ನೋಂದಣಿ,ನಿಯಮಗಳು.ಉಡುಗೆ
ದಿನೇ ದಿನೇ ಸಾಗರದ ಅಲೆಗಳಂತೆ ಬರುತ್ತಿದ್ದ ಜನರ ಲೆಕ್ಕವಿಡುವುದು ಸಣ್ಣ ಮಾತೇನೂ ಆಗಿರಲಿಲ್ಲ.ಅದಕ್ಕೆಂದೇ ಮುಖ್ಯ ಕಚೇರಿಯಲ್ಲಿ ಒಂದು ತಂಡವಿತ್ತು.ಆ ತಂಡದಲ್ಲಿ ಇದ್ದವರು ಕೈದಿಗಳೇ.ಹಾಗೂ ಅವರನ್ನು ನಿಯಂತ್ರಿಸಲು ಇಬ್ಬರು SS ನವರು. ಆಯಾ ದೇಶದ ಹೊಸ ಕೈದಿಗಳನ್ನು ಆ ದೇಶದ ಕೈದಿಗಳೇ ನೊಂದಾಯಿಸುತ್ತಿದ್ದರು.ಹಾಗೂ ಶಿಬಿರದಲ್ಲಿ ತೋರಬೇಕಾದ ಶಿಸ್ತು,ನಡತೆಗಳ ಬಗ್ಗೆ ಕಿವಿಮಾತುಗಳನ್ನೂ ಕೊಡುತ್ತಿದ್ದರು.
ನೀವು ಹೊರಗೆ ಏನು ಇದ್ದಿರೋ ಅದನ್ನು ಮರೆತುಬಿಡಿ.ಇಲ್ಲಿ ನೀವು ಕೈದಿಗಳು.SS ನವರ ಮಾತು ಕೇಳುವುದಷ್ಟೇ ಅಲ್ಲಿಯ ಏಕ ನಿಯಮ.
ಹೊಸದಾಗಿ ನೊಂದಾಯಿಸಲಾದ ಕೈದಿಗಳ ಸಾಮಾನುಗಳನ್ನು ಇಸಿದುಕೊಳ್ಳಲಾಗುತ್ತಿತ್ತು,ಬಟ್ಟೆಗಳನ್ನು ತೆಗೆಸಿ ನಗ್ನರಾಗಿಸಿ,ಶುಭ್ರರನ್ನಾಗಿಸಲು ಸ್ನಾನದ ಕೋಣೆಗೆ ಕಳುಹಿಸಲಾಗುತ್ತಿತ್ತು. ನಂತರ ಶಿಬಿರದ ಸಮವಸ್ತ್ರ ಕೊಡಲಾಗುತ್ತಿತ್ತು.ಕೈದಿಗಳ ವಸ್ತ್ರಗಳ ಮೇಲೆ ನೋಡಿದ ತಕ್ಷಣ ಗುರುತಿಸಲು ಅವರವರ ಪ್ರವರಗಳ ಅನುಸಾರ ಬ್ಯಾಜ್ ಅಂಟಿಸಲಾಗುತ್ತಿತ್ತು.
ಪಾಲಿಟಿಕಲ್ ಕೈದಿಗಳಿಗೆ ಕೆಂಪು ಬಣ್ಣದ ತ್ರಿಕೋನ,ಕ್ರಿಮಿನಲ್ಗಳಿಗೆ ಹಸಿರು,ಮೈಗಳ್ಳರಿಗೆ ಕಪ್ಪು,ಧರ್ಮಗುರುಗಳಿಗೆ ಕೇಸರಿ,ಇಮಿಗ್ರಂಟ್ಸ್ ಗೆ ನೀಲಿ ಹಾಗೂ ಸಲಿಂಗ ಕಾಮಿಗಳಿಗೆ ಗುಲಾಬಿ ಬಣ್ಣ.ತ್ರಿಕೋನದ ಮೇಲೆ ಆಯತಾಕಾರದ ಪಟ್ಟಿ ಇದ್ದರೆ ಅವರು ಎರಡನೇ ಬಾರಿ ಬಂದವರು.ಮೂರನೇ ಸಾಲಿನ ಚಿತ್ರಗಳು ಟಾರ್ಗೆಟ್ ಮಾಡಿದ ಜನರದ್ದು.ನಾಲ್ಕನೆಯದು ಜೀವ್(Jews) ಜನರದ್ದು.ತ್ರಿಕೋನದ ಮೇಲಿನ ಅಕ್ಷರ ದೇಶ ಸೂಚಕ.ನಂತರ ಕೈದಿ ನೋಂದಣಿ ಸಂಖ್ಯೆ.(ಉಳಿದ ಚಿನ್ಹೆಗಳ ಬಗ್ಗೆ ನೆನಪಿಲ್ಲ).ಇಂತಹ ಎರಡು ಜೊತೆ ಬಟ್ಟೆಗಳು.ಇವು ಸದಾಕಾಲವೂ ಶುಭ್ರವಾಗಿರಬೇಕು.ಇಲ್ಲಿನ ಚಳಿ ಬಂಡೆಯನ್ನೂ ಕೊರೆಯುವಂಥದ್ದು.ಅದಕ್ಕಾಗಿ ಹೇಳಿಕೊಳ್ಳುವಂತಹ ವಿಶೇಷ ಉಡುಪಗಳ ವ್ಯವಸ್ಥೆ ಏನೂ ಇರಲಿಲ್ಲ.
- ಕೈದಿಗಳ ಸಮವಸ್ತ್ರಗಳು
ಕೈದಿಗಳ ವಿಂಗಡಣೆ,ವಾಸ ಹಾಗೂ ಮೂಲ ಸೌಕರ್ಯ.
ಕೈದಿಗಳ ವಿಂಗಡಣೆ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿತ್ತು.ಅದರಂತೆಯೇ ಅವರ ವಾಸಸ್ಥಾನಗಳನ್ನೂ ಸಹ.ಇವುಗಳಿಗೆ ಬರಾಕ್ ಗಳು(barack) ಎನ್ನುತ್ತಿದ್ದರು.ಧರ್ಮಗುರುಗಳನ್ನು,ಯುಧ್ಧ ಕೈದಿಗಳನ್ನು ಒಂದೆಡೆ,ಜೀವ್ಸ್ ಗಳನ್ನು ಒಂದೆಡೆ.ಹೀಗೆ ಕೈದಿಗಳನ್ನು ಅವರ ದೇಶಾನುಸಾರ,ಅಧಿಕಾರ,ವೃತ್ತಿ ,ಪ್ರಭಾವ ಇವುಗಳ ರೀತ್ಯಾ ವಿಂಗಡಿಸಿ ವಿವಿಧ ಬರಾಕ್ ಗಳಲ್ಲಿ ಇರಿಸಲಾಗಿತ್ತು.ಕೈದಿಗಳ ಪರಸ್ಪರರ ಭೇಟಿ ಮಾತುಕತೆಗಳಿಗೆ ನಿಷೇಧವಿತ್ತು.ಇದರ ಬಗ್ಗೆ ನಿಗಾ ಇಡಲು SS ನ ಒಂದು ದಳವೇ ಇತ್ತು.
- ಶಿಬಿರದ ಒಂದು ನೋಟ ಹಾಗೂ ವಿಶೇಷ ಕೈದಿಗಳ ಸೆಲ್ ರಚನೆ
ಧರ್ಮಗುರುಗಳನ್ನು,ಕೆಲ ಅಧಿಕಾರಿಗಳನ್ನು ಒಂದು ಪ್ರತ್ಯೇಕ ಕೋಣೆಗಳಲ್ಲಿ ಇಡಲಾಗಿತ್ತು.ಈ ಕೋಣೆಗಳಲ್ಲಿನ ಕೈದಿಗಳಿಗೆ ಮಾತ್ರ ವಿಶೇಷ ಪ್ರಾಧಾನ್ಯತೆ ಇತ್ತು.ಇವು ೧೦*೧೨ಅಡಿಗಳಷ್ಟು ಚಿಕ್ಕ ಕೋಣೆಯಾದರೂ ಇದರಲ್ಲೇ ಮಲಮೂತ್ರ ವಿಸರ್ಜನೆಗೆ,ಸ್ನಾನಕ್ಕೆ,ಅಧ್ಯಯನಕ್ಕೆ ವ್ಯವಸ್ಥೆ ಮಾಡಲಾಗಿತ್ತು.ಅಂತೆಯೇ ಚಳಿಗಾಲದಲ್ಲಿ ತೊಂದರೆಯಾಗದಿರಲೆಂದು ಮಂಚ ಹಾಗೂ ಹೀಟರ್ ವ್ಯವಸ್ಥೆ ಸಹ ಇತ್ತು.ಈ ಕೋಣೆಗಳ ಸ್ವಚ್ಚತೆಗೆ ಬೇರೆ ಕೈದಿಗಳನ್ನು ಬಳಸಲಾಗುತ್ತಿತ್ತು.
- ವಿಶೇಷ ಕೈದಿಗಳ ಸೆಲ್ ಗಳು ಹಾಗೂ ಶೌಚ.
ಇನ್ನಿತರ ಬರಾಕ್ ಗಳಲ್ಲಿ ವ್ಯವಸ್ಥೆ ತೀರ ಕಳಪೆ ಮಟ್ಟದಲ್ಲಿತ್ತು.ಒಂದು ಬರಾಕ್ ಎಂದರೆ ಸುಮಾರು ೧೦೦ಮಿ.*೨೦ ಮಿ. ಉದ್ದಗಲದ್ದು.ಪ್ರಾರಂಭದಲ್ಲಿ ೨ ಮಾತ್ರ ಇದ್ದ ಇಂತಹ ಬರಾಕ್ ಗಳು ಕೈದಿಗಳ ಸಂಖ್ಯೆ ಹೆಚ್ಚಾದಂತೆ ಹೆಚ್ಚಳವಾಗಿ ಮೂವತ್ನಾಲ್ಕಾದವು.ಇವೆಲ್ಲವುಗಳನ್ನು ಕೈದಿಗಳಿಂದಲೇ ನಿರ್ಮಿಸಲಾಯಿತು.ಬರಾಕ್ಗಳಲ್ಲಿ ಒಂದರ ಮೇಲೊಂದರಂತೆ ಮಿಲಿಟರಿ ಮಾದರಿಯ ೩ ಮಂಚಗಳ ಸಾಲುಗಳು.ಪ್ರತ್ಯೇಕ ಕೋಣೆಗಳಲ್ಲಿ 'ಅತೀ' ಕಾಮನ್ ಸ್ನಾನ ಹಾಗೂ ಶೌಚಗೃಹಗಳು.ಕೈದಿಗಳನ್ನು ಶಿಕ್ಷಿಸುವ ಕೋಣೆಗಳೆಲ್ಲವೂ ಇದ್ದವು.ಕಟ್ಟಿಗೆಯ ಮಂಚಗಳ ಮೇಲೆ ಹೊರಳಾಡಲೂ ಬಾರದಷ್ಟು ಜಾಗದಲ್ಲಿ ೬-೭ ಜನರು ಮಲಗುತ್ತಿದ್ದರು.
- ಬರಾಕ್ ನ ಒಂದು ದೃಶ್ಯ
ಮಂಚಗಳ ಮೇಲೆ ಹಾಸಲು ನೀಲಿ ಬಣ್ಣದ ಒಂದು ಬಟ್ಟೆ.ಹೊದೆದುಕೊಳ್ಳಲು ಪ್ರತ್ಯೇಕ ಉಣ್ಣೆಯ ಹೊದಿಕೆಗಳಿದ್ದವು.ಪ್ರತಿದಿನವೂ ಮುಂಜಾನೆ ಒಂದು ಘಂಟೆಯ ಸಮಯಾವಕಾಶದಲ್ಲಿ ವಸ್ತುಗಳನ್ನು ಸಮವಾಗಿ ಹೊಂದಿಸಿಟ್ಟು.ಕೋಣೆಯ ನೆಲಗಳು,ಶೌಚ ,ಸ್ನಾನ ಗೃಹಗಳು ಫಳಫಳನೇ ಹೊಳೆಯುತ್ತಿರಬೇಕು.ಶೌಚಗಳ ವ್ಯವಸ್ಥೆ ತುಂಬಾ ಹೇಸಿಗೆ ಬರಿಸುವಂಥದ್ದಿದ್ದವು.ಮೊದ ಮೊದಲಿಗೆ ಹೇಸಿಗೆ ಅನಿಸಿದರೂ ದಿನ ನಿತ್ಯದ ಕಾರ್ಯಕ್ರಮವಾದ್ದರಿಂದ ಅನ್ಯ ಮಾರ್ಗಗಳಿರಲಿಲ್ಲ..ಸ್ನಾನಗೃಹದಲ್ಲಿ ಎರಡು ಕಾರಂಜಿಗಳಿದ್ದವು ಅವುಗಳಿಂದಲೇ ಶಾವರ್ ಬಾಥ್.ಮುಂಜಾನೆ ಸುಮಾರು ಒಂದು ಘಂಟೆಯ ಅವಧಿಯಲ್ಲಿ ಈ ಎರಡೂ ಕಾರ್ಯಕ್ರಮಗಳು ಮುಗಿಯಲೇಬೇಕು.ಮೊದಲಿಗೆ ೨೦೦ ಕೈದಿಗಳು ಇರಲೆಂದು ಕಟ್ಟಲಾದ ಈ ಬರಾಕುಗಳು ಮಹಾಯುಧ್ಧದ ವೇಳೆಗೆ ೨೦೦೦ ವರೆಗೆ ಮುಟ್ಟಿತು.
- ಕಾಮನ್ ಶೌಚ ಹಾಗೂ ಸ್ನಾನದ ಗೃಹ
ಈ ಬರಾಕುಗಳ ಕೈದಿಗಳ ಪಾದೆಂದರೆ ನಾಯಿ ಪಾಡು. ವೈದ್ಯರ ಸಹಾಯ ಸರಿಯಾಗಿ ಸಿಗುತ್ತಿರಲಿಲ್ಲ. ಔಷಧಗಳು ಇದ್ದರೂ ಅವು ಅನುಪಯುಕ್ತ ಎನಿಸುತ್ತಿದ್ದವು.ಕೈದಿಗಳ ಸಂಖ್ಯೆ ಹೆಚ್ಚಾದಂತೆ ನಿರ್ಲಕ್ಷತೆಯೂ ಹೆಚ್ಚಾಯಿತು.ಆದರೆ,ಎಂಥದ್ದೇ ದೈಹಿಕ ತೊಂದರೆ ಇದ್ದರೂ,ಆರಾಮ ತೆಗೆದುಕೊಳ್ಳಲು,ದಿನದಲ್ಲಿ ಮಲಗಿಕೊಳ್ಳಲು ಅವಕಾಶವೇ ಇರಲಿಲ್ಲ.ಎಲ್ಲರೂ ಎಲ್ಲಾ ಸಮಯದಲ್ಲೂ ಕ್ರಿಯಾತ್ಮಕವಾಗಿರಬೇಕು.ಆಲಸ್ಯವೆಂಬ ಶಬ್ದಕ್ಕೆ ಆಸ್ಪದವೇ ಇರಲಿಲ್ಲ.ಆಲಸ್ಯ ಉಗ್ರ ಶಿಕ್ಷೆಯನ್ನು ಆಕರ್ಷಿಸುತ್ತಿತ್ತು..
ಮುಂದುವರೆಯುವುದು..