ನಿಮ್ಮ ನೆರೆಮನೆಯವರು ಕ್ರಿಮಿನಲ್‌ಗಳೇ?

ನಿಮ್ಮ ನೆರೆಮನೆಯವರು ಕ್ರಿಮಿನಲ್‌ಗಳೇ?

ಬರಹ


ನಗರಗಳಲ್ಲಿ ನಮ್ಮ ಸುತ್ತಮುತ್ತ ವಾಸಿಸುವ ವ್ಯಕ್ತಿಗಳು ಯಾರೆನ್ನುವುದೇ ತಿಳಿದಿರುವುದಿಲ್ಲ. ಆದರೂ ನಮ್ಮ ನೆರೆಮನೆಯವರು ಕ್ರಿಮಿನಲ್ ಹಿನ್ನಲೆ ಇದ್ದವರಾದರೆ ಅಂತಹ ಕಡೆ ವಾಸಿಸುವುದು ಹೆಚ್ಚಿನವರಿಗೂ ಇಷ್ಟವಾಗದು ತಾನೇ? ಆದರೆ ಅದನ್ನು ತಿಳಿದುಕೊಳ್ಳುವುದಾದರೂ ಹೇಗೆ? ಇತರರನ್ನು ಕೇಳಿ ತಿಳಿಯೋಣವೆಂದರೆ,ಅವರಿಗೂ ವಿಷಯ ಗೊತ್ತಿರಲಿಕ್ಕಿಲ್ಲ. ಗೊತ್ತಿದ್ದರೂ ಅದನ್ನವರು ಹೇಳಬೇಕಾಗಿಲ್ಲ. ಹಾಗೆ ಹೇಳುತ್ತಿರುವವರ ಹಿನ್ನೆಲೆ ಬಗ್ಗೆ ಯಾರನ್ನು ಕೇಳುವುದು? ಅಂತರ್ಜಾಲದಲ್ಲಿ ಈ ರೀತಿಯ ಸಹಾಯ ಸಿಗಲು ಆರಂಭವಾಗಿದೆ. ನಮ್ಮ ದೇಶದಲ್ಲಿ ಇಂತಹ ಸೇವೆ ಇನ್ನೂ ಲಭ್ಯವಿಲ್ಲ. ಅದನ್ನು ನೀಡಲು ಆರಂಭಿಸುವುದು ಒಳ್ಳೆಯ ವ್ಯಾವಹಾರಿಕ ಯೋಜನೆಯಾಗಬಹುದು.
CriminalSearches.com,PolicyMap.com,PropertyShark.com ಇಂತಹ ಅಂತರ್ಜಾಲ ತಾಣಗಳು.ಮನೆ ಖರೀದಿಸಬೇಕಿರುವ ಅಥವ ಬಾಡಿಗೆ ಮನೆ ಹಿಡಿಯಬೇಕಿರುವ ಸ್ಥಳದ ಜಿಪ್(ಪಿನ್)ಕೋಡನ್ನು ನೀಡಿದರೆ, ಅ ಸ್ಥಳದಲ್ಲಿ ವಾಸವಾಗಿರುವ ಪೊಲೀಸ್ ದಾಖಲೆಗಳಲ್ಲಿರುವ ವ್ಯಕ್ತಿಗಳು ವಾಸವಾಗಿರುವ ಸ್ಥಳಗಳನ್ನು ನಕ್ಷೆಯಲ್ಲಿ ಪ್ರದರ್ಶಿಸುವ ವ್ಯವಸ್ಥೆಯನ್ನಿವು ಹೊಂದಿರಬಹುದು.ನಿಮ್ಮ ಅಪಾರ್ಟ್‌ಮೆಂಟ್ ಸುತ್ತ ಇರುವ ಕ್ರಿಮಿನಲ್ ಹಿನ್ನೆಲೆ ಇರುವವರ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯುವ ಆಯ್ಕೆಯೂ ಇರುತ್ತದೆ. ಕೆಲವೊಮ್ಮೆ ಸಾರಿಗೆ ನಿಯಮ ಉಲ್ಲಂಘಿಸಿ, ಶಿಕ್ಷೆಗೀಡಾದವರೂ ಅಪರಾಧ ಹಿನ್ನೆಲೆಯವರು ಎಂದು ಇಲ್ಲಿ ಕಂಡು ಬರಬಹುದು.ಆದ್ದರಿಂದ ಅಪರಾಧ ಹಿನ್ನೆಲೆಯ ಬಗ್ಗೆ ಜಾಲಾಡಿ  ತಿಳಿದುಕೊಳ್ಳದೆ,ಅವಸರದ ತೀರ್ಮಾನಕ್ಕೆ ಬರುವುದು ಒಳಿತಲ್ಲ. ಅವರ ಕ್ರಿಮಿನಲ್ ಹಿನ್ನೆಲೆ ಹಳೆಯದೋ ಅಲ್ಲ ಹೊಸದೋ ಎಂದು ತಿಳಿದು ಕೊಳ್ಳುವುದೂ ಒಳಿತು.ನೀವು ಯಾವನೇ ನಿಗದಿತ ವ್ಯಕ್ತಿಯನ್ನು ನಿಮ್ಮ ಸುತ್ತಮುತ್ತ ಬಯಸದಿದ್ದ ಪಕ್ಷ ಅವರು ವಾಸವಾಗಿರುವ ಜಾಗ ಯಾವುದು ಎಂದು ತಿಳಿದುಕೊಳ್ಳಲೂ ಈ ಸೇವೆಯಲ್ಲಿ ಅವಕಾಶವಿದೆ.ಜನಗಣತಿಯ ವಿವರಗಳನ್ನು ಮತ್ತು ಪೊಲೀಸ್ ದಾಖಲೆಗಳನ್ನು ಬಳಸಿಕೊಂಡು ಇಂತಹ ಸೇವೆಗಳನ್ನು ನೀಡಲಾಗುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೇ? ನಮ್ಮಲ್ಲಿ ಇಂತಹ ಸೇವೆ ಲಭ್ಯವಾದಾಗ,ನೀವು ಕ್ರಿಮಿನಲ್‍ಗಳಿಂದ ದೂರವಿದ್ದರೆ, ನಿಮ್ಮ ನೆರೆಮನೆಯಾತ ರಾಜಕಾರಣಿಯೂ ಆಗದಿರುವ ಸಂಭವವೇ ಹೆಚ್ಚು!
ದೃಶ್ಯವನ್ನು ಸೋಸುವ ವಾಹನದ ವಿಂಡ್‌ಶೀಲ್ಡ್
ಅಮೆರಿಕಾದಲ್ಲಿ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ.ಅವರು ವಯಸ್ಸಿಗೆ ಸಹಜವಾದ ದೃಷ್ಟಿ ತೊಂದರೆಗಳಿಂದ ನರಳುತ್ತಿರಬಹುದು. ಆದರೂ ಅವರು ಹೆಚ್ಚಿನ ಸಮಸ್ಯೆಯಿಲ್ಲದೆ ಕಾರು ಚಲಾಯಿಸುವಂತಾಗಲು ನೆರವಾಗುವ ಸ್ಮಾರ್ಟ್ ವಿಂಡ್‌ಶೀಲ್ಡನ್ನು ತಯಾರಿಸಲು ಜನರಲ್ ಮೋಟಾರ್ಸ್ ಕಂಪೆನಿಯ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.ಈ ವಿಂಡ್‌ಶೀಲ್ಡ್ ಲೇಸರ್ ಕಿರಣಗಳು, ಇನ್‌ಫ್ರಾರೆಡ್ ಸಂವೇದಕಗಳು ಮತ್ತು ಕ್ಯಾಮರಾವನ್ನು ಬಳಸುತ್ತದೆ.ವಿಂಡ್‌ಶೀಲ್ಡ್ ಕಾರಿನ ಮುಂದಿನ ನೋಟವನ್ನು ಇದ್ದಂತೆ ತೋರಿಸುವ ಬದಲಿಗೆ,ಅದನ್ನು ಸೋಸಿ,ಬೇಕಾದ ನೋಟವನ್ನು ಮಾತ್ರ ತೋರಿಸುವ ತಂತ್ರಜ್ಞಾನವನ್ನು ಸಂಶೋಧಕರು ಬಳಸಲಿದ್ದಾರೆ.ಗಾಳಿತಡೆಯು ಕಂಪ್ಯೂಟರ್ ತೆರೆಯಂತೆ ವರ್ತಿಸಲಿದೆ.ರಸ್ತೆಯ ಪೂರ್ಣ ನೋಟದ ಬದಲಿಗೆ ರಸ್ತೆಯ ಅಗಲ,ರಸ್ತೆಗೆ ಅಡ್ಡಲಾಗಿರುವ ಜನರು, ಮರ ಇವನ್ನಷ್ಟೇ ಎತ್ತಿ ತೋರಿಸುವ ಮೂಲಕ ಚಾಲಕನಿಗೆ ನೆರವಾಗುವುದು ಇಲ್ಲಿ ಬಳಕೆಯಾಗಲಿರುವ ತಂತ್ರ.ಮಂಜು ಮುಸುಕಿದ ವಾತಾವರಣದಲ್ಲಿ ವಾಹನ ಸಾಗುವಾಗ,ರಸ್ತೆಯ ಅಂಚನ್ನೂ ಗೆರೆಯೆಳೆದು ಪ್ರದರ್ಶಿಸುವ ಮೂಲಕ ವೃದ್ಧರಿಗೆ ನೆರವಾಗಲು ಸಂಶೋಧಕರು ಬಯಸಿದ್ದಾರೆ.ಹಾಗೆಯೇ ವೇಗ ಮಿತಿಗಳಿದ್ದರೆ,ಅದೂ ಕೂಡಾ ಪರದೆಯಲ್ಲಿ ಬರಬೇಕು ಅನ್ನುವುದು ಸಂಶೋಧಕರ ಯೋಚನೆ.ವೃದ್ಧರಿಗೆ ಪದೇ ಪದೇ ದೂರದ ಮತ್ತು ಸಮೀಪದ ವಸ್ತುಗಳನ್ನು ನೋಡಲು ದೃಷ್ಟಿಯನ್ನು ಬದಲಿಸುತ್ತಿರುವುದು ತ್ರಾಸದಾಯಕವೆನ್ನುವುದು ಎಲ್ಲರಿಗೂ ಗೊತ್ತು.ವಿಂಡ್‌ಶೀಲ್ಡ್ ಪರದೆಯಾಗಿ ಬಿಡುವುದು ಈ ಸಮಸ್ಯೆಗೆ ಉತ್ತರವಾಗಬಲ್ಲುದು.ಡ್ಯಾಶ್‌ಬೋರ್ಡಿನಲ್ಲಿ ಪ್ರತ್ಯೇಕವಾಗಿ ತೆರೆಯನ್ನು ನೀಡಿ ಅಲ್ಲಿ ಇಂತಹ ದೃಶ್ಯ ಪ್ರದರ್ಶಿಸುವ ಬದಲು,ಇಡೀ ಗಾಳಿತಡೆಯನ್ನೇ ಈ ರೀತಿ ಮಾಡಲು ಬಳಸುವುದು ಇಲ್ಲಿನ ವಿಶೇಷ.
ಆರ್ಥಿಕ ಹಿನ್ನಡೆಯಲ್ಲೂ ಕಂಪ್ಯೂಟರ್ ಮಾರಾಟದಲ್ಲಿ ಏರಿಕೆ!
ಆರ್ಥಿಕ ಹಿನ್ನೆಡೆಯಾದಾಗ ಕಂಪ್ಯೂಟರಿನಂತಹ ಮಾಹಿತಿ ತಂತ್ರಜ್ಞಾನ ಸಾಧನಗಳ ಮಾರಾಟದಲ್ಲಿ ಹಿನ್ನಡೆ ಸಾಮಾನ್ಯ.ಆದರೆ ಈ ಸಲದ ತ್ರೈಮಾಸಿಕದ ಫಲಿತಾಂಶ ಹಾಗಿಲ್ಲ. ಅಮೆರಿಕಾದಲ್ಲಿ ಮಾರಾಟವಾದ ಕಂಪ್ಯೂಟರುಗಳ ಸಂಖ್ಯೆ ಕಳೆದ ತ್ರೈಮಾಸಿಕದಲ್ಲಿ ಅರುವತ್ತೆರಡು ದಶಲಕ್ಷವಾದರೆ, ಈ ಸಲ ಎಪ್ಪತ್ತೊಂದು ದಶಲಕ್ಷಕ್ಕೂ ಅಧಿಕ,ಅಂದರೆ ಸುಮಾರು ಹದಿನೈದು ಶೇಕಡಾ ಏರಿಕೆಯಾಗಿದೆ.ಮಾರಾಟದಲ್ಲಿ ಆಪಲ್ ಕಂಪೆನಿ ಮೊದಲ ಸ್ಥಾನದಲ್ಲಿದ್ದರೆ,ಏಸರ್ ಮೊದಲ ಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಇಳಿದಿದೆ.
ಮಾಲ್‌ಗಳಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗ್ರಾಹಕ ಸೇವೆವಿಡಿಯೂ ಕಾನ್ಫರೆನ್ಸ್
ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಡಳಿತದವರ ಜತೆ ಸಂಪರ್ಕವಿರಿಸಿಕೊಳ್ಳುವ ಶೈಲಿಗೆ ಕರ್ನಾಟಕ ಮುಖ್ಯಮಂತ್ರಿ ಮನಸ್ಸು ಮಾಡಿದ್ದಾರೆ.ಕೆನಡದ  ಹಲವಾರು ಮಾಲ್‌ಗಳಲ್ಲಿ ವಿಡಿಯೋ ಕಿಯೋಸ್ಕ್‌ಗಳನ್ನು ಸ್ಥಾಪಿಸುವ ಮೂಲಕ ಗ್ರಾಹಕ ಸೇವೆ ಒದಗಿಸುವ ಪ್ರಯತ್ನಗಳು ನಡೆಯುತ್ತಿವೆ.ವೈವಿಧ್ಯಮಯ ಉತ್ಪನ್ನಗಳನ್ನು ಶೇಖರಿಸಿಡುವಾಗ,ಅಂಗಡಿಯಲ್ಲಿರುವ ಸೇಲ್ಸ್‌ಮ್ಯಾನ್‌ಗಳು ಗ್ರಾಹಕರಿಗೆ ಹೆಚ್ಚೇನೂ ಸಹಾಯ ಒದಗಿಸಲಾರರು. ಯಾವುದೇ ಉತ್ಪನ್ನದ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ,ಅವರೂ ಮೇಲೆ-ಕೆಳಗೆ ನೋಡುತ್ತಾರೆ.ವಿಡಿಯೋ ಕಿಯೋಸ್ಕಿಗೆ ಸಾಗಿ,ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಹಕ ಸೇವೆ ಪಡೆದಾಗ,ಸೇವೆ ನೀಡುವಾತ,ಕಂಪ್ಯೂಟರ್ ಮೂಲಕ ಪ್ರಾತ್ಯಕ್ಷಿಕೆ,ವಿವರಗಳನ್ನು ತೆರೆಯ ಮೇಲೆ ಮೂಡಿಸಿ,ನೈಜ ವ್ಯಕ್ತಿಗಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ ಎನ್ನುವುದು ಇದರ ಹಿಂದಿನ ಗುಟ್ಟು.ಲೈವ್ ಏಜೆಂಟ್,ಲೈವ್ ಸ್ಟೋರ್ಸ್ ಮುಂತಾದ ಕಂಪೆನಿಗಳು ಇಂತಹ ಸೇವೆಯನ್ನು ಒದಗಿಸುತ್ತಿದ್ದಾರೆ.ನಗುಮುಖದಿಂದ ಸ್ವಾಗತಿಸಿ,ನಮಸ್ತೆ ಹೇಳುವ ಮಾರಾಟಗಾರನಿಗೆ ಈ ಹೊಸ ವ್ಯವಸ್ಥೆ ಸರಿಸಾಟಿಯಲ್ಲ ಎನ್ನುವ ಹಳಬರೂ ಇದ್ದಾರೆ ಅನ್ನಿ.
ಮರೆಯಾಗಲಿದೆ-ಕಂಪ್ಯೂಟರ್ ಮೌಸ್
ಕಂಪ್ಯೂಟರು ತನ್ನ  ಬಳಕೆದಾರನ ಆಯ್ಕೆಯನ್ನು ತಿಳಿದುಕೊಳ್ಳಲು ಮೌಸ್ ಸಹಾಯ ಮಾಡುತ್ತದೆ.ಅತ್ತ ಕಳೆದ ನಲುವತ್ತು ವರ್ಷಗಳಲ್ಲಿ ಮೌಸ್ ಎನ್ನುವುದು ಕಂಪ್ಯೂಟರಿನ ಅವಿಭಾಜ್ಯ ಅಂಗವಾಗಿ ಬೆಳೆದು ಬಂತು.ಆದರೀಗ ಮೌಸಿನ ಅಂತಿಮ ದಿನಗಳು ಹೆಚ್ಚು ದೂರವಿಲ್ಲ. ಲ್ಯಾಪ್‍ಟಾಪ್‍ಗಳ ಜನಪ್ರಿಯತೆಯೊಂದಿಗೆ ಜನರು ಮೌಸ್ ಬಳಸದೇ ಟಚ್‌ಪ್ಯಾಡುಗಳ ಮೂಲಕ ಕಂಪ್ಯೂಟರು ನಿಯಂತ್ರಿಸಲು ಕಲಿತಿದ್ದಾರೆ.ಅಲ್ಲದೆ ಸ್ಪರ್ಷ ಸಂವೇದಿ ಕಂಪ್ಯೂಟರ್ ತೆರೆಗಳು ಜನರ ಆಯ್ಕೆಯನ್ನು ಕಂಪ್ಯೂಟರಿಗೆ ಮುಟ್ಟಿಸಲು ಬಳಕೆಯಾಗುತ್ತಿವೆ.ಮೈಕ್ರೋಸಾಪ್ಟಿನ ಮುಂದಿನ ಆಪರೇಟಿಂಗ್ ವ್ಯವಸ್ಥೆಯೂ ಮೌಸ್ ಬಳಕೆಗೆ ತಿಲಾಂಜಲಿ ನೀಡಲು ನಿರ್ಧರಿಸಿದೆ.

"ವೆಬ್ ವಿಹಾರ","ಅವಕಾಶ ಅಪಾರ" ಪುಸ್ತಕ ಬಿಡುಗಡೆbook
ಇ-ಜ್ಞಾನ ಬ್ಲಾಗ್ ಲೇಖಕ ಟಿ. ಜಿ. ಶ್ರೀನಿಧಿಯವರ ಹೊಸ ಪುಸ್ತಕಗಳಾದ ‘ವೆಬ್ ವಿಹಾರ’ ಹಾಗೂ ‘ಅವಕಾಶ ಅಪಾರ’ - ಬಿಡುಗಡೆಯಾಗಲಿವೆ. ಇವು ಮಾಹಿತಿ ತಂತ್ರಜ್ಞಾನ ಬಗೆಗಿನ ಪುಸ್ತಕಗಳು.

(ಇ-ಲೋಕ-84)(21/7/2008) 

udayavani

ashokworld

*ಅಶೋಕ್ ಕುಮಾರ್ ಎ