ನಿಷ್ಟುರ ನಿಯಮ ಜಾರಿಯಾಗಲಿ

ನಿಷ್ಟುರ ನಿಯಮ ಜಾರಿಯಾಗಲಿ

ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಎಂಬ ಪುಟ್ಟ ಮಗುವನ್ನು ರಕ್ಷಿಸುವಲ್ಲಿ ಕಾರ್ಯಾಚರಣಾ ತಂಡಗಳು ಯಶಸ್ವಿಯಾಗಿದ್ದು ಸಮಾಧಾನಕರ ಸಂಗತಿ. ಬೆಳಗಾವಿ, ಕಲಬುರ್ಗಿಯಿಂದ ಬಂದಿದ್ದ ಎಸ್ ಡಿ ಆರ್ ಎಫ್ ಮತ್ತು ಹೈದರಾಬಾದ್ ನಿಂದ ಬಂದಿದ್ದ ಎನ್ ಡಿ ಆರ್ ಎಫ್ ತಂಡಗಳು ಸತತ ೨೦ ಗಂಟೆಗಳ ಕಾರ್ಯಾಚರಣೆ ನಡೆಸಿ ಕಂದನನ್ನು ಸುರಕ್ಷಿತವಾಗಿ ಹೊರಸೆಳೆದದ್ದು ಶ್ಲಾಘನೀಯ. ಈ ತಂಡದವರ ಪರಿಶ್ರಮ ಮತ್ತು ಬದ್ಧತೆಗೊಂಡು ಸಲಾಂ ಹೇಳಲೇ ಬೇಕು. ಆದರೆ ಇಲ್ಲಿ ವ್ಯಥೆಯುಂಟು ಮಾಡುವುದು, ಕೆಲವರು ತೋರುವ ನಿರ್ಲಕ್ಷ್ಯ. ಕೊಳವೆ ಬಾವಿ ತೋಡಿಸಲು ಮುಂದಾಗುವವರು, ಆ ನಿಟ್ಟಿನಲ್ಲಿ ತೋರುವ ಉತ್ಸಾಹವನ್ನು ಕೊಂಚವೇ ಮುಂದುವರೆಸಿ, ತೋಡಿಸಿದ್ದು ಒಂದೊಮ್ಮೆ ವಿಫಲವಾದರೂ ಕೊಳವೆ ಬಾವಿಯ ಬಾಯಿ ಮುಚ್ಚಿಸಲು ಉದಾಸೀನ ತೋರುವುದೇ ದುಬಾರಿಯಾಗಿ ಪರಿಣಮಿಸುತ್ತದೆ. 

ನೀರಮಾನ್ವಿ, ಝಂಜರವಾಡಿ, ದಾವಣಗೆರೆ, ದೇವರ ನಿಂಬರಗಿ, ಸಿಕ್ಕೇರಿ, ನಾಗತಾನಹಳ್ಳಿ, ಸೂಳೆಕೇರಿ ಹೀಗೆ ಹೇಳುತ್ತಾ ಹೋದರೆ ತೆರೆದ ಕೊಳವೆ ಬಾವಿಗೆ ಮಕ್ಕಳು ಬಿದ್ದು ದುರಂತದ ಅಂತ್ಯ ಕಂಡ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇಂತಹ ಪೂರ್ವ ನಿದರ್ಶನಗಳ ಅರಿವಿದ್ದರೂ ಕೆಲವರು ಕೊಳವೆಬಾವಿಯ ಬಾಯಿ ಮುಚ್ಚಿಸಲು ನಿರ್ಲಕ್ಷ್ಯ ತೋರುವುದೇಕೆ ಎಂಬುದೇ ಅರ್ಥವಾಗದ ಸಂಗತಿ. ‘ಮಾನವ ಜನ್ಮ ದೊಡ್ಡದು, ಇದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದಿದ್ದಾರೆ ದೊಡ್ಡವರು. ಆದರೆ, ಈ ಜಾಣ ನುಡಿ ಕೆಲವರ ಕಿವಿಗೆ ಮುಟ್ಟುತ್ತಲೇ ಇಲ್ಲ ಎಂಬುದಕ್ಕೆ ಮತ್ತೆ ಮತ್ತೆ ಪ್ರಾಕೃತಿಕ ವಿಕೋಪಗಳಾದಾಗ ಘಟಿಸುವ ಸಾವು-ನೋವುಗಳನ್ನು ತಡೆಯುವ ಶಕ್ತಿಯಂತೂ ಹುಲುಮಾನವರ ಬಳಿಯಿಲ್ಲ: ಆದರೆ ಕನಿಷ್ಟ ಪಕ್ಷ ನಮ್ಮ ನಿರ್ಲಕ್ಷ್ಯದಿಂದ ಘಟಿಸುವ ದುರಂತಗಳನ್ನಾದರೂ ತಡೇಯಬಹುದಲ್ಲವೇ? ಕೊಳವೆ ಬಾವಿ ಕೊರೆಯಿಸುವವರಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗದಿದ್ದಲ್ಲಿ, ಇಂಥ ಮತ್ತಷ್ಟು ಪ್ರಸಂಗಗಳು ಘಟಿಸುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಆಳುಗರು ಎಚ್ಚೆತ್ತುಕೊಂಡು ಈ ವಿಷಯದಲ್ಲಿ ನಿಷ್ಟುರ ಕ್ರಮಗಳಿಗೆ ಮುಂದಾಗಲಿ. ಕಾರಣ, ಪ್ರಾಣಿಗಳು, ಸಸ್ಯಗಳು ಮತ್ತು ಮನುಷ್ಯರು ಸೇರಿದಂತೆ ಯಾವ ಜೀವರಾಶಿಗಳ ಜೀವವೂ ಅಗ್ಗವಲ್ಲ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೬-೦೪-೨೦೨೪ 

ಚಿತ್ರ ಕೃಪೆ: ಅಂತರ್ಜಾಲ ತಾಣ