ನಾವಲ್ಲ - ಕಥಾ ಸಂಕಲನ

ನಾವಲ್ಲ - ಕಥಾ ಸಂಕಲನ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಎನ್. ಸೇತುರಾಮ್
ಪ್ರಕಾಶಕರು
ಎಸ್.ಎನ್.ಸೇತುರಾಮ್, ರಾಜರಾಜೇಶ್ವರಿ ನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ೨೦೧೯

“ರಂಗಭೂಮಿಯಲ್ಲಿ ನಾಟಕ ಕರ್ತೃ, ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ಗೆಳೆಯ ಸೇತೂರಾಮ್, ಈಗ ತಮ್ಮ ಆರು ಕಥೆಗಳ ಸಂಕಲನ ಹೊರತರುತ್ತಿದ್ದಾರೆ. ನಿಷಿತವಾದ ಕತ್ತಿಯಲುಗಿನಂಥ ಭಾಷೆಯೇ ಅವರ ಅಪೂರ್ವ ಶಕ್ತಿ. ಬದುಕಿನ ಆಳ ಅಗಲಗಳನ್ನು ಅನುಭವಗತ ಮಾಡಿಕೊಂಡಿರುವ ಈ ಸೂಕ್ಷ್ಮ ಸಂವೇದಿ, ಜೀವನ ಮತ್ತು ಅದರ ಕಠೋರ ಮುಖವನ್ನು ನಿರ್ಮಮವಾಗಿ ತಮ್ಮ ಕಥೆಗಳಲ್ಲಿ ಪದರಪದರವಾಗಿ ಸೀಳಿ ಇಡುವರಾದರೂ ಆಳದಲ್ಲಿ ಗಾಢವಾದ ಜೀವನ ಪ್ರೀತಿಯುಳ್ಳವರು. ಅವರ ಕಥೆಗಳ ತಿಕ್ಕಾಟ ಹುಟ್ಟುವುದೇ ಈ ಘರ್ಷಣದಲ್ಲಿ. ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಬದುಕು ಹದಗೆಟ್ಟಿದೆ ಎಂಬ ಅರಿವಿದ್ದೂ, ಈ ಕಥೆಗಳಲ್ಲಿ, ಕಾತ್ಯಾಯಿನಿಯಂಥ, ಮಂದಾಕಿನಿಯಂಥ ಹೆಣ್ಣು ಮಕ್ಕಳು ತಮ್ಮ ಅಭಿಮಾನ ಮತ್ತು ಸ್ತ್ರೀತ್ವದ ಧಾರಣ ಶಕ್ತಿಯನ್ನು ಕೊನೆಯವರೆಗೂ ಹೋರಾಡುತ್ತಲೇ ರಕ್ಷಿಸಿಕೊಳ್ಳುತ್ತಾರೆ. ಸೇತೂರಾಮ್ ಸೃಷ್ಟಿಸಿರುವ ಇಂಥ ಸ್ತ್ರೀಪಾತ್ರಗಳು ಹೆಣ್ಣಿನ ಬಗ್ಗೆ ಅವರಿಗೆ ಸಹಜವಾಗಿಯೇ ಇರುವ ಗೌರವಾದರಗಳನ್ನು ಪರೋಕ್ಷವಾಗಿ ಸೂಚಿಸುತ್ತದೆ. ಈ ನೆಲೆಯಲ್ಲಿ ‘ಕಾತ್ಯಾಯಿನಿ' ಮತ್ತು ‘ಮೌನಿ (ಮಂದಾಕಿನಿಯ ಕತೆ)’ ಸಂಗ್ರಹದ ಅಗ್ರಗಣ್ಯ ಕಥೆಗಳಾಗಿವೆ.” ಎನ್ನುತ್ತಾರೆ ಮುನ್ನುಡಿ ಬರೆದ ಎಚ್ ಎಸ್ ವೆಂಕಟೇಶಮೂರ್ತಿ ಇವರು.

ಈ ಕಥಾಸಂಕಲನಕ್ಕೆ ಬೆನ್ನುಡಿಯನ್ನು ಬರೆದ ಸಿ.ಎನ್. ರಾಮಚಂದ್ರನ್ ಪ್ರಕಾರ “ ಈ ಸಂಕಲನದಲ್ಲಿರುವ ಆರೂ ಕಥೆಗಳು ಕೌಟುಂಬಿಕ-ಧಾರ್ಮಿಕ-ರಾಜಕೀಯ ವ್ಯವಸ್ಥೆಗಳನ್ನು ವಾಸ್ತವಿಕ ನೆಲೆಯಲ್ಲಿ ನಿಶಿತವಾಗಿ ವಿಶ್ಲೇಷಿಸುತ್ತವೆ. ಆ ವಿಶ್ಲೇಷಣೆಯ ಮೂಲಕವೇ ವ್ಯವಸ್ಥೆಗಳ ಆಳದಲ್ಲಿರುವ ಅಸಮಾನ ಸಂಬಂಧಗಳು, ಕ್ರೌರ್ಯ, ಭೀತಿ, ಅಸಹಾಯಕತೆ ಇತ್ಯಾದಿಗಳನ್ನು ಬಿಚ್ಚಿ ತೋರಿಸುತ್ತವೆ. ಹಾಗೆ ತೋರಿಸುತ್ತಲೇ ಅವುಗಳನ್ನು ಮೀರುವ ಪ್ರತಿರೋಧದ ಮಾರ್ಗಗಳನ್ನೂ ಶೋಧಿಸುತ್ತವೆ. ಅಸಮಾನ ಅಧಿಕಾರವನ್ನಾಧರಿಸಿದ ಕೌಟುಂಬಿಕ ವ್ಯವಸ್ಥೆಯಲ್ಲಿ ‘ಗಂಡನ ತಪ್ಪೇ ಇದ್ದರೂ ಮಗುವನ್ನು ಹೆರಲಾಗದವಳು ಹೆಂಡತಿಯೇ ಅಲ್ಲ (‘ಮೌನಿ') ; ಗಂಡನು ಸಲಿಂಗಕಾಮಿಯಾಗಿದ್ದರೂ ಅವನನ್ನು ಅನುಸರಿಸಿಕೊಂಡು ಹೋಗುವುದು, ಅವನು ಭ್ರಷ್ಟನಾದರೂ ಅವನನ್ನು ಕಾಪಾಡುವುದು ಹೆಂಡತಿಯಾದವಳ (‘ಕಾತ್ಯಾಯಿನಿ') ಕರ್ತವ್ಯ; ಮಕ್ಕಳ ನೆಲೆಯಲ್ಲಿಯೂ ಅಪ್ಪನು ಹೇಗಿದ್ದರೂ ಆದರ್ಶವಾಗುತ್ತಾನೆಯೇ ಹೊರತು ಹೆತ್ತು ಹೊತ್ತ ಅಮ್ಮನಲ್ಲ (‘ಸ್ಮಾರಕ') ; ಇದೇ ನೆಲೆಯಲ್ಲಿ ಧಾರ್ಮಿಕ ವ್ಯವಸ್ಥೆಯಲ್ಲಿ, ಮಠ ಇದೆ, ಅದು ಸತ್ಯ ; ಆದರೆ ಧರ್ಮ ಎಲ್ಲಿದೆ?’ ಎಂದು ಸದಾ ಪ್ರಶ್ನಿಸಿಕೊಳ್ಳುವ, ತಾನು ಕೇವಲ ‘ಯಾರದ್ದೋ ಹಣ, ಆಸ್ತಿ ನಿದ್ದೆಗೆಟ್ಟು ಕಾಯುವ ನಿಯತ್ತಿನ ನಾಯಿ' ಎಂಬ ಕ್ರೂರ ಸತ್ಯವನ್ನು ಅರಿಯುವ ಪ್ರಾಮಾಣಿಕ ಮಠಾಧಿಪತಿ ತಾನೇ ನೇಣು ಹಾಕಿಕೊಂಡು ಸಾಯುತ್ತಾನೆ (‘ಮೋಕ್ಷ') ಇತ್ಯಾದಿ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಲೇಖಕರಾದ ಎಸ್.ಎನ್. ಸೇತುರಾಮ್ ಅವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ “ಬರಹದ ಲೋಕಕ್ಕೆ ಬಂದದ್ದು ಅನಿವಾರ್ಯವಾಗಿ. ‘ಮಂಥನ' ಧಾರಾವಾಹಿ ಸ್ವಂತ. ಅದಕ್ಕೆ ಸಾಹಿತ್ಯ ಬೇಕಿತ್ತು. ಬರೆದದ್ದು. ಯಾರಿಗೋ ಯಾರದ್ದೋ ದಾಕ್ಷಿಣ್ಯದ ಕಾವು. ಬಾವಾಗಿ ಬಲಿತು, ಏಳಬಾರದ್ದಲ್ಲಿ ಕುರ ಎದ್ದು ‘ಮಂಥನ' ಮನೆ ಸೇರಿತ್ತು. ಈ ಕಹಿ ಕಕ್ಕಿದ್ದು ‘ದಿಬ್ಬಣ'ದಲ್ಲಿ. 'ಅನಾವರಣ'ದಲ್ಲಿ ನಿರಾಕರಣವಿತ್ತು.

ಪೂರ್ತಾ ಬದುಕು ಕಳೆದದ್ದು ಆದಾಯ ತೆರಿಗೆ ಇಲಾಖೆಯ ಸೇವೆಯಲ್ಲಿ. ಅಲ್ಲಿಯ ಭ್ರಷ್ಟತೆ ಮನಸ್ಸನ್ನ ಕಾಡಿ, ಅದು ಅನಾಗರೀಕರ ಕಾಡು ಮತ್ತು ಹೊರಗಣ ಪ್ರಪಂಚ. ಅದರಲ್ಲೂ ಸಾಹಿತಿ ಕಲಾವಿದರ ಪ್ರಪಂಚ. ನಾಗರೀಕರ ನಾಡು-ಸಭ್ಯರ ಬೀಡು ಅನ್ನುವ ಭಾವವಿತ್ತು. ಹಾಗಾಗಿ, ಅಲ್ಲಿ ಬಿಟ್ಟು ಇಲ್ಲಿ ಬಂದೆ. ಭ್ರಮೆ ಬೇಗ ಹರೀತು. ಅಲ್ಲಿಗೂ ಇಲ್ಲಿಗೂ ಅಂತಹ ವ್ಯತ್ಯಾಸವಿರಲಿಲ್ಲ. ಅಲ್ಲಿ ಒಂದು ಕಾನೂನಿನ ಚೌಕಟ್ಟಾದರೂ ಇತ್ತು. ಇಲ್ಲಿ ಅದೂ ಇರಲಿಲ್ಲ. ಮನಸ್ಸು ಖಾಲಿಯಾಗಿ ಬಾಲ ಮುದುರಿ ಬಿಲ ಸೇರಿದ್ದೆ.” ಎಂದು ನೋವಿನಿಂದ ಬರೆದಿದ್ದಾರೆ. 

೨೦೧೭ರಲ್ಲಿ ಮೊದಲ ಮುದ್ರಣ ಕಂಡ ‘ನಾವಲ್ಲ' ಕಥಾ ಸಂಕಲನ ೨೦೧೯ರಲ್ಲಿ ಎಂಟನೇ ಮುದ್ರಣ ಕಾಣುತ್ತಿದೆ. ಈ ಮುದ್ರಣದ ವೇಗವನ್ನು ಗಮನಿಸಿದಾಗಲೇ ಇದರಲ್ಲಿರುವ ಕಥಾ ಹೂರಣದ ಪ್ರಮಾಣ ನಿಮಗೆ ಅರ್ಥವಾಗಬಹುದು. ಸಂಕಲನದಲ್ಲಿ ಆರು ಕಥೆಗಳಿವೆ. ಮೋಕ್ಷ, ಮೌನಿ, ಸ್ಮಾರಕ, ಸಂಭವಾಮಿ, ಕಾತ್ಯಾಯಿನಿ, ನಾವಲ್ಲ. ಪುಸ್ತಕಕ್ಕೆ ೨೦೧೮ರ ಮಾಸ್ತಿ ಕಥಾ ಪುರಸ್ಕಾರ ಸಂದಿದೆ. ೧೧೦ ಪುಟಗಳನ್ನು ಹೊಂದಿರುವ ಈ ಪುಸ್ತಕದ ಕತೆಗಳು ಓದಿದ ಬಳಿಕವೂ ನಮ್ಮನ್ನು ಕಾಡದೇ ಇರದು.