ನಿರ್ಧಾರ
ಇಂದೇಕೋ ಸಾಗರ್ ತುಂಬಾ ಅಸಂತುಷ್ಟನಾಗಿದ್ದ.ಏಕೋ ಮನದಲ್ಲಿ ಅಸಂತೋಷ,ಅಸಮಾಧಾನ ಮಡುಗಟ್ಟಿತ್ತು. ದಿನಾಲೂ ಹಾಸಿಗೆಯಲ್ಲಿ ಮಲಗಿದ ತಕ್ಷಣ ಗಾಢ ನಿದ್ದೆಗೆ ಜಾರುತ್ತಿದ್ದ ಮನ,ಇಂದೇಕೋ ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಅತ್ತಿತ್ತ ಹೊಯ್ದಾಡುತ್ತಿತ್ತು. ಒಮ್ಮೆ ತಾನು ಕೆಲಸದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೋ ಇಲ್ಲವೋ ಎಂತಲೂ, ಇನ್ನೊಮ್ಮೆ ನಾನು ಈ ಜಗತ್ತಿನ ಜಂಜಾಟದಲ್ಲಿ ಹೋರಾಡಲು ಶಕ್ತನಾಗಿರುವೇನೋ ಇಲ್ಲವೋ ಎಂತಲೂ, ಮಗದೊಮ್ಮೆ ನಾನು ಹೋರಾಡಲು ಶಕ್ತನಾಗಿದ್ದರೂ ನನಗೆ ಹೋರಾಡುವ ಇಂಗಿತ ಇದೆಯೋ ಅಥವಾ ಸುಮ್ಮನೆ ಭ್ರಾಂತಿಯಲ್ಲಿ ಬದುಕುತ್ತಿರುವೇನೋ ಎಂದು,ಏನೇನೋ ವಿಚಿತ್ರವಾದ ಯೋಚನೆಗಳು ಅವನನ್ನು ಕಾಡುತ್ತಿದ್ದವು.ಅದಕ್ಕೆ ಕಾರಣ ಏನಿರಬಹುದೆಂದು ತಲೆ ಕೆರೆದುಕೊಂಡು ಯೋಚಿಸಿ,ಅದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ಆಸಕ್ತಿ ಇರದಷ್ಟು ಅವನ ಮನಸ್ಸು ಗಲಿಬಿಲಿಗೊಂಡಿತ್ತು. ಹಾಗೆ ಕಣ್ಣು ಮುಚ್ಚಿಕೊಂಡರೆ ನಿದ್ದೆಯಾದ್ರು ಬಂದೀತೆಂದು ಕಣ್ಣು ಮುಚ್ಚಿದ ಸಾಗರ್ ಗೆ ಕಣ್ಣ ಮುಂದೆ ಕಂಡಿದ್ದು ಅವನ ಸೋದರ ಮಾವನ ಮನೆಗೆ ಊಟಕ್ಕಾಗಿ ಅಲೆಯುತ್ತಿರುವ ಅವನ ತಂದೆಯ ಚಿತ್ರ.ಇದರಿಂದ ಅವನ ಮನಸ್ಸು ಮತ್ತಷ್ಟು ಅಸಮಾಧಾನಗೊಂಡಿತು.ಆಗ ಅವನಿಗೆ ಅನ್ನಿಸಿದ್ದು "ಯಾಕಪ್ಪ ನನಗೆ ಈ ನರಕ ಯಾತನೆ.ಬೇರೆ ಎಲ್ಲರೂ ತನ್ನ ತಂದೆ ಹಾಗೆ ಹೀಗೆ ಅಂತಾ, ತಮ್ಮ ತಮ್ಮ ತಂದೆಯ ಬಗ್ಗೆ ಹೆಮ್ಮೆ ಪಡುತ್ತಿದ್ದರೆ, ನಾನು ಮಾತ್ರ ಛಿ! ಯಾಕಪ್ಪ ಇಂಥ ತಂದೆಗೆ ಮಗನಾಗಿ ಹುಟ್ಟಿದೆ ? ಯಾವ ಜನ್ಮದ ಪಾಪಕ್ಕಾಗಿ ?" ಎಂದು. ಹಾಗೆಯೇ ಅವನ ಮನಸ್ಸು ಭೂತಕಾಲಕ್ಕೆ ಹೋಗಿ ಯೋಚಿಸತೊಡಗಿತು.
******************************************************************************************************
ಚಿಕ್ಕವನಾಗಿದ್ದಾಗ ನನಗೆ ತಂದೆ ಎಂದರೆ ತುಂಬಾ ಪ್ರೀತಿ. ಮನಯಲ್ಲಿ ಎಲ್ಲರಿಗೂ ನಾನು ಮೂಲಾ ನಕ್ಷತ್ರದಲ್ಲಿ ಹುಟ್ಟಿದವನೆಂದು ತಾತ್ಸಾರ.ಅಜ್ಜ ಅಜ್ಜಿಗೆ ನಾನು "ಇಂಥವನ ಮಗ" ಎಂಬ ಸಿಟ್ಟು. ನನಗೆ ಆಗ ಆ "ಇಂಥವನು" ಎಂಬ ಪದದ ಅರ್ಥ ಗೊತ್ತಿರದಷ್ಟು ಚಿಕ್ಕ ವಯಸ್ಸು. ಅದರ ಬಗ್ಗೆ ವಿಚಾರ ಮಾಡದಷ್ಟು ಮುಗ್ಧ ಮನಸ್ಸು. ಮನೆಯಲ್ಲಿ ಎಲ್ಲಾರೂ ನನಗೆ ಬೈಯುವರು ಹೊಡೆಯುವರು. ಪ್ರತಿಯೊಂದು ಸಣ್ಣ ತಪ್ಪಿಗೂ ಉಗ್ರವಾದ ಶಿಕ್ಷೆ ಇರುತ್ತಿತ್ತು. ಅದರ ಜೊತೆಗೆ "ಇವನೂ ಕೂಡ ಅವನ ಅಪ್ಪನಂತೆಯೇ ಆಗುವನು" ಎಂಬ ಮಾತು. ಅದನ್ನು ಕೇಳಿ ನನಗೆ ತುಂಬಾ ಬೇಜಾರಾಗುವದು. ಆಗ ನನಗೆ ಆ ಮಾತುಗಳ ಅರ್ಥ ಗೊತ್ತಾಗುತ್ತಿರಲಿಲ್ಲ. ಆದರೆ ಅಮ್ಮ ಮಾತ್ರ ಮೌನವಾಗಿ ರೋಧಿಸುವಳು. ಅವಳು ತಾನೆ ಏನು ಮಾಡಲು ಶಕ್ತಳು ? ಪಾಪ ! ಅವಳು ಪುಟ್ಟ ಹುಡುಗಿಯಾಗಿದ್ದಾಗ ಅವಳಿಗೆ ಅಪ್ಪನ ಕೊಟ್ಟು ಮಾಡುವೆ ಮಾಡಿದರಂತೆ. ಆವಾಗಿನಿಂದ ಅಮ್ಮನದು ಮೌನ ರೋಧನವೇ.ಆದರೆ ನಾನು ಮಾತ್ರ ಶುಕ್ರವಾರ ಬರುವದನ್ನೆ ಕಾಯುತ್ತಿದ್ದೆ. ಯಾಕಂದರೆ ಅವತ್ತು ನನ್ನ ಅಪ್ಪ ಹೊಲದಿಂದ ಬರುವನು.ನನಗೆ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗುವನು. ಅದು ನನಗೆ ಖುಷಿ ತರುವದು. ಆ ಪುಟ್ಟ ವಯಸ್ಸಿನಲ್ಲಿ ಒಂದು ಬಣ್ಣದ ಲೋಕವನ್ನು ನನ್ನ ಕಣ್ಣ ಮುಂದೆ ತೆರೆಡಿದುವದು.ಆದರೆ ಮರಳಿ ಮನೆಗೆ ಬಂದ ತಕ್ಷಣ ಅಜ್ಜ ಅಜ್ಜಿ ಏನೇನೋ ವಿಷಯಕ್ಕಾಗಿ ಅಪ್ಪನ ಜೊತೆ ಜಗಳ ಮಾಡುವರು. ಅಮ್ಮ ಕೂಡ ಅಪ್ಪನ ಜೊತೆ ಅಷ್ಟಕಷ್ಟೇ.ಆದರೂ ನನಗೆ ಇವು ಯಾವುದರ ಪರಿವೆಯೇ ಇಲ್ಲದೆ ಅಪ್ಪನ ಮಡಿಲಲ್ಲಿ ಏನೋ ಒಂದು ತರಹ ಆನಂದವಿರುತ್ತಿತ್ತು. ಆದರೆ ಆ ಆನಂದ ಸೋಮವಾರದವರೆಗೆ ಅಷ್ಟೇ. ಸೋಮವಾರ ಅಪ್ಪ ಮತ್ತೆ ಹೊಲಕ್ಕೆ ಹೋಗುವನು. ಅವನು ಮತ್ತೆ ಬರುವದು ಶುಕ್ರವಾರವೇ.ಅಲ್ಲಿಯವರೆಗೂ ನಾನು ಏಕಾಂಗಿ..ಅಮ್ಮನಿಗೆ ಒಂದು ಸಲ ಕೇಳಿದೆ "ಅಮ್ಮ, ಹೊಲ ಇಲ್ಲಿಂದ ಎಷ್ಟು ದೂರ ?" ಎಂದು. ಆಗವಳು ತುಂಬಾ ದೂರ ಎಂದಷ್ಟೇ ಹೇಳಿದಳು.
ಹಾಗೆ ದಿನಗಳೆಯಿತು. ಮನೆಯಲ್ಲಿ ಬೈಗುಳ ಹೊಡೆತಗಳೂ ಹೆಚ್ಚಾದವು.ದಿನಗಳೆದಂತೆ ಅಪ್ಪನು ಒಳ್ಳೆವನಲ್ಲ ಎಂದು ತಿಳಿಯತೊಡಗಿತು. ಯಾಕೆಂದರೆ ಒಂದೆರಡು ಸಲ ಅಪ್ಪನು ನನ್ನ ಕಣ್ಣ ಮುಂದೆಯೇ ಕುಡಿದನು.ಒಂದೆರಡು ಸಲ ಅದು ಯಾವದೋ ಹೆಂಗಸನ್ನು ಪರಿಚಯಿಸಿ ಇವಳು ನಿನ್ನ ಅಮ್ಮ ಎಂದನು. ಅದು ನನಗೆ ಇಷ್ಟವಾಗಲಿಲ್ಲ. ಆದರೂ ಪ್ರೀತಿಯ ಅಪ್ಪ ತಾನೇ ಅದಕ್ಕೆ ಸುಮ್ಮನಿದ್ದೆ. ಅಮ್ಮನ ಬಳಿಯೂ ಈ ಸಂಗತಿ ಹೇಳಲಿಲ್ಲ. ಆದರೆ ಅಪ್ಪನ ಬಗೆಗಿನ ನನ್ನ ಅಭಿಪ್ರಾಯ ಬದಲಾಗತೊಡಗಿತು. ಒಂದು ದಿನ ಅಪ್ಪ ಮನೆಗೆ ಬರುವದನ್ನು ನಿಲ್ಲಿಸಿದನು.ನಾನು ಆವಾಗ high ಸ್ಕೂಲ್ ನಲ್ಲಿದ್ದೆ. ನನಗೆ ಏಕೆಂದು ಅರ್ಥವಾಗಲಿಲ್ಲ. ಅಮ್ಮನನ್ನು ಕೇಳಿದೆ ಆಗ ಅಮ್ಮ ಹೇಳಿದ್ದು ಕೇಳಿ ನನಗೆ ಆಕಾಶವೇ ಕಳಚಿ ಬಿದ್ದಂತೆ ಆಯಿತು.ಅದು ಘನ ಘೋರವಾದ ಸಂಗತಿ.ಆದರೆ ಸತ್ಯ. ನನ್ನ ಅಪ್ಪ ಬೇರೆ ಯಾವುದೋ ಹೆಂಗಸಿನ ಜೊತೆ ಓಡಿ ಹೋಗಿದ್ದನಂತೆ.ಅವನಿಗೆ ನಾವು ಬೇಡವಾಗಿದ್ದವಂತೆ. ನನಗೆ ಆಗ ನನ್ನ ಅಪ್ಪನ ಬಗ್ಗೆ ತುಂಬಾ ಹೇಸಿಗೆ ಅನ್ನಿಸಿತು. ಇಂಥ ವಯಸ್ಸಿನಲ್ಲಿ ಅಪ್ಪನು ಇಂಥ ಕೆಲಸ ಮಾಡಿದನೆ? ನಾನು ಪುಸ್ತಕಗಳಲ್ಲಿ ಓದಿದ ಆದರ್ಶ ಅಪ್ಪ ನನಗೆ ಸಿಗಲಿಲ್ಲವೇ? ಅಥವಾ ಕಾಮ ನನ್ನ ಅಪ್ಪನ ಕಣ್ಣನ್ನು ಕುರುಡು ಮಾಡಿತೆ ? ಅಮ್ಮ ಮತ್ತೆ ಮೌನವಾಗಿ ರೋಧಿಸುತ್ತಿದ್ದಳು. ನನಗೆ ಏನು ಮಾಡುವುದೋ ತೋಚಲಿಲ್ಲ. ಆದರೂ ನನ್ನ ಕೈಲಾದ ಮಟ್ಟಿಗೆ ಅಮ್ಮನನ್ನು ಸಂತೈಸಿದೆ.ಅಮ್ಮನ ಹೃದಯ ತುಂಬಾ ನೊಂದಿತ್ತು.ಆಗ ಅಮ್ಮ ನನಗೆ " ಮಗು, ನೀನು ಚೆನ್ನಾಗಿ ಓದಿ ಮುಂದೆ ಬರಬೇಕು. ನಿನ್ನ ತಮ್ಮ ತಂಗಿಯರ ಭವಿಷ್ಯ ನಿನ್ನ ಕೈಯಲ್ಲಿದೆ. ಇನ್ನು ಮುಂದೆ ನಮಗೆಲ್ಲ ನೀನೆ ಆಸರೆ " ಎಂದು ಹೇಳಿದಳು. ನಾನು ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕೆಂದು ಪಣ ತೊಟ್ಟೆ.ನನ್ನ ಅಜ್ಜ ಅಜ್ಜಿಯರು ನಮ್ಮ ಮೇಲೆ ಮರುಕ ತೋರಿ ನನಗೆ ಕಲಿಸಲು ಒಪ್ಪಿದರು.ನಾನು ಕಷ್ಟ ಪಟ್ಟು ಓದತೊಡಗಿದೆ.ಚೆನ್ನಾಗಿ ಓದಿ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡೆ. ಅಮ್ಮನಿಗೆ ತುಂಬಾ ಖುಷಿಯಾಯಿತು.ಈಗ ತಮ್ಮ ತಂಗಿಯರನ್ನು ಓದಿಸುತ್ತಿರುವೆ.
*****************************************************************************************************
ಸಾಗರ ಪಕ್ಕನೆ ಕಣ್ಣು ತೆರೆದನು. ಅವನ ಮನಸ್ಸು ಈ ಎಲ್ಲ ನೆನಪುಗಳನ್ನು ಅವನ ಮುಂದೆ ಬಿಚ್ಚಿಟ್ಟಿತು. ಈಗ ಎಲ್ಲ ಚೆನ್ನಾಗಿದ್ದರೂ ಇಂದು ಅಮ್ಮ ಹೇಳಿದ ಒಂದು ವಿಷಯದಿಂದ ಅವನು ಅಸಮಾಧನಗೊಂಡಿದ್ದನು. ಅದೇನೆಂದರೆ ಅವನ ಅಪ್ಪ ಮರಳಿ ಊರಿಗೆ ಬಂದಿದ್ದರು . ಅವರು ಸಾಗರನ ಸೋದರ ಮಾವನ ಮನೆಗೆ ದಿನಾಲೂ ಊಟ ಕೇಳಿಕೊಂಡು ಅಲೆಯುತ್ತಿರುವರಂತೆ. ಅದಕ್ಕೆ ಸಾಗರನ ಅಮ್ಮ ಸಾಗರನಿಗೆ ತನ್ನ ತಂದೆಗೆ ಎರಡು ಹೊತ್ತು ಊಟ ಹಾಕಲು ಏರ್ಪಾಡು ಮಾಡುವಂತೆ ಕೇಳಿದ್ದರು. ಇದರಿಂದ ಸಾಗರನು ಅಂದುಕೊಂದಿದ್ದೆನೆಂದರೆ "ನಾನೇಕೆ ಅವರಿಗೆ ಊಟ ಹಾಕಲಿ ? ನಮ್ಮೆಲರನು ನಡು ನೀರನಲ್ಲಿ ಕೈ ಬಿಟ್ಟು ಹೋದವರಿಗೆ ನಾನೇಕೆ ಕರುಣೆ ತೋರಿಸಲಿ ? ನಾವು ಇನ್ನೊಬ್ಬರ ಹಂಗಿನಲ್ಲಿ ಬದುಕುತ್ತಿರುವಾಗ ಬೇರೆ ಯಾವಳೋ ಜೊತೆ ಚೆನ್ನಾಗಿದ್ದವರು,ಒಂದು ಸಾರ್ತಿ ಕೂಡ ನಮ್ಮೆಲ್ಲರನು ನೋಡಲು ಬರದವರಿಗೆ ನಾನೇಕೆ ಸಹಾಯ ಮಾಡಲಿ ? " ಎಂದು. ಆದರೆ ಅಮ್ಮನ ಮಾತು ಹೇಗೆ ಮೀರುವದು ಎಂದು ಸರಿಯಾದ ನಿರ್ಧಾರ ತೆಗೆತುಕೊಳ್ಳಲು ಆಗದೆ ಒದ್ದಾಡುತ್ತಿದ್ದನು. ಹಾಗೆ ಯೋಚಿಸಿದಾಗ ಅವನಿಗೆ ತನ್ನ ತಂದೆಯ ಜೊತೆ ಕಳೆದ ಆನಂದದ ಕ್ಷಣಗಳು ನೆನಪಿಗೆ ಬಂದವು."ಅರೆ ! ನಾನು ಯಾಕೆ ಹೀಗೆ ಸ್ವಾರ್ಥಿಯ ತರಹ ಯೋಚನೆ ಮಾಡುತಿದ್ದೇನೆ ? ಅವರು ನನ್ನ ತಂದೆ. ಬೇರೆ ಎಲ್ಲರೂ ನನ್ನನ್ನು ಕೀಳಾಗಿ ನೋಡಿಕೊಂಡಾಗ ನನಗೆ ಪ್ರೀತಿ ತೊರಿಸಿದವರು.ಅವರು ಏನು ಮಾಡಿದರು ಅದಕ್ಕೆ ಶಿಕ್ಷೆ ಕೊಡಲು ದೇವರಿದ್ದಾನೆ. ನಾನು ನನ್ನ ಮಾನವೀಯತೆಯನ್ನು ಮರೆಯದೆ ನನ್ನ ಕೈಲಾದ ಸಹಾಯ ಮಾಡಬೇಕು" ಎಂದು ನಿರ್ಧಾರ ತೆಗೆದುಕೊಂಡನು. ಆಮೇಲೆ ಬೆಳ್ಳಿಗ್ಗೆ ಆಫೀಸಿಗೆ ಹೋಗಬೇಕಲ್ಲ ಎಂದು ಕಣ್ಣು ಮುಚ್ಚಿದನು.ಈಗ ಅವನಿಗೆ ನಿದ್ದೆ ಬಂದಿತು. ಅಂದರೆ ಅವನ ನಿರ್ಧಾರ ಸರಿಯಾಗಿತ್ತು.
Comments
ಉ: ನಿರ್ಧಾರ
In reply to ಉ: ನಿರ್ಧಾರ by venkatb83
ಉ: ನಿರ್ಧಾರ
ಉ: ನಿರ್ಧಾರ
In reply to ಉ: ನಿರ್ಧಾರ by makara
ಉ: ನಿರ್ಧಾರ
ಉ: ನಿರ್ಧಾರ
In reply to ಉ: ನಿರ್ಧಾರ by Chikku123
ಉ: ನಿರ್ಧಾರ