ನಾನು ಮಲಾಲಾ
ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನ್ನ ಮನದ ಮೂಲೆಯಲ್ಲಿ ಇದ್ದ - ಇದು ಕೂಡಾ ಮಧ್ಯಪ್ರಾಚ್ಯದ ಮಹಿಳೆಯರ ಗೋಳಿನ ಕತೆ ಇರಬಹುದೇ? ಎಂಬ ಸಂಶಯ, ಪುಟಗಳು ಸರಿಯುತ್ತಿದ್ದಂತೆ ಮರೆಯಾಯಿತು. ಮಲಾಲಾ ಎಂಬ ಬಾಲಕಿಯ ಕಂಗಳಿಂದ ಕಂಡಂತೆ ದೇಶದ ರಾಜಕೀಯ , ಸಾಮಾಜಿಕ ತಲ್ಲಣಗಳನ್ನು ಮನ ಮುಟ್ಟುವಂತೆ ಇಲ್ಲಿ ನಿರೂಪಿಸಲಾಗಿದೆ. ತಾಲಿಬಾನ್ ಎಂಬುದು ಕೇವಲ ಧರ್ಮಾಂಧರ , ದುಷ್ಟರ ಗುಂಪು ಎನ್ನುವುದಕ್ಕಿಂತ ಅದೊಂದು ಸಾಮಾಜಿಕ ಪ್ರಜ್ಞೆ ಎಂಬ ದೃಷ್ಟಿಕೋನ ಎದ್ದು ಕಾಣುತ್ತದೆ. ಜೊತೆಗೆ ಪಾಕಿಸ್ತಾನದ ಚಾರಿತ್ರಿಕ, ಭೌಗೋಳಿಕ ವಿವರಗಳನ್ನೂ ಒಳಗೊಂಡು ಕತೆ ಮುಂದುವರಿಯುವುದು ಓದುಗನಿಗೆ ಮುದ ನೀಡುತ್ತದೆ. ಮಲಾಲಾಳ ಸಾಧನೆಯ ಹಿಂದೆ ಇರುವ ಅವಳ ತಂದೆಯ ವ್ಯಕ್ತಿತ್ವ ನಿಜಕ್ಕೂ ಮೆಚ್ಚುವಂತಹುದು.
ಪುಸ್ತಕದ ಕನ್ನಡ ಅನುವಾದ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಅನುವಾದಕನ ಅಂತರಂಗದಲ್ಲಿ ಅವರೇ ಹೇಳಿಕೊಂಡಿರುವಂತೆ - ಮಲಾಲಾ ಕನ್ನಡಿಗಳೇ ಆಗಿದ್ದರೆ ಹೇಗೆ ಬರೆಯುತ್ತಿದ್ದಳೋ ಅಷ್ಟು ಸಹಜವಾಗಿ ಅನುವಾದಿಸಬೇಕು ಎಂಬ ಅವರ ಕಳಕಳಿ ಪುಸ್ತಕದ ತುಂಬ ಎದ್ದು ಕಾಣುತ್ತದೆ. ಪುಸ್ತಕದ- ನಮ್ಮ ಹಳ್ಳಿ, ರೇಡಿಯೋ ಮುಲ್ಲಾ , ಓಲೆ ಹಾಕದ ಹುಡುಗಿ ಮುಂತಾದ ಅಧ್ಯಾಯಗಳು ಇಷ್ಟವಾಗುತ್ತವೆ.
ಪುಟ ೩೪ರಲ್ಲಿ ಬರುವ ವಾಕ್ಯಗಳನ್ನು ನೋಡಿ. -ಸೇವೂರ್ ಎಂದರೆ ಅದು ಕೋಹಿಸ್ತಾನಿ ಹಾಗೂ ಮಿಯಾನ್ ಸಮುದಾಯದವರು ಇರುವ ಊರು. ಸಾಮಾನ್ಯವಾಗಿ ಇವರ ಮಕ್ಕಳು ತುಂಬಾ ಕೊಳಕಾಗಿರುತ್ತಾರೆ. ಇಲ್ಲಿರುವ ಪಶ್ತೂನಿಗಳು ತಾವೇ ಸ್ವತ: ಬಡವರಾದ್ರೂ ಈ ಮಕ್ಕಳನ್ನು ಕೀಳಾಗಿ ಕಾಣುತ್ತಾರೆ. ಥೂ…. ದಡ್ಡ ಮುಂಡೇಗಂಡ್ರು….. ಕಪ್ಪಟ್ಟೆ … ಕರ್ರಗೆ .. ಇವೆ. ವಿದ್ಯೆ ಬುದ್ಧಿ ಇಲ್ಲದೇ ಹೀಗೇ ಹಾಳಾಗಿ ಹೋಗ್ಲಿ…. ಎನ್ನುತ್ತಿರುತ್ತಾರೆ.
ಮಲಾಲಾ ತನ್ನ ಗೆಳತಿ ಮೋನಿಬಾಗೆ ಹೇಳುವ ಮಾತುಗಳನ್ನು ನೋಡಿ. – ನನಗೆ ಮುಂದೆ ಡಾಕ್ಟರ್ ಆಗಬೇಕು ಎನಿಸುತ್ತಿತ್ತು. ಆದರೆ ಆಮೇಲೆ ರಾಜಕಾರಿಣಿಯಾಗಬೇಕು ಎನಿಸಲು ಶುರುವಾಯಿತು. ಆದರೆ ಮೋನಿಬಾಗೆ ಇದ್ಯಾಕೋ ಸರಿಯಿಲ್ಲ ಅನಿಸುತ್ತಿತ್ತು. ಆಗೆಲ್ಲ ನಾನು “ಹೇ ಮೋನಿಬಾ ಸುಮ್ನಿರೇ , ಏನೂ ಚಿಂತೆ ಮಾಡ್ಬೇಡಾ. ಆ ತಾಲಿಬಾನಿಗಳು ಯಾವತ್ತೂ ಚಿಕ್ಕ ಹುಡುಗೀರ ತಂಟೆಗೆ ಬರೋದಿಲ್ಲ ಎನ್ನುತ್ತಿದ್ದೆ”
ಈ ವಾಕ್ಯಗಳನ್ನು ಓದುತ್ತಿದ್ದಂತೆ ನನ್ನ ಹಳ್ಳಿಯಲ್ಲಿ ನಡೆಯುತ್ತಿದ್ದ ಜಾತಿಗಳ ನಡುವಣ ಕಲಹ , ಬಾಲ್ಯದಲ್ಲಿ ನಾವು ಹೆಣೆಯುತ್ತಿದ್ದ ಕನಸುಗಳೆಲ್ಲ ನೆನಪಾದವು.
ಯಾವುದೇ ಸಮಾಜದಲ್ಲಿ ರಾಜಕೀಯ ಸ್ಥಿತ್ಯಂತರಗಳಾದಾಗ ಮೊಟ್ಟ ಮೊದಲು ಹೈರಾಣಾಗುವವರು ಮಹಿಳೆಯರು ಮತ್ತು ಮಕ್ಕಳು ಎಂಬ ಅಂಶವೇ ಈ ಪುಸ್ತಕ ಆತ್ಮವೆನ್ನಬಹುದು. ಮಲಾಲಾಳ ಕತೆಯನ್ನು ಓದುತ್ತಿದ್ದಂತೆಯೇ ನಮ್ಮ ದೇಶದ ಬಗ್ಗೆ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವ ಮೂಡಿತು. ನಮ್ಮ ದೇಶದ [ಹೆಚ್ಚಿನ] ಮಹಿಳೆಯರು ಸ್ವಾಭಿಮಾನದಿಂದ ಜೀವನ ನಡೆಸಲು ಅನುವು ಮಾಡಿಕೊಡುವ , ಪ್ರಾಚೀನ ಸಂಸ್ಕೃತಿಯನ್ನು ಉಳಿಸಿಕೊಂಡು ಆಧುನಿಕತೆಯನ್ನು ಮೈಗೂಡಿಸಲು ಅವಕಾಶ ಮಾಡಿಕೊಡುವ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಮನಸಾರೆ ಅಭಿನಂದಿಸಿದೆ.