ನಿಮಗೆ ಕನ್ನಡ ಬರುತ್ತಾ?
(ಈ ಲೇಖನದ ಮೂಲ ಇಂಗ್ಲೀಶ್ ನಲ್ಲಿರುವುದರಿಂದ ಇದು ಪರಭಾಷೆಯವರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ಅಥವಾ ಕನ್ನಡ ತಾಯಿನುಡಿಯಾದರೂ ಇಂಗ್ಲೀಶ್ ನಲ್ಲಿಯೇ ಓದಬಯಸುವವರಿಗೆಂದೇ ಬರೆಯಲಾಗಿದೆ ಎಂದು ಭಾವಿಸಬಹುದು. ಇದನ್ನು ನನ್ನ ಗೆಳೆಯನೊಬ್ಬ ಇ-ಮೇಲ್ ಮಾಡಿದ್ದರಿಂದಾಗಿ ಯಾರು ಬರೆದಿರುವುದು ಎಂದು ತಿಳೀದಿಲ್ಲ. ಅದು ಯಾರಾದರೂ ಆಗಿರಲಿ, ಆ ವ್ಯಕ್ತಿಯ ಕನ್ನಡ ಪ್ರೇಮವನ್ನು ನಿಜಕ್ಕೂ ಮೆಚ್ಚಬೇಕು.ನಮ್ಮ ತಾಯಿಭಾಷೆಯನ್ನು ಮರೆತರೆ, ನಮ್ಮ ತಾಯಿಯನ್ನೇ ಮರೆತಂತೆ. "ಕನ್ನಡ ಉಳಿಸಿ, ಬೆಳೆಸಿ" ಎನ್ನುವ ಕೂಗು ಈಗ 'ಅರಣ್ಯ ರೋದನ'ವಾಗಿಬಿಟ್ಟಿದೆ. ಒಂದು ಸಮಾಧಾನದ ಸಂಗತಿಯೆಂದರೆ, ಕನ್ನಡ ಹಾಗೂ ಪರಭಾಷಾ ಸಂಘರ್ಷ ಹೆಚ್ಚಾಗಿರುವ ಐಟಿ ವಲಯದ ಜನರು ಇತ್ತೀಚೆಗೆ ಹೆಚ್ಚಾಗಿ ಕನ್ನಡದಲ್ಲಿಯೇ ಬ್ಲಾಗ್ ಮುಂತಾದವುಗಳನ್ನು ಬರೆಯುತ್ತಿರುವುದು. ಅವರ ಕನ್ನಡ ಕಳಕಳಿ ಕೂಡ ಪ್ರಶಂಸನೀಯ.
ಇಂಗ್ಲೀಶ್ ಬಾರದ ಅಥವಾ ಕನ್ನಡದಲ್ಲಿಯೇ ಓದುವುದಕ್ಕೆ ಬಯಸುವವ "ನಮ್ಮ" ಕನ್ನಡಿಗರಿಗಾಗಿ ಈ ಇಂಗ್ಲೀಶ್ ಲೇಖನವನ್ನು ಕನ್ನಡೀಕರಿಸಿ, ಸ್ವಲ್ಪ ಮಟ್ಟಿಗೆ "ನನ್ನತನ"ವನ್ನು ಸೇರಿಸಿ ಪ್ರಕಟಿಸುತ್ತಿದ್ದೇನೆ. ಇಷ್ಟವಾದಲ್ಲಿ ಬರೆದು ತಿಳಿಸುತ್ತೀರಲ್ಲ.)
"ಕನ್ನಡ ಬರುತ್ತಾ?", ಎನ್ನುವ ಮಾತನ್ನು ಬೆಂಗಳೂರಿನಲ್ಲಿರುವ ಬಹಳಷ್ಟು ಜನ ಕೇಳಿರುತ್ತೀರಿ. ಆದರೆ, ಹಾಗಂದ್ರೆ ಏನು?
ಸಿಲಿಕಾನ್ ಸಿಟಿ, ಭಾರತದ ಐಟಿ ರಾಜಧಾನಿ ಎಂದೆಲ್ಲಾ ಕರೆಸಿಕೊಳ್ಳುವ 'ನಮ್ಮ' ಬೆಂಗಳೂರು, ಹೆಚ್ಚು ಕಮ್ಮಿ ಎಲ್ಲಾ ಥರದ ಜನರಿಗೆ ತನ್ನ ಬಾಗಿಲನ್ನು ತೆರೆಯುವುದರ ಮೂಲಕ, "ಕಾಸ್ಮೋಪಾಲಿಟನ್ ಸಂಸ್ಕೃತಿ"ಯನ್ನು ಹುಟ್ಟು ಹಾಕುವುದಕ್ಕೂ ಕಾರಣವಾಗಿದೆ.
ಇತ್ತೀಚಿನ ಜನಗಣತಿಯೊಂದರ ಪ್ರಕಾರ, 'ನಮ್ಮ' ಬೆಂಗಳೂರಿನಲ್ಲಿರುವುದು ಕೇವಲ ಶೇ.47ರಷ್ಟು ಜನ ಮಾತ್ರ ಮೂಲನಿವಾಸಿಗಳು. ನಗರದ ಜೀವನಶೈಲಿ ಎಷ್ಟರ ಮಟ್ಟಿಗೆ ಬದಲಾಗಿದೆ ಅಂದ್ರೆ, 'ನಮ್ಮ' ಎಂಟಿಆರ್ ಗಳನ್ನು ಪೀಡ್ಜಾ ಕಾರ್ನರ್ ಗಳು, ವಿದ್ಯಾರ್ಥಿ ಭವನವನ್ನು ಶೋಕಿಯಾಗಿ ಕಾಣೋ ಈಟ್-ಔಟ್(ಹೊರಗೆ ತಿನ್ನಿ) ಗಳು ಹಾಗೂ ಮಹಾಲಕ್ಷ್ಮಿ ವೈನ್ ಶಾಪ್ಎಣ್ಣೆ ಅಂಗಡಿಗಳನ್ನು ಅದ್ದೂರಿಯಾಗಿ ಕಾಣೋ ಪಬ್ ಗಳು ಆಕ್ರಮಿಸಿಕೊಂಡುಬಿಟ್ಟಿವೆ.
"ಬದಲಾವಣೆ ಅನಿವಾರ್ಯ" ಅನ್ನೋದು ಬಿಇಎಂಎಲ್, ಎಚ್ಎಎಲ್ ಹಾಗೂ ಬಿಎಚ್ಇಎಲ್ ನಿಂದ ಇನ್ಫೋಸಿಸ್, ವಿಪ್ರೊ, ಐಬಿಎಂ ಮುಂತಾದವುಗಳಿಗೆ ಗಮನ ಸರಿದಾಗಲೇ ತಿಳಿದುಹೋಯ್ತು.
ಈಗ ಬೆಂಗಳೂರು ವಿಶ್ವದ ಭೂಪಟದಲ್ಲಿ ಹೊಸ ಸ್ಥಾನವನ್ನು ಪಡೆದುಕೊಂಡಿದೆ. ಹಿಂದೆಯೆಲ್ಲಾ ಭಾನುವಾರದ ಸಂಜೆ ಎಂದರೆ, ಕಬ್ಬನ್ ಪಾರ್ಕ್, ಲಾಲ್ ಬಾಗ್ ನಲ್ಲಿ ಅಡ್ಡಾಡುತ್ತ ಹೊರಗೆ ಎಂಟಿಆರ್ ನಲ್ಲಿ ರವೆ ಇಡ್ಲಿ, ಕಾಫಿ ಸವಿಯುತ್ತ ಇದ್ದದ್ದು, ಸಂತೋಶ್ ನಲ್ಲೋ, ಸೆಂಟ್ರಲ್ ನಲ್ಲೋ ಅಣ್ಣಾವ್ರ ಫಿಲ್ಮ್ ನೋಡಿಕೊಂಡು ಬರೋದು ರೊಮ್ಯಾಂಟಿಕ್ ಅನುಭವವನ್ನು ನೀಡುತ್ತಿತ್ತು. ಆದರೆ ಇಂದು, ಟ್ರಾಫಿಕ್, ಕೆಲಸದೊತ್ತಡ, ಆಯಾಸಗಳಲ್ಲಿ ಮುಳುಗಿಹೋಗಿದೆ. ಗುಂಡು ತುಂಡು ಇಲ್ಲದ ಶನಿವಾರದ ರಾತ್ರಿ, ಹತ್ತಿರದ ಸ್ಪಾ ಅಥವಾ ಹೆಲ್ತ್ ಕ್ಲಿನಿಕ್ ಗೆ ಭೇಟಿ ಕೊಡದಿರೋದು ಅನ್ ಕಾಮನ್ ಅನಿಸಿಕೊಂಡು ಬಿಟ್ಟಿದೆ. ಅಂದು ಮನಸ್ಸು 'ಗಾಂಧೀ ಬಜಾರು' ಅಂಥ ಪದ್ಯ ಬರೆದಿದ್ರು 'ನಮ್ಮ' ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರು. ಇಂದು ಆ 'ಗಾಂಧೀ ಬಜಾರು' ಹವಾನಿಯಂತ್ರಿತ ಸೂಪರ್ ಮಾರ್ಕೆಟ್ ಗಳಿಂದ ಆವೃತವಾಗಿದೆ. ಮೆಜೆಸ್ಟಿಕ್ ವೈವಿಧ್ಯಮಯ, ಅಲ್ಟ್ರಾ ಮಾಡ್ರನ್ ಬ್ರಿಗೇಡ್ ರೋಡ್ ನಿಂದ ಆಕ್ರಮಿಸಲ್ಪಟ್ಟಿದೆ. 'ಶ್ರೀ ಕಾವೇರಿ ಕಾಫಿ ಜಾಯಿಂಟ್' 'ಕಾಫಿ ಡೇ' ಗಳಾಗಿ ಮಾರ್ಪಟ್ಟಿದ್ದರೆ, ಭಾಗ್ಯಲಕ್ಷ್ಮಿ ಕಾಫಿ ಅಡ್ಡಾ' ಬ್ಯಾರಿಷ್ಟ ಆಗಿಬಿಟ್ಟಿದೆ. ಜಾಗತೀಕರಣ ಹಾಗೂ ರೀಟೇಲ್ ಮಾರುಕಟ್ಟೆಯ ಗಾಳಿಯಿಂದಾಗಿ ಈ ನಗರ ಇನ್ನೂ ಏನೇನು ಬದಲಾವಣೆ ಕಾಣಲಿದೆಯೋ ಆ 'ಕೆಂಪೇಗೌಡ'ರೇ ಬಲ್ಲರು
ಇವೆಲ್ಲವೂ ನಮ್ಮ ಭಾಷೆಯನ್ನು ಬದಲಿಸಿವೆಯೇ?
ದೇಶದ ಐಟಿ ರಾಜಧಾನಿಯೆಂದೇ ಕರೆಯಬಹುದಾದ, ಸಿಲಿಕಾನ್ ನಗರ ಬೆಂಗಳೂರಿನ ಸ್ಥಳೀಯ ಭಾಶೆಯಾಗಿರುವ ಕನ್ನಡ, 7 ಜ್ಞಾನಪೀಠಗಳನ್ನು ಪಡೆದಿರುವ, ಸುಮಾರು 2,500 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಭಾರತದ ಮೂರು ಪ್ರಾಚೀನ ಭಾಶೆಗಳಲ್ಲಿ ಒಂದು. 1,900 ವರ್ಷಗಳಷ್ಟು ಹಿಂದೆಯೇ ಕನ್ನಡ ತನ್ನ ವರ್ಣಮಾಲೆಯನ್ನು ರೂಪಿಸಿಕೊಂಡದ್ದು ಹೆಮ್ಮೆಯ ವಿಷಯ. ಆದರೆ, ಬೆಂಗಳೂರಿನಲ್ಲಿ ಈಗ ಎಷ್ಟು ಜನ ಕನ್ನಡ ಬಳಸುತ್ತಾರೆ ಅನ್ನೋದು ಯಕ್ಷಪ್ರಶ್ನೆ. ಅಂಕಿಅಂಶಗಳು ಗಾಬರಿ ಹುಟ್ಟಿಸುತ್ತವೆ. ರಾಜ್ಯದ ರಾಜಧಾನಿಯಲ್ಲಿ ಇಂದು ಕೇವಲ ಶೇ.37ರಷ್ಟು ಮಂದಿ ಮಾತ್ರ ಕನ್ನಡ ಬಳಸುತ್ತಾರೆ. ಇನ್ನುಳಿದವರಿಗೆ ಕೇವಲ "ಕನ್ನಡ ಬರುತ್ತಾ?"
ಯಾವುದೇ ಕನ್ನಡಿಗನಾಗಲಿ ತಾನು ಇನ್ನೊಬ್ಬರೊಂದಿಗೆ ಮಾತನಾಡುವಾಗ ಮೊದಲು ಕೇಳುವ ಪ್ರಶ್ನೆ ನಿಮಗೆ "ಕನ್ನಡ ಬರುತ್ತಾ?".
'ನೀವು ಬೆಂಗಳೂರಿನಲ್ಲಿ ಯಾರನ್ನಾದರೂ ವಿಳಾಸ ಕೇಳ್ಬೇಕಾ? ಅಥವಾ ಪ್ರಶ್ನೆಯೊಂದಕ್ಕೆ ಉತ್ತರಿಸಬೇಕೆಂದರೆ, ಹಿಂದಿ ಬಿಟ್ಟರೆ ಇಂಗ್ಲೀಶ್ ಅತ್ಯಂತ ಬಳಕೆಯಾಗುವ ಭಾಶೆ. ಐಟಿ ಕಂಪನಿಯಲ್ಲಿನ ಇಬ್ಬರು ಕನ್ನಡಿಗರು ಎಲ್ಲರಿಗೂ ಅರ್ಥವಾಗುವ ಭಾಶೆಯನ್ನು ಬಳಸುತ್ತಾರೆಂಬುದು ಜನಪ್ರಿಯ ಸಂಗತಿ.
ರಸ್ತೆ ಬದಿಯಲ್ಲಿ ಕೂರುವ ಮಾರಾಟಗಾರರು, ಅಂಗಡಿ ಮಾಲೀಕರು ಎಲ್ಲರಿಗೂ ಈ ಗರ ಬಡಿದಿದ್ದು, ಬೆಂಗಳೂರಿನಲ್ಲಿ ಯಾವುದೇ ಅಂಗಡಿಗೆ ಕಾಲಿರಿಸಿ, "ಕನ್ನಡ ಬರುತ್ತಾ?" ಅನ್ನೋ ಪ್ರಶ್ನೆ ಥಟ್ಟನೆ ಎದುರಾಗುತ್ತದೆ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ಸಂಭಾಷಣೆಯು ಕನ್ನಡೇತರ ಭಾಶೆಯಲ್ಲಿ ನಡೆಯುತ್ತದೆ. ಜನ ಕನ್ನಡದಲ್ಲಿ ಮಾತನಾಡುವ ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಟ್ಟಿದ್ದಾರೇನೋ ಅನಿಸುತ್ತದೆ. ಇದಕ್ಕಿಂತ ಹೆಚ್ಚಾಗಿ, ಎಂಜಿ ರೋಡಿನಲ್ಲಿ, ಕೋರಮಂಗಲದ ಬೀದಿಗಳಲ್ಲಿ ಕನ್ನಡ ಮಾತನಾಡುವುದು 'ಕೀಳು' ಎನ್ನುವ ಭಾವನೆಯನ್ನು ಜನ ಬಳಸಿಕೊಂಡುಬಿಟ್ಟಿದ್ದಾರೆ.
ನಗರದ ಶಾಪಿಂಗ್ ಮಾಲ್ ಗಳಂತೂ ಕನ್ನಡಕ್ಕೆ ನಿಷೇಧ ಹೇರಿದ್ದಾವೇನೋ ಅನಿಸುವಷ್ಟರ ಮಟ್ಟಿಗೆ ಜನ ಕನ್ನಡವನ್ನು ತಿರಸ್ಕರಿಸಿದ್ದಾರೆ. ಮಾತನಾಡುವ ಮೊದಲು, ಕೇಳಿಸಿಕೊಳ್ಳುವ ವ್ಯಕ್ತಿಗೆ ಆ ಭಾಶೆ ಬರುತ್ತಾ ಅಂಥ ಖಾತ್ರಿ ಪಡಿಸಿಕೊಳ್ಳಬೇಕಾದಂತಹ ಪರಿಸ್ಥಿತಿ ಬಂದೊದಗಿದೆ. ಬೆಂಗಳೂರಿನ ಝಗಝೈಸುವ ಪಬ್ ನಲ್ಲಿ ಯಾರಾದ್ರೂ 'ಒಂದು ಗ್ಲಾಸ್ ಬಿಯರ್ ಕೊಡ್ತೀರಾ" ಅನ್ನೋದು ಅವಮಾನಕರ. "ಸ್ವಲ್ಪ ಮೆನು ಕಾರ್ಡ್ ಕೊಡ್ತೀರಾ" ಅನ್ನೋದು ಹೋಗಿ ಈಗ "Can I have the menu please?" ಅನ್ನೋದು ಚಾಲ್ತಿಯಲ್ಲಿದೆ.
ವಸ್ತುನಿಷ್ಟ ವರದಿ ನೀಡೋದಾದ್ರೆ, ಮರಾಠಿ ಈಗಲೂ ಮುಂಬಯಿಯ ಬೃಹತ್ ಹಾಗೂ ಸಾಮಾನ್ಯವಾಗಿ ಅತ್ಯಂತ ಹೆಚ್ಚು ಬಳಕೆಯಾಗುವ ಭಾಷೆಯಾಗಿದೆ. ಆಶ್ಚರ್ಯದ ಸಂಗತಿ ಎಂದರೆ, ಮುಂಬಯಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಪ್ರದೇಶಗಳಿಂದ ಬಂದ ಜನರನ್ನು ಹೊಂದಿದೆ. ಇನ್ನು ಮತ್ತೊಂದು ಮಹಾನಗರ ಚೆನ್ನೈನಲ್ಲಿ ನೀವು ಹೆಚ್ಚು ಕಾಲ ಉಳಿಯಬೇಕಾದರೆ ಒಂದು ನಿಮಗೆ ತಮಿಳು ಗೊತ್ತಿರಬೇಕು ಇಲ್ಲಾ ನೀವು ರಜನೀಕಾಂತ್ ಅಭಿಮಾನಿಯಾಗಿರಬೇಕು. ಮತ್ತೊಂದು ಐಟಿ ಹಬ್ ಹೈದರಾಬಾದ್ ನಲ್ಲಿ ತೆಲುಗು ಎನ್ನುವುದು ಆಚರಣೆಯಲ್ಲಿರುವ ಸಂಪ್ರದಾಯವಾಗಿಬಿಟ್ಟಿದೆ. ಇನ್ನು ಮಲ್ಲುಗಳು(ಮಲಯಾಳಿಗಳು) ವಿಶ್ವದ ಯಾವುದೇ ಭಾಗದಲ್ಲಿರಲಿ, ಮಲಯಾಳಂ ಅವರ ರಕ್ತದಲ್ಲಿ ಹರಿಯುತ್ತದೆ. ಆದರೆ, ಕನ್ನಡದ ವಿಷಯಕ್ಕೆ ಬಂದರೆ ಮಾತ್ರ, ಅದು ಯಾವಾಗಲೂ "ಕನ್ನಡ ಬರುತ್ತಾ", ಅದರ ನಂತರ "ನಮಸ್ಕಾರ"...
"ಸುವರ್ಣ ಕರ್ನಾಟಕ" ಎಂದು ರಾಜ್ಯಾದ್ಯಂತ ಘೋಷಿಸಿರುವ ಸಂದರ್ಭದಲ್ಲಿ ಹಾಗೂ ನವೆಂಬರ್ ನಲ್ಲಿ "ಕನ್ನಡ ರಾಜ್ಯೋತ್ಸವ" ಆಚರಿಸುವ ಸಂದರ್ಭದಲ್ಲಿ ಮಾತ್ರ "ಕನ್ನಡ" ಬಳಕೆಯಾಗಿ ಉಳಿದ ಸಮಯ "ಎನ್ನಡ" ಎನ್ನುವಂತಾಗದೆ, ಕರ್ನಾಟಕದ ಗಾಳಿ, ನೀರು, ಮಣ್ಣು ಬಳಸುವ ಪ್ರತಿಯೊಬ್ಬರಿಗೂ "ಕನ್ನಡ" ಉಸಿರಾಗಬೇಕಲ್ಲವೇ? ಬನ್ನಿ ಕನ್ನಡಿಗರೇ, ನಾವೆಲ್ಲರೂ ಈ ನಿರಭಿಮಾನ, ದುರಭಿಮಾನಗಳಿಂದ ಹೊರಬಂದು "ಕನ್ನಡ ಡಿಂಡಿಮ" ಬಾರಿಸುತ್ತ, "ಕನ್ನಡ ಬಾವುಟ" ಹಾರಿಸೋಣ.
ಸಿರಿಗನ್ನಡಂ ಗೆಲ್ಗೆ
ಸೂಚನೆ:
ಸಂಪದ ಓದುಗರಿಗೆಲ್ಲರಿಗೂ ನನ್ನ ಆತ್ಮೀಯ ನಮಸ್ಕಾರ. ನನ್ನ ಲೇಖನಗಳು ಹಿಂದೆಂದೂ ಕಾಣದಷ್ಟು ಓದುಗರನ್ನು, ಪ್ರತಿಕ್ರಿಯೆಗಳನ್ನು ಪಡೆಯುವಂತೆ ಮಾಡಿದ ಈ ನನ್ನ ಕನ್ನಡ ಅನುವಾದ ಲೇಖನದ ಮೂಲ(ಇಂಗ್ಲೀಶ್) ಲೇಖಕರಾದ ಶ್ರೀ ಅಭಿಷೇಕ್ ಅಯ್ಯಂಗಾರ್ ಅವರನ್ನು ನಿಮಗೆಲ್ಲಾ ಪರಿಚಯಿಸಲು ಸಂತೋಷವಾಗುತ್ತದೆ. ಓದುಗರಾದ ಶ್ರೀಸಂಗನಗೌಡರು ಅವರ ಇಂಗ್ಲೀಶ್ ಲೇಖನದ ಕೊಂಡಿಯನ್ನು ನನಗೆ ಕಳುಹಿಸಿದಾಗ ಅವರಿಗೆ ಬರೆದು ಅವರ ಲೇಖನವನ್ನು ಹೀಗೆ ಕನ್ನಡಕ್ಕೆ ಅನುವಾದಿಸಿರುವ ಕುರಿತು ತಿಳಿಸಿದೆ. ಅದಕ್ಕೆ ತಾವಾಗಿಯೇ ನನಗೆ ಕರೆ ಮಾಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಅವರು, ಕನ್ನಡಿಗರೆಲ್ಲರೂ ಕನ್ನಡದ ಕೆಲಸವನ್ನು ಹೆಚ್ಚೆಚ್ಚು ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅವರು, ಕನ್ನಡ ನಾಟಕಗಳು, ಬರಹ ಇನ್ನೂ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಇಂಗ್ಲೀಶ್ ಬ್ಲಾಗಿನ ಕೊಂಡಿಯನ್ನು ಇಲ್ಲಿ ಕಾಣಬಹುದು.
http://thoughtsunparalleled.wordpress.com/2008/06/27/kannadabarutha/