ನಿನ್ನೆಡೆಗೆ ,,,

ನಿನ್ನೆಡೆಗೆ ,,,

ಬರಹ

ಬೇಕು ಬದುಕಲಿ ಸಾಕು ಅನಿಸುವಷ್ಟು ಮೌನ
ಬೇಕು ಅನಿಸುವಷ್ಟು ಮಾತು
ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ.

ಆದರೆ ಏಷ್ಟು ಜನರಿಗೆ ಸಿಗುತ್ತೆ? ಇವೆಲ್ಲಾ , ಮೌನ ಬೇಕಾದವರಿಗೆ ಮಾತು ಹೆಚ್ಚು, ಮಾತು ಬೇಕಾದವರಿಗೆ ಉಸಿರು ಗಟ್ಟಿಸುವ ಮೌನ, ಇನ್ನು ಪ್ರೀತಿ ಹಿಡಿಯೂ ಇಲ್ಲ, ಮುಡಿಯೂ ಇಲ್ಲ.
ಯಾಕೆ ಹೀಗೆ? ಮನಸ್ಸುಗಳನ್ನು ಹಿಂಡಿ ಹಿಪ್ಪೆ ಮಾಡೊ ನೆನಪುಗಳು ಅರ್ಥವಾಗದ ಭಾವನೆಗಳು. ವ್ಯರ್ಥವಾದ ಮಾತುಗಳು. ಎಲ್ಲಾ ಜೊಳ್ಳು. ಆದರೆ ನನ್ನ ಪ್ರೀತಿ ಜೊಳ್ಳಲ್ಲ ಕಣೋ ಗೆಳೆಯ ಅದರಲ್ಲಿ ಉಸಿರಿದೆ. ನಾನು ನಿನ್ನನ್ನ ಅರಿತ ಭಾವವಿದೆ. ಮುಸ್ಸಂಜೆಯಲ್ಲಿ ನಿನ್ನ ಕೊನೆಯ ಬೆರಳನ್ನು ಹಿಡಿದು ನಿನ್ನೊಂದಿಗೆ ಓಡಾಡುತ್ತಾ ಕಟ್ಟಿದ ಅದೆಷ್ಟೋ ಕನಸಿದೆ! ಹೊಸದೊಂದು ಚುಕ್ಕಿ ಆಗಸದಲ್ಲಿ ಹುಟ್ಟುವಂತೆ ಕ್ಷಣಕ್ಕೊಂದು ಕನಸು. ಅಬ್ಬಾ!! ಅಷ್ಟೊಂದು ಕನಸುಗಳನ್ನು ಕಟ್ಟಲು ನಮಗೆ ಮಾತ್ರ ಸಾಧ್ಯ. ಅಲ್ವಾ...?

ಆದರೆ ವಿಚಿತ್ರ ಏನು ಗೊತ್ತಾ? ಬೇಡ ಅಂದರೂ ಸೂರ್ಯ ಬರುತ್ತಾನೆ. ಚಂದ್ರ ನಗುತ್ತಾನೆ. ಜೊತೆಗೆ ಮತ್ತಷ್ಟು ಚುಕ್ಕಿಯೊಂದಿಗೆ ಆಗಸ ಕಂಗೊಳಿಸುತ್ತೆ!! ಆದರೆ ಆ ಚುಕ್ಕಿ ಜೊತೆ ಸ್ಪರ್ಧೆಗೆ ನಿಲ್ಲಲು ಕನಸು ಕಟ್ಟಲು ನೀನಿಲ್ಲ ಕಣೋ ನನ್ನ ಜೊತೆ. ಆಗಸದ ಬೆಳೆದಿಂಗಳೆಲ್ಲಾ ಸೋರೋಗುತ್ತಿದೆ ಅನಿಸುತ್ತೆ ಕಣೋ ನೀನಿಲ್ಲದೆ.

"ನೀನಿಲ್ಲದೆ ನನಗೇನಿದೆ?
ಮನಸಿಲ್ಲಾ ನಿನ್ನಲ್ಲೆ ನೆಲೆಯಾಗಿದೆ.
ಕನಸೆಲ್ಲಾ ಕಣ್ಣಲ್ಲೆ ಸೆರೆಯಾಗಿದೆ. ನೀನಿಲ್ಲದೆ"

ಅದಕ್ಕೆ ಅಂದು ಕೊಂಡಿದಿನಿ ಮರೆಯಬೇಕು ಅಂತ. ಅದಕ್ಕೆ ಈ ಮಲೆನಾಡಿನ ಜೋರು ಮಳೆಯಲ್ಲಿ ಛತ್ರಿ ಇಲ್ಲದೆ ನಡೆದುಕೊಂಡು ಹೋಗುತ್ತಿರುತ್ತೀನಿ ಒಬ್ಬಳೇ! ಯಾಕೆ ಅಂತ ಗೊತ್ತಿಲ್ವಾ? ಪೆದ್ದ ಕಣೋ ನೀನು. ಕಣ್ಣೀರು ಕಂಡರೆ ಎಲ್ಲರೂ ನನ್ನ ವೀಕ್ ಅಂದು ಕೊಳ್ಳೊಲ್ವಾ? ಅದಕ್ಕೆ ಕಾಲು ನೋಯೋವಷ್ಟು ದೂರ ನಡೆದು ಹೋಗಿ ಬಿಡೋಣ ಅಂದು ಕೊಂಡೆ ಹೊರಡುತ್ತೇನೆ! ಆದರೆ ನನಗೆ ಗೊತ್ತಿಲ್ಲದೆ, ಕಾಲು ನನ್ನ ಇಲ್ಲಿಂದ ಮುಂದೆ ಹೋಗೋಕೆ ಬಿಡುತ್ತಿಲ್ಲ, ಯಾಕಾ? ಇಲ್ಲೆ ಅಲ್ಲವೇನೊ ನನ್ನ ಒಲವಿನ ಸಮಾಧಿ ಕಟ್ಟಿರೋದು? ನೀನು ನನಗೆ ಹೇಳದೆ ಈ ಲೋಕ ಬಿಟ್ಟು ಹೋಗಿದ್ದು, ಕಡೆಯದಾಗಿ ನಿನ್ನ ನೋಡೋಕು , ನಾನು ಬರದೆ ಇದ್ದುದು.( ನಿಜ ಹೇಳಲಾ ನನಗೆ ನಿನ್ನ ನಗು ಮುಖ ನಾ ಮರೆಯೋಕೆ ಇಷ್ಟ ಇರಲಿಲ್ಲ , ಅದಕ್ಕೆ ಬರಲಿಲ್ಲ) ಆದರೆ ದಿನಾ ಸಂಜೆ ಇಲ್ಲಿ ಬರುತ್ತೀನಿ. ಯಾಕೆ ಗೊತ್ತಿಲ್ಲ. ನಿನ್ನ ಜೊತೆ ಮಾತಾಡಬಾರದು ಅಂದುಕೊಳ್ಳುತ್ತೀನಿ. ಆದರೆ, "ಬುದ್ದಿ ಹೇಳೋದು ಒಂದು ಮನಸ್ಸು ಮಾಡೋದು ಒಂದು" ಅಂತಾರಲ್ಲಾ ಮತ್ತೆ ಇಲ್ಲೇ ಬಂದು ಕೂರುತ್ತೇನೆ. ನೀನಾ ಮಾತುಗಾರ. ಮೂಗಿ ಅನ್ನುತ್ತಿದ್ದ ನನಗೇ ಮಾತು ಕಲಿಸಿ ಬಿಟ್ಟೆ. ಆದರೆ ನೋಡು ನಾ ಮಾತಾಡುತ್ತಿದ್ದೀನಿ. ಆದರೆ ನೀ ನನಗೆ ಮಾತು ಕಲಿಸಿ ಮೌನಿಯಾದೆ. ಯಾಕೋ ಹೀಗೆ ಮಾಡಿದೆ? ಇಷ್ಟು ಬೇಗ ನಿನಗೆ ನನ್ನ ಮಾತುಗಳು ಬೇಸರ ಆಯ್ತಾ ನಿನಗೆ?

ಆ ನಿನ್ನ ಕಡೆ ಕ್ಷಣದಲ್ಲಿ ನಿನಗೆ ನನ್ನ ನೆನಪು ಬರಲಿಲ್ಲವೇನೋ? ಬಂದಿಲ್ಲದೇ ಏನು. ಬಂದಿರುತ್ತೆ, ಕಣ್ಣಂಚು ತೇವ ಕೂಡ ಆಗಿರುತ್ತೆ. ಆ ನೋವಲ್ಲೂ ತುಟಿ ಬಿರಿಯೇ ನಕ್ಕಿರುತ್ತಿ. ನನ್ನ ನೆನಸಿ, ಅಲ್ವಾ?? ಮನಸ್ಸು ಮರುಳು ಕಣೋ ಮಾತೇ ಕೇಳೋಲ್ಲ!

ಯಾಕೋ ಈಗೀಗ ಮಾತಲ್ಲಿ ಮೊದಲಿನ ಬಿರುಸಿಲ್ಲ. ಹೇಗಿರುತ್ತೆ ಹೇಳು?? ಸಿಕ್ಕ ಸಿಕ್ಕ ಕಲ್ಲು , ಮಣ್ಣು , ಎಲೆ , ಹೂ ಗಳನ್ನೆಲ್ಲಾ ಒಳ್ಳೆ ಅಕ್ಕ ಮಹಾದೇವಿತರ ನೀವು ಖಂಡಿರೆ, ನೀವು ಖಂಡಿರೆ ಅಂತ ಕೇಳುತ್ತಿದ್ದರೆ. ಸಾರಿ ಕಣೋ ಮಾತಿಗೆ ಹೇಳಿದೆ. ಕೋಪ ಇಲ್ಲತಾನೆ? ನಿಜ ಏನು ಗೊತ್ತಾ? ನಿನದೇ ನೆನಪಿನಲ್ಲಿ ನನ್ನಲ್ಲೇ ನಾ ಕಳೆದು ಹೋಗುತ್ತಿದ್ದೀನಿ ಅದಕ್ಕೆ.
ಎನೇ ಆಗಲಿ, ನಿನ್ನ ಬಗ್ಗೆ ನನಗೆ ಹೆಮ್ಮೆ ಕಣೋ!! ಪ್ರೀತಿಗಿಂತ ದೇಶ ದೊಡ್ಡದು ಅಂತ ನೀನು ಹೋದೆ. ಬದುಕಿಗಿಂತ ಪ್ರೀತಿ ದೊಡ್ಡದು ಅಂತ ನಾನು ಹೀಗೆ ಉಳಿದೆ. ರಾಧೆ ವಿರಹಿ ಅಂತಾರಲ್ಲಾ ಹಾಗೆ. ಆದರೆ ನಾನು ರಾಧೆ ತರಾ ವಿರಹಿಯಲ್ಲ. ನಿನ್ನ ಪ್ರೀತಿಯ ಮಳೆಯಲ್ಲಿ ಸಾಕಷ್ಟು ನೆನೆದಿದ್ದೇನೆ. ಸದ್ಯ ಶೀತ ಆಗಲಿಲ್ಲ. ಇನ್ನು ಸ್ವಲ್ಪವೇ ದಿನ ನಾನೂ ನಿನ್ನೊಂದಿಗೆ ಬರುತ್ತೀನಿ. ಕಾಯುತ್ತಿರು ಹೊಸ ಕನಸುಗಳನ್ನ ಕಟ್ಟೋಣ! ಅಲ್ಲಾದರೂ ಜೊತೆಗಿರೋಣ!! ಕಾಯುತ್ತೀಯೆನೋ? ಅಥವಾ ಹೊಸ ಹುಡುಗಿ ಸಿಕ್ಕಿದ್ದಾಳೆ ಹೇಗೆ?!! ಛೇ ಸುಮ್ಮನೆ ಹೇಳಿದೆ ಬರುತ್ತೇನೆ ಕಾಯ್ತಿರು ನಿನ್ನ ನೆನಪುಗಳೊಂದಿಗೆ.

" ಹಿಡಿ ಮುಡಿಯಲಿ ಹಿಡಿಯಲಾರದಷ್ಟು ಪ್ರೀತಿ ಖಂಡಿತ ನಮ್ಮದಾಗುತ್ತೆ"

ನಾ ರಾಧೆನೇ ಆದರೆ ನಿನ್ನ ರಾಧೆ. ವಿರಹಿಯಲ್ಲದ ರಾಧೆ!!ಕುರುಡುಗತ್ತಲಿ ಅಮೃತ ಕ್ಷಣ ಕಣೋ ನಿನ್ನೊಲವು. ಒಲವು ಆ ಪದನೇ ಏಷ್ಟು ಚೆನ್ನಾಗಿದೆ ಅಲ್ವಾ?? ಕಾಯುತ್ತೀಯಾ ತಾನೆ ನನಗೊಸ್ಕರ?

ವೈಟ್ ಫಾರ್ ಮೀ