ನಾಸದೀಯ ಸೂಕ್ತ

ನಾಸದೀಯ ಸೂಕ್ತ

ಬರಹ

ನಾಸದೀಯ ಸೂಕ್ತ ಎಂಬುದು ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಏಳು ಋಕ್ಕುಗಳ ಒಂದು ಭಾಗ.ನಾನು ವೇದಗಳನ್ನು ಓದಿದವನಲ್ಲ, ಕಲಿತವನಲ್ಲ. ಸಂಸ್ಕೃತದ ಪರಿಚಯವಿದ್ದರೂ, ವೇದಗಳನ್ನು ಪೂರ್ತಿ ಅರ್ಥಮಾಡಿಕೊಳ್ಳುವಷ್ಟು ಅರಿತಿಲ್ಲ. ಈ ಭಾಗದಲ್ಲಿ ನಾಸೀತ್, ನಾಸೀತ್ (ಇರಲಿಲ್ಲ, ಇರಲಿಲ್ಲ) ಎಂದು ಮತ್ತೆ ಮತ್ತೆ ಬರುವುದರಿಂದ, ಇದಕ್ಕೆ ನಾಸದೀಯ ಸೂಕ್ತವೆಂದು ಹೆಸರು ಎಂದು ಬಲ್ಲವರೊಬ್ಬರು ಹೇಳಿದ್ದನ್ನು ಕೇಳಿದ್ದೇನೆ.

ಈ ಭಾಗವನ್ನು, ಅದರ ಇಂಗ್ಲಿಷ್ ಅನುವಾದವನ್ನೂ ಕೆಲವೆಡೆಗಳಲ್ಲಿ ಓದಿದ್ದೆ. ಒಮ್ಮೆ ಕನ್ನಡದಲ್ಲಿ ಇದನ್ನು ತರ್ಜುಮೆ ಮಾಡೋಣವೆನ್ನಿಸಿತು.

( http://home.comcast.net/~prasadmail/nAsadeeyasUktam-s.pdf

http://www.swami-krishnananda.org/vishnu/nasadiya.pdf)

ಈ ಸೂಕ್ತ ಒಂದು mysterious, ಅಚ್ಚರಿಯ ಭಾವನೆಯನ್ನು ಹೊರಡಿಸುತ್ತೆ ಅನ್ನುವ ಕಾರಣಕ್ಕೆ ನನ್ನ ಈ ಪ್ರಯತ್ನ. ಇದು ಮೂಲಕ್ಕೆ ಸರಿಯಾಗಿದೆ ಎಂಬ ನಂಬಿಕೆಯೂ ನನಗೆ ಅಷ್ಟಾಗಿಲ್ಲ. ಅದರ ಜೊತೆಗೆ, ನನಗೆ ಕವಿಹೃದಯವಿದೆಯೆಂಬ ನಂಬಿಕೆ ಅಥವಾ ಭ್ರಮೆ ಎರಡೂ ನನಗೆ ಎಳ್ಳಷ್ಟೂ ಇಲ್ಲ. ಓದಿ, ಏನನ್ನಿಸಿತು ಹೇಳಿ.

ನಾಸದೀಯ ಸೂಕ್ತ -ಅಥವ - ಇಲ್ಲದುದರ ಮೇಲೆರಡು ಮಾತು

ಇರಲಿಲ್ಲ ಇದ್ದದ್ದು, ಇಲ್ಲ ಇಲ್ಲದದು
ಇರಲಿಲ್ಲ ಗಾಳಿ ಬಲು ದೂರದಾಗಸ
ಸುತ್ತಿತ್ತು ಏನದು? ಯಾರದನು ಕಾಯ್ದವರು?
ಇತ್ತೇನು ಅಲ್ಲಿ ಆಳದ ಕರಿನೀರು?

ಇರಲಿಲ್ಲ ಸಾವು, ಇರಲಿಲ್ಲ ಬದುಕು
ಇರಲಿಲ್ಲ ಹಗಲು ಇರಲಿಲ್ಲ ಇರುಳು
ಉಸಿರಿಲ್ಲದೇ ಉಸಿರೆಳೆವ ಭಾವ
ಅದನೊಂದ ಬಿಟ್ಟು ಇರಲಿಲ್ಲ ಏನೂ

ಕರಿ ಕತ್ತಲ ಕಟ್ಟಿಟ್ಟ ಹಿರಿಗತ್ತಲು
ಎಲ್ಲವನು ಸುತ್ತಿದ್ದ ಅರಿಯದಾ ನೀರು
ಶೂನ್ಯವೇ ಮುಚ್ಚಿ ತೆರೆದಿಟ್ಟ ಮನಸು
ಅದನು ಹೊರತರುವ ಆ ಮಹಾತಪಸು

ಹುಟ್ಟಿತ್ತು ಅದು, ಹರಡಿತ್ತು ಎಲ್ಲೆಲ್ಲು
ಮನದ ಮೂಲೆಯಲಿ ಮೊಳೆತಂಥ ಪ್ರೀತಿ
ಎದೆಯ ಬಯಲೊಳಗೆ ಆಡಗಿದ್ದ ರೀತಿ
ಅರಿತರೇ ಇಲ್ಲದಕು ಇದ್ದುದಕು ನಂಟು?

ಇಲ್ಲದಕು ಇದ್ದುದಕು ನಡುವೊಂದು ದಾರ
ಅದರ ಮೇಲೇನಿತ್ತು ಇತ್ತದದರ ಕೆಳಗೇನು?
ಆ ಬೀಜದ ಭರದ ಮಹಿಮೆಯ ತರವೇನು?
ಏನದರ ಶಕ್ತಿ? ಏನದರ ಹುಮ್ಮಸ್ಸು?

ಯಾರದನು ಅರಿತವರು? ಯಾರದನು ಹೇಳುವರು?
ಜನಿಸಿದ್ದು ಎಂದು? ಸೃಷ್ಟಿಕರ್ತನು ಯಾರು?
ಕಾವ ದೇವರು ಕೂಡ ತರುವೆ ಜನಿಸಿರಲು
ನಿಜವಾದ ಚರಿತೆಯ ಪೇಳುವವರಾರು?

ಜಗವನ್ನು ಇದನು ಹುಟ್ಟಿಸಿದರಾರು ?
ಹುಟ್ಟಿಸಿದನೊ ಇಲ್ಲವೋ? ತಿಳಿದವರು ಯಾರು?
ಆಗಸದಿ ಮೇಲೆ ನಿಂತು ನೋಡುವನವನು
ಹೇಳಬಲ್ಲನೆ ಇದನು? ಅರಿತಿಹನೆ ಅವನು?

-ಹಂಸಾನಂದಿ