....ನಿನ್ನ ನೆನಸುತ್ತೇನೆ !
ಹರೆಯದ ದಿನಗಳಲ್ಲುಕ್ಕುವ ಭಾವಗಳಲ್ಲಿ ಪ್ರೀತಿ, ಪ್ರೇಮ, ಆಸೆ, ನಿರಾಶೆ, ವಿಷಾದ, ಕಲ್ಪನೆ, ನೋವು, ಕೆಚ್ಚು, ರೊಚ್ಚು - ಹೀಗೆ ಎಲ್ಲವು ಕಲಸಿಹೋದ ಗೊಂದಲದ ಭಾವಗಳ ಕಾಡುವಿಕೆಯೆ ಮತ್ತಷ್ಟು ಗೊಂದಲದಾಳಕ್ಕಿಳಿಸುವುದು ಸಹಜವಾಗಿ ಕಾಡುವ ಪ್ರಕ್ರಿಯೆ. ಯಾವುದು ಹೆಚ್ಚು, ಯಾವುದು ಕಡಿಮೆ ಎನ್ನುವ ತಾಕಲಾಟಕ್ಕಿಂತ ಅವೆಲ್ಲದರ ಸಂಕಲಿತ ಅಸ್ಪಷ್ಟತೆಯೆ ಮುದ ನೀಡುವ ವಿಚಿತ್ರ ಸ್ಥಿತಿ. ಅಂತಹ ಮನಸ್ಥಿತಿಯಲ್ಲಿ ರಚಿಸಿದ್ದ ಒಂದು ಕವನ ೨೭.ಜನವರಿ.೧೯೯೧ ರಲ್ಲಿ. ಅಂದ ಹಾಗೆ - ಇದು ಬರೆದ ಹಿನ್ನಲೆಯಲ್ಲಿ 'ಹಳೆಯ' ಬುಷ್ ಮತ್ತು ಸದ್ದಾಂಗಳ ಕದನ ಸದ್ದು ಮಾಡುತ್ತಿತ್ತು - ಹೀಗಾಗಿ ಆ ಪೆಟ್ರಿಯಾಟ್, ಸ್ಕಡ್ಗಳ ಹೆಸರು ಆ ಗಳಿಗೆಗಳನ್ನು ನೆನಪಿಸಬಹುದು. ಅದೇನೆ ಇದ್ದರೂ, ಕವನದಲ್ಲಿ ಅನುರಣಿತವಾಗುವ ಭಾವ ಈಗಲೂ ಪ್ರಸ್ತುತವೆಂದೆ ನನ್ನ ಭಾವನೆ. ಇಷ್ಟವಾದೀತೆಂದು ಆಶಯ :-)
.....ನಿನ್ನ ನೆನಸುತ್ತೇನೆ !
___________________________
ಇಕ್ಕೆಳಗಳಲೂ ಬೆಳೆದು ನಿಂತ ಸಾಲು ಮರ
ನೆಲದ ತುಂಬಾ ನೆರಳಿನ ಚಿತ್ತಾರ
ತೀಡಿ ಬರುವ ತಂಗಾಳಿಯೊಡನೆ
ನಿನ್ನ ನಗೆಯ ನೆನಪಾಗುತ್ತದೆ -
ಅಕಾಳದಲಿ ಅರಳಿದ ಗುಲ್ ಮೊಹರನಂತೆ
ಈ ಸದ್ದಾಮ್, ಬುಷ್ಗಳ ಹುಚ್ಚಾಟದ ನಡುವೆಯೂ
ಪ್ರೀತಿ ಗುಲಾಬಿಯಂತೆ ನಕ್ಕಾಗ
- ನಿನ್ನ ನೆನಸುತ್ತೇನೆ! || ೦೧ ||
ಒಮ್ಮೊಮ್ಮೆ ಮನಸಿನ ಅಂತರ್ಯುದ್ಧ
ನಿನ್ನ ಬಿರುಮಾತಿನ 'ಸ್ಕಡ್' ಧಾಳಿ..
ಬತ್ತಳಿಕೆಯ 'ಪೆಟ್ರಿಯಾಟ್'
ನಕ್ಕು ಸುಮ್ಮನಾಗುತ್ತದೆ :-)
ಅಪ್ಪಳಿಸಿದ ಹೊತ್ತು ಆಘಾತ, ಚೀತ್ಕಾರ...
ನೀರ ಸೇರಿ ಮಡುಗಟ್ಟಿದ ತೈಲದಂತೆ ವೇದನೆ :-(
ನೋವೆಲ್ಲ ಇರುಳಾಗಿ ಕಪ್ಪು ತೆರೆ ಮುಸುಕಿದಾಗ
- ನಿನ್ನ ನೆನಸುತ್ತೇನೆ! || ೦೨ ||
ಎಲ್ಲಿ ಬಚ್ಚಿಡಲಿ ನಿನ್ನ
ಈ ಪುಟ್ಟ ಗ್ರಹದಲ್ಲಿ
ಯಾವ ಬಾಂಬಿನ ಕಿಡಿಯು ಸೋಕದಂತೆ?
ನಮ್ಮ ಪ್ರೇಮಕ್ಕು ಬೇಕಲ್ಲ
ಹಾಳು ಪೆಟ್ರೋಲು-ಡಿಸೇಲ್
ಅನಿವಾರ್ಯದಾ ಬದುಕು ಹೋಗುವುದೆಲ್ಲಿ?
ಭವಿಷ್ಯದ ಅಸ್ಪಷ್ಟತೆ ಭಯ ಹುಟ್ಟಿಸಿದಾಗ
- ನಿನ್ನ ನೆನಸುತ್ತೇನೆ! || ೦೩ ||
ನಾನೇ ನೀನಾಗುವಾಸೆ
ನಿನ್ನ ಬೇರಾಗುವ ಬಯಕೆ
ಅನಂತ ವಿಶ್ವಕ್ಕೆ, ಬಸಿರಾಗುವ ಉತ್ಸಾಹ..
ಅಖಂಡ ಬ್ರಹ್ಮಾಂಡಕೆ ಉಸಿರಾಗಿ ಪ್ರತ್ಯಕ್ಷ
ಎಷ್ಟು ತಡೆ, ಆಕ್ರೋಶ, ಏನು ಬೇಕರಿಯದ ಗೊಂದಲ
ಹೊಟ್ಟೆ ಚೀಲವ ಹರಿದು ಮರಿ ಹೊತ್ತ ಕಾಂಗರೂ
ಕಣ್ಮುಂದೆ ಸುಳಿದು ಮಡಿಲಲಿ ಮನಬಿಚ್ಚಿ ಅಳುವಂತಾಗಿ
- ನಿನ್ನ ನೆನಸುತ್ತೇನೆ! || ೦೪ ||
--------------------------------------------------------------------------------
ನಾಗೇಶ ಮೈಸೂರು, ದಿನಾಂಕ : ೨೭.ಜನವರಿ.೧೯೯೧ ,ಬೆಂಗಳೂರು
---------------------------------------------------------------------------------
Comments
ಉ: ....ನಿನ್ನ ನೆನಸುತ್ತೇನೆ !
ಉ: ....ನಿನ್ನ ನೆನಸುತ್ತೇನೆ !
In reply to ಉ: ....ನಿನ್ನ ನೆನಸುತ್ತೇನೆ ! by partha1059
ಉ: ....ನಿನ್ನ ನೆನಸುತ್ತೇನೆ !
In reply to ಉ: ....ನಿನ್ನ ನೆನಸುತ್ತೇನೆ ! by partha1059
ಉ: ....ನಿನ್ನ ನೆನಸುತ್ತೇನೆ !