ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ?

ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ?

ಕವನ

ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ

ಬನ್ನ ಬಟ್ಟೆ ನಿನ್ನನರಸಿ ಎನ್ನ ದೇವನೇ
 
ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ
 
ಆ ದಿಗಂತದಾಚೆಯಲ್ಲಿ ಸೂರ್ಯ ಮುಳುಗೊ ತಾಣದಲ್ಲಿ
ಆ ವಸಂತ ಸೇರೆ ಮಾರ ನಾ ಜ್ವಲಂತ ಭಾವನೆಯಲಿ
ಆ ಮಹಾಂತ ಸಂತರಂತರಂಗದಾ ಸಮಾಧಿಯಲ್ಲಿ
ಆ ನಿತಾಂತ ದಿಗ್ದರ್ಶಿಗಳೆಲ್ಲರೊಳು ನಿರಂತರನೆ?
 
ನಿನ್ನನೆಲ್ಲಿ ಕಾಣಲಿ ನಾ ಫುಲ್ಲನಯನನೆ
 
ಪಸುರಸಿರಿಯ ಓಲಗದಲಿ ರಸದೌತಣ ನೀಡಿ ಸಿರಿಯ
ಪಸರಿಸುತ್ತಲಿರುವ ಪ್ರಕೃತಿಮಾತೆಯನಿಜ ಗರ್ಭದಲ್ಲಿ
ಕುಸುರಿಯಿಂದ ಕಲಾಕೃತಿಯ ಬೆಸೆದಿಹ ಗುಣ ಶಾಲಿಯಲ್ಲೊ 
ಕಸದಿಂದಲೆ ರಸವ ಮಾಳ್ಪ ಚತುರ ಕಲಾಕಾರನಲ್ಲೊ?
 
ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ?
 
ಬುದ್ಧಿವಂತರೋಲಗದಲಿ ಸುಳಿವ ವಾಗ್ವಿಚಾರದಲ್ಲಿ
ಸಿದ್ಧಿಪಡೆದು ಸಿದ್ಧರೋ ಪ್ರಸಿದ್ಧರಾದ ಸಾಧಕರಲಿ
ಬುದ್ಧಿಗೇಡಿಯಾದರೇನು ನಿದ್ದೆಗೆಟ್ಟು ನಿನ್ನ ಭಜಿಪ
ಪ್ರಬುದ್ಧರಲ್ಲದಾ ಮುಗ್ಧ ಭಕ್ತರ ಅನುರಕ್ತಿಯಲ್ಲಿ
 
ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ?
 
ಆ ಸಮುದ್ರದಾಳದಲ್ಲಿ ಹೊಳೆವ ರತ್ನಗರ್ಭದಲ್ಲಿ 
ಆ ಚಂದ್ರಮನರಮನೆಯಲಿ ಅಮೃತದ ರಸಧಾರೆಯಲ್ಲಿ
ಚಂದ್ರಧರನೊ ಹಂಸವೇರಿದಾ ಸರಸ್ವತೀ ಪತಿಯೊ?
ಚಂದ್ರವದನೆ ರಮೆಯು ಸೇವೆ ಗೈವ ಶೇಷಶಾಯಿಯೊ ನೀ
 
ನಿನ್ನನೆಲ್ಲಿ ಕಾಣಲಿ ನಾ ಫುಲ್ಲ ನಯನನೆ?
 
ಇಲ್ಲಿ ಎಲ್ಲರಲ್ಲು ನಿನ್ನ ಕಾಣಲಾರದೇ?
ಎಲ್ಲೆಲ್ಲೊ ಅರಸಿದೆ ನಾ ಪ್ರಫುಲ್ಲ ವದನನೆ
ಎಲ್ಲರ ಹೃನ್ಮನಗಳಲ್ಲಿ ವಾಸವಾಗಿರುವ ನಿನ್ನ
ಚೆಲ್ಲುತನದಿ ಹೊರಗೆ ಅರಸಿ ಬರಿಯ ಬವಣೆ ಪಟ್ಟೆನಲ್ಲ!
 
ನಿನ್ನನಿಲ್ಲಿ ಕಂಡೆನೀಗ ಫುಲ್ಲನಯನನೇ
 
ನಿನ್ನನಿಲ್ಲಿ ಕಂಡೆನೀಗ ಫುಲ್ಲನಯನನೇ
ಎಲ್ಲರಲ್ಲಿ ಎಲ್ಲೆಡೆಯೊಳು ಕಂಡೆ ದೇವನೇ
ವಿಶ್ವದ ಕಣಕಣಗಳಲ್ಲು ವ್ಯಾಪಿಸಿರುವೆ ನೀ
ವಿಶ್ವಾಸವಿದೆನ್ನೊಳು ನೀ ವಾಸಿಸಿರುವೆ ವಾಸುದೇವ
 
ನಿನ್ನನಿಲ್ಲಿ ಕಂಡೆನೀಗ ಫುಲ್ಲನಯನನೇ
 

Comments