ನಿಮ್ಮ ಸುದ್ದಿಗಳು ಯಾಕಿಷ್ಟು ಬಾಲಿಶ...?

ನಿಮ್ಮ ಸುದ್ದಿಗಳು ಯಾಕಿಷ್ಟು ಬಾಲಿಶ...?

ಸಾಮಾನ್ಯಕ್ಕಿಂತ ಕೆಳಮಟ್ಟ ತಲುಪುತ್ತಿದೆ ನಿಮ್ಮ ಸುದ್ದಿಗಳ ಆಯ್ಕೆ ಮತ್ತು ನಿರೂಪಣೆ. 15-18 ವಯೋಮಾನದ ಮಕ್ಕಳನ್ನು ಹಿಜಾಬ್ ಅಥವಾ ಕೇಸರಿ ಶಾಲಿನ ಬಗ್ಗೆ ಪ್ರಶ್ನೆ ಮಾಡುತ್ತೀರಿ. ಅವರ ಮುಗ್ಧ ಮಾತುಗಳನ್ನೇ ಬಹುದೊಡ್ಡ ಸುದ್ದಿಯಾಗಿ ಬಿಂಬಿಸುತ್ತೀರಿ. ನಮ್ಮಂತ ಹಿರಿಯರಿಗೆ ಇನ್ನೂ ಈ ಸಂಕೀರ್ಣ ಸಮಾಜದ ಒಳ ನೋಟಗಳ ಅರಿವು ಸ್ಪಷ್ಟವಾಗಿಲ್ಲ. ಅಂತಹುದರಲ್ಲಿ ಆ ಮಕ್ಕಳಿಗೆ ಇನ್ನೇನು ಅರ್ಥವಾಗುತ್ತದೆ.

ಬಹುಶಃ ಉರಿಯುವ ಬೆಂಕಿಗೆ ತುಪ್ಪ ಸುರಿಯುವುದು ಎಂದರೆ ಏನು ಎಂಬುದಕ್ಕೆ ಇದೇ ಅತ್ಯುತ್ತಮ ಉದಾಹರಣೆ ಇರಬೇಕು. ಒಂದು ಸುದ್ದಿ ಮಾಧ್ಯಮಕ್ಕೆ ಎಷ್ಟೊಂದು ಸೂಕ್ಷ್ಮ ಮನಸ್ಥಿತಿ ಇರಬೇಕು, ಎಷ್ಟೊಂದು ಜ್ಞಾನ ಇರಬೇಕು, ಎಷ್ಟೊಂದು ಜವಾಬ್ದಾರಿ ಇರಬೇಕು, ಎಷ್ಟೊಂದು ವಿವೇಚನೆ ಇರಬೇಕು, ಎಷ್ಟೊಂದು ಸಮಗ್ರ ಚಿಂತನೆ ಇರಬೇಕು. ಭಾರತದ ಇತಿಹಾಸ, ಭಾರತೀಯ ಸಮಾಜದ ಬೆಳವಣಿಗೆ, ಪರಕೀಯರ ಆಕ್ರಮಣ, ನಿರಂತರ ಹೋರಾಟಗಳು, ಪ್ರಜಾಪ್ರಭುತ್ವ ಸ್ಥಾಪನೆ, ಚುನಾವಣಾ ರಾಜಕೀಯ, ಧರ್ಮ ದೇವರುಗಳ ನಂಬಿಕೆ, ಅದರ ವಿಭಿನ್ನತೆ, ಸದ್ಯದ ಪರಿಸ್ಥಿತಿ ಹೀಗೆ..

ಒಬ್ಬ ಸಾರ್ವಜನಿಕ ವ್ಯಕ್ತಿ ಧರ್ಮದ ಅಮಲಿನಲ್ಲಿ, ಜಾತಿಯ ಅಮಲಿನಲ್ಲಿ, ಅಜ್ಞಾನದ ಪರಮಾವಧಿಯಲ್ಲಿ, ಆಕ್ರೋಶ ಉತ್ತುಂಗದಲ್ಲಿ, ಪ್ರಚೋದನೆಯ ಹಿಡಿತದಲ್ಲಿ, ಮುಖವಾಡದ ಮರೆಯಲ್ಲಿ ಉದ್ದೇಶಪೂರ್ವಕವಾಗಿಯೇ ವಿಧ್ವಂಸಕ ಕೃತ್ಯಗಳ ಭಾಗವಾಗಿ ಏನೋ ಹೇಳುತ್ತಾನೆ. ಅದನ್ನೇ ಇಡೀ ವ್ಯವಸ್ಥೆಯ ಅಭಿಪ್ರಾಯ ಎಂಬಂತೆ ಸುದ್ದಿ ಪ್ರಸಾರ ಮಾಡಿದರೆ ನಿಮ್ಮನ್ನು ಪತ್ರಕರ್ತರು ಎಂದು ಹೇಗೆ ಕರೆಯಲು ಸಾಧ್ಯ? ಅದರೊಳಗಡೆ ಅಡಗಿರುವ ಸತ್ಯವನ್ನು ಹೊರತರಬೇಕಾದ ಗುರುತರ ಜವಾಬ್ದಾರಿ ನಿಮ್ಮದಲ್ಲವೇ?

ನೀವು ಈ ಸಮಾಜದ ದುಷ್ಟ ಶಕ್ತಿಗಳ, ಮೂಲಭೂತವಾದಿಗಳ, ರಾಜಕೀಯ ಪಕ್ಷಗಳ, ದೇಶದ್ರೋಹಿಗಳ ದಾಳವಾಗುತ್ತಿದ್ದೀರಿ ಎಂದು ನಿಮಗೆ ಅನಿಸುತ್ತಿಲ್ಲವೇ? ನೀವು ಯಾರಿಗೆಲ್ಲಾ ನಿಮ್ಮ ವೇದಿಕೆಗಳಲ್ಲಿ ಅವಕಾಶ ಕೊಡುತ್ತಿದ್ದೀರಿ ಎಂಬುದನ್ನು ಸ್ವಲ್ಪ ಆಳವಾಗಿ ಗಮನಿಸಿ ನೋಡಿ. ಕೆಲವರನ್ನು ಹೊರತುಪಡಿಸಿ ಬಹುತೇಕ ಅಪ್ರಬುದ್ದ, ಅವಿವೇಕಿ, ವಾಚಾಳಿ, ಹಿಂಸಾ ಪ್ರವೃತ್ತಿ, ಗೋಮುಖ ವ್ಯಾಘ್ರಗಳೇ ನಿಮ್ಮ ಅಭಿವ್ಯಕ್ತಿಯ ಮಾಧ್ಯಮಗಳಾಗಿವೆ.

ನಿನ್ನೆ ನಿಜವಾದ ಸುದ್ದಿಯ ಆದ್ಯತೆಯಾಗಬೇಕಾಗಿದ್ದುದು ನಮ್ಮೆಲ್ಲರ ಚೆಂಬಳಕಿನ ಕವಿ, ರಾಷ್ಟ್ರ ಕವಿ ಆಗುವ ಅರ್ಹತೆ ಪಡೆದಿದ್ದ ಚೆನ್ನವೀರ ಕಣವಿ ಅವರ ನಿಧನ ಮತ್ತು ಅವರ ಕವಿತೆಗಳ ಪರಿಚಯ ಹಾಗು ಆ ಮುಖಾಂತರ ಕನ್ನಡ ‌ಸಾಹಿತ್ಯ ಕ್ಷೇತ್ರದ ವಿಮರ್ಶೆ. ಆದರೆ ಮುಖ್ಯ ಸುದ್ದಿಯಾದದ್ದು ಎಂದಿನಂತೆ ಹಿಜಾಬ್,  ವಿಧಾನಸಭಾ ಅಧಿವೇಶನದಲ್ಲಿ ಡಿಕೆಶಿ ಈಶ್ವರಪ್ಪ ನಿಂದನೆ, ಕೋರ್ಟ್ ಕಲಾಪ ಇತ್ಯಾದಿ. ಅಂದರೆ ನೀವು ಸಹ ಟೀ ಅಂಗಡಿಯ ಮಾಮುವಿನಂತೆ ಸಮಯ ಕೊಲ್ಲುವ ಅಥವಾ ಬಾಯಿ ಚಪಲಕ್ಕಾಗಿ ಯಾವುದೋ ಸುದ್ದಿಯನ್ನು ಬಿತ್ತರಿಸಿ ನಿಮ್ಮ ಹೊಟ್ಟೆ ತುಂಬಿಸಿಕೊಳ್ಳುವಿರಿ. ಇನ್ನು ಮುಂದಾದರು ಸ್ವಲ್ಪ ಮಾನಸಿಕ ಸ್ಥಿಮಿತ ಕಾಪಾಡಿಕೊಂಡು ಜವಾಬ್ದಾರಿಯಿಂದ ನಿಮ್ಮ ವೃತ್ತಿಯ ಮೌಲ್ಯಗಳನ್ನು ಮತ್ತು ಘನತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ ಎಂದು ಮನವಿ ಮಾಡಿಕೊಳ್ಳುತ್ತಾ...

-ವಿವೇಕಾನಂದ ಹೆಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಅಂತರ್ಜಾಲ ತಾಣ