ನಿಷ್ಪಾಪಿ ಸಸ್ಯಗಳು (ಭಾಗ ೬೬) - ಬಳ್ಳಿ ಹುಲ್ಲು
ಹಬ್ಬಗಳು ಸಾಲುಸಾಲಾಗಿ ಎದುರಿಗಿದ್ದು ನಮ್ಮ ಹರ್ಷ ಹೆಚ್ಚಿಸುತ್ತಿವೆ. ಈ ಸಂದರ್ಭದಲ್ಲಿ ಕೆಲವು ಪತ್ರಗಳು, ಪುಷ್ಪಗಳು ಪೂಜೆಗೆ ಸಲ್ಲುವುದನ್ನು ನಾವು ಕಾಣಬಹುದು. ಗರಿಕೆ, ಸಣ್ಣ ಜರಿ ಸಸ್ಯ, ಬಿಲ್ವ, ಎಕ್ಕ, ವೀಳ್ಯ, ಕಲ್ಲುಹೂ, ತುಳಸಿಯಂತೆ ಕೆಲವೆಡೆ ಲವ್ ಗ್ರಾಸ್ ಎಂಬ ಹುಲ್ಲೊಂದನ್ನೂ ಬಳಸುತ್ತಾರೆ ಗೊತ್ತಾ? ಇದು ಯಾವ ಹುಲ್ಲೆಂದು ಆಶ್ಚರ್ಯವೇ? ಇದೊಂದು ಅಸಾಮಾನ್ಯವಾದ ಸಸ್ಯ ಸಂಪತ್ತೆಂದರೂ ತಪ್ಪಲ್ಲ. ನಮ್ಮಲ್ಲಿ ಇದನ್ನು ಕಾಣದವರು ಇಲ್ಲವೆಂದರೂ ಸರಿ. ಸರ್ವಾಂತರ್ಯಾಮಿಯಾದ ಈ ಹುಲ್ಲನ್ನು ಈ ಕ್ಷಣಕ್ಕೆ ನೀವು ನಿಮ್ಮ ಮನೆಯಂಗಳದಲ್ಲೇ ಹುಡುಕಿದರೂ ಸಿಕ್ಕೀತು. ಜತನದಿಂದ ಕಾಪಿಟ್ಟ ಗುಲಾಬಿಯಂತಹ ಗಿಡಗಳ ಚಟ್ಟಿಯೊಳಗೂ ಅಂಡು ಊರಿದ್ದೀತು! ಮನೆಯಲ್ಲಿ ದನವೊಂದು ಕರು ಹಾಕಿ ತಿಂಗಳು ಕಳೆಯುತ್ತಿದ್ದಂತೆ ಕರುವಿನ ಪಾಲಿಗೆ ಹಾಲನ್ನು ಕಡಿಮೆಗೊಳಿಸಲು ಬಯಸುವ ರೈತ ಈ ಹುಲ್ಲನ್ನು ಹುಡುಕತೊಡಗುತ್ತಾನೆ. ಕರುವಿನ ಮೊದಲ ಹಸಿರು ಉಣಿಸೇ ಈ ಹುಲ್ಲು ! ಈ ಹುಲ್ಲಿನ ಉದ್ದನೆಯ ಬಳ್ಳಿಯನ್ನು ಕಿತ್ತು ತೊಳೆದು ಮುಷ್ಟಿ ಯಲ್ಲಿ ಹಿಡಿದು ಮಧ್ಯಕ್ಕೆ ಹಗ್ಗದಲ್ಲೊಂದು ಗಂಟು ಹಾಕಿ ಕರುವಿಗೆ ಬಾಯಿಗೆಟಕುವಂತೆ ನೇತು ಹಾಕುವರು. ಕರು ಮೊದಮೊದಲು ಅದನ್ನು ಗಮನಿಸದಿದ್ದರೂ ದಿನ ಕಳೆದಂತೆ ಆಗಾಗ ಹುಲ್ಲಿಗೆ ತನ್ನ ಬಾಯಿಯನ್ನು ತೀಡತೊಡಗುತ್ತದೆ. ಕ್ರಮೇಣ ನಾಲಿಗೆ ಹೊರಚಾಚಿ ಹುಲ್ಲಿನೆಸಳನ್ನು ಸೆಳೆದುಕೊಳ್ಳಲು ಪ್ರಯತ್ನಿಸುತ್ತದೆ. ಬಾಯಿಯ ಒಳಗೆ ಸರಿದ ಹುಲ್ಲಿನೆಸಳನ್ನು ತಮಾಷೆಗೆಂಬಂತೆ ಜಗಿಯತೊಡಗುತ್ತದೆ. ಮತ್ತದೇ ಅಭ್ಯಾಸವಾಗತೊಡಗಿ ಹುಲ್ಲು ಕಡ್ಡಿಯ ಎಲೆಗಳನ್ನು ಕತ್ತರಿಸಿ ತಿನ್ನುತ್ತಾ ನೆಲದಲ್ಲಿ ಚಿಗುರಿದ ಹುಲ್ಲನ್ನೂ ತನ್ನ ಆಹಾರವೆಂದು ಗುರುತಿಸಿ ಮೇಯತೊಡಗುತ್ತದೆ. ಮುದ್ದು ಕರುವಿನ ಜೊತೆಗೆ ಮುದ್ದಾಗಿ ವರ್ತಿಸುವ ಈ ನಿಷ್ಪಾಪಿ ಸಸ್ಯ ವನ್ನು ಕನ್ನಡದಲ್ಲಿ "ಹುಲ್ಲು" ಎನ್ನುವುದೇ ಹೆಚ್ಚು. ಆದರೆ ತುಳು ಭಾಷೆಯಲ್ಲಿ "ಬೂರು ಪಜಿರ್" (ಬಳ್ಳಿ ಹುಲ್ಲು) ಎನ್ನುವರು.
ಎರಾಗ್ರೊಸ್ಟಿಸ್ (Eragrostis) ಎಂಬ ಕುಲದ ಹೆಸರುಳ್ಳ ಈ ಹುಲ್ಲಿನ ಜಾತಿಯ ಸಸ್ಯದ ಹೆಸರು ಗ್ರೀಕ್ ಪದಗಳಾದ eros ಅಂದರೆ 'ಪ್ರೀತಿ' ಹಾಗೂ agrostis ಅಂದರೆ 'ಹುಲ್ಲು' ಎಂಬ ಪದಗಳಿಂದ ಬಂದಿದೆ.ಸಾಮಾನ್ಯವಾಗಿ ಇದನ್ನು ಲವ್ ಗ್ರಾಸ್, ಕ್ಯಾನೆ ಗ್ರಾಸ್ ಎಂದು ಕರೆಯುವರು. ಇದು ಪೋಯೇಸಿ (Poaceae) ಕುಟುಂಬಕ್ಕೆ ಸೇರಿದೆ. ಎರಾಗ್ರೊಸ್ಟಿಸ್ ಹುಲ್ಲಿನ ಕುಟುಂಬದಲ್ಲಿ ಸಸ್ಯಗಳ ಒಂದು ದೊಡ್ಡ ಮತ್ತು ವ್ಯಾಪಕ ಕುಲವಾಗಿದೆ. ಇದು ನಮ್ಮ ಜನವಸತಿ, ಮಾರ್ಗದ ಇಕ್ಕೆಲಗಳಲ್ಲಿ , ತೋಟ, ತೋಪು, ತಪ್ಪಲು, ಕಣಿವೆ ಎಂದು ಎಲ್ಲೆಡೆ ಕಾಣಸಿಗುವುದು. ಅನೇಕ ದೇಶ, ಹಲವು ದ್ವೀಪಗಳಲ್ಲಿದೆ. ಅಮೇರಿಕಾದ ಸ್ಥಳೀಯ ಸಸ್ಯವಾಗಿದೆ. ಭಾರತದಲ್ಲಿ ಆಂದ್ರ, ಕರ್ನಾಟಕ, ಕೇರಳ, ಮಹಾರಾಷ್ಟ್ರ ದ ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಇದರ ಬೆಳವಣಿಗೆ ಬಾರೀ ಚಂದ. ತಾನು ಜನ್ಮ ಪಡೆದ ಜಾಗದ ಏರಿಳಿತ, ತೇವಾಂಶ, ನೆರಳು ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಬೆಳವಣಿಗೆಯ ಹಾದಿ ಹುಡುಕುತ್ತದೆ. ನೀವು ಪೊದರುಗಳ ನಡುವೆ ಮೇಲೇರಿದ ಈ ಹುಲ್ಲನ್ನೂ ಕಾಣಬಹುದು. ಯಾವುದೇ ಸಸ್ಯದ ಆಶ್ರಯವೇ ಇರದೆ ಗುಡ್ಡವೇರುವ, ಮಳೆನೀರಿಗೆ ಕೊಚ್ಚಿ ಹೋಗಬಹುದಾದ ಮಣ್ಣಿನಲ್ಲಿ ಮಳೆಗೆ ಸವಾಲೊಡ್ಡಿ ಬದುಕುವ, ಹೂಗಿಡಗಳ ನಡುವೆ ಹಾರಿ ಹಾರಿ ಹೆಜ್ಜೆಯೂರುವ, ನೀರು ನಿಂತ ಭತ್ತದ ಗದ್ದೆಗಳಲ್ಲಿ ಬಳ್ಳಿ ಮುಳುಗಿಸಿ ಎಲೆ ಮೇಲೆತ್ತಿ ನಡೆವ ಹಲವು ನಡಿಗೆಗಳನ್ನು ಕಾಣಬಹುದು. ಅದರ ಪ್ರತಿ ನಡಿಗೆಯಲ್ಲಿ ಒಂದು ಎಲೆ ಮೊದಲು ಕಾಣಿಸಿಕೊಂಡು ಎಲೆಯು ಗಂಟೊಂದಕ್ಕೆ ಕೂಡಿಕೊಂಡಿರುತ್ತದೆ. ಗಂಟಿನಿಂದ ಮುಂದೆ ಚಾಚಿದ ಎಲೆಯಿಂದ ಎಲೆಗೆ ಗಂಟುಗಳು ಚಾಚುತ್ತಾ ಬೇರೂರುತ್ತಾ ಮುಂದುವರಿಯುತ್ತದೆ.
ಒಂದು ಗಂಟಿಗೊಂದು ಎಲೆ. ಅಲ್ಲೇ ಬೇರೂರಿ ಮುಂದುವರಿಯುವುದೇ ಅಲ್ಲದೆ ಪ್ರತಿ ಗಂಟಿನಿಂದಲೂ ಶಾಖೆಗಳು ಹರಡುತ್ತಾ ಹರಡುತ್ತಾ ನೆಲವನ್ನು ಮುಚ್ಚುತ್ತಾ ಸಾಗುತ್ತವೆ. ಕಂಬಗಳಂತೆ ಗಂಟುಗಳು ಬೇರೂರುತ್ತಾ ಸಾಗುವುದರಿಂದ ತುಳುವಿನಲ್ಲಿ "ಕಬೆ ಪಜಿರ್ " ಎಂದೂ ಕರೆಯುವರು. ಕಬೆ ಎಂದರೆ ಕಂಬ ಎಂದರ್ಥ. ಪಜಿರ್ (ಪಂತಿ) ಎಂದರೆ ಹುಲ್ಲು. ಸಣ್ಣ ಪುಟ್ಟ ಸಸ್ಯಗಳ ನಡುವೆಯೂ ಏರಿ ದಾಟಿ ಬೆಳೆಯುವಾಗ, ಕೆಲವೊಮ್ಮೆ ಒಂದೆರಡು ಅಡಿ ಎತ್ತರಕ್ಕೇರಬೇಕೆಂದಾಗ ಭೂಮಿಗೆ ಉದ್ದನೆಯ ಬೇರನ್ನು ಇಳಿಸುತ್ತದೆ. ಹಸಿರಾದ ಬೇರಿನ ತುದಿ ಬಿಳಿಯಾಗಿದ್ದು ಮಳೆಗಾಲದಲ್ಲಿ ಈ ಬೇರುಟೋಪಿಗೆ ಲೋಳೆ ಇದ್ದು ನೀರಹನಿ ಅದನ್ನು ಆವರಿಸಿ ಮುತ್ತಿನಂತೆ ಕಾಣಿಸುವುದನ್ನು ನೋಡಿಯೇ ಸವಿಯಬೇಕು. ಈ ಹುಲ್ಲು ಅರ್ಧದಿಂದ ಕತ್ತರಿಸಲ್ಪಟ್ಟರೂ ಸಂತಾನ ವೃದ್ಧಿಸಲು ತೊಂದರೆಯಾಗದು. ಇದನ್ನು ಸಸ್ಯಾಹಾರಿ ಪ್ರಾಣಿಗಳು ಬಹಳ ಪ್ರೀತಿಯಿಂದ ತಿನ್ನುತ್ತವೆ. ಕತ್ತಿಯಿಂದ ಕೊಯ್ಯುವ ಬದಲು ಕೈಗಳಲ್ಲಿ ಕೀಳುವುದೇ ಸುಲಭ. ಆದರೆ ಭತ್ತದ ಸಸಿಗಳ ನಡುವೆ ಬೆಳೆದ ಹುಲ್ಲನ್ನು ಎಷ್ಟು ಕಿತ್ತರೂ ರೈತ ಮತ್ತೆ ಮತ್ತೆ ಕೀಳುತ್ತಲೇ ಇರಬೇಕು. ಏಕೆಂದರೆ ಒಂದು ಗಂಟು ಉಳಿದರೆ ಮತ್ತೆ ನಲಿದಾಡುವುದು ತಪ್ಪದು. ಈ ಹುಲ್ಲು ಎಂತಹ ಜಾಣತನದ್ದೆಂದರೆ ನೆರಳಿರುವಲ್ಲಿ ಹಾಗೂ ಗುಂಪಾಗಿ ಬೆಳೆದಲ್ಲಿ ಗಂಟುಗಳಿಂದ ಗಂಟಿಗೆ 15 cm ಗಿಂತಲೂ ಹೆಚ್ಚು ಅಂತರವಿದ್ದರೆ ಬಿಸಿಲಿರುವಲ್ಲಿ ಅಥವಾ ವಿರಳವಾಗಿರುವಾಗ 2 - 3 cm ಮಾತ್ರ ಅಂತರವಿರುತ್ತದೆ!
ಇದರ ಹಸಿರು ವರ್ಣದ ಎಲೆಗಳು ಗಂಟಿಗೊಂದರಂತೆ ದೂರದೂರ ಇರುತ್ತದೆ. ಐದಾರು ಸೆಂ.ಮೀ. ಉದ್ದವಿದ್ದು ತುದಿ ಚೂಪಾಗಿರುತ್ತದೆ. ಪ್ರತಿ ಎಲೆಯ ಕಂಕುಳಿಂದ ತೆನೆಯಂತೆ ಹೂವಿನ ಕಡ್ಡಿಯೊಂದು ಮೂಡಿ ಬೆಳೆಯುತ್ತಾ ಅನೇಕ ಶಾಖೆಗಳಾಗಿ ನೇರವಾಗಿ ನಿಲ್ಲುತ್ತವೆ. ಸೂಕ್ಷ್ಮವಾದ ಪುಷ್ಪಗಳು ಗಾಳಿಗೇ ಪರಾಗಸ್ಪರ್ಶ ಹೊಂದಿ ಅತಿ ಸಣ್ಣ ಬೀಜಗಳಾಗುತ್ತವೆ. ಇರುವೆಗಳು ಚಳಿಗಾಲಕ್ಕಾಗಿ ಈ ಬೀಜಗಳನ್ನು ದಾಸ್ತಾನು ಮಾಡುವುದುಂಟು. ಒತ್ತಾಗಿ ಬೆಳೆದ ಈ ಹುಲ್ಲು ಗುಬ್ಬಿ , ಮೊಲದಂತಹ ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳಿಗೆ ರಕ್ಷಣೆ ನೀಡುತ್ತದೆ. ಹಲವಾರು ಸಸ್ಯಾಹಾರಿಗಳಿಗೆ ಮೇವು. ಕಶೇರುಕಗಳ ಮರಿ ಹುಳಗಳು, ಅಕಶೇರುಕಗಳು ಇದನ್ನು ಅವಲಂಬಿಸಿವೆ. ಈ ಬೀಜಗಳು ಕೆಲವು ಪ್ರಾಣಿಗಳಿಗೆ ಪೌಷ್ಟಿಕಾಂಶ ನೀಡುತ್ತದೆ. ಇದನ್ನು ಆಫ್ರಿಕಾದಲ್ಲಿ ಸಾಂಪ್ರದಾಯಿಕ ಬ್ರೆಡ್ ತಯಾರಿಕೆಗೆ ಬಳಸುತ್ತಾರೆ. ಆಸ್ಟ್ರೇಲಿಯಾ ದಲ್ಲಿ ಬರಗಾಲದ ಆಹಾರವಾಗಿಯೂ ದಾಖಲಾಗಿದೆ. ಇದರ ಕೆಲ ಉಪ ಜಾತಿಗಳು ಇಥಿಯೋಪಿಯ, ಸೊಮಾಲಿಯಾದಂತಹ ದೇಶಗಳಲ್ಲಿ ವಾಣಿಜ್ಯ ಪ್ರಾಮುಖ್ಯತೆ ಯ ಬೆಳೆಯಾಗಿದೆ. ಮಾತ್ರವಲ್ಲದೆ ಕೆಲವು ದೇಶಗಳಲ್ಲಿ ಅಲಂಕಾರಿಕ ಸಸ್ಯವಾಗಿಯೂ ಬಳಸಲ್ಪಡುತ್ತದೆ. ಸಾಗರ ದ್ವೀಪಗಳಲ್ಲಿ ಲವ್ ಗ್ರಾಸ್ ಪ್ರಮುಖ ನೆಲದ ಹೊದಿಕೆಯಾಗಿದೆ. ಇತರೆ ಸಸ್ಯವರ್ಗ ಬೆಳೆಯದ ಭೂಮಿಯಲ್ಲು ಈ ಹುಲ್ಲನ್ನು ಬೆಳೆಸಿ ಹಸಿರು ಹೊದಿಸುವ ಕಾರ್ಯವನ್ನೂ ಕೆಲವೆಡೆ ನಡೆಸುವರು
ಪರಿಸರದಿಂದ ಹೆಚ್ಚು ವಿಷಕಾರಿ ವಿಕಿರಣ ಶೀಲ ಪರಮಾಣುಗಳನ್ನು ತೆಗೆದುಹಾಕಲು, ಮಣ್ಣಿನ ಸವೆತ ತಡೆಗಟ್ಟಲು ವ್ಯಾಪಕವಾಗಿ ಬಳಕೆಯಲ್ಲಿದೆ. ವಾರ್ಷಿಕ ಸಸ್ಯವಾದ ಈ ಹುಲ್ಲು ಗಂಟುಗಳ ಮೂಲಕವಲ್ಲದೆ ಬೀಜಗಳಿಂದ ಪ್ರಸರಣಗೊಳ್ಳುವುದೇ ಹೆಚ್ಚು. ಪ್ರಾಣಿಗಳು ಹಾದು ಹೋಗುವಾಗ ಕೂದಲು, ತುಪ್ಪಳ, ಬಟ್ಟೆಗಳಿಗೆ ಅಂಟಿಕೊಂಡು ಬೀಜ ಪ್ರಸಾರವಾಗುವುದಲ್ಲದೆ ಗಾಳಿ, ನೀರಲ್ಲೂ ಪ್ರಯಾಣಿಸುತ್ತವೆ.
ಮೆದುಳು ಇರುವ ಮನುಷ್ಯನಿಗಿಂತ ಈ ಹುಲ್ಲಿನ ಬದುಕೇನು ಕಡಿಮೆ ಇದೆ ಹೇಳಿ. ಪ್ರತಿ ಕ್ಷಣ ಆನಂದದಿಂದ, ಲವಲವಿಕೆಯಿಂದ ಪಯಣಿಸುವ ಲವ್ ಗ್ರಾಸ್ ಎಂದೂ ಚಿಂತೆಯಲ್ಲಿ ಮುಳುಗಿದ್ದಿಲ್ಲ. ಅಡೆತಡೆ ಬಂದರೆ ತನ್ನೆಲ್ಲ ಶಕ್ತಿ ಸೇರಿಸಿ ನಿವಾರಣೆ ಮಾಡಿಕೊಂಡು ಹಸಿರಾಗಿ ಮುಂದುವರಿಯುತ್ತಲೇ ಇರುತ್ತದೆ. ಸಾಗರದಲೆಗಳಂತೆ ಗಾಳಿಗೆ ಅತ್ತಿತ್ತ ತೊನೆದಾಡುತ್ತಾ, ಜೀಕುತ್ತಾ ಲಾಸ್ಯವಾಡುತ್ತಿರುತ್ತದೆ. ನೀವೂ ಒಮ್ಮೆ ಈ ಹುಲ್ಲಿನ ಬಳಿ ಹೋಗಿ.. ಹೋಗುತ್ತಾ ಇರಿ. ಅದರ ಮುಗ್ಧ ನಲಿವಿನ ಜೊತೆ ಒಂದಾಗಿ ಬೆರೆಯಿರಿ.
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ