ನಾನ್ಯಾರು ಗೊತ್ತಾ .......?
ಖ್ಯಾತ ಅಮೇರಿಕನ್ ಮಾಡೆಲ್ "ನವೋಮಿ ಕ್ಯಾಂಪ್ಬೆಲ್ (Naomi Campbell)"ಳನ್ನು ಲಂಡನ್ ಹೀಥ್ರೋ ವಿಮಾನ ನಿಲ್ದಾಣದ ಅತ್ಯಂತ ಬ್ಯುಸಿಯಾಗಿರುವ 5ನೇ ಟರ್ಮಿನಲ್ ನಲ್ಲಿ ಅರೆಸ್ಟ್ ಮಾಡಲಾಗಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಕೆಯು ಲಂಡನ್ನಿಂದ ಅಮೇರಿಕಾದ ಲಾಸ್ ಏಂಜಲೀಸ್ ನಗರಕ್ಕೆ ಹಾರುವರಿದ್ದಳು. ತನ್ನ ಒಂದು ಬ್ಯಾಗನ್ನು ವಿಮಾನಕ್ಕೆ ಲೋಡ್ ಮಾಡಲಿಲ್ಲ ಎಂದು ಕೋಪ ಮಾಡಿಕೊಂಡು, ಬ್ರಿಟಿಷ್ ಏರ್ ವೇಸ್ ಉದ್ಯೋಗಿಗಳನ್ನು ಹೀನಾಮಾನ ಬಯ್ದು, ರೇಗಾಡಿ, ಕೂಗಾಡಿ ರಂಪ ಮಾಡಿದಳು ಎಂದು ಹೇಳಲಾಗಿದೆ. ಆಕೆಯನ್ನು ಸಮಾಧಾನವಾಗಿ ಇರಿ ಎಂದು ಹೇಳಲು ಬಂದ ಭದ್ರತಾ ವ್ಯವಸ್ಥೆಯವರ ಮೇಲೂ ಉಗಿದು, "do you know who i am ? i am Naomi Campbell" ಎಂದು ಆವಾಜ್ ಹಾಕಿದಳೆನ್ನಲಾಗಿದೆ.
ಆಕೆಯನ್ನು ಸಮಾಧಾನ ಮಾಡಿ ಜಗಳವನ್ನು ಬಿಡಿಸಲು ಬಂದ ಸೆಕ್ಯೂರಿಟಿಯವರನ್ನೂ ಕೂಡಾ ಅಸಭ್ಯವಾಗಿ ಬಯ್ದು, ಅವರ ಮೇಲೆ ಉಗಿದು, ಮತ್ತೊಬ್ಬನ ಮುಖಕ್ಕೆ ಪಂಚ್ ಮಾಡಿದ್ದಾಳೆ. ಬೇರೆ ದಾರಿ ಇಲ್ಲದೆ, ಆಕೆಗೆ ಕೈಕೋಳ ತೊಡಿಸಿ, ಬಂಧಿಸಿ ಕರೆದೊಯ್ಯಲಾಯಿತು. ಇದಕ್ಕೆ ಕಾರಣವೇನೆಂದರೆ, ಹೀಥ್ರೋ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ತೊಂದರೆಗಳಿಂದಾಗಿ, ಸುಮಾರು 20,000 ಲಗೇಜುಗಳು ಸರಿಯಾದ ಸಮಯಕ್ಕೆ ವಿಲೇವಾರಿಯಾಗಲಿಲ್ಲ. ಅದರಲ್ಲಿ ಈಕೆಯ ಬ್ಯಾಗ್ ಕೂಡಾ ಸೇರಿತ್ತು. ಈ ಕಾರಣದಿಂದಾಗಿಯೇ, ಬ್ರಿಟಿಷ್ ಏರ್ವೇಸ್ ಈಕೆಯ ಮೇಲೆ ಆಜೀವ ನಿಷೇಧ ಹೇರಿದೆ.
ಈಕೆಯ ಈ ರೂಪವೇನು ಹೊಸದಲ್ಲ. ಕಳೆದ ವರ್ಷ ತನ್ನ ಮನೆಕೆಲಸದವಳ ಮೇಲೆ ಮೊಬೈಲ್ ಫೋನ್ ಎಸೆದು, ಗಾಯಗೊಳಿಸಿದ್ದಕ್ಕೆ, ನ್ಯಾಯಾಲಯವು ಈಕೆಗೆ ನ್ಯೂಯಾರ್ಕ್ ನಗರದಲ್ಲಿ ರಸ್ತೆಯ ಕಸ ಬಳಿಯುವ / ಗುಡಿಸುವ ಶಿಕ್ಷೆ ಕೊಟ್ಟಿತ್ತು.
ಸರಿ ಸರಿ, ನಾನು ಅವಳ ಪುರಾಣ ಹೇಳಕ್ಕೆ ಹೊರಟಿಲ್ಲಾ. ಇದೇ ರೀತಿ, ನಮ್ಮ ದೇಶದಲ್ಲಿ ಒಬ್ಬ ಖ್ಯಾತ ಮಾಡೆಲ್, ನಟ/ನಟಿ, ರಾಜಕಾರಣಿ ಹೀಗೆ ಗಲಾಟೆ ಮಾಡಿದ್ದಿದ್ರೆ ಇದೇ ರೀತಿಯ ನಿಷ್ಪಕ್ಷಪಾತವಾದ ರಿಸಲ್ಟ್ ಸಿಗ್ತಾ ಇತ್ತಾ ??
ಅವರ ಮೇಲೆ ಕೇಸ್ ಹಾಕಿದ ಸಿಬ್ಬಂದಿಯವರನ್ನು ನಾನಾ ರೀತಿಯಾಗಿ ಕಾಡಿ, ಸಾಕ್ಷಿ ಇಲ್ಲವೆಂದು ಬರಖಾಸ್ತು ಮಾಡ್ತಾ ಇದ್ರು.
ಇನ್ನು ಅವರೇನಾದ್ರೂ ರಾಜಕಾರಣಿಗಳಾಗಿದ್ರಂತೂ ಮುಗಿದೇ ಹೋಯ್ತು. ಕೇಳೋಹಾಗೇ ಇಲ್ಲಾ.
ಆ ಥರಾ ಸಂದರ್ಭದಲ್ಲಿ ಇವರೆಲ್ಲಾ ಹೇಳೋದು
"ನಾನ್ಯಾರು ಗೊತ್ತಾ .......?"
-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com