ನಿತ್ಯಜೀವನದಲ್ಲಿ ಕಾನೂನು: ಪುಸ್ತಕ 3

ನಿತ್ಯಜೀವನದಲ್ಲಿ ಕಾನೂನು: ಪುಸ್ತಕ 3

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಆರ್. ಗೌತಮ್, ಅಡ್ವೋಕೇಟ್
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. 125/-

ಕನ್ನಡದಲ್ಲಿ ಇಂತಹ ಪುಸ್ತಕ ಇರೋದು ಕನ್ನಡಿಗರ ಭಾಗ್ಯ. ಯಾಕೆಂದರೆ, ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿರುವ ಕಾನೂನು ಪುಸ್ತಕಗಳು ಕೆಲವೇ ಕೆಲವು. ಅಂತಹ ಪುಸ್ತಕಗಳಲ್ಲಿ ಇದು ಅತ್ಯಂತ ಉಪಯುಕ್ತ ಪುಸ್ತಕ.

ಇದರ ಲೇಖಕರಾದ ಅಡ್ವೋಕೇಟ್ ಎಸ್. ಆರ್. ಗೌತಮ್ ಪುಸ್ತಕದ ಹಿನ್ನೆಲೆಯ ಬಗ್ಗೆ ಹೀಗೆ “ಅರಿಕೆ" ಮಾಡಿಕೊಂಡಿದ್ದಾರೆ:
“ಈಗ್ಗೆ ಕೆಲವು ವರ್ಷಗಳ ಹಿಂದೆ “ನಿತ್ಯಜೀವನದಲ್ಲಿ ಕಾನೂನು" ಎಂಬ ಶೀರ್ಷಿಕೆಯ ಅಡಿಯಲ್ಲಿ ಎರಡು ಪುಸ್ತಕಗಳನ್ನು ಬರೆದು ಅವುಗಳಲ್ಲಿ ಪೌರ ಕಾನೂನಿನ ಹಲವು ಮುಖಗಳನ್ನು ಕುರಿತು ಚರ್ಚಿಸಿದ್ದೆ. ನಿಜಜೀವನದ ಘಟನೆಗಳನ್ನು ಅಥವಾ ಸನ್ನಿವೇಶಗಳನ್ನು ಆಧಾರವಾಗಿಟ್ಟುಕೊಂಡು ಕಾನೂನಿನ ಜಟಿಲತೆಗಳನ್ನು ಹಾಗೂ ಪೌರರು ವಹಿಸಬೇಕಾದ ಎಚ್ಚರಗಳನ್ನು ಸೂಚಿಸಿ ಬರೆದ ಆ ಪುಸ್ತಕಗಳು ತುಂಬ ಜನಪ್ರಿಯವಾಗಿ ಆರು (ಈಗ ಇನ್ನೂ ಹೆಚ್ಚು) ಆವೃತ್ತಿಗಳನ್ನು ಕಂಡದ್ದು ನನಗೆ ತುಂಬ ಸಂತೋಷವನ್ನು ಹಾಗೂ ತೃಪ್ತಿಯನ್ನು ತಂದುಕೊಟ್ಟಿತು. ಜನರಿಗೆ ಅರ್ಥವಾಗುವ ರೀತಿಯಲ್ಲಿ ಕಾನೂನಿನ ಸಂಕೀರ್ಣತೆಯನ್ನು ವಿವರಿಸಿದರೆ ಕನ್ನಡ ಜನತೆ ಅದನ್ನು ಸ್ವಾಗತಿಸುತ್ತಾರೆ ಎಂಬುದನ್ನು ಈ ಪುಸ್ತಕಗಳು ನಿದರ್ಶನಗೊಳಿಸಿದವು.

ಇದೇ ರೀತಿಯಲ್ಲಿ ಅಪರಾಧಿಕ ಕಾನೂನು ಅಂದರೆ ಭಾರತ ದಂಡಸಂಹಿತೆ ಮತ್ತು ಅಪರಾಧಿಕ ಪ್ರಕ್ರಿಯಾ ಸಂಹಿತೆ ಇವುಗಳಲ್ಲಿನ ನಿತ್ಯಜೀವನಕ್ಕೆ ಪ್ರಸ್ತುತವಾದ ವಿವರಗಳನ್ನು ತಿಳಿಯಪಡಿಸುವ ಇನ್ನೊಂದು ಪುಸ್ತಕವನ್ನು ಬರೆದುಕೊಡಬೇಕೆಂದು ಪ್ರಕಾಶಕರು ಹಾಗೂ ಮೊದಲಿನ ಎರಡು ಪುಸ್ತಕಗಳನ್ನು ಓದಿದ ಕೆಲವರು ನನ್ನನ್ನು ಒತ್ತಾಯಪಡಿಸುತ್ತಲೇ ಇದ್ದರು…. ಕಡೆಗೂ ಈ ಪುಸ್ತಕವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ.”

ಲೇಖಕರ ಮಾತಿನಲ್ಲಿ ಈ ಪುಸ್ತಕದ ಉದ್ದೇಶ:
“ಅಪರಾಧಗಳು ಯಾವುವು, ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ದಂಡನೀಯವಾಗುತ್ತವೆ, ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿರುವ ನಮ್ಮ ಪೊಲೀಸ್ ವ್ಯವಸ್ಥೆ ಈ ದಿಕ್ಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗೆ ಹಾಗೂ ಕೆಲವು ಲೋಪದೋಷಗಳು ಮತ್ತು ಜನರಲ್ಲಿ ಮೂಡಬೇಕಾಗಿರುವ ಜಾಗೃತಿಯ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ” ಎನ್ನುತ್ತಾ ಲೇಖಕರು ಈ ಪುಸ್ತಕದ ಉದ್ದೇಶವನ್ನು ಹೀಗೆ ಸ್ಪಷ್ಟ ಪಡಿಸಿದ್ದಾರೆ: “ಇಲ್ಲಿ ಕೊಟ್ಟಿರುವ ವಿವಿಧ ಕಾನೂನು ವಿವರಗಳು ಇಂಗ್ಲಿಷ್ ಮೂಲಕ ಅಧಿಕೃತ ಭಾಷಾಂತರವಲ್ಲ. ಆದರೆ, ಈ ಪುಸ್ತಕದ ಉದ್ದೇಶ ನ್ಯಾಯಾಲಯದಲ್ಲಿ ವ್ಯಾಜ್ಯಗಳನ್ನು ನಡೆಸುವುದಕ್ಕೆ ಉಪಯೋಗವಾಗುವುದಕ್ಕಿಂತ ವ್ಯಾಜ್ಯಗಳಿಗೆ ಸಿಕ್ಕಿಕೊಳ್ಳದೆ ನ್ಯಾಯಾಲಯಗಳಿಂದ ದೂರವಿರಲು ಸ್ವಲ್ಪಮಟ್ಟಿಗಾದರೂ ಉಪಯೋಗವಾಗಲಿ ಎನ್ನುವುದೇ ಆಗಿದೆ.”

ಸುಪ್ರಸಿದ್ಧ ವಕೀಲರಾದ ಸಿ.ಎಚ್. ಹನುಮಂತರಾಯರು ಪುಸ್ತಕದ ಮುನ್ನುಡಿಯಲ್ಲಿ ಬರೆದಿರುವ ಮಾತುಗಳು: “ಜನಸಾಮಾನ್ಯರನ್ನು ಕಾನೂನಿನ ಅಜ್ನಾನದಿಂದ ಹಾಗೂ ಅಜ್ನಾನದಿಂದ ಆಗಬಹುದಾದ ಅಪಾಯಗಳಿಂದ ಪಾರು ಮಾಡಲು ದುಡಿಯುತ್ತಿರುವವರಲ್ಲಿ ಶ್ರೀ ಎಸ್.ಆರ್. ಗೌತಮ್ ಒಬ್ಬರು. ಜನಸಾಮಾನ್ಯರ ನಿತ್ಯಜೀವನಕ್ಕೆ ಹತ್ತಿರವಾದ ಮತ್ತು ಅವಶ್ಯವಾದ ಕೆಲವು ಕಾನೂನುಗಳಿವೆ. ಅವುಗಳ ಅರಿವಿಲ್ಲದೆ ಜೀವನ ಅಸಾಧ್ಯ. ಅಂತಹುಗಳಲ್ಲಿ ಭಾರತ ದಂಡಸಂಹಿತೆ ಮತ್ತು ದಂಡ ಪ್ರಕ್ರಿಯಾ ಸಂಹಿತೆ ಮುಖ್ಯವಾದವು. ಅವುಗಳು ಒಳಗೊಂಡಿರುವ ಎಲ್ಲವೂ, ಜನಸಾಮಾನ್ಯರಿಗೆ ತೀರಾ ಮುಖ್ಯವಾಗದೆ ಕೆಲವು ಮಾತ್ರ ಆ ಸ್ಥಾನದಲ್ಲಿವೆ. ಶ್ರೀ ಎಸ್. ಆರ್. ಗೌತಮ್ ಈ ಪುಸ್ತಕದಲ್ಲಿ ಅವುಗಳನ್ನು ಮಾತ್ರ ಉದ್ದೇಶಿಸಿದ್ದಾರೆ. ಅದರ ಫಲ ಸಾಮಾನ್ಯರು ತಲೆನೋವು ತಂದುಕೊಳ್ಳದೆ ಸಂಬಂಧಿಸಿದ ಕಾನೂನನ್ನು ತಿಳಿಯಲು ಸಾಧ್ಯವಾಗಿದೆ.

ಕಾನೂನು ಓದಲು ನೀರಸ. ಓದಿಸಿಕೊಳ್ಳುವಂತೆ ಬರೆಯುವುದು ಹರಸಾಹಸ. ಆಳ ಅಧ್ಯಯನ, ವೃತ್ತಿಯ ಗಾಢ ಅನುಭವ ಮತ್ತು ಅಭಿವ್ಯಕ್ತಿಯ ಮೇಲಿನ ಹಿಡಿತ ಮಾತ್ರ ಕಾನೂನು ಕುರಿತ ಬರವಣಿಗೆಯನ್ನು ಸಹ್ಯವಾಗಿಸಬಲ್ಲವು. ಶ್ರೀ ಎಸ್. ಆರ್. ಗೌತಮ್ ಕಾನೂನನ್ನು ಸಾಮಾನ್ಯನಿಗೆ ಅರ್ಥ ಮಾಡಿಸಲೇ ಬೇಕೆಂದು ಹಠಮಾಡಿದಂತೆ ಗೋಚರಿಸುತ್ತದೆ. ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ ಎನ್ನುವುದು ಸಂತೋಷದ ವಿಷಯ.
ಕಾನೂನನ್ನು ಶ್ರೀಸಾಮಾನ್ಯನಿಗೆ ಅರ್ಥವಾಗಿಸಲು ಪುರಾಣದಿಂದ ಉದಾಹರಣೆಗಳನ್ನು ಬಳಸಿಕೊಂಡು, ಹಿಂದೆ ತೀರ್ಮಾನವಾಗಿರುವ ಪ್ರಕರಣಗಳನ್ನು ಉದ್ಧರಿಸಿ, ಇತರೆ ಕಾಯ್ದೆಯಲ್ಲಿರುವ ಸಾಮ್ಯ ಸಂಬಂಧಗಳನ್ನು ಗುರುತಿಸಿ -ಎಲ್ಲವನ್ನು ಸೋದಾಹರಣಗೊಳಿಸುವ ಕಲೆ ವೃತ್ತಿಯ ಆಳ ಅನುಭವದಾರರಾದ ಅವರಂಥವರಿಂದ ಮಾತ್ರ ಸಾಧ್ಯ.

ನಾನು ಕಂಡಂತೆ ಶ್ರೀಸಾಮಾನ್ಯನನ್ನು ಗಮನದಲ್ಲಿರಿಸಿಕೊಂಡು ರಚಿಸಿದ ಕಾನೂನು ಪುಸ್ತಕಗಳು ವಿರಳ. ಬಹಳ ಪುಸ್ತಕಗಳು ಇಂಗ್ಲಿಷ್ ತರ್ಜುಮೆಯಷ್ಟೆ. ಇಲ್ಲಿನ ಪರಿಸರ, ಆಗು-ಹೋಗು, ಸಾಕು-ಬೇಕುಗಳನ್ನು ಗಮನದಲ್ಲಿರಿಸಿಕೊಂಡಿರುವ ಮೊದಲನೆಯ ಪುಸ್ತಕ ಇದು ಎಂಬುದು ನನ್ನ ಭಾವನೆ."

ಪುಸ್ತಕದ ಅಧ್ಯಾಯಗಳ ಪಟ್ಟಿ:
1.ದಂಡಂ ದಶಗುಣಂ ಭವೇತ್
2.ಭಾರತ ದಂಡ ಸಂಹಿತೆ - ಪಕ್ಷಿನೋಟ
3.ಕೊಲೆ, ಚಿರಂಜೀವಿ!  - 302ನೇ ಖಂಡ
4.ಕೊಲೆಯಲ್ಲದ ಅಪರಾಧಾತ್ಮಕ ನರಹತ್ಯೆ: 300 ಮತ್ತು 304ನೇ ಖಂಡಗಳು … ಕೊಂದರೂ "ಕೊಲೆ"ಯಲ್ಲ!
5.ಅಪರಾಧಾತ್ಮಕ ನಿರ್ಲಕ್ಷ್ಯ ಮತ್ತು ದುಡುಕು - 304 (ಎ) ಖಂಡ
6.ವರದಕ್ಷಿಣೆ ನಿಷೇಧ, ಪತಿಯ ಅಥವಾ ಪತಿಯ ಬಂಧುಗಳ ಕ್ರೌರ್ಯ ಹಾಗೂ ವರದಕ್ಷಿಣೆ ಸಾವು
7.(ಅ) ವಿನಾಯಿತಿ ಪರಿಧಿ: 79ರಿಂದ 95ನೇ ಖಂಡಗಳು
   (ಆ) ಆತ್ಮರಕ್ಷಣೆ: 96ರಿಂದ 106ನೇ ಖಂಡಗಳು
8.ದುಷ್ಪ್ರೇರಣೆ,, ಕುಮ್ಮಕ್ಕು, ಚಿತಾವಣೆ: 107ರಿಂದ 120ನೇ ಖಂಡಗಳು
9.(ಅ) ಸುಳ್ಳು ಸಾಕ್ಷ್ಯ: 191ರಿಂದ 204ನೇ ಖಂಡಗಳು … ಓತಿಕ್ಯಾತನಿಗೆ ಬೇಲಿ ಸಾಕ್ಷಿ
   (ಆ) ಸಾರ್ವಜನಿಕ ನ್ಯಾಯದ ವಿರುದ್ಧ ಮಾಡುವ ಅಪರಾಧಗಳು: 204ರಿಂದ 228ನೇ ಖಂಡಗಳು
10.ಲೈಂಗಿಕ ಅಪರಾಧಗಳು
11.ಮೋಸ, ತಗಲೂಫಿ, ದಗ 415 - 420
12.ಅಪರಾಧ ಪ್ರಕ್ರಿಯಾ ಸಂಹಿತೆ 1973

ಇದು ಪ್ರತಿಯೊಬ್ಬರ ಮನೆಯಲ್ಲಿ ಇರಬೇಕಾದ ಪುಸ್ತಕ ಮತ್ತು ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕ. ಯಾಕೆಂದರೆ “ಕಾನೂನಿನ ಅಜ್ನಾನ ಅಪರಾಧಕ್ಕೆ ಸಮರ್ಥನೆಯಾಗುವುದಿಲ್ಲ” ಎಂಬುದು ಲೋಕಮಾನ್ಯವಾದ ಸಿದ್ಧಾಂತ. ಇದನ್ನೋದಿ ಅರ್ಥ ಮಾಡಿಕೊಂಡು, ಅನುಮಾನ ಬಂದಾಗೆಲ್ಲ ಪುಸ್ತಕದಲ್ಲಿರುವ ಮಾಹಿತಿ ಪುನಃ ಪರಿಶೀಲಿಸಿ, ಕ್ರಮ ತೆಗೆದುಕೊಂಡರೆ ಹಲವಾರು ಕಾನೂನಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಕಾನೂನಿನ ಸಮಸ್ಯೆ ಎದುರಾದಾಗ, ವಕೀಲರ ಕಚೇರಿಗೆ ಹೋದರೆ ಅಲ್ಲಿ ಗಂಟೆಗಟ್ಟಲೆ ಕಾಯಬೇಕಾದ್ದು ಅನಿವಾರ್ಯ. ಅದಲ್ಲದೆ, ವಕೀಲರ ಶುಲ್ಕವೂ ಕಡಿಮೆಯೇನಿಲ್ಲ. ಈ ಪುಸ್ತಕ ಓದಿ, ಅಪರಾಧಿಕ ಕಾನೂನಿನ ಪ್ರಾಥಮಿಕ ಜ್ನಾನ ಪಡೆದುಕೊಂಡು, ಅನಂತರ ಈಗ “ಬೆರಳ ತುದಿ”ಯಲ್ಲೇ ಇಂಟರ್-ನೆಟ್‌ನಲ್ಲಿ ಲಭ್ಯವಿರುವ ಪೂರಕ ಮಾಹಿತಿ ಹಾಗೂ ಸಂಬಂಧಿತ ವ್ಯಾಜ್ಯಗಳಲ್ಲಿ ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಓದಿಕೊಂಡರೆ, ನಮ್ಮ ಹಲವಾರು ಕಾನೂನು ಸಂಬಂಧಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸಾಧ್ಯವಿದೆ. ಆದ್ದರಿಂದಲೇ ಇದು ಅಪರಾಧಿಕ ಕಾನೂನಿನ ಕೈಪಿಡಿಯಂತಿದೆ.