ನಿಮ್ಮ ಊಟದ ಬಟ್ಟಲಿನಲ್ಲಿ ಸೌತೆಕಾಯಿ ಇರಲಿ !

ಬೇಸಿಗೆಯ ಕಾಲಕ್ಕೆ ಕಾಲಿಡುವ ಮೊದಲೇ ಭೀಕರವಾದ ಸೆಖೆಗೆ ಜನರು ಬಸವಳಿದು ಹೋಗುತ್ತಿದ್ದಾರೆ. ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ೪೦ ಡಿಗ್ರಿಗೆ ತಾಪಮಾನ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ನಾವು ನಮ್ಮ ದೇಹದ ತಾಪಮಾನವನ್ನು ನಿಯಂತ್ರಣದಲ್ಲಿಡಲು ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ನಿರ್ಜಲೀಕರಣದ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಯಥೇಚ್ಛವಾಗಿ ನೀರನ್ನು ಕುಡಿಯಬೇಕು. ಕಾರ್ಬೋನೇಟಡ್ ಪಾನೀಯಗಳನ್ನು ಕುಡಿದು ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಿಸುವುದರ ಬದಲು ಮಜ್ಜಿಗೆ, ಲಿಂಬೆ ರಸ, ಎಳನೀರು, ಕಬ್ಬಿನ ರಸದ ಸೇವನೆ ಒಳ್ಳೆಯದು.
ಬೇಸಿಗೆಕಾಲದಲ್ಲಿ ನಾವು ನಮ್ಮ ಊಟದ ಜೊತೆಗೆ ಸೌತೆಕಾಯಿಯನ್ನು ಬಳಸುವುದು ಬಹಳ ಉತ್ತಮ ಅಭ್ಯಾಸ. ಏಕೆಂದರೆ ಸೌತೆಕಾಯಿಯಲ್ಲಿ ಬಹಳ ನೀರಿನ ಪ್ರಮಾಣವಿದೆ. ಅದೇ ರೀತಿ ಕಲ್ಲಂಗಡಿ ಹಣ್ಣಿನಲ್ಲೂ ನೀರಿನ ಅಂಶ ಅಧಿಕ. ಸೌತೆಕಾಯಿ ನಮ್ಮ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಂಡು ಬರುವ ತರಕಾರಿ. ಅರ್ಜೆಂಟ್ ಗೆ ಸಲಾಡ್, ಸ್ವಲ್ಪ ಸಮಯ ಇದ್ದರೆ ಸೌತೆಕಾಯಿ ಚಟ್ನಿ ಎಲ್ಲವೂ ಆರೋಗ್ಯಕ್ಕೆ ಹಿತಕರ. ಸೌತೆಕಾಯಿಯಲ್ಲಿ ಯುರೋಪಿಯನ್ ಸೌತೆಕಾಯಿ, ಸ್ಥಳೀಯವಾಗಿ ಸಿಗುವ ಸಣ್ಣ ಗಾತ್ರದ ಸೌತೆಕಾಯಿ, ಬಿಳಿ ಬಣ್ಣದ ಸೌತೆಕಾಯಿ, ಹಾವಿನಂತೆ ಇರುವ ಕಾಕಡಿ ಹೆಸರಿನ ಸೌತೆಕಾಯಿ ಹೀಗೆ ಹಲವಾರು ಬಗೆಯ ಸೌತೆಕಾಯಿಗಳು ಮಾರುಕಟ್ಟೆಯಲ್ಲಿ ಲಭ್ಯ. ಸ್ಥಳೀಯ ಸೌತೆಕಾಯಿ ತಿನ್ನಲು ರುಚಿಕರ. ಆದರೆ ಆರೋಗ್ಯದ ವಿಷಯಕ್ಕೆ ಬಂದರೆ ಎಲ್ಲವೂ ಉತ್ತಮ.
ಸೌತೆಕಾಯಿಯಲ್ಲಿ ಆರೋಗ್ಯಕಾರಿ ಅಂಶಗಳು ಬಹಳ ಇವೆ. ನಮ್ಮ ಪ್ರತಿ ನಿತ್ಯದ ಆಹಾರದಲ್ಲಿ ಇದನ್ನು ಬಳಸುವುದು ಉತ್ತಮ. ಇದರಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಸಮೃದ್ಧವಾದ ವಿಟಮಿನ್ ಗಳು ಇವೆ. ಇದರಲ್ಲಿ ಅಡಕವಾಗಿರುವ ಖನಿಜಾಂಶಗಳು ತೂಕ ಇಳಿಕೆಗೆ ಸಹಕಾರಿಯಾಗಿವೆ. ನೀವು ಸೌತೆಕಾಯಿಯನ್ನು ಉಪ್ಪಿನಕಾಯಿ, ಸಲಾಡ್, ಸ್ಯಾಂಡ್ ವಿಚ್, ಸೌತೆಕಾಯಿ ಜ್ಯೂಸ್, ಸೌತೆಕಾಯಿ ರಾಯಿತ, ಚಟ್ನಿ, ತಂಬುಳಿ ಮೊದಲಾದ ರೂಪದಲ್ಲಿ ಸೇವಿಸಬಹುದು.
ಸೌತೆಕಾಯಿಯಲ್ಲಿ ನೀರಿನ ಪ್ರಮಾಣ ಅಧಿಕವಾಗಿರುವುದರಿಂದ ಇದರ ಸೇವನೆಯಿಂದ ನಿಮ್ಮ ದೇಹದಲ್ಲಿ ಉಂಟಾಗುವ ನಿರ್ಜಲೀಕರಣದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಬಾಯಾರಿಕೆಯನ್ನು ನೀಗಿಸುತ್ತದೆ. ದೀರ್ಘ ಸಮಯದ ತನಕ ದೇಹದ ಉಷ್ಣಾಂಶವನ್ನು ನಿಯಂತ್ರಿಸಿ, ದೇಹದಲ್ಲಿ ನೀರಿನಾಂಶವನ್ನು ಕಾಪಾಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಮಿಶ್ರಿತ ಎನರ್ಜಿ ಡ್ರಿಂಕ್ಸ್ ಗಳಿಗಿಂತ ನೂರು ಪಟ್ಟು ಸೌತೆಕಾಯಿ ಉತ್ತಮ.
ಸೌತೆಕಾಯಿಯಲ್ಲಿ ಕ್ಯಾಲೊರಿಗಳ ಸಂಖ್ಯೆ ಕಡಿಮೆ, ಪೋಷಕಾಂಶಗಳ ಪ್ರಮಾಣ ಅಧಿಕ. ಈ ಕಾರಣದಿಂದ ಇದರ ಸೇವನೆಯಿಂದ ನಿಮ್ಮ ದೇಹದಲ್ಲಿ ಬೊಜ್ಜು ನಿಯಂತ್ರಣಕ್ಕೆ ಬರುತ್ತದೆ. ಹಸಿಯಾಗಿ ತಿನ್ನುವುದರಿಂದ ನಿಮ್ಮ ಹಸಿವು ನಿಯಂತ್ರಣಕ್ಕೆ ಬರುತ್ತದೆ. ಸೌತೆಕಾಯಿಯಲ್ಲಿ ಸಕ್ಕರೆಯ ಅಂಶ ಇಲ್ಲದೇ ಇರುವುದರಿಂದ ಮಧುಮೇಹಿಗಳಿಗೆ ಉತ್ತಮ ಆಹಾರವೆಂದು ಪರಿಗಣಿತವಾಗಿದೆ. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲೂ ಸೌತೆಕಾಯಿ ಸಹಕಾರಿ. ಇದರಲ್ಲಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಮಲಬದ್ಧತೆಯ ಸಮಸ್ಯೆ ಇರುವವರು ಆಹಾರದಲ್ಲಿ ನಿಯಮಿತವಾಗಿ ಬಳಸುವುದು ಉತ್ತಮ. ಪ್ರತೀ ಊಟದ ಸಮಯದಲ್ಲಿ ಸೌತೆಕಾಯಿ ಸೇವನೆಯು ನಿಮ್ಮ ಜೀರ್ಣಶಕ್ತಿಯನ್ನು ಅಧಿಕಗೊಳಿಸುತ್ತದೆ.
ಸೌತೆಕಾಯಿಯಲ್ಲಿ ವಿಟಮಿನ್ ಎ ಇರುವುದರಿಂದ ಇದು ಕಣ್ಣಿನ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲ್ಪಟ್ಟಿದೆ. ಹಾನಿಕಾರಕ ಸ್ವತಂತ್ರ ರಾಡಿಕಲ್ ಗಳ ಸಂಗ್ರಹವನ್ನು ತಡೆದು ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ. ಈ ಕಾರಣದಿಂದ ಇನ್ನಾದರೂ ನಿಮ್ಮ ಊಟದ ತಟ್ಟೆಯಲ್ಲಿ ಸೌತೆಕಾಯಿಗೆ ಸ್ವಲ್ಪ ಜಾಗ ಕೊಡಿ. ಯಾವುದಾರೊಂದು ರೂಪದಲ್ಲಿ ಸೌತೆಕಾಯಿ ಸೇವಿಸುತ್ತಾ ಇರಿ. ಆರೋಗ್ಯದಾಯಕ ಜೀವನ ನಿಮ್ಮದಾಗುತ್ತದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ