ನಾವು ಗಂಡಸರು ಸ್ವಾಮಿ !
ಕವನ
ನಾವು ಗಂಡಸರು ಸ್ವಾಮಿ,
ಕನಸು ವಾಸ್ತವಗಳ ಹಾವು ಏಣಿ ಆಟದಲ್ಲಿ
ಕಾಲವೆಂಬ ದಾಳಕ್ಕೆ ಟೋಕನ್ನುಗಳಷ್ಟೇ.
ಜವಾಬ್ದಾರಿಗಳ ಮೂಟೆಯನ್ನು ಹೆಗಲಿಗೇರಿಸಿ
ನೆಮ್ಮದಿಯೆಂಬ ಮಾಯಾಮೃಗದ ಬೇಟೆಗಾರರಷ್ಟೇ...
ಹುಟ್ಟಿದ ಮನೆಗೆ ಅತಿಥಿಯಾಗಿ
ದೂರದ ಊರಿಗೆ ಪ್ರವಾಸಿಯಾಗಿ
ಒತ್ತರಿಸಿ ಬರುವ ಕಂಬನಿಯನ್ನೂ
ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸುವ ಆಸಾಮಿ...
ನಾವು ಗಂಡಸರು ಸ್ವಾಮಿ,
ನಮ್ಮ ನೂರೊಂದು ಕಲ್ಪನೆಯ
ಆಶಾಗೋಪುರವನ್ನು ನಿರ್ದಯಿಯಾಗಿ ಕೆಡವಿ
ಅದರ ಮೇಲೆಯೇ ನಿಂತು ನಗುವ ವಿಕೃತರು...
ಹೊಂದಾಣಿಕೆಯ ಆಳ ಅಗಲವನ್ನು ಹತ್ತಿರದಿಂದ ಅನುಭವಿಸಿ
ಬಣ್ಣ ಬಣ್ಣದ ರಂಗಿನಾಟಕೆ ಆಟಗಾರರಷ್ಟೇ ನಾವು
ಖುಷಿಯೆಂಬ ಒಯಸಿಸ್ ಗಾಗಿ ಜೀವನಪರ್ಯಂತ ಹುಡುಕುತ್ತೇವೆ
ಕಾರಣ ನಾವು ಗಂಡಸರು ಸ್ವಾಮಿ...
-’ಮೌನರಾಗ’ (ಶಮೀರ್ ನಂದಿಬೆಟ್ಟ.)
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್