ನಾಯಿಮರಿ ಸಾವಿನ ನೆನಪು ಮಾಸುವ ಮುನ್ನ ಪಾರಿವಾಳ ಮರಿಗಳ ಸಾವು ಜೀವ ಹಿಂಡುತ್ತಿದೆ - ಸುರೇಶ್ ನಾಡಿಗ್
ಸಣ್ಣ ವಯಸ್ಸಿನಿಂದಲೂ ಮನೆಯಲ್ಲಿ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಸಾಕಬೇಕು ಎನ್ನುವುದು ನನ್ನ ಆಸೆ ಎನ್ನುವುದಕ್ಕಿಂತ ಹುಚ್ಚು. ಆದರೆ ಇದಕ್ಕೆ ಮನೆಯಲ್ಲಿ ಎಲ್ಲರೂ ತಣ್ಣೀರು ಎರೆಚುವವರೆ. ಒಂದು ಜಿರಲೆಯನ್ನು ಸಾಯಿಸಬೇಕಾದರೂ ಆ ವಯಸ್ಸಿನಲ್ಲೇ ಹತ್ತು ಬಾರಿ ಯೋಚಿಸುತ್ತಿದ್ದೆ. ಸಾಯಿಸುವುದಕ್ಕೆ ನಾವ್ಯಾರು ಎನ್ನುವ ಚಿಂತನೆಯಿತ್ತು. ಆಗ ನಾನು ನಾಲ್ಕನೇ ತರಗತಿ, ಯಾರೋ ಕೊಟ್ಟಂತಹ ನಾಯಿ ಮರಿಯೊಂದನ್ನು ಸಾಕಿದ್ದೆ. ಅದಕ್ಕೆ ಎಲ್ಲಿಲ್ಲದ ಆರೈಕೆ. ಅದರ ಆರೋಗ್ಯ ಸರಿಯಿಲ್ಲದಿದ್ದಾಗ ಉತ್ತಮ ಚಿಕಿತ್ಸೆ ನೀಡಿಸುತ್ತಾ ನನ್ನ ಒಡ ಹುಟ್ಟಿದ ಸಂಬಂಧಿಗಳಿಗಿಂತಲೂ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದೆ. ಅದರ ಜೊತೆಯೇ ತಿಂಡಿ ತಿನ್ನುತ್ತಿದ್ದೆ. ಅದೂ ನನ್ನ ತಟ್ಟೆ, ಕೈಯೆಲ್ಲಾ ನೆಕ್ಕುತ್ತಿತ್ತು. ನಮ್ಮಮ್ಮ ಅಡುಗೆ ಮನೆಯಿಂದಲೇ ಏನ್ ಕರ್ಮಾ ಇದು ಅಂತ ಗೊಣಗುತ್ತಿದ್ದಳು. ದೊಡ್ಡ ನಾಯಿಯಾದರೂ ಅದನ್ನು ಕಚ್ಚಲು ಬಂದರೆ ಅದನ್ನು ಬೆನ್ನತ್ತಿ ಹೊಡೆಯುವ ತನಕವೂ ಸಮಾಧಾನವೇ ಇರುತ್ತಿರಲಿಲ್ಲ. ಫರ್ಲಾಂಗ್ ಗಟ್ಟಲೆ ಓಡಿದ್ದೂ ಇದೆ. ಒಂದು ರಾತ್ರಿ ಹೊರಗೆ ಕಟ್ಟಿ ಹಾಕಿದ್ದ ನಾಯಿ ಮರಿಯನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ. ನಿದ್ದೆಯಲ್ಲಿದ್ದ ನಮಗೆ ಅದರ ಅರಿವೇ ಇಲ್ಲ. ಬೆಳಗ್ಗೆ ಅಮ್ಮ ರಂಗೋಲಿ ಹಾಕಲೆಂದು ಬಾಗಿಲು ತೆರೆದಾಗ ಸೂರಿ ಹಗ್ಗ ಮಾತ್ರ ಇದೆ ನಾಯಿ ಎಲ್ಲೋ ಅಂದರು. "ಆ... " ಅಂತ ಎಲ್ಲಾ ಕಡೆ ಹುಡುಕಲು ಆರಂಭಿಸಿದೆ. ನಮ್ಮ ನಾಯಿಯನ್ನು ನೋಡಿದ ನಾಗರಾಜಪ್ಪ ಎಂಬುವರು ಅಪ್ಪನಿಗೆ ಸುಬ್ಬಣ್ಣನವರೆ ನಿಮ್ಮ ನಾಯಿಮರಿಯನ್ನು ನಿನ್ನೆ ರಾತ್ರಿ ಬೇಗೂರು ಗ್ರಾಮದ ಯಾರೋ ತೆಗೆದುಕೊಂಡು ಹೋಗ್ತಾ ಇದ್ರು. ನಾನವರಿಗೆ ಬೈದೆ ಓಡಿ ಹೋದರು ಅಂದರು. ಆಗ ಇಲ್ಲದ ಥಳಮಳದ ಜೊತೆಗೆ ವ್ಯಥೆ ಪಟ್ಟಿದ್ದು ಅಷ್ಟಿಷ್ಟಲ್ಲ. ನನ್ನ ದುಃಖ ನೋಡಲಾರದೆ ಅಪ್ಪ ಆಗಿನ ಬಜಾಜ್ ಸ್ಕೂಟರ್ ನಲ್ಲಿ ಕೂರಿಸಿಕೊಂಡು ಬೇಗೂರು ಸೇರಿದಂತೆ ಸುತ್ತಮುತ್ತಾ ಹಳ್ಳಿಗಳನ್ನೆಲ್ಲಾ ತಿರುಗಿಸಿದ್ದರು. ಹಳ್ಳಿಗಳಲ್ಲಿ ನಾಯಿಗಳನ್ನು ಸಾಕಿರುವವರ ಮನೆಯನ್ನೆಲ್ಲಾ ಶೋಧಿಸಿದ್ದೆವು. ಆದರೆ ನನ್ನ ನಾಯಿ ಮರಿ ಮಾತ್ರ ಸಿಗಲೇ ಇಲ್ಲ. ಸ್ಕೂಟರ್ ನ ಹಿಂದೆ ಕುಳಿತ ನಾನು ಅಳುತ್ತಾ ಮನೆಗೆ ವಾಪಾಸ್ಸಾದೆ. ನನ್ನ ದುಃಖ ಅಪ್ಪನಿಗೆ ಅರ್ಥವಾಗಿತ್ತು. ಹೋಗಲಿ ಬಿಡು ಎಂದು ಹೋಟೆಲ್ ನಲ್ಲಿ ದೋಸೆ ಕೊಡಿಸುವ ಮೂಲಕ ಸಮಾಧಾನ ಪಡಿಸಿದ್ದರು. ಆ ನಾಯಿಯ ನೆನಪು ಮಾಸುವ ಮನ್ನ, ನನ್ನ ಸ್ನೇಹಿತ ಪ್ರಕಾಶ ಮತ್ತೊಂದು ನಾಯಿ ಮರಿ ಕೊಟ್ಟ, ಯಾವುದೇ ನಾಯಿ ಮನೆಗೆ ತಂದರೂ ಮೊದಲು ಬೆಲ್ಲ ಹಾಕುತ್ತಿದ್ದೆ. ಒಮ್ಮೆ ಬೆಲ್ಲ ತಿಂದ ನಾಯಿ ಮನೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ನನ್ನ ದೊಡ್ಡಪ್ಪ ಆಗಾಗ ನುಡಿಯುತ್ತಿದ್ದರು. ತಂದ ನಾಯಿ ಮರಿಯನ್ನು ಹೊರಗೆ ಕಟ್ಟಿದರೆ ಯಾರಾದರೂ ಕದಿಯುತ್ತಾರಲ್ಲಾ ಎಂದು ಮನೆಯ ಓಣಿಯ ಕಿಟಕಿಯ ಮುಂದಿನ ಜಾಗದಲ್ಲಿ ಹಗ್ಗ ಹಾಕಿ ಕಟ್ಟಿದೆ. ಎಷ್ಟೇ ಆದರೂ ಅದು ಮರಿಯಲ್ಲವೆ, ಆಟ ಆಡುತ್ತಾ ಕೆಳಗೆ ಬಿದ್ದಿದೆ. ಕಟ್ಟಿದ ಹಗ್ಗ ನೇಣಿನಂತೆ ಬಿಗಿದು, ನಾಯಿಮರಿ ಎಲ್ಲಿಲ್ಲದ ಕಿರುಚಾಟ ನಡೆಸಿದೆ. ಅಮ್ಮ ಕೆಲ ನಿಮಿಷ ತಡವಾಗಿ ಸ್ಥಳಕ್ಕೆ ಹೋಗಿದ್ದರೂ ನಾಯಿ ಮರಿ ಸತ್ತೇ ಹೋಗಿರುತ್ತಿತ್ತು. ಅಲ್ಲಿದ್ದವರೆಲ್ಲಾ ನನ್ನನ್ನು ಬೈದರು. ಇವನಿಗೆ ಏನು ನಾಯಿ ಹುಚ್ಚೋ ಎಂದು. ಬೇಸರಗೊಂಡ ನಾನು ಮರಿಯನ್ನು ಹಗ್ಗದಿಂದ ಮುಕ್ತಗೊಳಿಸಿ ಕುತ್ತಿಗೆಯನ್ನು ಎಣ್ಣೆಯಿಂದ ಸವರಿ ದುಃಖದಿಂದಲೇ ಹೋಗು ಬರಬೇಡ ಎಂದು ಕಳಿಸಿದೆ. ಅದು ಕುಯ್ಯಿ ಅಂತ ನನ್ನ ಕಾಲ ಬುಡದಲ್ಲೇ ಕೆಲ ಕಾಲ ಓಡಾಡಿತು. ಬೆಲ್ಲ ಹಾಕಿದ ಪರಿಣಾಮವೋ ಏನೋ ನಾಯಿಮರಿ ನಮ್ಮನೆ ಸುತ್ತಮುತ್ತಲೇ ಓಡಾಡಿಕೊಂಡು ಇರುತ್ತಿತ್ತು. ಅದು ಕಂತ್ರಿ ನಾಯಿಯಾಗಿದ್ದರೂ ಉತ್ತಮ ತಳಿಯ ನಾಯಿಯಂತೆ ಬೆಳಸಬೇಕೆಂದು ಅದಕ್ಕೆ ಬಿಸ್ಕತ್ತು, ಉತ್ತಮ ಸಾಬೂನಿನಿಂದ ಸ್ನಾನ ಮಾಡಿಸುತ್ತಿದ್ದೆ. ನಾನು ಶಾಲೆಯಿಂದ ಬರುತ್ತಿದ್ದಂತೆಯೇ ನನ್ನ ಕಾಲಿಗೆ ತೊಡರುಗಾಲು ನೀಡುತ್ತಿತ್ತು. ಮೈ ಮೇಲೆ ಎಗುರುತ್ತಿತ್ತು. ನಾವು ಹೇಳಿದ ಆಜ್ಞೆಗಳನ್ನು ಕೂಡ ಪಾಲಿಸುತ್ತಿತ್ತು. ಹೀಗೆ 6 ತಿಂಗಳು ಕಳೆಯಿತು. ಒಂದು ದಿನ ರಸ್ತೆ ಬದಿಯಲ್ಲಿ ಆಡುತ್ತಿದ್ದಾಗ. ಬಸ್ಸೊಂದು ಅದರ ಮೇಲೆ ಚಲಿಸಿತು. ನಾಯಿ ಅಪ್ಪಚ್ಚಿಯಾಗಿತ್ತು. ಅದನ್ನು ನೋಡಿದ ಅಮ್ಮ ಅಯ್ಯೋ ಎಂದು ಕಿರುಚಿದ್ದು, ಕೇಳಿದ ಮರುಕ್ಷಣವೇ ರಸ್ತೆಗೆ ಓಡಿದೆ. ಸಿಟ್ಟಿನಿಂದ ಬಸ್ಸಿಗೆ ಕಲ್ಲು ತೂರಿದೆ. ಅದಾಗಲೇ ಬಸ್ಸು ಕೆಲವು ಮೀಗಳಷ್ಟು ದೂರ ಚಲಿಸಿತ್ತು. ಅಂದು ಇಡೀ ದಿನ ಅತ್ತಿದ್ದೆ ಹಾಗೇ ಊಟ ಬಿಟ್ಟಿದ್ದೆ. ಆಗ ಅಮ್ಮ ಅಂದಳು ನಾನು ಯಾಕೆ ಪ್ರಾಣಿ ಸಾಕಬಾರದು ಎಂದು ಹೇಳಿದ್ದೆ, ಈಗಲಾದರೂ ತಿಳಿತಾ. ಈ ಮುಂಚೆ ಬೆಕ್ಕು ಮತ್ತು ಗಿಳಿಯನ್ನು ಸಾಕಿ ನಾನು ಇದೇ ರೀತಿಯ ವೇದನೆ ಅನುಭವಿಸಿದ್ದೆ ಎಂದಾಗ. ಸಣ್ಣ ಹುಡುಗನಾಗಿದ್ದ ನನಗೆ ಹೌದು ಎನಿಸಿತು. ಇಂದು ಅಮ್ಮ ಇಲ್ಲ. ಆದರೆ ಆಕೆಯ ಮಾತುಗಳು ಗುನುಗುತ್ತಲೇ ಇದೆ. ಈ ಘಟನೆ ನಡೆದು ಸುಮಾರು 25ಕ್ಕೂ ಹೆಚ್ಚು ವರ್ಷಗಳೇ ಕಳೆದಿದೆ. ಇದು ಇನ್ನು ಮನದಿಂದ ದೂರವಾಗೇ ಇಲ್ಲ, ಆಗಲೇ ಮತ್ತೊಂದು ಪಕ್ಷಿಯನ್ನು ಸಾಯಿಸಿದೆ ಎನ್ನುವ ಪಾಪ ಪ್ರಜ್ಞೆ ಕಾಡುತ್ತಿದೆ. ಇದೀಗ ನನಗೆ ಮದುವೆಯಾಗಿದ್ದು, ಪತ್ನಿ ರಂಜಿತಾ ಹಾಗೂ ಹರ್ಷಿಣಿ ಎಂಬ ಮಗಳಿದ್ದಾಳೆ. ಕಳೆದ ವರ್ಷ ಪುನಃ ಯಾವುದಾದರೂ ಪಕ್ಷಿಯನ್ನು ಸಾಕಬೇಕು ಎನ್ನುವ ಆಸೆ ಮತ್ತೆ ಮೊಳಕೆಯೊಡಿಯಿತು. ಆಗ ಕಣ್ಣ ಮುಂದೆ ಬಂದಿದ್ದು ಪಾರಿವಾಳ. ಹೆಂಡತಿಗೆ ಹೇಗಾದರೂ ಒಪ್ಪಿಸಬೇಕಂದು ಪಾರಿವಾಳ ಸಾಕುತ್ತಿದ್ದೇನೆ. ಅದೂ ನನಗೋಸ್ಕರ ಅಲ್ಲ ಮಗುವಿಗೆ ಟೈಂಪಾಸ್ ಗಾಗಿ ಎಂದು ಸುಳ್ಳು ಹೇಳಿದೆ. ಅವಳು ಪಾರಿವಾಳಾನಾ ಥೂ ಬಹಳ ಗಲೀಜು ಮಾಡುತ್ತೆ ಎಂದಳು. ಆದರೂ ಅವಳಿಗೆ ಪೂಸಿ ಹೊಡೆದು ಒಂದು ಜೊತೆ ಪಾರಿವಾಳವನ್ನು ತಂದೆ. ಕರಿ ಮತ್ತು ಬಿಳಿಯ ಬಣ್ಣದ್ದು, ಇದರ ಗೂಡಿಗೆಂದು ಸಾವಿರಾರು ಖರ್ಚು ಮಾಡಿದೆ. ಹೊರಗೆ ಇಟ್ಟರೆ ಬೆಕ್ಕು ತಿನ್ನುತ್ತದೆ ಹಾಗಾಗಿ ಇದನ್ನು ಅಟ್ಟದ ಮೇಲಿನ ಕಂಪ್ಯೂಟರ್ ಕೊಠಡಿಯಲ್ಲಿ ಇಟ್ಟುಕೊಳ್ಳುತ್ತೇನೆಂದು ಗೂಡುಗಳನ್ನು ನನ್ನ ಕೊಠಡಿಯಲ್ಲೇ ಇಟ್ಟುಕೊಂಡೆ. ನನ್ನ ವಿದ್ಯಾರ್ಥಿಯೊಬ್ಬ, ಸರ್ ಒಂದು ಜೊತೆ ಪಾರಿವಾಳ ಇದ್ದರೆ ಅವು ಮೊಟ್ಟೆ ಇಡುವುದಿಲ್ಲ ಎಂದ. ಪಾರಿವಾಳದ ಬಗ್ಗೆ ಅಷ್ಟಾಗಿ ತಿಳಿಯದ ನಾನು 150ರೂ ಕೊಟ್ಟು ಮತ್ತೊಂದು ಜೋಡಿ ತಂದೆ. ಹೊಸದಾಗಿ ತಂದ ಇವೆರಡೂ ತುಂಬಾ ಅಂದವಾಗೇ ಇತ್ತು. ಜಾತಿ ಪಾರಿವಾಳ ಎನ್ನುತ್ತಾರಂತೆ. ತಲೆ ತುಂಬೆಲ್ಲಾ ಕೂದಲು, ರಾಜ ನಡಿಗೆ, ಒಂದನ್ನು ಬಿಟ್ಟು ಮತ್ತೊಂದಿರುತ್ತಿರಲಿಲ್ಲ. ಹೆಣ್ಣು ಬಿಳಿ ಗಂಡು ಕಂದು ಬಣ್ಣದ್ದಾಗಿತ್ತು. ಹೆಣ್ಣಿಗೆ ಅಕ್ಕನ ಮಕ್ಕಳು ರಶ್ಮಿ, ರಕ್ಷಾ ಮಸಕ್ಕಳಿ ಎಂದು ಕರೆಯುತ್ತಿದ್ದರು. ಅದಕ್ಕೆ ಮಕ್ಕಳಿಗೆ ಮಾಡುವಂತೆ ವಿಶೇಷ ಅಲಂಕಾರ ಮಾಡುತ್ತಾ ಮಕ್ಕಳು ಎಂಜಾಯ್ ಮಾಡುತ್ತಿದ್ದರು. ಇದಕ್ಕೂ ಮುಂಚೆ ತಂದ ಪಾರಿವಾಳಗಳಿಗೆ ಅದೇನು ಸಿಟ್ಟು ಬಂದಿತ್ತೋ ಏನೋ ಕಾಳು ಕೊಟ್ಟರೆ ಕೈ ಕುಕ್ಕುತ್ತಿದ್ದವು. ಮಸಕ್ಕಳಿ ಕೆಲ ದಿನಗಳ ನಂತರ ಎರಡು ಮೊಟ್ಟೆ ಇಟ್ಟಳು. ಅದಕ್ಕೆ ನಾವುಗಳು ಇನ್ನಿಲ್ಲದ ಮುತುವರ್ಜಿ ತೋರಿಸಿದ್ದೆವು. ಹಾಗೇ ಮನೆಯಲ್ಲಿ ಏನೋ ಸಂಭ್ರಮ. ಅಕ್ಕಪಕ್ಕದ ಮನೆಯ ಮಕ್ಕಳೆಲ್ಲಾ ಪಾರಿವಾಳ ಹಾಗೂ ಅದರ ಮೊಟ್ಟೆಯನ್ನು ನೋಡಲು ನಮ್ಮ ಮನೆಯಲ್ಲೇ ಇರುತ್ತಿದ್ದರು. ಅವರವಲ್ಲೇ ಚರ್ಚೆ ಮರಿ ಬೆಳ್ಳಗೆ ಇರುತ್ತದೆ, ಕಂದು ಇರುತ್ತದೆ ಎಂದು. ಕಾವು ಕೊಡುತ್ತಿದ್ದ ಕಾರಣ ದೊಡ್ಡ ಪಾರಿವಾಳಗಳು ಹೊರಗೆ ಹೋಗುತ್ತಿರಲಿಲ್ಲ. ಇದರಿಂದಾಗಿ ಕೊಠಡಿಯೆಲ್ಲಾ ಗಲೀಜು. ಉಸಿರುಗಟ್ಟುವ ವಾಸನೆ. ಎಷ್ಟೇ ಸ್ಚಚ್ಛ ಮಾಡಿದರೂ ಮತ್ತೆ ಗಲೀಜು. ಕೊಠಡಿಯೆಲ್ಲಾ ಕೆಟ್ಟ ವಾಸನೆ ಮಯವಾಗಿತ್ತು. ಅಣ್ಣ ರಮೇಶ ಥೂ ಅದೇನು ದರಿದ್ರ ಸಾಕಿದೆಯೋ ಖಂಡಿತ ನಿನಗೆ ಯಾವುದಾದರೂ ರೋಗ ಬರುತ್ತೆ ಎಂದು ಅರೆಚಾಡುತ್ತಿದ್ದ. ಈ ಮುಂಚೆ ರೇಗಾಡಿದ್ದ ರಂಜಿತಾ ಮೂಗಿಗೆ ಬಟ್ಟೆ ಕಟ್ಟಿಕೊಂಡೇ ಸ್ವಚ್ಛತೆ ಕಾರ್ಯದಲ್ಲಿ ತೊಡಗುತ್ತಿದ್ದಳು. ನಾನು ಅವಳಿಗೆ ಅಂದೆ ಈ ಮೊಟ್ಟೆಗಳು ಮರಿಯಾಗುತ್ತಿದ್ದಂತೆಯೇ ಯಾರಿಗಾದರೂ ಕೊಟ್ಟು ಬಿಡುತ್ತೇನೆ ಎಂದೆ. ಅದಕ್ಕೆ ಅವಳು ಬೇಡ ಕಣ್ರೀ ಅಂದಿದ್ದಳು. ಮೊಟ್ಟೆಯೊಡೆದು ಮರಿಯಾಯಿತು. ತಿಂಗಳ ನಂತರ ಮರಿಗಳಿಗೆ ಉತ್ತಮ ಕಂದು ಬಣ್ಣದ ರೆಕ್ಕೆಗಳು ಬಂದಿದ್ದವು. ದಿನ ನಿತ್ಯ ಬೆಳಗ್ಗೆ ಪಾರಿವಾಳಗಳನ್ನು ಹೊರಗೆ ಬಿಡುವುದು ರೂಢಿ. ಮರಿಗಳಿಗೆ ಸರಿಯಾಗಿ ಹಾರಲು ಬರುತ್ತಿರಲಿಲ್ಲವಾದ್ದರಿಂದ ಅದು ಟೆರೇಸ್ ನಿಂದ ಸ್ವಲ್ಪ ಎತ್ತರದ ಕಟ್ಟೆ ಮೇಲೆ ಕೂತಿರುತ್ತಿತ್ತು. ಒಂದು ದಿನ ಬೆಳಗ್ಗೆ ದೊಡ್ಡ ಪಾರಿವಾಳಗಳೆಲ್ಲಾ ಧಿಡೀರನೆ ಗಾಬರಿಯಿಂದ ಕೊಠಡಿಯೊಳಕ್ಕೆ ಬಂದವು. ಕಂಪ್ಯೂಟರ್ ಮುಂದೆ ಕೂತಿದ್ದ ನಾನು ಗಾಬರಿಯಿಂದ ಹೊರ ನಡೆದೆ. ಸುಮಾರು 4 ಬೆಕ್ಕುಗಳು ತಿನ್ನಲು ಹೊಂಚಾಕಿದ್ದನ್ನು ಕಂಡ ನನಗೆ ಭಯ ಹಾಗೂ ಸಿಟ್ಟು ಬಂದು ಅಲ್ಲೇ ಇದ್ದ ಇಟ್ಟಿಗೆ ತುಂಡುಗಳಿಂದ ಬೆಕ್ಕುಗಳಿಗೆ ಹೊಡೆದೆ. ಹೊಡೆತ ತಿಂದ ಬೆಕ್ಕುಗಳೆಲ್ಲಾ ಓಡಿ ಹೋಗಿದ್ದವು. ಮರಿಗಳು ನಾನು ಎಲ್ಲಿದ್ದರೂ ಬರುವುದು. ಕೈಯಲ್ಲಿದ್ದ ಕಾಳುಗಳನ್ನು ಹೆಕ್ಕಿಕೊಂಡು ತಿನ್ನುತ್ತಿದ್ದವು. ಅವುಗಳ ವಾತ್ಸಲ್ಯ ನನ್ನನ್ನು ಬೇರೆ ಪ್ರಪಂಚಕ್ಕೇ ಕರೆದೊಯ್ಯುತ್ತಿತ್ತು. ಇದಕ್ಕೆಂದೇ ನನ್ನ ಸಂಜೆಯ ಸಮಯವನ್ನು ಮೀಸಲಿಡುತ್ತಿದ್ದೆ. ಇದರಿಂದಾಗಿ ನನಗೆ ಅವು ಮಾಡುತ್ತಿದ್ದ ಗಲೀಜು ಏನೂ ಅಲ್ಲ ಅನ್ನಿಸಿತ್ತು. ಬೆಳಗ್ಗೆ ಹೊರಗೆ ಬಿಟ್ಟ ಪಾರಿವಾಳಗಳು ಸಂಜೆ ಗೂಡಿಗೆ ಹಿಂತಿರುಗುತ್ತಿದ್ದವು. ದಿನ ನಿತ್ಯ ನಾನು ಹೊರ ಹೋಗುವ ಮುನ್ನ ದೊಡ್ಡವನ್ನೆಲ್ಲಾ ಹೊರೆಗೆ ಬಿಟ್ಟು ಮರಿಗಳಿಗೆ ಕಾಳು ಹಾಕಿ ಕೊಠಡಿಯೊಳಗೇ ಬಿಟ್ಟು ನಾನು ಕೆಲಸಗಳಿಗೆ ತೆರಳುತ್ತಿದ್ದೆ. ಇದು ದಿನ ನಿತ್ಯದ ಕಾಯಕ. ಒಂದು ದಿನ ಸಂಜೆ ಪತ್ರಿಕೆಗೆ ಮುಖ್ಯವಾದ ಸುದ್ದಿಯೊಂದನ್ನು ಟೈಪ್ ಮಾಡುತ್ತಾ ಕಂಪ್ಯೂಟರ್ ಮುಂದೆ ಕೂಳಿತಿದ್ದೆ. ಪಾರಿವಾಳಗಳು ಗೂಡಿನಲ್ಲಿ ಕುಳಿತು ಕಿತ್ತಾಡುತ್ತಿದ್ದವು. ಇದರಿಂದ ಸ್ವಲ್ಪ ಕಸಿವಿಸಿಗೊಂಡ ನಾನು ಮರಿ ಸೇರಿದಂತೆ ಎಲ್ಲವನ್ನು ಹೊರಗೆ ಆಟ ಆಡಲು ಬಿಟ್ಟು. ಬಾಗಿಲು ಹಾಕಿಕೊಂಡು ನಾನು ಕಂಪ್ಯೂಟರ್ ಮುಂದೆ ಮಗ್ನನಾಗಿ ಬಿಟ್ಟೆ. ಸುದ್ದಿಯೆಲ್ಲಾ ಕಳಿಸುವ ಹೊತ್ತಿಗೆ ಸಂಜೆ 7ಗಂಟೆಯಾಗಿತ್ತು. ತಕ್ಷಣ ಪಾರಿವಾಳದ ನೆನಪು. ಧಡಕ್ಕಂತ ಕೊಠಡಿಯಿಂದ ಹೊರ ಹೋದರೆ ಒಂದೂ ಕಾಣುತ್ತಿಲ್ಲ. ಮನದಲ್ಲಿ ಕಸಿವಿಸಿ ಆರಂಭವಾಯಿತು. ಬ್ಯಾಟರಿ ತಂದು ಎಲ್ಲೆಡೆ ಹುಡುಕಲು ಆರಂಭಿಸಿದೆ. ರಂಜಿತಾ ಪಾರಿವಾಳನೇ ಕಾಣಿಸುತ್ತಲ್ಲವಲ್ಲೇ ಅಂದೆ. ಅದಕ್ಕೆ ಅಲ್ಲೋ ಎಲ್ಲೋ ಇರಬೇಕು ಬರುತ್ತೆ ಬಿಡ್ರಿ ಅಂದವಳು ಕೆಳ ಹೋಗಿ ಅಡುಗೆ ಕೆಲಸದಲ್ಲಿ ತೊಡಗಿಕೊಂಡಳು. ಹುಡುಕುತ್ತಿದ್ದ ನನಗೆ ಒಂದೆರೆಡು ಕಡೆ ಮರಿಗಳ ಪುಕ್ಕ ಕಾಣಿಸಿತು. ಏನೋ ಆಗಿದೆ ಎಂಬ ಭಾವನೆ ಬರುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಲು ಆರಂಭಿಸಿತು. ಸ್ವಲ್ಪ ಮುಂದೆ ಹೋಗಿ ನೋಡಿದರೆ ಎದರುಗಡೆ ಮನೆಯ ಟೆರೇಸ್ ಮೇಲೆ ಎರಡು ಬೆಕ್ಕುಗಳು ಒಂದೊಂದು ಮರಿಯನ್ನು ಬಾಯಲ್ಲಿ ಕಚ್ಚಿಕೊಂಡಿದ್ದು ಕಾಣಿಸಿತು. ನನ್ನಲ್ಲಿ ಏನಾಯಿತೋ ಗೊತ್ತಿಲ್ಲ. ಸಿಟ್ಟು ಅನ್ನುವುದು ಅಂತಿಮ ಹಂತ ತಲುಪಿತ್ತು. ಏಯ್ ಎಂದು ಜೋರಾಗಿ ಅರೆಚುತ್ತಾ ದೊಡ್ಡ ಇಟ್ಟಿಗೆಗಳನ್ನು ಎಸೆಯಲು ಆರಂಭಿಸಿದೆ. ಆದರೆ ಬೆಕ್ಕು ಕಚ್ಚಿಕೊಂಡು ಓಡೇ ಹೋದವು. ಅವತ್ತು ನಾನು ಅತ್ತಿದ್ದು ಅಷ್ಟಿಷ್ಟಲ್ಲ. ರಂಜಿತಾ ಸಾಂತ್ವನ ಹೇಳಿದಳು. ಆದರೂ ದೊಡ್ಡ ಪಾರಿವಾಳಗಳು ಹಿಂತಿರುಗಲಿ ಎಂದು ರಾತ್ರಿ ಒಂದರವರೆಗೆ ಟೆರೇಸ್ ಮೇಲೆ ಕೂತಿದ್ದೆ. ನಿದ್ದೆ ಬಂದು ಅಲ್ಲೇ ಕುಸಿದಿದ್ದೆ. ಬೆಳಗ್ಗೆ ನೋಡಿದಾಗ ಅದರ ಅಪ್ಪ, ಅಮ್ಮ ಹಾಗೂ ಈ ಹಿಂದೆ ತಂದ ಪಾರಿವಾಳಗಳು ಟೆರೇಸ್ ಮೇಲೆ ಬಂದು ಕೂತಿದ್ದವು. ಅವುಗಳನ್ನು ನೋಡುತ್ತಿದ್ದಂತೆಯೇ ಒಂದೆಡೆ ದುಃಖ ಹಾಗೂ ಮತ್ತೊಂದೆಡೆ ಇದಾದರೂ ಬದುಕಿದೆಯೆಲ್ಲಾ ಎನ್ನುವ ಸಮಾಧಾನ. ಮಕ್ಕಳನ್ನು ಕಳೆದುಕೊಂಡಿದೆಯೆಲ್ಲಾ ಇವುಗಳು ಎಂದು ಮಸಕ್ಕಳಿ ಹಾಗೂ ಗಂಡನ್ನು ತೊಡೆ ಮೇಲೆ ಕೂರಿಸಿಕೊಂಡು ಅಳಲು ಆರಂಭಿಸಿದೆ. ಆದಾಗಿ ವಾರ ಕಳೆದರೂ ನನ್ನಲ್ಲಿ ಉತ್ಸಾಹ ಎನ್ನುವುದು ಮಾಯವಾಗಿತ್ತು. ಮರಿಗಳ ಪ್ರೀತಿ ನನ್ನನ್ನು ಅಷ್ಟು ಆವರಿಸಿಕೊಂಡಿತ್ತು. ಕಳೆದ ಎರಡು ವರ್ಷಗಳ ಹಿಂದೆ ಅಮ್ಮ ಹೃದಯಾಘಾತದಿಂದ ದೈವಾಧೀನರಾದರು. ಆದರೆ 25ವರ್ಷಗಳ ಹಿಂದೆ ಹೇಳಿದ ಮಾತುಗಳು ಮತ್ತೆ ಮತ್ತೆ ಮರುಕಳಿಸಿತ್ತುಲೇ ಇತ್ತು. ನಾನು ಯಾಕೆ ಬದುಕಿರಬೇಕು ಎನ್ನುವ ಮಟ್ಟಿಗೆ ಯೋಚನೆ ಮಾಡಿದ್ದೆ. ಆ ಮರಿಗಳು ನನ್ನನ್ನು ಅಷ್ಟೊಂದು ಖಿನ್ನನಾಗಿ ಮಾಡಿದ್ದವು. ನನ್ನ ವಿದ್ಯಾರ್ಥಿಗಳಾದ ನವೀನ ಹಾಗೂ ಚೇತನ್ ಪಾರಿವಾಳ ನಮಗೆ ಕೊಡಿ ಸರ್ ಎಂದು ಯಾವಾಗಲೂ ಪೀಡಿಸುತ್ತಿದ್ದರು. ಮಾರನೆಯದಿನವೇ ಅವರಿಗೆ ಗೂಡಿನ ಸಮೇತ ಎಲ್ಲಾ ಪಾರಿವಾಳಗಳನ್ನು ಒಲ್ಲದ ಮನಸ್ಸಿನಿಂದ ಕೊಟ್ಟು ಕಳಿಸಿದೆ. ಅಂದು ಗೂಡಿನಿಂದ ಮಸಕ್ಕಳಿ ನನ್ನನ್ನು ಇಣುಕಿ ನೋಡಿದ ಆ ಕ್ಷಣ ಇಂದೂ ನನ್ನ ಕಣ್ಣ ಮುಂದೆ ಹಾಗೆಯೇ ಇದೆ. ಹುಡುಗರು ದುಡ್ಡು ಕೊಡಲು ಮುಂದಾಗುತ್ತಿದ್ದಂತೇ ಹಣ ಬೇಡ, ಆದರೆ ಇದರಲ್ಲಿ ಒಂದು ಪಾರಿವಾಳ ಸತ್ತರೂ ನಿಮ್ಮನ್ನು ಸಾಯಿಸಿ ಬಿಡುತ್ತೇನೆ ಅಂದಿದ್ದೆ. ಮುಂಚೆ ತಂದ ಜೋಡಿಗಳು ಆಗ ಮೊಟ್ಟೆ ಇಟ್ಟಿದ್ದವು. ಪಾರಿವಾಳ ಕೊಟ್ಟು ತಿಂಗಳ ನಂತರ ಒಂದು ದಿನ ಮಸಕ್ಕಳಿ ನಮ್ಮ ಟೆರೇಸ್ ಮೇಲೆ ಬಂದು ಕೂತಿದ್ದಳು. ಚಿನ್ನಾ ಅಂತ ಹಿಡಿದು ಮುದ್ದಾಡಿದ್ದೆ. ಅವಳು ಎಂದಿನಂತೆಯೇ ನನ್ನ ಮುಖವನ್ನೆಲ್ಲಾ ಕೊಕ್ಕಿನಿಂದ ಮುದ್ದಾಡಿದ್ದಳು. ಇದೀಗ ಅವೆಲ್ಲಾ ಸುರಕ್ಷಿತವಾಗಿ ಹಾವೇರಿ ಜಿಲ್ಲೆಯಲ್ಲಿದೆ. ಆದರೆ ಇವತ್ತೂ ನನಗೆ ಪಾಪ ಪ್ರಜ್ಞೆ ಕಾಡುತ್ತಿದೆ. ಸುಮ್ಮನೆ ಎರಡು ಪಾಪದ ಮರಿಗಳನ್ನು ಬಲಿಕೊಟ್ಟನೆಲ್ಲಾ . ಅಂದು ಸಂಜೆ ಹೊರಗೆ ಬಿಡದೇ ಹೋಗಿದ್ದರೆ ಇವುಗಳು ಸಾಯುತ್ತಿರಲಿಲ್ಲವಲ್ಲಾ ಎಂದು. ನನ್ನ ಕನಸಿನಲ್ಲಿ, ಒಬ್ಬನೇ ಕೂತಾಗಲೆಲ್ಲಾ ಅವುಗಳು ನನ್ನ ಜೊತೆ ಆಡಿದ ನೆನಪು ಬರುತ್ತಲೇ ಇರುತ್ತದೆ. ಇದು ನಾನು ಸಾಯುವವರೆಗೂ ಜೊತೆಗೆ ಇದ್ದೇ ಇರುತ್ತದೆ. ಯಾವುದಾದರೂ ಕೆಲಸವಾಗಲಿಲ್ಲ ಎಂದಾಕ್ಷಣ ನನಗೆ ತಕ್ಷಣ ನೆನಪಾಗುವುದೇ ಆ ಮರಿಗಳನ್ನ ಬಲಿ ಕೊಟ್ಟ ಪಾಪದ ಪ್ರಜ್ಞೆ. ಮರಿಗಳನ್ನು ತಿಂದ ಬೆಕ್ಕುಗಳು ಈಗಲೂ ನನ್ನ ಕಂಪ್ಯೂಟರ್ ಕೊಠಡಿಯೊಳಗೆ ಬಂದು ಏನಾದರೂ ಹುಡುಕುತ್ತಿರುತ್ತದೆ. ಅವುಗಳನ್ನು ನೋಡುತ್ತಿದ್ದಂತೆಯೇ ಎಲ್ಲಿರುತ್ತೋ ನನ್ನ ಸಿಟ್ಟು ತಕ್ಷಣವೇ ಜಾಗೃತವಾಗಿ ಬಿಡುತ್ತದೆ. ಕೈಗೆ ಸಿಕ್ಕಿದ್ದನ್ನು ತೆಗದುಕೊಂಡು ಹೊಡೆಯುತ್ತೇನೆ. ಅದರಲ್ಲಿ ಒಂದು ಬೆಕ್ಕು ಇದೀಗ ನನ್ನ ಕೊಠಡಿಯ ಕಡೆ ತಲೆ ಹಾಕುವುದಿಲ್ಲ. ಆದರೆ ಮತ್ತೊಂದು ಮೊನ್ನೆ ಬಂದಿತ್ತು. ಕೊಠಡಿಯೊಳಗೆ ಕೂಡಿ ಹಾಕಿ ಸಮಾ ಬಾರಿಸಿದ್ದೇನೆ. ಬೆಕ್ಕಿಗೆ ಏನೇ ಮಾಡಿದರೂ ನನ್ನ ಪಾರಿವಾಳ ಮತ್ತೆ ಬರುತ್ತೆದೆಯೇ ಎನ್ನುವ ಪ್ರಶ್ನೆ ಪುನಃ ಕಾಡುತ್ತದೆ. ರಂಜಿತಾ ಬೆಕ್ಕು ಸಾಯಿಸಬೇಡ್ರಿ ಪಾಪ ಬರುತ್ತೆ ಅಂತ. ಬರಲಿ ಬಿಡು ನನ್ನ ಪಾರಿವಾಳ ತಿಂದಿಲ್ವಾ ದರಿದ್ರ ಇದು ಎನ್ನುತ್ತೇನೆ. ಈಗಲೂ ಆಸೆ ಇದೆ. ಒಂದು ದೊಡ್ಡ ಜಾಲರಿಯ ಕೊಠಡಿ ಮಾಡಿಸಿ ನೂರಾರು ಪಾರಿವಾಳ ಸಾಕಬೇಕು. ಅದರ ಜೊತೆ ನನ್ನ ಮುಂದಿನ ದಿನಗಳನ್ನು ಕಳೆಯಬೇಕೆಂದು. ಅದನ್ನು ಮಾಡಿಯೇ ತೀರುತ್ತೇನೆ. ಇದನ್ನು ಬರೆಯುವಾಗಲೂ ನನ್ನ ಕಣ್ಣಂಚು ಒದ್ದೆಯಾಗಿದೆ.