ನಿಲ್ಲದ ಅತಿಥಿ ಉಪನ್ಯಾಸಕರ ಮುಷ್ಕರ: ಬೇರೆ ದಾರಿ ಏನು?
ಸುಮಾರು ನಲವತ್ತು ದಿನಗಳಿಂದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಪಾಠ ಪ್ರವಚನ ನಿಲ್ಲಿಸಿ ನಡೆಸುತ್ತಿರುವ ಮುಷ್ಕರವು ಸರ್ಕಾರ ಶುಕ್ರವಾರ ನಡೆಸುವ ಸಭೆಯಿಂದ ಅಂತ್ಯಗೊಳ್ಳಬಹುದು ಎಂದು ನಿರೀಕ್ಸಿಸಲಾಗಿತ್ತು. ಆದರೆ ಸೇವೆ ಕಾಯಂಗೊಳಿಸುವುದನ್ನು ಹೊರತುಪಡಿಸಿ ಇನ್ನು ಕೆಲ ಕೊಡುಗೆಗಳನ್ನು ನೀಡುವುದಾಗಿ ಸರ್ಕಾರ ಪ್ರಕಟಿಸಿದ್ದು, ಹೋರಾಟ ಮುಂದುವರೆಸಲು ಅತಿಥಿ ಉಪನ್ಯಾಸಕರು ನಿರ್ಧರಿಸಿದ್ದಾರೆ. ಸದ್ಯ ಆಯಾ ಜಿಲ್ಲೆಗಳಲ್ಲಿ ಮುಷ್ಕರ ನಡೆಸುತ್ತಿರುವ ಅವರು ಜ.೧ ರಂದು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಿ, ಬಳಿಕ ಬೆಂಗಳೂರಿನಲ್ಲಿ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಇದರಿಂದಾಗಿ, ಈಗಾಗಲೇ ಈ ವರ್ಷದ ಪಾಠ ಪ್ರವಚನಗಳು ನೆನೆಗುದಿಗೆ ಬಿದ್ದು ಇಕ್ಕಟ್ಟಿಗೆ ಸಿಲುಕಿದ್ದ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಕೊಳ್ಳುವ ಆತಂಕ ಸೃಷ್ಟಿಯಾಗಿದೆ.
ರಾಜ್ಯದಲ್ಲಿ ೪೨೩ ಸರ್ಕಾರಿ ಪದವಿ ಕಾಲೇಜುಗಳಿವೆ. ಅಲ್ಲಿ ಸುಮಾರು ೧೨ ರಿಂದ ೧೩ ಸಾವಿರ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಕಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯವು ಇವರ ಮೇಲೇ ಅವಲಂಬಿತವಾಗಿದೆ. ಕಾಯಂ ಹುದ್ದೆಗಳನ್ನು ಭರ್ತಿ ಮಾಡದೆ ಸರ್ಕಾರ ಅನೇಕ ವರ್ಷಗಳಿಂದ ತೋರುತ್ತಾ ಬಂದಿರುವ ವಿಳಂಬ ಧೋರಣೆಯು ಈಗ ದುಬಾರಿಯಾಗಿ ಪರಿಣಮಿಸಿದೆ. ಅತಿಥಿ ಉಪನ್ಯಾಸಕರು ಮತ್ತೆ ಕೆಲಸಕ್ಕೆ ಮರಳುವಂತೆ ಮಾಡಲು ಅವರ ವೇತನ ೫೦೦೦ ರೂ ಏರಿಕೆ, ತಿಂಗಳಿಗೊಂದು ರಜೆ, ನಿವೃತ್ತಿಯ ಬಳಿಕ ನೀಡಲು ೫ ಲಕ್ಷ ರೂ. ಇಡುಗಂಟು ಸ್ಥಾಪಿಸುವ ನಿರ್ಧಾರಗಳನ್ನು ಉನ್ನತ ಶಿಕ್ಷಣ ಸಚಿವರ ನೇತೃತ್ವದ ಸಭೆ ಕೈಗೊಂಡಿದೆ. ಆದರೆ ಅತಿಥಿ ಉಪನ್ಯಾಸಕರು ಸೇವೆ ಕಾಯಮಾತಿಗೇ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸರ್ಕಾರ ಮತ್ತು ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇಂತಹುದೇ ಸಮಸ್ಯೆ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲೂ ಇದೆ. ಅದು ಯಾವಾಗ ಉಲ್ಬಣಗೊಳ್ಳುವುದೋ ಗೊತ್ತಿಲ್ಲ.
ವಾಸ್ತವವಾಗಿ ಅತಿಥಿ ಶಿಕ್ಷಕರು ಅಥವಾ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಹೈಸ್ಕೂಲು, ಕಾಲೇಜುಗಳನ್ನು ನಡೆಸುವ ವ್ಯವಸ್ಥೆಯೇ ಅವೈಜ್ಞಾನಿಕ. ಅವರು ಕಾಲಕಾಲಕ್ಕೆ ನಡೆಸುವ ಮುಷ್ಕರಗಳಿಂದಾಗಿ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕುತ್ತಿರುವುದು ಈ ಹಿಂದೆಯೂ ಸಾಕಷ್ಟು ಬಾರಿ ನಡೆದಿದೆ. ಕಾಯಂ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವುದೇ ಇದಕ್ಕೆ ಪರಿಹಾರ. ಸರ್ಕಾರ ಈಗ ಎದುರಾಗಿರುವ ಸಮಸ್ಯೆಗೆ ಪರ್ಯಾಯ ಪರಿಹಾರವನ್ನು ಹುಡುಕುವುದರ ಜೊತೆಗೆ ಈ ಸಮಸ್ಯೆ ಇನ್ನು ಮುಂದೆ ಎದುರಾಗದಂತೆ ಶಾಶ್ವತ ಪರಿಹಾರವನ್ನೂ ಕೈಗೊಳ್ಲಬೇಕಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೩೦-೧೨-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ