ನಿಷ್ಪಾಪಿ ಸಸ್ಯಗಳು (ಭಾಗ ೩೫) - ಅನನಾಸು ಗಿಡ

ನಿಷ್ಪಾಪಿ ಸಸ್ಯಗಳು (ಭಾಗ ೩೫) - ಅನನಾಸು ಗಿಡ

ಕಥೆ, ಹಾಡು, ಒಗಟುಗಳೆಂದರೆ ನಿಮಗಿಷ್ಟ ಅಲ್ವೇ...? ಈಗ ನಾನೊಂದು ಒಗಟು ಹೇಳುವೆ, ನೀವು ಉತ್ತರ ಹೇಳಬೇಕು. ಸರಿ ತಾನೇ?

ಗಿಡ

ಗಿಡದ ಮೇಲೆ ಕಾಯಿ

ಕಾಯಿ ಮೇಲೆ ಗಿಡ... ಏನಿದು?

ಹಾಗೇನೆ

ಚಿನ್ನದಂತಹ ಹುಡುಗಿಗೆ

ನಕ್ಷತ್ರದ ಅಂಗಿ...

ಈ ಎರಡೂ ಒಗಟುಗಳಿಗೆ ಒಂದೇ ಉತ್ತರ. ನಿಮಗೆ ಉತ್ತರ ಗೊತ್ತಾಗಿರಬೇಕಲ್ವಾ? ಹ್ಹಾಂ, ನಿಮ್ಮ ಊಹೆ ನಿಜವಾಗಿದೆ. ಒಗಟುಗಳ ಉತ್ತರ ಅನಾನಸು.

ಈ ಪ್ರಕೃತಿ ಎಷ್ಟೊಂದು ವೈವಿಧ್ಯಮಯವಾಗಿದೆ ಎಂದರೆ ಈ ಅನಾನಸಿನ ಗಿಡವೇ ಒಂದು ಸಾಕ್ಷಿಯಲ್ಲವೇ! ಅನಾನಸಿನ ಗಿಡವೊಂದು ಪ್ರಕೃತಿ ಯ ಅದ್ಭುತ ಕಲಾಕೃತಿ. ಗಿಡ್ಡ ಕಾಂಡದ ಸುತ್ತ ಸುಂದರವಾದ ನೀಳವಾದ ಎಲೆಗಳು. ಎಲೆಗಳ ಅಂಚುಗಳಲ್ಲಿ ಗರಗಸದಂತಹ ಹರಿತವಾದ ಮುಳ್ಳುಗಳು. ಎಲೆಗಳ ನಡುವೆ ಮೂಡುವ ಪುಟಾಣಿ ಅನಾನಸು, ಅದರ ತಲೆಗೊಂದು ಕಿರೀಟ ಅಥವಾ ಜುಟ್ಟು ! ಈ ಕಿರೀಟವೇ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅನಾನಸಿನ ಗಿಡಗಳು! ಪ್ರಾಣಿ ಪಕ್ಷಿಗಳಿಗೆ ಆಕರ್ಷಣೆಯ ತಿನಿಸಾಗಿ ಹಣ್ಣನ್ನು ನೀಡುವುದಲ್ಲದೆ ಮರಿ ಸಸ್ಯಗಳು ಬೆಳೆಯಲು ಬೇಕಾದ ಪೋಶಕಾಂಶವನ್ನು ಹಣ್ಣಿನ ಮೂಲಕ ಸರಬರಾಜು ಮಾಡುತ್ತದೆ. ಇದರ ಜುಟ್ಟಿನಲ್ಲಷ್ಟೇ ಹೊಸ ಗಿಡಗಳು ಹುಟ್ಟುವುದಲ್ಲದೇ ಕಾಯಿಯ ಸುತ್ತಲೂ ಹೊಸ ಗಿಡಗಳು ಮೂಡುವುದುಂಟು. ಕಾಯಿ ದೊಡ್ಡ ಗಾತ್ರದಲ್ಲಿ ಬೆಳೆಯಲೆಂದು ಅದರ ಬುಡದಲ್ಲಿ ಮೂಡುವ ಮರಿಗಳನ್ನು ತೆಗೆಯುವುದೂ ಉಂಟು. ಹಣ್ಣಿನ ಮೇಲೆ ಬೀಜದ ಸಹಾಯವೇ ಇಲ್ಲದೆ ಗಿಡ ಹುಟ್ಟುವುದು ವಿಸ್ಮಯವಲ್ಲವೇ? 

ಇದರ ಹಣ್ಣೂ ವಿಶೇಷ ವಾದುದು.. ಸಾಧಾರಣ ಗಟ್ಟಿಯಾಗಿರುವ ಸಿಪ್ಪೆಯ ಮೇಲೆ ಕಣ್ಣುಗಳಂತಹ ಸುಂದರ ರಚನೆಗಳು. ಹೊಳಪಿನ ಹಸುರು ಹಾಗೂ ಬೆಳೆದಾಗ ಹಳದಿ ಬಣ್ಣಕ್ಕೆ ತಿರುಗುವ ಈ ಹಣ್ಣನ್ನು ಸ್ವಲ್ಪ ಒತ್ತಿಯೇ ಸಿಪ್ಪೆ ತೆಗೆಯಬೇಕಾಗುತ್ತದೆ. ಇಲ್ಲವಾದರೆ ತಿನ್ನುವಾಗ ಕೆಲವೊಮ್ಮೆ ನಾಲಿಗೆ, ಗಂಟಲು ತುರಿಸಬಹುದು. ಹಣ್ಣಿನ ಮೇಲಿನ ಮುಳ್ಳುಗಳನ್ನು ಕೆತ್ತಿ ತೆಗೆದಾಗ ಒಳಗೆ ಹಲಸಿನ ತೊಳೆಗಳಂತೆ ಕಾಣಿಸುವ ಸಿಹಿ, ಹುಳಿ ರುಚಿಯ ಸ್ವಾದಿಷ್ಟ ತಿರುಳು ಸವಿಯಲು ದೊರೆಯುತ್ತದೆ.

ಅನಾನಸ್ ನ್ನು ಫರೆಂಗಿ ಹಣ್ಣೆಂದೂ ಕರೆಯುವರು. ತುಳುವಿನಲ್ಲಿ ಪರೆಂಗಿಲೆಕಾಯಿ ಎನ್ನುವರು. ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಸಂಸ್ಕೃತ ಮೊದಲಾದ ಭಾಷೆಗಳಲ್ಲೆಲ್ಲಾ ಇದನ್ನು ಅನಾನಸ್ ಎಂದೇ ಕರೆಯುವರು. ಮಾತ್ರವಲ್ಲದೇ ಗ್ರೀಕ್, ಸ್ವೀಡಿಷ್, ಜರ್ಮನ್, ಅರೇಬಿಕ್, ಫ್ರೆಂಚ್, ಡಚ್, ಟರ್ಕಿಶ್, ಲ್ಯಾಟಿನ್ ಮೊದಲಾದ ಪ್ರಪಂಚದ ನಾನಾಭಾಷೆಗಳಲ್ಲೂ ಅನಾನಸ್ ಎಂದೇ ಕರೆಯಲ್ಪಡುವ ವಿಶೇಷ ಸಸ್ಯವಿದು.

ಅನಾನಸ್ ಕೊಮೊಸಸ್, (Bananas comosus) ಎಂಬ ವೈಜ್ಞಾನಿಕ ಹೆಸರು ಹೊಂದಿರುವ ಅನಾನಸ್ ಬ್ರೊಮೊಲಿಯಾಸಿ (Bromeliaceae) ಕುಟುಂಬಕ್ಕೆ ಸೇರಿದೆ. ಪೈನಾಪಲ್ ಉಷ್ಣವಲಯದ ಸಸ್ಯವಾಗಿದ್ದು ಪರಗ್ವೆ ಮತ್ತು ಬ್ರೆಜಿಲ್ ಗೆ ಸ್ಥಳೀಯ ಸಸ್ಯವಾಗಿದೆ. ಪೋರ್ಚುಗೀಸರ ಮೂಲಕ ಭಾರತಕ್ಕೆ ಬಂದ ಪೈನಾಪಲ್ ಪರೆಂಗಿ ಹಣ್ಣು ಅಂದರೆ ವಿದೇಶಿ ಹಣ್ಣೆಂದೇ ಹೆಸರು ಪಡೆಯಿತು.

ಫಿಲಿಪೈನ್ಸ್ ದೇಶದ ಕೆಲವೆಡೆ ಕಣ್ಣು ಹಾಯಿಸಿದಷ್ಟು ದೂರ ಬೆಳೆದಿರುವ ಪೈನಾಪಲ್ ನ ಫೈಬರ್ ಬಳಸಿ ಉತ್ತಮ ಗುಣಮಟ್ಟದ ಬಟ್ಟೆಯನ್ನು ತಯಾರಿಸುತ್ತಾರೆ. ಇದರ ಫೈಬರನ್ನು ವಾಲ್ಪೇಪರ್ ಮತ್ತು ಪೀಠೋಪಕರಣಗಳಿಗೆ ಘಟಕಗಳಾಗಿ ಬಳಸುವರು. ಕರ್ನಾಟಕದ ಶಿವಮೊಗ್ಗ, ಬನವಾಸಿಯಲ್ಲಿ ಆರ್ಥಿಕ ಬೆಳೆಯಾಗಿ ಹಬ್ಬಿದ್ದು ಮೂಡುಬಿದರೆಯಲ್ಲಿ ಎಲೆಯನ್ನು ಬಳಸಿ ಬಟ್ಟೆ ತಯಾರಿಸುವ ಘಟಕವಿದೆ. ಭಾರತದಲ್ಲಿ ಕೇರಳವು ಹೆಚ್ಚು ಅನಾನಸ್ ಬೆಳೆಯುತ್ತದೆ. ನೆಟ್ಟು ಎರಡು ವರ್ಷಗಳ ಬಳಿಕ ಹಣ್ಣು ನೀಡುವ ಈ ಸಸ್ಯವು ಒಂದೂವರೆ ಮೀಟರ್ ನಷ್ಟೆತ್ತರ ಬೆಳೆಯುತ್ತದೆ. ಇದೊಂದು ದೀರ್ಘಕಾಲಿಕ ಸಸ್ಯ. ಇವುಗಳಲ್ಲಿ ಮೂರು ತಳಿಗಳಿವೆ. ಮುಳ್ಳುಗಳಿರದ ಎಲೆಗಳಿರುವ ಗಿಡಗಳೂ ನಮ್ಮೂರಲ್ಲಿವೆ. ಸಿಪ್ಪೆ ತೆಗೆಯದ ತೆಂಗಿನ ಕಾಯಿಯಷ್ಟು ದೊಡ್ಡ ಕಾಯಿಗಳೂ, ಸಿಪ್ಪೆ ತೆಗೆದ ತೆಂಗಿನ ಕಾಯಿಯಷ್ಟು ಗಾತ್ರದ ಹಾಗೂ ಬಿಳೀ ತಿರುಳಿನ ಉದ್ದನೆಯ ಹಣ್ಣುಗಳೂ ಕಾಣಸಿಗುತ್ತವೆ. ಹಂದಿ, ಮಂಗ, ಇಲಿ, ಹೆಗ್ಗಣಗಳ ತೊಂದರೆ ಯಲ್ಲದೆ ರೋಗಬಾಧೆಗಳು ಕಡಿಮೆ. ಒಂದು ಎಕರೆಗೆ 15 ರಿಂದ 16 ಸಾವಿರ ಗಿಡಗಳನ್ನು ನೆಡಬಹುದಾಗಿದ್ದು ಐದಾರು ಲಕ್ಷ ರೂಪಾಯಿ ಗಳಿಕೆಗೆ ಕಾರಣವಾಗುತ್ತದೆ.

ಯಾವುದೇ ಗೊಬ್ಬರ ಬಯಸದ, ಹೆಚ್ಚು ನೀರನ್ನು ಬಯಸದ ಈ ನಿಷ್ಪಾಪಿ ಸಸ್ಯ ರೈತನ ತೋಟ, ಹೊಲಗದ್ದೆಗಳ ರಕ್ಷಣೆಯ ಬೇಲಿಯಾಗಿ ನಿಲ್ಲುತ್ತದೆ. ಅಮೆರಿಕದ ಕ್ಯಾನ್ಸರ್ ಸೊಸೈಟಿಯ ಸಂಶೋಧನೆಯ ಪ್ರಕಾರ ಕ್ಯಾನ್ಸರ್ ನಿವಾರಣೆಯಲ್ಲಿ ಕಿಮೋಥೆರಫಿಗಿಂತ ಈ ಹಣ್ಣಿನ ಸೇವನೆ ಉತ್ತಮವೆನ್ನಲಾಗಿದೆ. ಈ ಹಣ್ಣಿನಲ್ಲಿ ಕಬ್ಬಿಣ, ಸುಣ್ಣ, ವಿಟಮಿನ್ ಎ,ಬಿ,ಸಿ, ರಂಜಕ, ಪೊಟಾಸಿಯಂ, ಸೋಡಿಯಂ, ಜಿಂಕ್, ಮ್ಯಾಂಗನೀಸ್ ಅಂಶಗಳಿವೆ. ಕಫ ಕಟ್ಟಿದಾಗ, ಕೆಮ್ಮು, ಶೀತ, ಅಸ್ತಮಾ, ಮಲಬದ್ಧತೆ, ಕಣ್ಣಿನ ಸಮಸ್ಯೆ ಗಳಿಗೆ, ತೂಕ ಇಳಿಕೆಗೆ, ಬೊಜ್ಜು ನಿವಾರಣೆಗೆ, ಹಲ್ಲು ಮತ್ತು ಮೂಳೆ ಗಟ್ಟಿಯಾಗಲು, ಉಗುರುಗಳ ಬಲವರ್ಧನೆಗೆ, ಮಂಡಿನೋವು, ಮೂಳೆಗಳ ನೋವು ಮತ್ತು ಉರಿಯೂತಗಳಿಗೆ, ಚರ್ಮದ ಕಲೆ ಸುಕ್ಕುಗಳ ನಿವಾರಣೆಗೆ, ಮಾನಸಿಕ ಒತ್ತಡ ನಿವಾರಣೆಗೆ, ಸಂಧಿವಾತ, ಪಿತ್ತವಿಕಾರ, ಅಜೀರ್ಣ ಇತ್ಯಾದಿಗಳಿಗೆ ಈ ಹಣ್ಣನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ರಕ್ತದ ಒತ್ತಡ ಉಂಟಾಗದಂತೆ ತಡೆಯುವುದಲ್ಲದೆ ಅನಗತ್ಯವಾಗಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಮೂಲಕ ಹೃದಯವನ್ನು ರಕ್ಷಿಸುತ್ತದೆ.

ಮಧುರವಾದ ರುಚಿ, ಹಿತವಾದ ಪರಿಮಳ, ಆಕರ್ಷಕ ಬಣ್ಣ ಹೊಂದಿರುವ ಈ ಹಣ್ಣಿನಿಂದ ಸಲಾಡ್, ಹೋಳಿಗೆ, ಉಪ್ಪಿನಕಾಯಿ, ಜಾಮ್, ಜ್ಯೂಸ್, ಚಟ್ನಿ, ಗೊಜ್ಜು, ಹಲ್ವ ಇತ್ಯಾದಿಗಳನ್ನು ತಯಾರಿಸುತ್ತಾರೆ. ಈ ಹಣ್ಣಿನ ತಾಜಾ ರಸವನ್ನಾಗಲೀ ಅಥವಾ ಬೇಯಿಸಿದ ರಸವನ್ನಾಗಲೀ ಸಂರಕ್ಷಿಸಿ ಪಾಕ ಪದ್ದತಿಯಲ್ಲಿ ಬಳಸುತ್ತಾ ಇರಬಹುದು.

ವಿದೇಶದಿಂದ ಬಂದು ನಮ್ಮ ನಡುವೆ ನೆಲೆಯಾದ ಈ ಸಸ್ಯದ ಬಗ್ಗೆ ನಮ್ಮ ಉಪೇಕ್ಷೆಯೇ ಹೆಚ್ಚು. ಅದನ್ನು ನೆಟ್ಟರೆ ಹಾವುಗಳು ಬರುತ್ತವೆ ಎನ್ನುವ ಮೂಢನಂಬಿಕೆ ಅದನ್ನು ಹಿತ್ತಲಿನಿಂದ ದೂರ ಮಾಡಿದೆ. ಮಧುಮೇಹಿಗಳಿಗೆ, ಗರ್ಭಿಣಿಯರಿಗೆ ಇದು ಸೂಕ್ತವಲ್ಲವಾದರೂ ಅಧಿಕ ಹಣ ತೆತ್ತು ಸೇಬು, ದಾಳಿಂಬೆ ತಿನ್ನುವವರು ಈ ಹಣ್ಣಿನತ್ತಲೂ ದೃಷ್ಟಿ ಬೀರಲೇಬೇಕಲ್ಲವೇ...

ಚಿತ್ರ-ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ