ನಾನು ಮತ್ತು ಭೂಕಂಪ

ನಾನು ಮತ್ತು ಭೂಕಂಪ

2 ವರ್ಷಗಳ ಹಿಂದೆ ಕೇದಾರನಾಥ್ ನಲ್ಲಿ ಮೇಘಸ್ಫೋಟಗೊಂಡು ಜಲಪ್ರಳಯವಾಗಿ ಲಕ್ಷಾಂತರ ಜನರು ಅಲ್ಲೇ ಜಲಸಮಾಧಿಯಾದ ಘಟನೆ ನಿಮಗೆ ತಿಳಿದೇ ಇದೆ.ಆ ಜಲಪ್ರಳಯವಾದಾಗ ನಾನು ಆಗಷ್ಟೇ ಕೇದಾರನಾಥ್,ಬದರೀನಾಥ್ ದೇಗುಲಗಳ ಪ್ರವಾಸ ಮುಗಿಸಿ ಬಂದು 15 ದಿನಗಳು ಕಳೆದಿದ್ದವು. ಆಗ ನಾನು ದೇವರಲ್ಲಿ ಏನಂತ ಪ್ರಾರ್ಥಿಸಿದ್ದೆ ಗೊತ್ತಾ..? ದೇವರೇ.. ನಾನು ಅಲ್ಲಿರುವಾಗಲೇ ಈ ಜಲಪ್ರಳಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.ಈ ಲೋಕದಲ್ಲಿ ಬದುಕಿದ್ದು ಏನೂ ಪ್ರಯೋಜನವಿಲ್ಲ. ಬರೀ ನೋವುಗಳು ದುಃಖಗಳೇ ತುಂಬಿರುವ ಈ ಸಮಾಜದಲ್ಲಿ ಇರುವುದಕ್ಕಿಂತ ದೇವರ ಪಾದ ಸೇರುವುದೇ ಮೇಲು ಎಂದುಕೊಂಡೆ.ಅದೇ ರೀತಿ ನನ್ನ ಮೊರೆ ದೇವರು ಆಲಿಸಿದರೇನೋ ಎಂಬಂತೆ ಈ ಬಾರಿ ಆದಿನಾರಾಯಣನಾದ ವಿಷ್ಣುವಿನ ಮೂಲಸ್ಥಾನವಾದ ಮುಕ್ತನಾಥನ ದರ್ಶನ ಮಾಡಲೆಂದು ಪರಿವಾರದೊಂದಿಗೆ ನೇಪಾಳಕ್ಕೆ ಹೋಗಿದ್ದೆ.ಮುಕ್ತಿನಾಥನ ದರ್ಶನ ಮುಗಿಸಿ ಕಠ್ಮಂಡುವಿಗೆ ಬಂದೆವು. ಕಠ್ಮಂಡುವಿನಲ್ಲಿ ಪಶುಪತಿನಾಥನ ದರ್ಶನ ಮಾಡಿ ಆಗಷ್ಟೆ ದೇವಸ್ಥಾನದಿಂದ ಹೊರಗೆ ಬಂದಿದ್ದೆವು.ಒಂದೆರೆಡು ಫೋಟೋ ತೆಗೆಸಿಕೊಳ್ಳೋಣವೆಂದು ಫೋಸ್ ಕೊಡುತ್ತಾ ನಿಂತಿದ್ದೆ.ಇದ್ದಕ್ಕಿದ್ದಂತೆ ದೊಡ್ಡ ಬಾಂಬ್ ಸ್ಫೋಟಗೊಂಡಂತಹ ಶಬ್ದ.ಹಿಂದೆಯೇ ನನಗೆ ತಲೆ ಸುತ್ತಿದಂತೆ ಭಾಸವಾಯ್ತು. ಅರೆ ಇದೇನಿದು..? ಯಾರಾದರೂ ಉಗ್ರಗಾಮಿಗಳು ಬಾಂಬ್ ಸ್ಫೋಟ ಮಾಡಿದರಾ...ನನ್ನ ಕಾಲ ಕೆಳಗಿನ ಭೂಮಿ ಜೋರಾಗಿ ಅಲುಗಾಡಲು ಶುರುವಾಯ್ತು. ನಿಲ್ಲಲು ಸಾಧ್ಯವಾಗದೆ ಕೆಳಗೆ ಬೀಳುವ ಹಾಗಾಯ್ತು.ನನ್ನ ಬಲಗಡೆ ಇದ್ದ ಒಂದು ಕಟ್ಟಡ ನನ್ನ ಕಣ್ಣ ಮುಂದೆಯೇ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿಯಿತು.ನನಗೆ ಏನಾಗುತ್ತಿದೆ ಎಂದು ಅರ್ಥವಾಗಲೇ ಇಲ್ಲ.ಅಲ್ಲಿರುವವರೆಲ್ಲಾ ಒಂದೇ ಸಮನೆ ಅತ್ತಿಂದಿತ್ತ ಇತ್ತಿಂದತ್ತ ಏನೋ ಕಿರುಚುತ್ತಾ ಓಡತೊಡಗಿದರು.ಆಗಲೇ ನನಗೆ ಅರ್ಥವಾಗಿದ್ದು ಅದು ಭೂಕಂಪ ಎಂದು.ಕೇದಾರನಾಥ್ನಲ್ಲಿ ಜಲಪ್ರಳಯವಾದಾಗ ನಾನು ಮಾಡಿದ್ದ ಪ್ರಾರ್ಥನೆ ದೇವರಿಗೆ ಕೇಳಿಸಿತೇನೋ ಹಾಗಾಗಿ ಈ ಬಾರಿ ನೇಪಾಳ ಪ್ರವಾಸಕ್ಕೆ ಬಂದಾಗ ಭೂಕಂಪವಾಗುತ್ತಿದೆ ಎಂದುಕೊಂಡೆ.ನನಗೆ ನನ್ನ ಪ್ರಾಣ ಹೋಗುತ್ತೆ ಎನ್ನುವ ಯಾವ ಭಯವೂ ಆಗಲಿಲ್ಲ. ಸತ್ತರೆ ಇನ್ನೂ ಒಳ್ಳೆಯದೆ ಎಂದುಕೊಂಡೆ.ಆಗ ನನ್ನ ಮನಸ್ಸಿನಲ್ಲಿ ಭಯ,ಹೆದರಿಕೆ, ದುಃಖ, ಭೀತಿ, ನೋವು ಯಾವುದಕ್ಕೂ ಜಾಗವಿರಲಿಲ್ಲ. ಆದರೆ ಮತ್ತೆ ಮತ್ತೆ ಭೂಮಿ ಕಂಪಿಸಲು ಶುರುವಾಯ್ತು. ಅನೇಕ ಕಟ್ಟಡಗಳು ಕುಸಿಯಲಾರಂಭಿಸಿದವು.ಜನರಲ್ಲಿ ಭೀತಿ ಜಾಸ್ತಿಯಾಗುತ್ತಾ ಹೋಯ್ತು.ಅಲ್ಲಿ ನನ್ನ ಕಣ್ಣ ಮುಂದೆಯೇ ಕುಸಿದ ಒಂದು ಕಟ್ಟಡದಲ್ಲಂತೂ ಸಣ್ಣ ಮಗುವೂ ಸೇರಿ ಇನ್ನೂ ಹಲವರು ಸತ್ತರು. ಜನರಲ್ಲಿ ಹಾಹಾಕಾರ ಜಾಸ್ತಿಯಾಯ್ತು. ಆ ದೃಶ್ಯ ನೋಡಿ ನನ್ನ ಮನಸ್ಸಿನಲ್ಲಿ ಸಣ್ಣದಾಗಿ ಭಯ ಶುರುವಾಯ್ತು.ನಾನೇನೋ ಸಾಯಲು ಸಿದ್ಧ. ಒಂದುವೇಳೆ ದೇವರು ನನಗೆ ಉಲ್ಟಾ ಮಾಡಿದರೆ...? ನಾನೊಬ್ಬಳು ಮಾತ್ರ ಬದುಕುಳಿದು ನನ್ನ ಪರಿವಾದವರೆಲ್ಲಾ ನನ್ನ ಕಣ್ಣ ಮುಂದೆಯೇ ಸತ್ತು ಹೋದರೆ, ಅದನ್ನು ನೆನಸಿಕೊಂಡರೇ ಮೈ ನಡುಗಿಹೋಯ್ತು. ಎಲ್ಲರನ್ನೂ ಕಳೆದುಕೊಂಡು ನಾನೊಬ್ಬಳು ಮಾತ್ರ ಬದುಕುಳಿದರೆ, ಬದುಕಿದ್ದೂ ಪ್ರಯೋಜನವಿಲ್ಲ. ಆಗ ನನ್ನ ಬಾಳು ನರಕಕ್ಕೆ ಸಮ.ಅಯ್ಯೋ ದೇವರೇ...ಆ ರೀತಿ ಮಾತ್ರ ಮಾಡಬೇಡ..ನಾನು ಸತ್ತರೂ ಪರವಾಗಿಲ್ಲ, ನನ್ನ ಪರಿವಾರದವರನ್ನು ಕಾಪಾಡು ಎಂದು ದೇವರನ್ನು ಪ್ರಾರ್ಥಿಸಲು ಶುರು ಮಾಡದೆ. ಭೂತಾಯಿಯ ಮುನಿಸು ಜಾಸ್ತಿಯಾಗುತ್ತಿದ್ದಂತೆ ಅವಳು ಪದೇ ಪದೇ ಕಂಪಿಸುತ್ತಲೇ ಇದ್ದಳು. ಕಂಪನ ಜಾಸ್ತಿಯಾಗುತ್ತಾ ಹೋದಂತೆ ಜನರಲ್ಲಿ ಸಾವು ನೋವುಗಳೂ ಜಾಸ್ತಿಯಾಗುತ್ತಾ ಹೋಯ್ತು. ಇದನ್ನೆಲ್ಲ ನೋಡಿ ನನ್ನ ಪರಿವಾರದವರ ಕುರಿತು ಭಯವೂ ನನ್ನಲ್ಲಿ ಜಾಸ್ತಿಯಾಗಿ ದೇವರಲ್ಲಿ ಪ್ರಾರ್ಥಿಸುವುದೂ ಜಾಸ್ತಿಯ‌ಾಯ್ತು.ಕಡೆಗೂ ಆ ದೇವರು ನಮ್ಮ ಪಾಲಿಗೆ ಇದ್ದಾನೆಂದು ಸಾಬೀತಾಯ್ತು. ಆ ದೇವರ ಕೃಪೆಯಿಂದ ನನ್ನ ಪರಿವಾದವರೆಲ್ಲಾ ಸುರಕ್ಷಿತವಾಗಿ ಬೆಂಗಳೂರಿಗೆ ಬಂದು ಸೇರಿದರು. ಪಾಪಿ ಚಿರಾಯು ಎಂಬ ಮಾತಿದೆಯಲ್ಲ ಹಾಗೆ ನನ್ನ ಪರಿವಾರದವರೊಂದಿಗೆ ನಾನು ಸುರಕ್ಷಿತವಾಗಿ ಬಂದಿದ್ದೇನೆ.

Comments

Submitted by naveengkn Sun, 05/24/2015 - 01:44

ನಮಸ್ತೆ,,

ಅಬ್ಬಾ, ಆ ಕ್ಷಣಗಳನ್ನು ನೆನೆಸಿಕೊಂಡರೆ ಮೈ ಜುಮ್ ಎನ್ನುತ್ತದೆ,,,, ಅದಕ್ಕೆ ನೀವು ಕೊಟ್ಟ ವಿವರಣೆಯೂ,,,,,,,, ಅಲ್ಲಿಂದ ಹೇಗೆ ತಪ್ಪಿಸಿಕೊಂಡು ಪಾರಾಗಿ ಬಂದಿರಿ, ಅದ್ಯಾವ ದೈವ ಶಕ್ತಿಯ ಮಹಿಮೆ ನಿಮಗೆ ಪುನರ್ಜನ್ಮ ನೀಡಿತು,,,,, ದಯವಿಟ್ಟು ಇನ್ನಷ್ಟು ವಿವರವಾಗಿ ಬರೆಯಿರಿ,,,

Submitted by kavinagaraj Sun, 05/24/2015 - 15:13

ಅಬ್ಬಾ! ಅಲ್ಲಿ ಮೃತರಾದವರ ಸಂಬಂಧಿಗಳಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ.

Submitted by ಗಣೇಶ Sun, 05/24/2015 - 20:55

>> ದೇವರೇ.. ನಾನು ಅಲ್ಲಿರುವಾಗಲೇ ಈ ಜಲಪ್ರಳಯವಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು.ಈ ಲೋಕದಲ್ಲಿ ಬದುಕಿದ್ದು ಏನೂ ಪ್ರಯೋಜನವಿಲ್ಲ. ಬರೀ ನೋವುಗಳು ದುಃಖಗಳೇ ತುಂಬಿರುವ ಈ ಸಮಾಜದಲ್ಲಿ ಇರುವುದಕ್ಕಿಂತ ದೇವರ ಪಾದ ಸೇರುವುದೇ ಮೇಲು ಎಂದುಕೊಂಡೆ.
-ನಿಶಾ ಅವರೆ, ದೇವರ ಬಳಿ ಸಾವನ್ನು ಬೇಡುತ್ತಾ ಇದ್ದವರು, ಯಾವಾಗ ಸಾವೇ ಎದುರು ಬಂದಾಗ ಬದುಕನ್ನು ಬೇಡಿ ಗೆದ್ದು ಬಂದಿರಿ.

Submitted by NishaRoopa Mon, 05/25/2015 - 11:09

In reply to by ಗಣೇಶ

ಹೌದು ಗಣೇಶ ಸರ್, ನಾನು ನನ್ನ ಸಾವನ್ನು ಬೇಡುತ್ತಿದ್ದೆನೇ ಹೊರತು ನನ್ನ ಪರಿವಾರದವರ ಸಾವಲ್ಲ. ನೇಪಾಳದಲ್ಲಿ ನನ್ನ ಪರಿಸ್ಥಿತಿ ಹೇಗಿತ್ತು ಅಂದ್ರೆ ವಿಧಿಯಿಲ್ಲದೆ ದೇವರಲ್ಲಿ ಬದುಕನ್ನು ಬೇಡಲೇ ಬೇಕಾಗಿ ಬಂತು