ನಾನು ಜಕ್ಕಾಯ
ನಾನು ಜಕ್ಕಾಯ. ಇದು ನನಗೆ ನನ್ನ ಅಪ್ಪ ಅಮ್ಮ ಇಟ್ಟ ಹೆಸರು. ಅಂದಹಾಗೇ ಗಜಕಾಯ, ದೃಢಕಾಯ, ವಜ್ರಕಾಯ ಮುಂತಾದ ಹೆಸರುಗಳನ್ನು ಕೇಳಿ ಕೇಳಿ ನೀವು ನನ್ನ "ಜಕ್ಕಾಯ" ಎಂಬ ಹೆಸರನ್ನು ಕೇಳಿದಾಗ ಹುಬ್ಬೇರಿಸುವುದು ಸಹಜ. ಜಕ್ಕಾಯ ಎಂಬುದು ಯೆಹೂದಿ ಭಾಷೆಯ ಪದ.
ಯೆಹೂದಿ ಜನಾಂಗದ ಯೇಸುಕ್ರಿಸ್ತನ ಸಮಕಾಲೀನ ನಾನು. ಆ ದಿನಗಳಲ್ಲಿ ನಮ್ಮನ್ನಾಳುತ್ತಿದ್ದವರು ರೋಮನ್ ಚಕ್ರವರ್ತಿಗಳು. ಜಗತ್ತಿನ ರಾಜರುಗಳಲ್ಲಿ ಅತ್ಯಂತ ಸುಸಂಸ್ಕೃತ ಹಾಗೂ ಕುಲೀನರೆಂದರೆ ಈ ರೋಮನ್ ರಾಜರುಗಳೇ. ಏನು ಅವರ ಸಭ್ಯತೆ, ಶಿಷ್ಟಾಚಾರ! ಅಬ್ಬಾ!! ಅಲ್ಲಿ ಮೂದಲಿಕೆ ಇಲ್ಲ, ಅಪಹಾಸ್ಯವಿಲ್ಲ. ಹೆಣ್ಣಿಗೂ ಗಂಡಿಗೂ ಸಮಾನ ಗೌರವವಿದ್ದ ಸಂಸ್ಕೃತಿ ಅದು. ಅವರ ಘನಗಾಂಭೀರ್ಯದ ಮುಂದೆ ನಮ್ಮ ಯೆಹೂದ್ಯ ಸಂಸ್ಕೃತಿಯನ್ನು ನಿವಾಳಿಸಿ ಎಸೆಯಬೇಕು. ಜಗತ್ತಿನಲ್ಲೇ ಅತಿ ಬುದ್ಧಿವಂತರೆಂದು ಯೆಹೂದ್ಯರನ್ನು ಗುರುತಿಸುತ್ತಾರೆ. ಥೂ! ನಾಚಿಕೆಯಾಗಬೇಕು. ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಪ್ರತೀಕಾರ, ದಳ್ಳುರಿ ಎಲ್ಲವುಗಳ ನೆಲೆವೀಡಲ್ಲವೇ ನಮ್ಮ ಯೆಹೂದ್ಯ ಸಂಸ್ಕೃತಿ.
ನೀವೇನೇ ಹೇಳಿ ನಾನಂತೂ ರೋಮನ್ ಸಂಸ್ಕೃತಿಯ ಆರಾಧಕ. ಅವರ ಸರ್ಕಾರದಲ್ಲೇ ನಾನು ಕಂದಾಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವುದು. ರೋಮನ್ನರು ನನ್ನ ರೂಪವನ್ನೂ ಗುಣವನ್ನೂ ನೋಡದೆ ಕೇವಲ ನನ್ನ ವಿದ್ಯಾರ್ಹತೆಯನ್ನು ಅಳೆದು ನನಗೆ ಈ ಕೆಲಸ ಕೊಟ್ಟಿದ್ದಾರೆ. ಆದ್ದರಿಂದ ನಾನು ನಿಷ್ಠೆಯಿಂದ ಕೆಲಸ ಮಾಡಿ ಅವರ ಬೊಕ್ಕಸವನ್ನು ತುಂಬಿಸುತ್ತಿದ್ದೇನೆ. ಜೊತೆಗೆ ಮೇಲುಸಂಪಾದನೆಯೂ ಇರುವುದರಿಂದ ನಾನು ದಿನೇ ದಿನೇ ಶ್ರೀಮಂತನಾಗುತ್ತಿದ್ದೇನೆ.
ಆದರೆ . . ಒಂದಂತೂ ನಿಜ, ಈ ಐಷಾರಾಮದ ಜೀವನದಲ್ಲಿ ನ್ನೊಂದಿಗೆ ಪಾಲುಗಾರಳಾಗಲು ಯಾವ ಹೆಣ್ಣೂ ನನಗೆ ಸಿಗಲಿಲ್ಲ ಎಂಬುದೊಂದು ಕಹಿ ಸತ್ಯ. ಅಪಾರ ಶ್ರೀಮಂತಿಕೆ ಇದ್ದರೂ ನನ್ನ ಕುರೂಪದ ಕಾರಣದಿಂದ ಯಾವ ಹೆಣ್ಣೂ ನನ್ನನ್ನು ವರಿಸಲಿಚ್ಛಿಸಲಿಲ್ಲ. ಅದರಿಂದಲೇ ಅಲ್ಲವೇ ನಾನು ಅಡ್ಡಹಾದಿ ತುಳಿದದ್ದು. ಜುದೇಯ ನಾಡಿನ ಎಲ್ಲ ಸೂಳೆಯರೂ ನನಗೆ ಚೆನ್ನಾಗಿ ಗೊತ್ತು. ಅದರಲ್ಲೂ ಆ ಮರಿಯಾ, ಅವಳನ್ನಂತೂ ನಾನು ಮರೆಯುವಂತೆಯೇ ಇಲ್ಲ.
ಎಲ್ಲ ಜೂಜುಕಟ್ಟೆಗಳಲ್ಲೂ ನನ್ನ ಹಾಜರಿ ಇರುತ್ತಿತ್ತು. ಇಷ್ಟೆಲ್ಲಾ ಇದ್ದರೂ ಸಮಾಜದಲ್ಲಿ ನನಗೆ ಗಣ್ಯನೆಂಬ ಹೆಸರಿತ್ತು. ಆದರೆ ಬೆನ್ನ ಹಿಂದೆ "ಸುಂಕದವ" ಎಂಬ ತಾತ್ಸಾರದ ನುಡಿ ಇತ್ತು. ನಾನೂ ಅಷ್ಟೆ, ನನ್ನನ್ನು ಹೀಗಳೆಯುವವರನ್ನು ಕಂಡರೆ ಸುಮ್ಮನೇ ಬಿಡುತ್ತಿರಲಿಲ್ಲ, ಅವರು ಎದುರಿಗೆ ಸಿಕ್ಕರೆ ಹೇಗಾದರೂ ಮಾಡಿ ಹಿಂದಿನ ಯಾವುದೋ ಒಂದು ಸುಳ್ಳು ಬಾಕಿಯನ್ನು ದಂಡ ಸಮೇತ ಅವರಿಂದ ಕಕ್ಕಿಸಿಬಿಡುತ್ತಿದ್ದೆ. ಸರ್ಕಾರಿ ಅಧಿಕಾರಿಯಾದುದರಿಂದ ರೋಮನ್ ಪೊಲೀಸರು ನನ್ನ ಮಾತು ಕೇಳುತ್ತಿದ್ದರು. ಇದರಿಂದ ನನ್ನನ್ನು ಯಾರೂ ಎದುರು ಹಾಕಿಕೊಳ್ಳುತ್ತಿರಲಿಲ್ಲ. ಹೀಗೆ ಯೌವನದ ದಿನಗಳಲ್ಲಿ ನನ್ನ ಅಟಾಟೋಪ ಮೇರೆ ಮೀರಿತ್ತು.
ಆದರೂ ನನ್ನ ಮನದಾಳದಲ್ಲಿ ಒಂದು ಕೊರಗಿತ್ತು. ನನ್ನ ಆ ಸುಖದ ಜೀವನದಲ್ಲಿ ನನ್ನೊಂದಿಗೆ ನಕ್ಕು ನಲಿಯಲು, ನನ್ನ ಕನಸುಗಳಿಗೆ ಬಣ್ಣ ಕೊಡಲು, ನನ್ನ ಮನೆಯ ದೀಪ ಬೆಳಗಲು, ರಜ ಕಳೆದು ರಂಗವಲ್ಲಿ ಹಚ್ಚಿ ನಗು ಬೀರಲು, ಯಾವೊಬ್ಬ ಹೆಣ್ಣು ಜೀವವೂ ನನ್ನ ಬಾಳ ಸಂಗಾತಿಯಾಗಿರಲು ಒಪ್ಪಿರಲಿಲ್ಲ. ದೇವರು ಅದೇಕೆ ನನ್ನನ್ನು ಕುರೂಪಿಯಾಗಿ ಕುಬ್ಜನಾಗಿ ಸೃಷ್ಟಿಸಿದನೋ? ಎಷ್ಟೋ ಕುರುಡರಿಗೆ ಕುಂಟರಿಗೆ ಹೀನ ಹೆಳವರಿಗೆ ಮದುವೆಯಾಗಿದೆ ಆದರೆ ನನಗೆ . . ?
ಇನ್ನೊಂದು ಮರ್ಮಾಘಾತವೆಂದರೆ ನಾನು ನಿತ್ಯ ಭೇಟಿ ಮಾಡುತ್ತಿದ್ದ ಆ ಮರಿಯಾ, ನನ್ನ ಹಣದ ಥೈಲಿಯನ್ನು ಕಿತ್ತು ಸೊಂಟಕ್ಕೆ ಸಿಕ್ಕಿಸಿಕೊಂಡು ಮುದ್ದುಮಾಡುತ್ತಿದ್ದ ಮರಿಯಾ, ನಿನ್ನೆ ನನ್ನನ್ನು ಹತ್ತಿರಕ್ಕೇ ಸೇರಿಸಲಿಲ್ಲ. ಅವಳ ಮಾತುಗಳೋ, ಅದರ ವರಸೆಯೋ ಏನೊಂದೂ ನನಗೆ ಅರ್ಥವಾಗಲಿಲ್ಲ. ಅದ್ಯಾರೋ "ಯೇಸು" ಅಂತೆ, ತುಂಬಾ ಚೆನ್ನಾಗಿ ಮಾತಾಡ್ತಾನಂತೆ, ಮನುಷ್ಯರಾಗಿ ಹುಟ್ಟಿದವರೆಲ್ಲಾ ಅಣ್ಣತಮ್ಮಂದಿರಂತೆ, ಮೇಲು ಕೀಳು ಎಂಬುದೇ ಇಲ್ಲವಂತೆ, ಎಲ್ಲ ಪಾಪಕ್ಕೂ ಪ್ರಾಯಶ್ಚಿತ್ತವೇ ಪರಿಹಾರವಂತೆ, ಸನ್ಮಾರ್ಗದಲ್ಲಿ ನಡೆದರೆ ಅದೇ ಸ್ವರ್ಗವಂತೆ, ಬೂಟಾಟಿಕೆ ದರ್ಪ ವಂಚನೆ ಮೋಸ ಕಪಟಗಳನ್ನು ತೊರೆದವರೇ ದೇವರ ಮಕ್ಕಳಂತೆ . . ಎಲ್ಲ ಅಂತೆ ಕಂತೆ.
ಅಲ್ಲ, ಅವಳಿಗೇನಾಗಿದೆ ಅಂತ? ಊರ ಜನಕ್ಕೆಲ್ಲ ಸೆರಗು ಹಾಸುತ್ತಿದ್ದ ಆಕೆ ಇಂದು ಸಂತಳಾಗಿದ್ದಾಳೆಂದರೆ ನಮ್ಮಂಥವರು ಎಲ್ಲಿ ಹೋಗಬೆಕು. ಆದರೆ . . ಆದರೆ . . ಆಕೆ ಇನ್ನೂ ಏನೇನೋ ಹೇಳಿದಳಲ್ಲ. ಕುಂಟರು ನಡೆದಾಡುವರಂತೆ, ಕುರುಡರು ಕಾಣುವರಂತೆ, ಜೀವಚ್ಛವಗಳು ಚೇತನಶೀಲರಾಗುತ್ತಾರಂತೆ.
ಜೀವಚ್ಛವಗಳು ಚೇತನಶೀಲರಾಗುತ್ತಾರೆಂದರೆ ಅದು ಅದ್ಭುತವೇ ಸರಿ. ಜೂಜುಕಟ್ಟೆಯ ನನ್ನ ಜೊತೆಗಾರ ಮತ್ತಾಯ, ವರ್ಷಗಳ ಕಾಲ ನಾವಿಬ್ಬರೂ ಸಹೋದ್ಯೋಗಿಗಳು ಹೌದು, ನನ್ನಂತೆಯೇ ಅವನೂ ಲಂಪಟನಾಗಿದ್ದವನು, ಅವನೀಗ ಆ ಯೇಸುವಿನ ಶಿಷ್ಯನಂತೆ. ಅವನೂ ಒಮ್ಮೆ ಸಿಕ್ಕಾಗ ಇದೇ ಮಾತನ್ನು ಅಂದರೆ 'ಜೀವಚ್ಛವಗಳು ಚೇತನಶೀಲರಾಗುತ್ತಾರೆ' ಎಂಬ ಮಾತನ್ನು ಆಡಿದ್ದ. ಅಂದು ಆ ಮಾತಿನ ಅರ್ಥ ನನಗಾಗಿರಲಿಲ್ಲ. ಈಗ ಅದೇ ಮಾತನ್ನು ಮರಿಯಾಳಿಂದ ಕೇಳಿದ ಮೇಲೆ ನನ್ನ ಕಿವಿಯಲ್ಲಿ ಇನ್ನೂ ಈಗ ಕೇಳಿದಂತೆ ಪ್ರತಿಧ್ವನಿಸುತ್ತಿದೆ.
ಹೌದು, ನಾನು ಜೀವಚ್ಛವವಾಗಿದ್ದೇನೆ. ಇದುವರೆಗಿನ ನನ್ನ ಜೀವನದಲ್ಲಿ ದಬ್ಬಾಳಿಕೆ, ದುಂಡಾವರ್ತಿ, ಪುಂಡುಗಂದಾಯ, ಸುಳ್ಳುಮೊಕದ್ದಮೆ, ಪೊಲೀಸ್ ದೌರ್ಜನ್ಯಗಳಿಂದ ಎಲ್ಲರನ್ನೂ ಹಿಂಸಿಸುತ್ತಿದ್ದೆ. ಆದರೆ ಇದರಿಂದ ನನಗೆ ಸಿಕ್ಕಿದ್ದೇನು. ನಿರಾಳವೇ? ನೆಮ್ಮದಿಯೇ? ತೃಪ್ತಿಯೇ? ಮನಶಾಂತಿಯೇ? ಇವಾವುದೂ ಅಲ್ಲ. ನಿರಾತಂಕ ನಿರುಮ್ಮಳತೆಯೇ ಇಲ್ಲವಾಯಿತಲ್ಲ. ಅನಾರೋಗ್ಯ ಮನೆಮಾಡಿತಲ್ಲ.
ಅವನಾರು ಆ ಯೇಸು? ಅವನನ್ನು ನಾನು ನೋಡಬೇಕು. ಆದರೆ . . ಹಗಲಿನ ಜನಜಂಗುಳಿಯ ಮಧ್ಯೆ ಅವನನ್ನು ಕಾಣುವುದು ಹೇಗೆ? ಅವನೆಲ್ಲಿ ತಂಗುತ್ತಾನೋ ತಿಳಿಯದು. ಓ ಈಗ ನೆನಪಿಗೆ ಬರುತ್ತಿದೆ. ಹೌದು ಅವನನ್ನು ನೋಡಿದ್ದೇನೆ. ತನಗೆ ಈ ನೆಲದ ಮೇಲೆ ನೆಲೆಯಿಲ್ಲವೆಂದಿದ್ದ. ಆದರೆ ನಾನು "ಪವಿತ್ರ ಜೆರುಸಲೆಮ್ ಪಟ್ಟಣ ಪ್ರವೇಶಿಸಿದ್ದಕ್ಕೆ ಸುಂಕ ಕೊಡು" ಎಂದು ನಿಷ್ಟೂರವಾಗಿ ಕೇಳಿದ್ದೆ. ಆತ ನಿರಾಕರಿಸಲಿಲ್ಲ, ಸುಂಕ ಕೊಡಬೇಕಾದದ್ದು ನ್ಯಾಯ ಎಂದ, ನೆಲದ ನಿಯಮಕ್ಕೆ ತಲೆಬಾಗುತ್ತೇನೆ ಎಂದ. ಆದರೆ ಆತ ತನ್ನ ಕಿಸೆಯಲ್ಲಿ ಎಂದೂ ಹಣ ಇಟ್ಟುಕೊಂಡವನೇ ಅಲ್ಲ. ಆಗ ಒಂದು ಅದ್ಭುತವೇ ಘಟಿಸಿತು. ತನ್ನ ಶಿಷ್ಯರಿಗೆ ಹೇಳಿ ಮೀನೊಂದರ ಬಾಯಿ ತೆರೆಸಿದ. ಆಶ್ಚರ್ಯ! ಅದರಲ್ಲೊಂದು ಬೆಳ್ಳಿ ನಾಣ್ಯವಿತ್ತು. ಆತ ನನಗೆ ಕೊಡಬೇಕಿದ್ದ ಸುಂಕ ಅಷ್ಟೇ. "ಸೀಜರನದು ಸೀಜರನಿಗೆ" ಎಂದು ಹೇಳಿ ಅದನ್ನು ನನಗೆ ಕೊಟ್ಟ. ನಾನು ಮರುಮಾತಿಲ್ಲದೆ ಮುಂದೆ ಸಾಗಿದ್ದೆ.
ಅದೇ ಯೇಸು, ಇಂದು ಎಷ್ಟೊಂದು ಬೆಳೆದಿದ್ದಾನೆ, ನನ್ನ ಮರಿಯಾಳನ್ನೂ ಬದಲಾಯಿಸುವಷ್ಟು! ಹೌದು ನಾನು ಅವನನ್ನು ನೋಡಬೇಕು, ಅವನ ಮಾತುಗಳನ್ನು ಕೇಳಬೇಕು, ನನ್ನ ಬರಡು ಬದುಕಿಗೆ ಅವನಿಂದ ಸಾಂತ್ವನ ಲಭಿಸೀತೇ ನೋಡಬೇಕು.
ಇದೇನಿದು? ಯಾವುದೋ ದಿಬ್ಬಣ ಸಾಗಿದೆಯಲ್ಲ? ಆ ಕೊನೆಯಾತನನ್ನು ಕೇಳಿದೆ, "ಏನಪ್ಪ, ಯಾರ ಮದುವೆಯ ದಿಬ್ಬಣವಿದು?"
ಆತ ಗೊಳ್ಳನೆ ನಕ್ಕ. "ಮದುವೆಯಂತೆ ಮದುವೆ, ಮದುವೇನೂ ಅಲ್ಲ ಗಿದುವೇನೂ ಅಲ್ಲ, ನಿನಗಿನ್ನೂ ಮದುವೆಯಾಗಿಲ್ಲವಲ್ಲ, ಅದಕ್ಕೇ ನಿನಗೆ ಯಾವಾಗಲೂ ಅದೇ ಚಿಂತೆ, ಇದು ಯೇಸುವಿನ ದಿಬ್ಬಣ" ಎಂದ.
ಹಾಂ! ಯೇಸು!! ಹುಡುಕುತ್ತಿದ್ದ ಬಳ್ಳಿ ತೊಡರಿದಂತಾಯಿತಲ್ಲ. ಯೇಸು, ಯೇಸು, ಎಲ್ಲಯ್ಯ ಹೋಗುತ್ತಿದ್ದೀ, ಸ್ವಲ್ಪ ನಿಲ್ಲಯ್ಯ ನಾನೂ ಬರ್ತೇನೆ, ಅಯ್ಯೋ ಈ ಕುಳ್ಳು ದೇಹ ಹೊತ್ತು ಯೇಸುವಿನ ವೇಗಕ್ಕೆ ಸಮನಾಗಿ ನಡೆಯಲಾಗದಲ್ಲ, ಹಾಂ ಆತ ಅಲ್ಲಿ ನಿಂತನೆಂದು ತೋರುತ್ತದೆ, ಆದರೆ ಎಷ್ಟೊಂದು ಜನ ಮುತ್ತಿಕೊಂಡಿದ್ದಾರೆ, ಜನಜಂಗುಳಿಯ ನಡುವೆ ಆತನನ್ನು ಕಾಣಲು ಸಾಧ್ಯವಾಗುತ್ತಿಲ್ಲವಲ್ಲ. ಒಂದು ಕೆಲಸ ಮಾಡುತ್ತೇನೆ. ಇದೇ ದಾರಿಯಲ್ಲಿ ಮುಂದೆ ಹೋಗಿ ಆ ಮರವನ್ನು ಹತ್ತಿ ಕೂಡುತ್ತೇನೆ. ಇವನೂ ಅಲ್ಲಿ ಬಂದು ಆ ಮರದ ನೆರಳಲ್ಲಿ ನಿಂತು ಬೋಧನೆಗೆ ತೊಡಗುತ್ತಾನೆ. ಆಗ ನಾನು ಆತನನ್ನು ಹತ್ತಿರದಿಂದ ನೋಡಿದ ಹಾಗೂ ಆಗುತ್ತೆ, ಅವನ ಮಾತು ಕೇಳಿದ ಹಾಗೂ ಆಗುತ್ತೆ. ಅದು ಅವನಿಗೂ ಗೊತ್ತಾಗುವುದಿಲ್ಲ, ಬೇರೆ ಯಾರಿಗೂ ತಿಳಿಯುವುದಿಲ್ಲ.
ಅದೋ ಆತ ಬರುತ್ತಿದ್ದಾನೆ, ಎಂಥ ಗಂಭೀರ ನಡಿಗೆ, ಎತ್ತರದ ನಿಲುವು, ಪ್ರೀತಿ ಸೂಸುವ ಕಂಗಳು, ಗಡ್ಡ ಮೀಸೆಯ ನಡುವೆ ಕಿರುನಗುವಿನ ತುಟಿಗಳು, ಮರಿಯಾ ಹೇಳಿದ್ದು ನಿಜ. ಆತ ಆಕೆಯ ಮನೆಗೆ ಹೋದಾಗ ಅವಳು ಮನೆಯಂಗಳದ ಹೂದೋಟದಲ್ಲಿ ತೂಗುಮಂಚದಲ್ಲಿ ಕನಸು ಕಾಣುತ್ತಿದ್ದಳಂತೆ. "ಎಲ್ಲ ವಿಟಪುರುಷರಂತೆ ಈತನೂ ನನ್ನ ಸಂಗ ಬಯಸಿ ಬಂದನಲ್ಲ!" ಎಂದು ತನ್ನ ಬಗ್ಗೆ ಹೆಮ್ಮೆಯಾಯಿತಂತೆ. ಆದರೆ ಅಲ್ಲಿ ನಡೆದದ್ದೇ ಬೇರೆ. ಆತ ಬಂದು ಹೋದ ಮೇಲೆ ಮರಿಯಾ ಸಂಪೂರ್ಣ ಬದಲಾಗಿ ಹೊಸ ಮನುಷ್ಯಳೇ ಆಗಿದ್ದಳು.
ಇದೋ ಮರದ ಹತ್ತಿರಕ್ಕೆ ಆತ ಬಂದ. ಇದೇನಿದು? ಆತ ನನ್ನತ್ತಲೇ ನೋಡುತ್ತಿದ್ದಾನೆ, ನನ್ನನ್ನೇ ಕೈ ಮಾಡಿ ಕರೆದು "ಗೆಳೆಯ ಜಕ್ಕಾಯ, ಕೆಳಗಿಳಿದು ಬಾ, ನಡಿ ನಿಮ್ಮ ಮನೆಗೆ ಹೋಗೋಣ" ಎಂದ. ನನಗೆ ಸಂತೋಷಾತಿರೇಕದಿಂದ ಬಾಯಿ ಕಟ್ಟಿಹೋಯಿತು. ಅವನೊಬ್ಬ ಪುಣ್ಯಪುರುಷನೇ ಸರಿ. ನನ್ನ ಹೆಸರು ಮಾತ್ರವಲ್ಲ ನನ್ನ ಮನದಲ್ಲಿದ್ದುದೂ ಅವನಿಗೆ ತಿಳಿದುಹೋಯಿತು ನೋಡಿ. ಮರದಿಂದ ಕೆಳಗಿಳಿದ ನಾನು ಸಾಷ್ಟಾಂಗವಾಗಿ ಆತನ ಕಾಲಿಗೆ ಬಿದ್ದೆ. "ಸ್ವಾಮಿ ನೀವು ಮಹಾತ್ಮರು, ನಿಮ್ಮ ಪಾದವನ್ನು ನನ್ನ ತಲೆಯ ಮೇಲಿಡಿ, ಆದರೆ ನೀವು ನನ್ನ ಮನೆಗೆ ಬರುವಷ್ಟು ಪುಣ್ಯಾತ್ಮ ನಾನಲ್ಲ, ಪಾಪಾತಿರೇಕದಿಂದ ನಾನು ಕುಂದಿಹೋಗಿದ್ದೇನೆ, ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನಾನು ಕುಬ್ಜ . . " ನಾನಿನ್ನೂ ಏನೇನೋ ಬಡಬಡಿಸುತ್ತಿದ್ದೆ, ಆದರೆ ಆತ ನನ್ನನ್ನೆತ್ತಿ ಕರಚಾಚಿ ಆಲಂಗಿಸಿದ. "ಜಕ್ಕಾಯ, ನೀನಿನ್ನು ಕುಬ್ಜಕಾಯನಲ್ಲ, ದೇವರು ಕಾಣುವುದು ನಿನ್ನ ದೈಹಿಕ ಸೌಂದರ್ಯವನ್ನಲ್ಲ, ಮನದ ಸೌಂದರ್ಯವನ್ನು" ಎಂದು ಹೇಳಿ ಆತ ಜನರತ್ತ ತಿರುಗಿ "ಒಂದು ಮಾತು ಹೇಳುತ್ತೇನೆ ಕೇಳಿ, ತನ್ನನ್ನೇ ತಾನು ತಗ್ಗಿಸಿಕೊಳ್ಳುವವನನ್ನು ದೇವರು ಉನ್ನತಿಗೇರಿಸುತ್ತಾನೆ, ಎಲ್ಲ ಸಂತೋಷಪಡಿ, ಏಕೆಂದರೆ ಕಳೆದುಹೋದ ಕುರಿ ಸಿಕ್ಕಿದೆ" ಎಂದ.
ಆತ ನನ್ನ ಮನೆಗೆ ಬಂದ. ನನ್ನ ಆತಿಥ್ಯ ಸ್ವೀಕರಿಸಿ ವಿರಮಿಸಿ ಆತನೆಂದ "ಜಕ್ಕಾಯ, ನಿನ್ನ ದೇಹದ ಕುಬ್ಜತೆಯನ್ನು ಸಮಾಜ ಅವಹೇಳನ ಮಾಡಿತು ನಿಜ. ಆದರೆ ಅದನ್ನು ನೀನು ನಿನ್ನ ಸಾಮರ್ಥ್ಯದಿಂದ ಗೆಲ್ಲಬೇಕು, ನೀನು ನೀನಾಗಬೇಕು, ನಿನ್ನೊಳಗಿನ ಪ್ರತಿಭೆಯನ್ನು ಪ್ರಕಟಪಡಿಸು, ಇತರರನ್ನೂ ನಿನ್ನಂತೆಯೇ ಪ್ರೀತಿಸು, ನಿನ್ನ ಮನವನ್ನು ಕುಂದಿಸಬೇಡ, ಆತ್ಮವಂಚನೆಯು ಖಿನ್ನತೆಗೆ ದಾರಿ, ಖಿನ್ನತೆಯೇ ಕೇಡಿಗೆ ಕಾರಣ, ನಿನ್ನ ಮನದ ಕುಬ್ಜತೆಯೇ ನಿನ್ನನ್ನು ಹಾಳುಮಾಡಿತು ಅಲ್ಲವೇ? ಆದ್ದರಿಂದ ಇನ್ನೆಂದಿಗೂ ಪಾಪಕ್ಕೆಳಸಬೇಡ, ಮನಸ್ಸಿನ ಕಾರಣದಿಂದ ದೇಹವು ನರಕದಲ್ಲಿ ಬೀಳಬಾರದು. ನೀನು ಯಾವಾಗ ನನ್ನನ್ನು ಕಾಣಬೇಕೆಂದು ಕಾತರಿಸಿದೆಯೋ ಅಂದೇ ನೀನು ಉನ್ನತಿಯೆಡೆಗೆ ಸಾಗತೊಡಗಿದೆ. ಪರಮಾತ್ಮಜ್ಞಾನವನ್ನು ಪಡೆಯಲೆಂದೇ ನೀನು ಉನ್ನತಿಯೆಂಬ ಮರವೇರಿದೆ. ಜಕ್ಕಾಯನು ಮರವೇರಿದನೆಂದರೆ ಅದು ಕುಬ್ಜತೆಯು ಎತ್ತರಕ್ಕೇರಿದ ಸಂಕೇತ".
ನಾನು ಮರವೇರಿದಾಗ ಪ್ರಭು ನನ್ನನ್ನು ನೋಡಿದನಲ್ಲ ಆಗಲೇ ನಾನು ಪುನೀತನಾದೆ, ನನಗೆ ಅಷ್ಟೇ ಸಾಕಿತ್ತು. ಆದರೆ ಆತ ನನ್ನ ಮನೆಗೂ ಬಂದುದರಿಂದ ನನ್ನ ಮನೆ ಮನ ಎರಡೂ ಪಾವನವಾದವು. ಕತ್ತಲೆಯೆಡೆಯೆಲ್ಲ ಬೆಳಗಿದವು. ಪ್ರೀತಿಯನ್ನೇ ಅರಿಯದ ನನ್ನ ಮನಕ್ಕೆ ಆತ ಪ್ರೀತಿಯ ಸಿಂಚನಗೈದ. ನನಗಿನ್ನೇನು ತಾನೇ ಬೇಕು. ನಾನು ಹೇಳಿದೆ "ಸ್ವಾಮಿ! ನಿನ್ನ ಮಾತುಗಳಿಂದ ನನ್ನ ಮನ ಹಗುರಾಯಿತು, ಈ ಮನೆ ನನ್ನದಲ್ಲ, ನಿನ್ನದೇ, ಇನ್ನು ಮುಂದೆ ಈ ಮನೆಯಲ್ಲಿ ನೀನಿರು, ನಿತ್ಯ ನಿನ್ನ ಪಾದ ತೊಳೆಯುವ ಭಾಗ್ಯ ನನ್ನದಾಗಲಿ, ನಿತ್ಯ ನಿನ್ನ ಮಾತುಗಳು ಈ ಮನೆಯಲ್ಲಿ ಪ್ರತಿಧ್ವನಿಸಲಿ, ನಿತ್ಯ ನನ್ನ ಕಿವಿಗಳು ಅದನ್ನಾಲಿಸುತ್ತಿರಲಿ".
ಅದಕ್ಕೆ ಆತ "ದೀನರಿಗೆ ಶುಭಸಂದೇಶ ಸಾರಲೆಂದೇ ನಾನು ಬಂದಿದ್ದೇನೆ. ಯಾವಾಗ ನೀನು ನನ್ನನ್ನು ನೆನೆಯ ತೊಡಗಿದೆಯೋ ಅಂದೇ ನಾನು ಈ ಮನೆಯಲ್ಲಿ ನೆಲೆನಿಂತೆ, ಒಂದು ವಿಷಯ ನೆನಪಿಡು, ಬುದ್ಧಿವಂತನು ಸ್ವರ್ಗದಲ್ಲಿ ಮನೆ ಕಟ್ಟುತ್ತಾನೆ" ಎಂದ.
ಈ ಕೊನೆಯ ಮಾತು ನನ್ನ ಮನ ಕಲಕಿತು. ಹೌದು ಈ ಮನೆ ನನ್ನ ಬೆವರಿನ ಮನೆಯಲ್ಲ, ಇದು ಬೇರೆಯವರ ರಕ್ತ ಬಸಿದು ಕಟ್ಟಿದ ಮನೆ. ಇತರರನ್ನು ನಾನು ಹಿಂಸಿಸಿ, ಬಲವಂತವಾಗಿ ಹಣಸೆಳೆದು ಕಟ್ಟಿದ ಮನೆ. ಇದರಲ್ಲಿ ನನ್ನದೆನ್ನುವುದು ಏನಿದೆ? ಆದ್ದರಿಂದ ಆಸ್ತಿಯೆಲ್ಲವನ್ನೂ ಮಾರಿ ಬಡಬಗ್ಗರಿಗೆ ಹಂಚಿ ಯೇಸುವನ್ನು ಹಿಂಬಾಲಿಸಿದೆ. ಆ ಮೂಲಕ ಸ್ವರ್ಗದಲ್ಲೊಂದು ಮನೆ ಮಾಡಿದೆ.