ನಿಷ್ಪಾಪಿ ಸಸ್ಯಗಳು (ಭಾಗ ೪೭) - ಶಂಖಪುಷ್ಪ ಬಳ್ಳಿ

ನಿಷ್ಪಾಪಿ ಸಸ್ಯಗಳು (ಭಾಗ ೪೭) - ಶಂಖಪುಷ್ಪ ಬಳ್ಳಿ

ನಾವು ಈ ವಾರ ನಮ್ಮಂಗಳದಲ್ಲೇ ಹಬ್ಬಿ ನಗುವ ಹೂಬಳ್ಳಿಯೊಂದರ ಬಗ್ಗೆ ತಿಳಿದುಕೊಳ್ಳೋಣ. ನೀವಿದನ್ನ ಖಂಡಿತವಾಗಿಯೂ ನೋಡಿರುತ್ತೀರಿ. ಇವು ಬಿಳಿ, ಕೆಂಪು, ಕಡು ನೀಲಿ, ನಸು ನೀಲಿ, ತಿಳಿ ನೇರಳೆ ಬಣ್ಣಗಳಲ್ಲಿ ಕಾಣಸಿಗುತ್ತವೆ. ಇದರಲ್ಲಿ ಏಕ ಹಾಗೂ ಬಹು ಎಂಬೆರಡು ತಳಿಗಳಿವೆ. ಏಕ ತಳಿಯಲ್ಲಿನ ಬಳ್ಳಿಯು ಬಿಡುವ ಹೂಗಳಲ್ಲಿ ಒಂದೇ ಒಂದು ಅಗಲವಾದ ಎಸಳಿದ್ದು ಪುಷ್ಪಪತ್ರೆಯ ಮೂಲದಲ್ಲಿ ಪುಟ್ಟ ಪುಟ್ಟ ಎರಡು ಎಸಳುಗಳು ಸುರುಳಿಯಾಗಿರುತ್ತವೆ. ಅವುಗಳ ನಡುವೆ ನಸು ಹಳದಿ ಕೇಸರಗಳು ಹುದುಗಿರುತ್ತವೆ. ಬಹು ತಳಿಯಲ್ಲಿ ಒಂದಕ್ಕೊಂದು ಸುರುಳಿ ಸುತ್ತಿಕೊಂಡ ನಾಲ್ಕು ಅಥವಾ ಐದು ಎಸಳುಗಳಿದ್ದು ಅವುಗಳ ನಡುವೆ ಕೇಸರಗಳು ಕಾಣದಂತಿರುತ್ತವೆ. ಹೂವಿನ ಒಟ್ಟು ಆಕಾರ ಶಂಖದಂತೆ ಇರುವುದರಿಂದ ಸಹಜವಾಗಿ ಶಂಖಪುಷ್ಪ ಎಂದೇ ಹೆಸರು ಧರಿಸಿದೆ. 

ಶಂಖಪುಷ್ಪವು ಒಂದು ಜಾತಿಯ ಬಳ್ಳಿಯಾಗಿದೆ. ಏಷ್ಯಾದ ಉದ್ದಗಲಕ್ಕೂ ಇದು ಹಬ್ಬಿದೆ. ಕನ್ನಡದಲ್ಲಿ ಕಿರುಗುನ್ನಿಯೆಂದೂ ಸಂಸ್ಕೃತ ದಲ್ಲಿ ಗಿರಿಕರ್ಣಿಕವೆಂದೂ ಹೆಸರು ಪಡೆದಿದೆ. ಫಬಾಸಿಯೆ (Fabaceae ) ಕುಟುಂಬಕ್ಕೆ ಸೇರಿದ ಶಂಖಪುಷ್ಪವು ಕ್ಲಿಟೋರಿಯ ಟರ್ನೇಟಿಯ ( Clitoria ternatea) ಎಂಬ ಸಸ್ಯ ಶಾಸ್ತ್ರೀಯ ಕುಲನಾಮವನ್ನು ಹೊಂದಿದೆ. ಶಿವನಿಗೆ ಪ್ರಿಯವಾದ, ಯಾವುದೇ ಪರಿಮಳವಿರದ, ಮೃದುವಾದ ದಳಗಳನ್ನು ಹೊಂದಿರುವ ಹೂಗಳನ್ನು ವರ್ಷದ ಹೆಚ್ಚಿನ ಸಮಯದಲ್ಲಿ ನೀಡುವ ಈ ಬಳ್ಳಿಯೂ ಕೂಡ ಮೃದುವಾದುದು. ಐದು ಅಥವಾ ಏಳು ಪುಟ್ಟ ಗಾತ್ರದ ಎಲೆಗಳನ್ನು ಸಂಯುಕ್ತವಾಗಿ ಹೊಂದಿದ್ದು ಎಲೆಗಳ ಬುಡದಲ್ಲೇ ಮೊಗ್ಗುಗಳು ಹಾಗೂ ಹಬ್ಬ ಬೇಕಾದ ಚಿಗುರುಗಳೂ ಕಾಣಿಸಿಕೊಂಡು ಆಧಾರವನ್ನು ಹಿಡಿಯಲು ಸುರುಳಿಯಾದ ಕುಡಿ ಕೈ ಚಾಚುತ್ತದೆ. ಸಣ್ಣಪುಟ್ಟ ಗಿಡಗಳೆಂದಾದರೆ ಜೇಡವು ನೊಣವನ್ನು ಹಿಡಿದಂತೆ ಗಿಡವನ್ನೇ ಮುರುಟಿಸಬಲ್ಲದು. ನಾಲ್ಕೈದು ಇಂಚು ಉದ್ದ ಇರುವ ಕೋಡಿನಲ್ಲಿ ಆರೆಂಟು ಬೀಜಗಳಿರುತ್ತವೆ. ಹೂಗಳಿಂದ ಸದಾ ಸುಂದರವಾಗಿ ಕಾಣಿಸುವ ಶಂಖಪುಷ್ಪ ಬಳ್ಳಿ ಸಾಮಾನ್ಯವಾಗಿ ಅಂಗಳದಲ್ಲೊಂದು ಸ್ಥಾನ ಪಡೆದುಕೊಳ್ಳುತ್ತದೆ. ಬೇಡವೆಂದು ಕಿತ್ತೆಸೆದರೂ ಎಸೆದಲ್ಲಿ ಬೀಜ ಬಿದ್ದು ಸಂತಾನ ಮುಂದುವರಿಯುತ್ತದೆ. ನೀರಿದ್ದರೆ ಇದು ಬಹುವಾರ್ಷಿಕ ಸಸ್ಯವಾಗಿದೆ. ನೀರೇ ಇಲ್ಲವಾದರೂ ಬಳ್ಳಿಯೆಲ್ಲ ಒಣಗಿದರೂ ಬುಡ ಸಾದ್ಯವಾದಷ್ಟು ಜೀವದಿಂದಿರಲು ಪ್ರಯತ್ನಿಸಿ ನೀರು ಸಿಕ್ಕ ಕೂಡಲೇ ಕುಡಿಯೊಡೆಯುತ್ತದೆ.

ಬರಿಯ ಅಲಂಕಾರಕ್ಕಾಗಿ ಬೆಳಯಲ್ಪಡುವ ಈ ಸಸ್ಯವನ್ನು ಭಾರತದ ದಕ್ಷಿಣ ಹಾಗೂ ಪೂರ್ವದಲ್ಲಿ ಕೃಷಿಯಾಗಿಯೂ ರೈತರು ಬೆಳೆಯುತ್ತಾರೆಂದರೆ ನಂಬಲು ಕಷ್ಟವಾಗುತ್ತಿದೆಯೇ!? ಆದರೆ ನಂಬಲೇ ಬೇಕು. ಯಾಕೆ ಗೊತ್ತಾ? ಈ ನಿಷ್ಪಾಪಿ ಸಸ್ಯವು ಆಯುರ್ವೇದ ಔಷಧಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ !. ಮಕ್ಕಳ ಮೆದುಳಿನ ಬೆಳವಣಿಗೆಗೆ ಶಂಖಪುಷ್ಪ ಟಾನಿಕ್ ಆಗಿದೆ. ಮೆಮೊರಿ ಬೂಸ್ಟರ್!. ಕಲಿಕೆ, ಆಲೋಚನೆ, ನೆನಪಿಟ್ಟುಕೊಳ್ಳುವುದು, ನಿರ್ಧಾರ ತೆಗೆದುಕೊಳ್ಳುವುದು, ಗಮನ ನೀಡುವುದು ಹೀಗೆ ಒಟ್ಟಾರೆ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಲು ಶಂಖಪುಷ್ಪವನ್ನು ಬಳಸಲಾಗುತ್ತದೆ. ಆಕ್ರಮಣಕಾರಿ ನಡವಳಿಕೆಗಳಿಗೆ ಶಾಂತತೆಯನ್ನು ನೀಡುತ್ತದೆ. ಖಿನ್ನತೆ, ಅಪಸ್ಮಾರ, ನಿದ್ರಾಹೀನತೆ, ಅರೆ ತಲೆನೋವು, ಶ್ವಾಸನಾಳದ ಬಾಧೆ, ಅಜೀರ್ಣಗಳಿಗೂ ಉಪಶಮನ ನೀಡಬಲ್ಲದು. ಜೀರ್ಣಕಾರಿ ರಸಗಳ ಸ್ರವಿಸುವಿಕೆ ಹೆಚ್ಚಿಸಿ ಜೀರ್ಣಕ್ರಿಯೆಗೆ ಉತ್ತೇಜನ ನೀಡುತ್ತದೆ. ಕೆರಳುವ ಕರುಳಿನ ಹುಣ್ಣುಗಳನ್ನು ಶಾಂತಗೊಳಿಸುತ್ತದೆ.

ಕಪ್ಪಾಗಿ ಸೊಂಪಾಗಿ ತಲೆಕೂದಲು ಬಯಸುವವರಿಗೆ ಇದರ ತೈಲವೂ ಉಪಯುಕ್ತ. ಆಹಾರಕ್ಕೆ ನೈಸರ್ಗಿಕ ಬಣ್ಣವಾಗಿಯೂ ಈ ‌ಶಂಖಪುಷ್ಪವನ್ನು ಬಳಸುತ್ತಾರೆ. ಒಟ್ಟಿನಲ್ಲಿ ಶಂಖಪುಷ್ಪವೊಂದು ಬರೇ ಹೂಬಳ್ಳಿ ಮಾತ್ರವೇ ಅಲ್ಲ. ನಮ್ಮ ನಡುವೆ ಇರುವ ಒಂದು ಗಿಡಮೂಲಿಕೆ!. ತಮ್ಮ ಅಂಗಳದಲ್ಲೂ ಈ ಬಳ್ಳಿಗೊಂದು ಸ್ಥಾನ ನೀಡಬಲ್ಲಿರಾ?

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ