ನಾನು ಉಷಾ ಸೋಮನ್…

ನಾನು ಉಷಾ ಸೋಮನ್…

ನನ್ನನ್ನು ಈ ಪ್ರಪಂಚ ಈ ಹೆಸರಿನಿಂದ ಕೆಲವೊಮ್ಮೆ ಗುರುತಿಸುವುದೇ ಇಲ್ಲ. ಆದರೆ ನನ್ನ ಮಗನ ಹೆಸರು ಹೇಳಿದರೆ ಕೂಡಲೇ ಗುರುತಿಸುತ್ತದೆ. ಮಗನಿಂದಾಗಿ ಗುರುತಿಸಲ್ಪಡುವುದು ಅಮ್ಮನಾದ ನಾನೂ ಸೇರಿದಂತೆ, ಎಲ್ಲರಿಗೂ ಹೆಮ್ಮೆಯ ಸಂಗತಿಯೇ ಅಲ್ಲವೇ? ನನ್ನ ಮಗನ ಹೆಸರು ಮಿಲಿಂದ್ ಸೋಮನ್. ಅವನು ಯಾರೆಂದು ನಿಮಗೆ ಹೇಳಬೇಕಿಲ್ಲ ತಾನೇ? ಮಾಡೆಲ್, ಚಿತ್ರನಟ ಹಾಗೂ ಕ್ರೀಡಾ ಪಟು. ಮಿಲಿಂದ್ ನನ್ನು ಈಗ ಜನರು ಮ್ಯಾರಥಾನ್ ಓಟದ ಕ್ರೀಡಾಳು ಎಂದು ಗುರುತಿಸುತ್ತಾರೆ. ನನಗೆ ಅದು ಬಹಳ ಸಂತೋಷ ತರುವ ವಿಷಯ.

ನಾನು ನನ್ನ ಬಗ್ಗೆ ಹೇಳಿಕೊಳ್ಳುವುದು ಬಹಳವೇನಿಲ್ಲ. ಆದರೂ ನಾನು ಹೇಳುವುದನ್ನು ಕೇಳಿ ಕೆಲವರಿಗಾದರೂ ಅದು ಸ್ಪೂರ್ತಿ ಎನಿಸಿದರೆ ನನ್ನ ಜೀವನ ಸಾರ್ಥಕ. ನನಗೀಗ ೮೧ ವರ್ಷ. ಮುಂದಿನ ಜುಲೈ ೩ ತಾರೀಖಿಗೆ ನನಗೆ ೮೨ ತುಂಬುತ್ತದೆ. ನನ್ನ ೮೧ನೇಯ ಹುಟ್ಟು ಹಬ್ಬವನ್ನು ನನ್ನ ಮಗ ಮಿಲಿಂದ್ ಹಾಗೂ ಸೊಸೆ ಅಂಕಿತಾ ಕನ್ವಾರ್ ಜೊತೆ ಕೇಕ್ ತುಂಡರಿಸುವ ಮೂಲಕ ಆಚರಿಸಿದೆ. ಕಳೆದ ೨೦೨೦ ವರ್ಷ ಲಾಕ್ ಡೌನ್ ಸಮಯವಾದುದರಿಂದ ನನ್ನ ಹುಟ್ಟುಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಿದೆ. ನನ್ನ ಮಗ-ಸೊಸೆ ನನಗೆ ಕೊಟ್ಟ ಕೇಕ್ ಗಾಗಿ ನಾನು ಅವರಿಗೆ ೧೫ ಬಾರಿ ಪುಶ್ ಅಪ್ ವ್ಯಾಯಾಮವನ್ನು ಮಾಡುವುದರ ಮೂಲಕ ಉಡುಗೊರೆಯಾಗಿ ನೀಡಿದೆ. ದೇವರು ದೊಡ್ಡವನು. ನನ್ನಲ್ಲಿ ಇನ್ನೂ ಎದ್ದು ಓಡಾಡುವ, ಬೆಟ್ಟ ಗುಡ್ಡಗಳನ್ನು ಏರುವ, ವ್ಯಾಯಾಮ ಮಾಡುವ ಶಕ್ತಿ ಇದೆ.

ನಿಮಗೆ ನನ್ನ ಬಗ್ಗೆ ಸ್ವಲ್ಪವಾದರೂ ತಿಳಿಸಲೇ ಬೇಕು. ನಾನು ಓರ್ವ ಉಪನ್ಯಾಸಕಿಯಾಗಿದ್ದು, ಹಲವಾರು ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಸುಮಾರು ೨೫ ವರ್ಷ ದುಡಿದು ಬಹಳ ಹಿಂದೆಯೇ ನಿವೃತ್ತಳಾಗಿರುವೆ. ನಿವೃತ್ತ ಜೀವನ ಹೇಗೆ ಕಳೆಯಲಿ? ಎಂಬ ಯೋಚನೆ ಬಂದ ಒಂದು ದಿನ ನಾನೆದ್ದು ನಡೆಯಲು ಪ್ರಾರಂಭಿಸಿದೆ. ಒಂದೆಡೆ ಸಮಯ ಕಳೆಯುವ ಉದ್ದೇಶವಾಗಿದ್ದರೂ, ನಡೆಯುವುದು ಒಂದು ಉತ್ತಮ ವ್ಯಾಯಾಮ. ಇದರಿಂದ ನನಗೆ ಇನ್ನಷ್ಟು ವಯಸ್ಸಾದಾಗ ನನ್ನ ದೇಹ ಸ್ವಲ್ಪ ಮಟ್ಟಿಗಾದರೂ ಫಿಟ್ ಆಗಿರುತ್ತದೆ ಎಂದು ಅನಿಸಿತು. ಹೀಗೇ ನಡಿಗೆಯಿಂದ ಓಟದ ಕಡೆಗೆ ಮನಸ್ಸು ಮಾಡಿದೆ. ನಂತರ ಪರ್ವತಾರೋಹಣ (ಟ್ರೆಕ್ಕಿಂಗ್) ಪ್ರಾರಂಭಿಸಿದೆ. ನನ್ನ ದೇಹವೂ ನನಗೆ ಈ ಎಲ್ಲಾ ಕೆಲಸಗಳನ್ನು ಮಾಡಲು ಬೆಂಬಲ ನೀಡಿತು.

ಬಹಳಷ್ಟು ಜನ ನನ್ನ ದೈನಂದಿನ ಚಟುವಟಿಕೆ ಹೇಗೆ ಪ್ರಾರಂಭವಾಗುತ್ತದೆ, ಏನೆಲ್ಲಾ ತಿನ್ನುತ್ತೀರಿ? ಎಂದು ಕೇಳುತ್ತಾರೆ... ನಾನು ಬೆಳಿಗ್ಗೆ ೫.೩೦ ಕ್ಕೆ ಎದ್ದೇಳುತ್ತೇನೆ. ಸುಮಾರು ಒಂದು ಗಂಟೆಗಳ ಕಾಲ ವಾಕಿಂಗ್ ಮಾಡುತ್ತೇನೆ. ಈ ವಾಕಿಂಗ್ ಅಭ್ಯಾಸವನ್ನು ನಾನು ಕಳೆದ ೧೮ ವರ್ಷಗಳಿಂದ ಮಾಡುತ್ತಲೇ ಬಂದಿದ್ದೇನೆ. ನಂತರ ಮನೆಗೆ ಬಂದು ಎಲ್ಲಾ ಗೃಹಿಣಿಯರು ಮಾಡುವ ಕೆಲಸಗಳಾದ ಉಪಹಾರ ತಯಾರಿಕೆ, ಅಡುಗೆ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ವಿಶೇಷ ಆಹಾರವನ್ನು ನಾನು ತೆಗೆದುಕೊಳ್ಳಲು ಹೋಗುವುದಿಲ್ಲ. ನಾನು ವಿಪರೀತ ಡಯಟ್ ಮಾಡುವುದನ್ನು ವಿರೋಧಿಸುತ್ತೇನೆ. ಮನೆಯಲ್ಲೇ ಏನು ಆಹಾರ ತಯಾರಿಸಲು ಸಾಧ್ಯವೋ ಅದನ್ನೇ ತಯಾರು ಮಾಡಿ ತಿನ್ನುತ್ತೇನೆ. ಕಳೆದ ವರ್ಷದ ಲಾಕ್ ಡೌನ್ ಬಳಿಕ ಆರೋಗ್ಯದ ಕಾಳಜಿ ನನ್ನಲ್ಲೂ ಮೂಡಿದೆ. ಹೊರಗಡೆ ಅನಾವಶ್ಯಕವಾಗಿ ಹೋಗುವುದನ್ನು ನಿಲ್ಲಿಸಿದ್ದೇನೆ. 

ನನಗೆ ನಾಲ್ಕು ಜನ ಮಕ್ಕಳು ಮಗ ಮಿಲಿಂದ್ ಸೋಮನ್ ಮತ್ತು ಮೂವರು ಹೆಣ್ಣು ಮಕ್ಕಳು. ಮೂರು ಮಂದಿ ಮೊಮ್ಮಕ್ಕಳೂ ಇದ್ದಾರೆ. ಹೀಗೆ ವಾಕಿಂಗ್ ಮಾಡುವಾಗ ನನಗೆ ವಾಕಥಾನ್ ಬಗ್ಗೆ ತಿಳಿಯಿತು. ನಾನೂ ಅದರಲ್ಲಿ ಭಾಗವಹಿಸುವ ಬಗ್ಗೆ ಯೋಚನೆ ಮಾಡಿದೆ. ನೂರು ಕಿಲೋ ಮೀಟರ್ ವಾಕ್ ಮುಗಿಸಲು ೪೮ ಗಂಟೆಯ ಅವಧಿ. ನಾಲ್ಕು ಜನರ ಬಳಗ ಮಾಡಿಕೊಂಡು ಇದರಲ್ಲಿ ಪಾಲ್ಗೊಳ್ಳಬಹುದಾಗಿತ್ತು. ನಾನು ನನ್ನ ಮೂವರು ಮೊಮ್ಮಕ್ಕಳ ಜೊತೆ ಭಾಗವಹಿಸಲು ಮನಸ್ಸು ಮಾಡಿದೆ. ಅವರೂ ಈ ಅಜ್ಜಿಗೆ ಬೆಂಬಲ ನೀಡಿದರು. ನಾವು ಈ ವಾಕಥಾನ್ ಅನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆವು. ಇದು ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. 

ನನಗೆ ಬಾಲ್ಯದಿಂದಲೂ ಪ್ರವಾಸಕ್ಕೆ ಹೋಗುವುದರಲ್ಲಿ ಬಹಳ ಆಸಕ್ತಿ ಇತ್ತು. ಆದರೆ ನನಗೆ ಗುಡ್ಡ-ಬೆಟ್ಟಗಳನ್ನು ಹತ್ತುವ ಟ್ರೆಕ್ಕಿಂಗ್ ಬಗ್ಗೆ ಮಾಹಿತಿ ಇರಲಿಲ್ಲ.  ಒಮ್ಮೆ ನನ್ನ ಮೊಮ್ಮಗ ಅವನ ಗೆಳೆಯರ ಜೊತೆ ೧೪ ಸಾವಿರ ಅಡಿಯ ಒಂದು ಬೆಟ್ಟವನ್ನು ಹತ್ತಲು ಹೊರಟಿದ್ದ. ನನಗೂ ಅವನ ಜೊತೆ ಹೋಗುವ ಆಸೆಯಾಯಿತು. ನಾನೂ ನಿಮ್ಮ ಜೊತೆ ಬರಲೇ? ಎಂದು ಕೇಳಿದಾಗ ನನಗೆ ೬೦ ವರ್ಷ ವಯಸ್ಸು. ಆದರೂ ಅವನ ಸಮ್ಮತಿಯೂ ದೊರೆಯಿತು. ನಾನು ಅವರ ಜೊತೆ ಯಶಸ್ವಿಯಾಗಿ ಬೆಟ್ಟವನ್ನು ಹತ್ತಿದೆ. 

ನನ್ನ ಮಗ ಮಿಲಿಂದ್ ನಿಜಕ್ಕೂ ನನಗೆ ಸ್ಪೂರ್ತಿ. ನಾನು ಮೊದಲೆಲ್ಲಾ ದೂರ ದೂರಕ್ಕೆ ಮ್ಯಾರಥಾನ್ ಹೋಗುತ್ತಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಮಿಲಿಂದ್ ಮತ್ತು ನನ್ನ ಸೊಸೆ ವಾಕಥಾನ್ ಹೋಗುವಾಗ ನನಗೂ ಹೋಗಬೇಕೆಂದು ಮನಸ್ಸಾಯಿತು. ನನ್ನ ಸೊಸೆಯೂ ಉತ್ತಮ ಕ್ರೀಡಾಳು. ಅವರ ಜೊತೆ ಹೋಗಲು ಪ್ರಾರಂಭಿಸಿದೆ. ಹೀಗೆ ಕಳೆದ ವರ್ಷ ನಾನು ಹಿಮಾಲಯದಲ್ಲಿ ಸಂಡಾಕ್ ಫೂ (Sandakphu Phalut Trek) ದಾರಿ ಎಂದು ಕರೆಯಲ್ಪಡುವ ಟ್ರೆಕ್ಕಿಂಗ್ ನಡೆಸಿದೆ. ಅಲ್ಲಿಯ ಅನಿಶ್ಚಿತ ವಾತಾವರಣದಲ್ಲಿ ಪರ್ವತವನ್ನು ಹತ್ತುವುದು ಬಹಳ ಕಷ್ಟ. ಚಳಿಗಾಲದ ಸಮಯವೂ ಆಗಿದ್ದುದರಿಂದ ಪರ್ವತವನ್ನು ಏರಲು ನಾನು ಬಹಳ ಕಷ್ಟ ಪಟ್ಟೆ. ಆದರೂ ಧೈರ್ಯಗೆಡದೆ ಸುಮಾರು ೧೨ ಸಾವಿರ ಅಡಿಗಳ ಈ ಪ್ರಯಾಣವನ್ನು ನಾನು ಯಶಸ್ವಿಯಾಗಿ ಮುಗಿಸಿದೆ. ದಾರ್ಜಿಲಿಂಗ್ ನಲ್ಲಿರುವ ಹಿಮಾಲಯ ಪರ್ವತಾರೋಹಣ ಸಂಸ್ಥೆ (Himalayan Mountaineering Institute) ಯು ಈ ಮಾರ್ಗದಲ್ಲಿ ಟ್ರೆಕ್ಕಿಂಗ್ ಮಾಡಿದ ಹಿರಿಯ ಮಹಿಳೆ ಎಂದು ನನ್ನನ್ನು ಗೌರವಿಸಿತು. ಡಿಸೆಂಬರ್ ೨೦೨೦ರಲ್ಲಿ ನಾನು, ನನ್ನ ಮಗ ಹಾಗೂ ಸೊಸೆ ಜೊತೆ ಸೇರಿ ಈ ಸಾಧನೆಯನ್ನು ಮಾಡಿದೆ. ನನ್ನ ಬೆಂಬಲಕ್ಕೆ ನಿಂತ ನನ್ನ ಕುಟುಂಬದ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ.

೨೦೧೬ರಲ್ಲಿ ನಾನು ಸೀರೆ ಧರಿಸಿ, ಮಿಲಿಂದ್ ಜೊತೆ ಬರಿಗಾಲಿನಲ್ಲಿ ಮ್ಯಾರಥಾನ್ ಓಡಿದ ಅನುಭವ ಈಗಲೂ ನನ್ನ ನೆನಪಿನಾಳದಲ್ಲಿ ಹಸಿರಾಗಿದೆ. ಸೀರೆ ಧರಿಸಿಯೂ ಜಾಗಿಂಗ್ ಹಾಗೂ ಓಟ ನಡೆಸಬಹುದು ಎಂದು ನಾನು ನಿರೂಪಿಸಿದೆ. ೮೦ ಸೆಕೆಂಡುಗಳ ಪ್ಲಂಕ್ (ಬರಿ ಎರಡು ಕೈಗಳನ್ನು ನೆಲಕ್ಕೆ ಊರಿ ದೇಹವನ್ನು ಬ್ಯಾಲೆನ್ಸ್ ಮಾಡುವುದು) ಎಂಬ ವ್ಯಾಯಾಮವನ್ನು ಮಾಡಿದ್ದೆ. ಮಿಲಿಂದ್ ಜೊತೆ ಸ್ಕಿಪ್ಪಿಂಗ್ ಮಾಡುತ್ತೇನೆ. ಸೊಸೆಯ ಜೊತೆ ಒಂದು ಕಾಲಿನಲ್ಲಿ ಟೊಂಕ ಮಾಡುತ್ತಾ ಓಡುತ್ತೇನೆ. ಇವೆಲ್ಲಾ ಮಾಡುವುದು ನನಗೆ ತುಂಬಾನೇ ಖುಷಿ ಕೊಡುತ್ತದೆ.

ಮೊಮ್ಮಕ್ಕಳು ನನಗೆ ಮೊಬೈಲ್ ಅನ್ನು ಹೇಗೆ ಬಳಸಬೇಕೆಂದು ಹೇಳಿಕೊಟ್ಟಿದ್ದಾರೆ. ಸಮಾಜಿಕ ಜಾಲತಾಣಗಳನ್ನು ಬಳಸುವ ಬಗೆಯಾಗಲೀ, ಕಡೇ ಪಕ್ಷ ಯಾರಿಗಾದರೂ ಫೋನ್ ಮಾಡಲೂ ನನಗೆ ತಿಳಿದಿರಲಿಲ್ಲ. ಆದರೀಗ ನನಗೆ ಎಲ್ಲವೂ ಸರಾಗವಾಗಿದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮ ದಿನಚರಿಗಳನ್ನು ಹಾಗೂ ಅಭ್ಯಾಸಗಳನ್ನು ಬದಲು ಮಾಡಿಕೊಳ್ಳಬೇಕು ಎಂದು ನಾನು ಬಲವಾಗಿ ಪ್ರತಿಪಾದಿಸುತ್ತೇನೆ. 

ನಾನು ಕೊನೆಗೆ ಹೇಳುವುದು ಇಷ್ಟೇ. ನಿಮಗಾದ ವಯಸ್ಸು ಎಂಬುವುದು ಕೇವಲ ಒಂದು ನಂಬರ್ ಮಾತ್ರ. ದೇಹಕ್ಕೆ ವಯಸ್ಸಾಗಿರಬಹುದು. ಆದರೆ ಮನಸ್ಸಿಗೆ ಆ ವಯಸ್ಸನ್ನು ತಿಳಿಸಬೇಡಿ. ಮನಸ್ಸು ಯುವಕರ ಹಾಗೇ ಇರಲಿ. ಆಗ ನಿಮ್ಮ ದೇಹ ನಿಮಗೆ ಖಂಡಿತಾ ಬೆಂಬಲ ನೀಡುತ್ತದೆ. ಇದು ನನ್ನ ಅನುಭವದ ಮಾತು. ಈಗಲೂ ನನಗೆ ಹೊಸ ಹೊಸ ಸಾಧನೆಗಳನ್ನು ಮಾಡಬೇಕು, ವಾಕಥಾನ್ ಮಾಡಬೇಕು ಎಂದೆಲ್ಲಾ ಆಸೆಯಿದೆ. ಇವೆಲ್ಲಾ ದಾಖಲೆ ಮಾಡಲು ಖಂಡಿತಾ ಅಲ್ಲ. ನನ್ನ ಮನದ ಖುಷಿಗಾಗಿ. ಎಲ್ಲರಿಗೂ ಅವರದ್ದೇ ಆದ ದೈಹಿಕ ಶಕ್ತಿಗಳು ಹಾಗೂ ಬಲಹೀನತೆಗಳು ಇರುತ್ತವೆ. ಎಲ್ಲರಿಗೂ ನನ್ನಂತೆ ಇರಲು ಆಗದಿರಬಹುದು. ಸಫಲತೆಯೋ, ಅಸಫಲತೆಯೋ? ಆದರೆ ಪ್ರಯತ್ನ ಪಡಿ. ಜೀವನದ ಕೊನೆಗೆ ನಾನು ಸ್ವಲ್ಪ ಪ್ರಯತ್ನ ಪಟ್ಟಿದ್ದರೆ... ಎಂಬ ಮಾತು ನಮ್ಮ ಮನದಲ್ಲಿ ಕಾಡಬಾರದಲ್ವಾ? ನನ್ನ ಈ ಮಾತುಗಳಿಂದ ನಿಮಗೂ ಪ್ರೇರಣೆಯಾದರೆ ನನಗದೇ ಆನಂದ... ಹೋಗಿ ಬರುತ್ತೇನೆ. ನಮಸ್ಕಾರ.

***

ಇದು ಉಷಾ ಸೋನಮ್ ಅವರ ಮನದಾಳದ ಮಾತುಗಳು. ತಮ್ಮ ೬೦ನೇಯ ವಯಸ್ಸಿನಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಉಷಾ ಅವರು ನಂತರದ ದಿನಗಳನ್ನು ಕಳೆದದ್ದು ಬಹಳ ಪ್ರೇರಣಾದಾಯಕವಾಗಿ. ಸಾವಿರಾರು ಕಿಲೋ ಮೀಟರ್ ನಡೆದರು. ಸಾವಿರಾರು ಅಡಿಗಳಷ್ಟು ಪರ್ವತಗಳನ್ನು ಹತ್ತಿದರು. ಜಾಗಿಂಗ್, ಸ್ಕಿಪ್ಪಿಂಗ್, ರನ್ನಿಂಗ್ ತಮಗೆ ಸಾಧ್ಯವಾಗುವ ಎಲ್ಲವನ್ನೂ ಮಾಡಿದರು. ಇಂಥವರು ನಮಗೆ ಸ್ಪೂರ್ತಿಯಾಗಲೇ ಬೇಕು. ಉಷಾ ಸೋಮನ್ ಅವರ ಪ್ರೇರಣಾದಾಯಕ ವಿಡಿಯೋಗಳು ಅಂತರ್ಜಾಲದಲ್ಲಿ ತುಂಬಾ ಸಿಗುತ್ತವೆ. ಅದನ್ನು ತಾವು ವೀಕ್ಷಿಸಿ ಇವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು.  

ಉಷಾ ಸೋಮನ್ ಅವರು ೧೫ ಪುಶ್ ಅಪ್ ಅಥವಾ ೮೦ ನಿಮಿಷಗಳ ಪ್ಲಂಕ್ ಮಾಡುವುದು ದೊಡ್ಡ ಸಂಗತಿಯೇ ಎಂದು ನಿಮಗೆ ಅನಿಸಬಹುದು. ಆದರೆ ನೆನಪಿರಲಿ, ಅವರಿಗೆ ಮುಂದಿನ ಜುಲೈ ೩ ತಾರೀಖಿಗೆ ೮೨ ವರ್ಷ ತುಂಬುತ್ತದೆ. ಈ ವರ್ಷ ಯಾವ ಸಾಹಸ ಮಾಡಿ ತಮ್ಮ ಕುಟುಂಬದವರನ್ನು ಅಚ್ಚರಿಗೆ ಒಳಪಡಿಸುತ್ತಾರೋ? ಅವರಿಗೇ ಗೊತ್ತು. ಏನಾದರಾಗಲಿ, ಉಷಾ ಅವರ ಆರೋಗ್ಯ ಉತ್ತಮವಾಗಲಿ. ಇನ್ನಷ್ಟು ವರ್ಷ ನಮಗೆಲ್ಲಾ ಪ್ರೇರಣೆಯಾಗಿರಲಿ ಎಂದು ಹಾರೈಸುವ ಅಲ್ಲವೇ?

ಚಿತ್ರದಲ್ಲಿ : ೧. ಮಗ ಮಿಲಿಂದ್ ಸೋಮನ್ ಜೊತೆ ಸೀರೆ ಧರಿಸಿ ಓಟ

೨. ಸೊಸೆ ಅಂಕಿತಾ ಕನ್ವರ್ ಜೊತೆ ಒಂದು ಕಾಲಿನಲ್ಲಿ ಓಟ.

೩ ಸೀರೆಯಲ್ಲಿ ಪ್ಲಂಕ್ ಅಥವಾ ಪ್ಲಾಂಕ್ ವ್ಯಾಯಾಮ ಮಾಡುವುದು