ ಚಂದ್ರರು ಮೂವರು ಸಹೋದರರ ಪೈಕಿ ಕಿರಿಯವರಾಗಿದ್ದರು. ಬಾದಬ್ ಚಂದ್ರ ಚಟ್ಟೋಪಾಧ್ಯಾಯ ಹಾಗೂ ದುರ್ಗಾದೇಬಿ ದಂಪತಿಯವರ ಸುಪುತ್ರ ಇವರು. ಇವರ ತಂದೆ ಬ್ರಿಟಿಷ್ ಸರಕಾರದಲ್ಲಿ ಉದ್ಯೋಗದಲ್ಲಿದ್ದರು. ಬಂಕಿಮ ಚಂದ್ರರು ತಮ್ಮ ಕಲಾ ಪದವಿ ಹಾಗೂ ನಂತರ ಕಾನೂನು ಪದವಿಯನ್ನು ಪಡೆದರು. ತಮ್ಮ ತಂದೆಯ ಹಾದಿಯಲ್ಲೇ ಸಾಗಿದ ಬಂಕಿಮ ಚಂದ್ರರೂ ಸರಕಾರೀ ಅಧಿಕಾರಿಯಾದರು. ಬ್ರಿಟೀಷರು ಇವರ ಅಡ್ಡ ನಾಮ ಚಟ್ಟೋಪಧ್ಯಾಯ ಬದಲು ಚಟರ್ಜಿ ಎಂದೇ ಬಳಸುತ್ತಿದ್ದುದರಿಂದ ಹಲವಾರು ದಾಖಲೆಗಳಲ್ಲಿ ಇವರ ಹೆಸರಿನ ಎದುರು ಚಟರ್ಜಿ ಎಂಬ ಅಡ್ಡ ನಾಮವೇ ಇದೆ.
ಅಂದಿನ ಸಮಯದ ಖ್ಯಾತ ಸಾಹಿತಿ ಈಶ್ವರ ಚಂದ್ರ ಇವರಿಂದ ಪ್ರೇರಿತರಾದ ಬಂಕಿಮರು ಕವಿತೆ, ಕಾದಂಬರಿಗಳತ್ತ ತಮ್ಮ ಒಲವು ತೋರಿಸತೊಡಗಿದರು. ಮೊದಲಿಗೆ ಬರೆದ ಆಂಗ್ಲ ಭಾಷಾ ಕಾದಂಬರಿ ‘ರಾಜಮೋಹನ್ಸ್ ವೈಫ್’. ನಂತರ ಬಂಗಾಳಿಯಲ್ಲಿ ‘ದುರ್ಗೇಶ್ ನೊಂದಿನಿ' ಎಂಬ ಕಾದಂಬರಿ ಬರೆದರು. ಕಪಾಲ ಕುಂಡಲಿ, ಮೃಣಾಲಿನಿ, ಚಂದ್ರಶೇಖರ್, ರಾಜಸಿಂಹ ಮುಂತಾದ ಕಾದಂಬರಿಗಳನ್ನು ಬರೆದು ಜನಮನ್ನಣೆ ಗಳಿಸಿದಾರು. ಅವರು ೧೮೮೨ರಲ್ಲಿ ಬರೆದ ‘ಅನಂದ ಮಠ' ಕಾದಂಬರಿಯ ಕಥಾವಸ್ತು ರಾಜಕೀಯದ ಬಗ್ಗೆ ಇತ್ತು. ಇದರಿಂದ ಈ ಕಾದಂಬರಿ ಬಹು ವಿಮರ್ಶೆಗೆ ಒಳಗಾಯಿತು. ಈ ಕಾದಂಬರಿಯೇ ನಮ್ಮ ರಾಷ್ಟೀಯ ಗೀತೆಯಾದ ‘ವಂದೇ ಮಾತರಂ’ ಹೊಂದಿದೆ. ಈ ಪುಸ್ತಕ ಚಲನ ಚಿತ್ರವಾಗಿಯೂ ಜನರ ಮನ್ನಣೆ ಗಳಿಸಿತು. ಸೀತಾರಾಂ ಎಂಬುದು ಬಂಕಿಮ ಚಂದ್ರರ ಕೊನೆಯ ಕಾದಂಬರಿ. ಇವರು ಕೆಲವು ಹಾಸ್ಯ ವಿಡಂಬನೆ (ಕಮಲಾಕಾಂತೆರ್ ದಫ್ತರ್ ಇತ್ಯಾದಿ) ಗಳನ್ನೂ ಬರೆದಿದ್ದಾರೆ. ೮ ಎಪ್ರಿಲ್, ೧೮೯೪ರಲ್ಲಿ ಬಂಕಿಮ ಚಂದ್ರರು ನಿಧನ ಹೊಂದುತ್ತಾರೆ.
ಇವರ ಗೀತೆ ‘ವಂದೇಮಾತರಂ’ ಅನ್ನು ಬಿಪಿನ್ ಚಂದ್ರ ಪಾಲ್ ಹಾಗೂ ಲಾಲಾ ಲಜಪತ್ ರಾಯವರು ತಮ್ಮ ನಿಯತಕಾಲಿಕೆಯ ಶೀರ್ಷಿಕೆಯಾಗಿ ಬಳಸಿದ್ದರು. ಬಂಕಿಮ ಚಂದ್ರರು ತಮ್ಮ ಸಾಹಿತ್ಯ ಕೃಷಿಯ ಮೂಲಕ ಹಾಗೂ ವಂದೇ ಮಾತರಂ ಗೀತೆಯ ಮೂಲಕ ಸದಾ ಅಮರರಾಗಿರುತ್ತಾರೆ.
ಚಿತ್ರ ಕೃಪೆ: ಅಂತರ್ಜಾಲ ತಾಣ