ನಾನು ಮಲಾಲಾ

ನಾನು ಮಲಾಲಾ

ಪುಸ್ತಕದ ಲೇಖಕ/ಕವಿಯ ಹೆಸರು
ಬಿ ಎಸ್ ಜಯಪ್ರಕಾಶ‌ ನಾರಾಯಣ‌
ಪ್ರಕಾಶಕರು
ಆಕ್ಱುತಿ ಪುಸ್ತಕ‌ ಬೆಂಗಳೂರು
ಪುಸ್ತಕದ ಬೆಲೆ
250 ರೂಪಾಯಿಗಳು

ಈ ಪುಸ್ತಕವನ್ನು ಕೈಗೆತ್ತಿಕೊಂಡಾಗ ನನ್ನ ಮನದ ಮೂಲೆಯಲ್ಲಿ ಇದ್ದ - ಇದು ಕೂಡಾ ಮಧ್ಯಪ್ರಾಚ್ಯದ ಮಹಿಳೆಯರ ಗೋಳಿನ ಕತೆ ಇರಬಹುದೇ? ಎಂಬ ಸಂಶಯ, ಪುಟಗಳು ಸರಿಯುತ್ತಿದ್ದಂತೆ ಮರೆಯಾಯಿತು. ಮಲಾಲಾ ಎಂಬ ಬಾಲಕಿಯ ಕಂಗಳಿಂದ ಕಂಡಂತೆ  ದೇಶದ ರಾಜಕೀಯ , ಸಾಮಾಜಿಕ ತಲ್ಲಣಗಳನ್ನು ಮನ ಮುಟ್ಟುವಂತೆ ಇಲ್ಲಿ  ನಿರೂಪಿಸಲಾಗಿದೆ. ತಾಲಿಬಾನ್ ಎಂಬುದು ಕೇವಲ ಧರ್ಮಾಂಧರ , ದುಷ್ಟರ ಗುಂಪು ಎನ್ನುವುದಕ್ಕಿಂತ ಅದೊಂದು ಸಾಮಾಜಿಕ ಪ್ರಜ್ಞೆ ಎಂಬ ದೃಷ್ಟಿಕೋನ ಎದ್ದು ಕಾಣುತ್ತದೆ. ಜೊತೆಗೆ ಪಾಕಿಸ್ತಾನದ ಚಾರಿತ್ರಿಕ, ಭೌಗೋಳಿಕ ವಿವರಗಳನ್ನೂ ಒಳಗೊಂಡು ಕತೆ ಮುಂದುವರಿಯುವುದು ಓದುಗನಿಗೆ ಮುದ ನೀಡುತ್ತದೆ. ಮಲಾಲಾಳ ಸಾಧನೆಯ ಹಿಂದೆ ಇರುವ ಅವಳ ತಂದೆಯ ವ್ಯಕ್ತಿತ್ವ ನಿಜಕ್ಕೂ ಮೆಚ್ಚುವಂತಹುದು.

ಪುಸ್ತಕದ ಕನ್ನಡ ಅನುವಾದ ಅತ್ಯಂತ ಸೊಗಸಾಗಿ ಮೂಡಿ ಬಂದಿದೆ. ಅನುವಾದಕನ ಅಂತರಂಗದಲ್ಲಿ ಅವರೇ ಹೇಳಿಕೊಂಡಿರುವಂತೆ - ಮಲಾಲಾ ಕನ್ನಡಿಗಳೇ ಆಗಿದ್ದರೆ ಹೇಗೆ ಬರೆಯುತ್ತಿದ್ದಳೋ ಅಷ್ಟು ಸಹಜವಾಗಿ ಅನುವಾದಿಸಬೇಕು ಎಂಬ ಅವರ ಕಳಕಳಿ ಪುಸ್ತಕದ ತುಂಬ ಎದ್ದು ಕಾಣುತ್ತದೆ. ಪುಸ್ತಕದ- ನಮ್ಮ ಹಳ್ಳಿ, ರೇಡಿಯೋ ಮುಲ್ಲಾ , ಓಲೆ ಹಾಕದ ಹುಡುಗಿ ಮುಂತಾದ ಅಧ್ಯಾಯಗಳು ಇಷ್ಟವಾಗುತ್ತವೆ.

ಪುಟ ೩೪ರಲ್ಲಿ ಬರುವ ವಾಕ್ಯಗಳನ್ನು ನೋಡಿ. -ಸೇವೂರ್ ಎಂದರೆ ಅದು ಕೋಹಿಸ್ತಾನಿ ಹಾಗೂ ಮಿಯಾನ್ ಸಮುದಾಯದವರು ಇರುವ ಊರು. ಸಾಮಾನ್ಯವಾಗಿ ಇವರ ಮಕ್ಕಳು ತುಂಬಾ ಕೊಳಕಾಗಿರುತ್ತಾರೆ. ಇಲ್ಲಿರುವ ಪಶ್ತೂನಿಗಳು ತಾವೇ ಸ್ವತ: ಬಡವರಾದ್ರೂ ಈ ಮಕ್ಕಳನ್ನು ಕೀಳಾಗಿ ಕಾಣುತ್ತಾರೆ. ಥೂ…. ದಡ್ಡ ಮುಂಡೇಗಂಡ್ರು….. ಕಪ್ಪಟ್ಟೆ … ಕರ್ರಗೆ .. ಇವೆ. ವಿದ್ಯೆ ಬುದ್ಧಿ ಇಲ್ಲದೇ ಹೀಗೇ ಹಾಳಾಗಿ ಹೋಗ್ಲಿ…. ಎನ್ನುತ್ತಿರುತ್ತಾರೆ.

   ಮಲಾಲಾ  ತನ್ನ ಗೆಳತಿ ಮೋನಿಬಾಗೆ ಹೇಳುವ ಮಾತುಗಳನ್ನು ನೋಡಿ. – ನನಗೆ ಮುಂದೆ ಡಾಕ್ಟರ್ ಆಗಬೇಕು ಎನಿಸುತ್ತಿತ್ತು. ಆದರೆ ಆಮೇಲೆ ರಾಜಕಾರಿಣಿಯಾಗಬೇಕು ಎನಿಸಲು ಶುರುವಾಯಿತು. ಆದರೆ ಮೋನಿಬಾಗೆ ಇದ್ಯಾಕೋ ಸರಿಯಿಲ್ಲ ಅನಿಸುತ್ತಿತ್ತು. ಆಗೆಲ್ಲ ನಾನು “ಹೇ ಮೋನಿಬಾ ಸುಮ್ನಿರೇ , ಏನೂ ಚಿಂತೆ ಮಾಡ್ಬೇಡಾ. ಆ ತಾಲಿಬಾನಿಗಳು ಯಾವತ್ತೂ ಚಿಕ್ಕ ಹುಡುಗೀರ ತಂಟೆಗೆ ಬರೋದಿಲ್ಲ ಎನ್ನುತ್ತಿದ್ದೆ”

ಈ ವಾಕ್ಯಗಳನ್ನು ಓದುತ್ತಿದ್ದಂತೆ ನನ್ನ ಹಳ್ಳಿಯಲ್ಲಿ ನಡೆಯುತ್ತಿದ್ದ ಜಾತಿಗಳ ನಡುವಣ ಕಲಹ , ಬಾಲ್ಯದಲ್ಲಿ ನಾವು ಹೆಣೆಯುತ್ತಿದ್ದ ಕನಸುಗಳೆಲ್ಲ  ನೆನಪಾದವು.

ಯಾವುದೇ ಸಮಾಜದಲ್ಲಿ ರಾಜಕೀಯ ಸ್ಥಿತ್ಯಂತರಗಳಾದಾಗ ಮೊಟ್ಟ ಮೊದಲು ಹೈರಾಣಾಗುವವರು ಮಹಿಳೆಯರು ಮತ್ತು ಮಕ್ಕಳು ಎಂಬ ಅಂಶವೇ ಈ ಪುಸ್ತಕ ಆತ್ಮವೆನ್ನಬಹುದು. ಮಲಾಲಾಳ ಕತೆಯನ್ನು ಓದುತ್ತಿದ್ದಂತೆಯೇ ನಮ್ಮ ದೇಶದ ಬಗ್ಗೆ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವ ಮೂಡಿತು. ನಮ್ಮ ದೇಶದ [ಹೆಚ್ಚಿನ] ಮಹಿಳೆಯರು ಸ್ವಾಭಿಮಾನದಿಂದ ಜೀವನ ನಡೆಸಲು ಅನುವು ಮಾಡಿಕೊಡುವ , ಪ್ರಾಚೀನ ಸಂಸ್ಕೃತಿಯನ್ನು ಉಳಿಸಿಕೊಂಡು ಆಧುನಿಕತೆಯನ್ನು ಮೈಗೂಡಿಸಲು ಅವಕಾಶ ಮಾಡಿಕೊಡುವ  ನಮ್ಮ ಸಾಮಾಜಿಕ‌  ವ್ಯವಸ್ಥೆಯನ್ನು  ಮನಸಾರೆ ಅಭಿನಂದಿಸಿದೆ. 

Comments

Submitted by nageshamysore Sun, 03/29/2015 - 04:31

ವೇದಾ ಅಠವಳೆಯವರೆ ನಮಸ್ಕಾರ. ನಾನು ಇದರ ಮೂಲ ಇಂಗ್ಲೀಷ್ ಆವೃತ್ತಿಯನ್ನು ಓದಿದ್ದೆ ಮತ್ತು ಮಗನಿಗು ಓದಿಸಿದ್ದೆ. ದಂಗು ಬಡಿಸುವ ವಿವರಣೆ, ವಾಸ್ತವ ಚಿತ್ರಣಗಳಿಂದ ಮನವನ್ನು ಚಿಂತನೆ ಹಚ್ಚಿದ್ದಷ್ಟೆ ಅಲ್ಲದೆ ಹೋರಾಟವೆನ್ನುವುದು ಯಾವ ರೀತಿಯಲ್ಲಿ, ಎಲ್ಲೆಲ್ಲಿ , ಹೇಗೆಲ್ಲಾ ಅನಾವರಣವಾಗಬಹುದು, ಏನೆಲ್ಲಾ ಬೆಲೆ ತೆರಬೇಕಾಗಬಹುದು ಎಂಬ ಸ್ಥೂಲ ಕಲ್ಪನೆಗು ಎಡೆ ಮಾಡಿಕೊಟ್ಟಿತ್ತು. ಇದೆ ಹುಡುಗಿ ಈಗ ನೊಬೆಲ್ ಪ್ರಶಸ್ತಿಗು ಭಾಜನಳಾಗಿ ಜಾಗತಿಕ ಮಟ್ಟದಲ್ಲಿ ಜಾಗೃತಿಗೆ ದುಡಿಯುತ್ತಿರುವುದು (ಅದರಲ್ಲು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ) ನಿಜಕ್ಕು ಸಮಾಧಾನ ತರುವ ವಿಷಯ.

Submitted by VEDA ATHAVALE Sun, 03/29/2015 - 14:06

In reply to by nageshamysore

ಧನ್ಯವಾದಗಳು ನಾಗೇಶ್ , ಮಲಾಲಾಳ‌ ಹೋರಾಟ‌ ಫಲ‌ ಕೊಡಲಿ. ನಮ್ಮ‌ ಮಧ್ಯಪ್ರಾಚ್ಯದ‌ ಸಹೋದರಿಯರು ಆತ್ಮವಿಶ್ವಾಸದಿಂದ‌ , ಸಂತಸದಿಂದ‌ ಜೀವನ‌ ನಡೆಸುವಂತಾಗಲಿ ಎಂದು ದೇವರನ್ನು ಬೇಡಿಕೊಂಡೆ.

Submitted by kavinagaraj Mon, 03/30/2015 - 08:23

ಮುಸ್ಲಿಮರಲ್ಲಿ ವೈಚಾರಿಕತೆಯ ಪ್ರಜ್ಞೆ ಮೂಡಿಸಲು ಇಂತಹ ಅಸಂಖ್ಯ ಮಲಾಲಾರುಗಳ ಅಗತ್ಯವಿದೆ.

Submitted by abdul Wed, 04/01/2015 - 00:44

"ಈ ವಾಕ್ಯಗಳನ್ನು ಓದುತ್ತಿದ್ದಂತೆ ನನ್ನ ಹಳ್ಳಿಯಲ್ಲಿ ನಡೆಯುತ್ತಿದ್ದ ಜಾತಿಗಳ ನಡುವಣ ಕಲಹ , ಬಾಲ್ಯದಲ್ಲಿ ನಾವು ಹೆಣೆಯುತ್ತಿದ್ದ ಕನಸುಗಳೆಲ್ಲ ನೆನಪಾದವು" .
ಸ್ವಾತಂತ್ರ್ಯ ಸಿಕ್ಕಿಯೂ, ಬಹಳಷ್ಟು ಸಾಧಿಸಿಯೂ ಮಹಿಳೆಯ ಅಭ್ಯುದಯದಲ್ಲಿ ನಾವು ಗಮನಾರ್ಹ ಸಾಧನೆ ಮಾಡಿಲ್ಲ ಎನ್ನುವುದಕ್ಕೆ ಮೇಲಿನ ಸಾಲುಗಳೂ, India's Daughter ನಂಥ ಕಿರು ಚಿತ್ರಗಳೂ ಸಾಕ್ಷಿ.
ಓದಲೇಬೇಕಾದ ಪುಸ್ತಕವೊಂದರ ಪರಿಚಯಕ್ಕೆ ಧನ್ಯವಾದಗಳು.

Submitted by Amaresh patil Sat, 05/02/2015 - 18:50

ವೇದಾ ಅಠವಳೆಯವರೇ ನಾನು ಮಕ್ಕಳ ಹಕ್ಕುಗಳು ಕುರಿತು ಗ ಹಾಗೂ ಮಹಿಳೆಯರ ಸಬಲಿಕರಣದ ಕುರಿತು ಮಾತನಾಡುವಾಗ ಮಲಾಲ ಯುಸುಪ್ ಜೈ ಯವರ ಬಗ್ಗೆ ಮಕ್ಕಳಿಗೆ ನೀವು ಕೂಡಾ ಮಲಾಲಳಂತೆ ಸ್ತ್ರೀ ಶಿಕ್ಷಣ ಹಾಗೂ ಸಬಲಿಕರಣದ ಬಗ್ಗೆ ದ್ವನಿ ಹೆತ್ತಬೇಕು ಎಂದು ಹೇಳಿದಾಗ ಮಲಾಲ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೆಲವು ಶಾಲಾ ಮಕ್ಕಳು ನನ್ನಲ್ಲಿ ಕೆಳಿದ್ದರು ಅವರಿಗೆ ಮಲಾಲಳ ಬಗ್ಗೆ ಸಂಪೂರ್ಣವಾಗಿ ವಿವರಿಸಲು ಪುಸ್ತಕವಿರುವುದು ಅದು ಕನ್ನಡದಲ್ಲಿ ಅನುವಾದ ಆಗಿರುವುದು ಗೊತ್ತಿರಲಿಲ್ಲ ಖಂಡಿತಾ ನಾನು ಮಲಾಲ ಪುಸ್ತಕ ತರಿಸಿಕೊಳ್ಳಲು ಅಥವಾ ಖರೀದಿಸಲು ಸರಿಯಾದ ಅಂಚೆ ವಿಳಾಸ ದಯವಿಟ್ಟು ತಿಳಿಸಿ ಹಾಗೇನೆ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಬರೆದಿರುವ ಲೇಖನಕ್ಕೆ ಧನ್ಯವಾದಗಳು

Submitted by VEDA ATHAVALE Mon, 05/04/2015 - 11:17

In reply to by Amaresh patil

ಈ ಪುಸ್ತಕ‌ ಬೆಂಗಳೂರಿನ‌ ಸ್ವಪ್ನಾ ಬುಕ್ಸ್, ಅಂಕಿತ‌ ಪುಸ್ತಕ‌ , ಟೋಟಲ್ ಕನ್ನಡ‌ ಇತ್ಯಾದಿ ಎಲ್ಲ‌ ಮುಖ್ಯ‌ ಪುಸ್ತಕ‌ ಮಳಿಗೆಗಳಲ್ಲಿ ಲಭ್ಯವಿದೆ. ಈ ಕೆಳಗಿನ‌ ವಿಳಾಸಗಳಲ್ಲೂ ಸಿಗುತ್ತದೆ.

Navakarnataka Publications Private Limited
Embassy Center 11 Crescent Road, Kumara Park East
Bengaluru, Karnataka
080 3057 8020

Navakarnataka Publications Private Limited
64/1, 5th Main Rd, Gandhi Nagar
Bengaluru, Karnataka
080 2225 1382

www.navakarnataka.com ಈ ಆನ್ ಲೈನ್ ವಿಳಾಸದಲ್ಲಿ ಪ್ರಯತ್ನಿಸಿ .

ನಿಮ್ಮ‌ ಪ್ರತಿಕ್ರಿಯೆಗೆ ಧನ್ಯವಾದಗಳು.