ನಾರಣಪ್ಪನವರ ಅಮೆರಿಕಾ ಪ್ರವಾಸಕಥನದ
ವಿಚಿತ್ರಾನ್ನದಲ್ಲಿ ಓದಿ ಮಜಾ ಮಾಡಿ! ನಕ್ಕು ಹಗುರಾಗಿ!
ಬೋರು ಹೊಡೆವುದು ಬೇಡವೆನ್ನುತ ವಾರದಾಕೊನೆ ಬಂದ ಕೂಡಲೆ ಕಾರಿನಲ್ಲಿಯೆ ಹೋಗಿ ಬರುವೆವು ಎಲ್ಲರೊಡಗೂಡಿ ನೀರು ಧುಮುಕುವ ಜಾಗ ಇರುವುದು ಆರು ಗಂಟೆಯ ಡ್ರೈವು ದೂರದಿ ನಾರಣಪ್ಪಗೆ ನೆನಪು ಬಂದಿತು ಜೋಗದಾ ಗುಂಡಿ ||
ಕರೆದು ಎಳೆದನು ತುಂಟ ಪೌತ್ರನು ಎರಡು ಚಾಪದ ಚಿಹ್ನೆಯಿರುವೆಡೆ ಬೆರಳತೆರನಿಹ ಫ್ರೆಂಚುಫ್ರೈಗಳ ತಿನ್ನು ನೀನೆಂದ ತುರುವಿನಂಶದ ಎಣ್ಣೆಯಲ್ಲಿಯೆ ಕರಿದ ತಿಂಡಿಯ ಹೇಗೆ ತಿನ್ನಲಿ ಬರಿದೆ ಹೊಟ್ಟೆಯು ತೊಳಸಿತಾಗಲೆ ಹರಸು ಗೋವಿಂದ ||
ಪಿರಿದು ಸೇಬಿನ ಚರಿತೆಯಿದ ಕೇಳ್ ಕರದಿ ಪುಸ್ತಕ ಪಿಡಿದ ಕನ್ಯೆಯು ಕರೆಯುತಿರುವಳು ಮನುಜರೆಲ್ಲರ ತನ್ನ ಪರಿಧಿಯೊಳು ಉರಿದುಬಿದ್ದಿಹ ಸಿರಿಯಕೇಂದ್ರವು ಮರುಕ ಹುಟ್ಟಿಸುವಂತೆ ಇರುವುದು ಅರಳಿತೆನ್ನಯ ಮೊಗವು ಸಮಯದ ಚೌಕ ಬೆಳಗಿರಲು ||
ಮಾಲು ತಿರುಗುತ ಮಹಲು ನೋಡುತ ವಾಲುಮಾರ್ಟಲಿ ಕಾರ್ಟು ದೂಡುತ ಕಾಲ ಕಳೆಯುವೆ ಹಾಡು ಕೇಳುತ ಉದಯ ಠೀವಿಯಲಿ ಬಾಲಲೀಲೆಗಳನ್ನು ಸವಿಯುತ ಜಾಲದಲ್ಲಿಯ ಪೇಪರೋದುತ ಕಾಲು ಸಡಿಲಿಸೆ ವಾಕು ಹೋಗುವೆ ಸಂಜೆ ಪಾರ್ಕಿನಲಿ ||
ಅಡಿಗೆಮಾಡುವ ಚಿಂತೆಯೇನಿದೆ ಗಡಿಗೆಯೋಗದ ಔತಣವು ಇದೆ ಬಡಿಸಿಕೊಂಡೇ ತಿಂದರಾಯಿತು ಹರಟೆ ಹೊಡೆಯುತ್ತ ಗುಡಿಯ ಒಳಗೇ ದೋಸೆ ಮಾರ್ವರು ಮಡಿಯು ಮೈಲಿಗೆ ಎನುತ ನೀ ಕಂ ಗೆಡದೆತಿಂದರೆ ಹೊಟ್ಟೆತುಂಬಿತು ರುಚಿಯ ಸವಿಯುತ್ತ ||