ನಿಷ್ಪಾಪಿ ಸಸ್ಯಗಳು (ಭಾಗ ೭೦) - ನೀರು ಕಡ್ಡಿ ಗಿಡ
ವಿದ್ಯಾರ್ಥಿಗಳನ್ನು ನೋಡುವಾಗ ನಮಗೂ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ಪುಟ್ಟ ಚೀಲದೊಳಗೆ ಒಂದು ಸ್ಲೇಟು, ಒಂದೆರಡು ಪುಸ್ತಕ, ಪೆನ್ಸಿಲು ಹಾಗೂ ಜತನದಿಂದ ಕಾಯ್ದುಕೊಳ್ಳುವ ಬಳಪ. ಮೊದಲೆರಡು ತರಗತಿಗಳು ಸ್ಲೇಟು ಮತ್ತು ತುಂಡು ಕಡ್ಡಿಯಲ್ಲಿಯೇ ಮುಗಿಯುತ್ತಿತ್ತು. ಬರೆಯುವುದು, ಉಜ್ಜುವುದು ಅಷ್ಟೇ..! ಬರೆಯಲು ಕಷ್ಟವಲ್ಲ, ಈ ಬರ್ದದ್ದನ್ನು ಅಳಿಸಲು ಆಗಾಗ ನೀರಿಗಾಗಿ ಹೊರಗೆ ಹೋಗಬೇಕಿತ್ತು. ಕೆಲವರು ಪುಟ್ಟ ಬಾಟಲಿಯಲ್ಲಿ ನೀರನ್ನು ಚೀಲದಲ್ಲೇ ಇಟ್ಟುಕೊಳ್ಳುತ್ತಿದ್ದರು. ನಮ್ಮ ಉದಾಸೀನತೆ ಎಷ್ಟಿತ್ತೆಂದರೆ ನಾವು ನೀರನ್ನೂ ತರದೆ ದಾರಿಯಲ್ಲಿ ಸಿಕ್ಕ ನೀರ್ ಕಡ್ಡಿ ಎಂಬ ಗಿಡ ಇಟ್ಟುಕೊಳ್ಳುತ್ತಿದ್ದೆವು. ಸ್ಲೇಟಲ್ಲಿ ಬರೆದುದನ್ನ ತರಗತಿಯಲ್ಲಿ ಕುಳಿತಲ್ಲೇ ಈ ಗಿಡದ ಶಾಖೆಗಳನ್ನು ಹಿಸುಕಿ ರಸದಿಂದ ಸ್ವಚ್ಛಗೊಳಿಸುತ್ತಾ ಮಹಾ ಸಾಧನೆ ಮಾಡಿದವರಂತೆ ಬೀಗುತ್ತಿದ್ದೆವು.
ಸಸ್ಯಗಳು ನೀರನ್ನು ಹೀರಿಕೊಳ್ಳುತ್ತವೆ ಎಂದು ಸಾಬೀತು ಪಡಿಸಲು ನಮ್ಮ ಶಿಕ್ಷಕರೊಂದು ಪ್ರಯೋಗ ಮಾಡುತ್ತಿದ್ದರು. ಅದಕ್ಕೂ ಮಕ್ಕಳಲ್ಲಿ ನೀರು ಕಡ್ಡಿ ಗಿಡ ತರಲು ಹೇಳುತ್ತಿದ್ದರು. ನೀಲಿ ಅಥವಾ ಯಾವುದೇ ಬಣ್ಣದ ನೀರಲ್ಲಿ ನೀರುಕಡ್ಡಿ ಗಿಡವನ್ನಿಟ್ಡು ಬಿಸಿಲಲ್ಲಿಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿಯೆ ಗಿಡವು ಬಣ್ಣ ಬದಲಾಯಿಸುತ್ತಿತ್ತು. ಪಾರದರ್ಶಕ ವಾಗಿರುವ ಈ ಗಿಡ ಬೇರಿಗೆ ಸಿಕ್ಕ ನೀರಿನ ಬಣ್ಣದಿಂದ ಕಂಗೊಳಿಸುವುದನ್ನು ಕಂಡಾಗ 'ಹೀಗೂ ಉಂಟೇ ಎಂದು ವಿಸ್ಮಯ ಪಡುತ್ತಿದ್ದೆವು.
ಈಗ ಸ್ಲೇಟ್ ಎಂಬ ವಸ್ತುವೇ ಕಾಣೆಯಾಗಿದೆ. ಯಾರೂ ಉಪಯೋಗಿಸುತ್ತಿಲ್ಲ. ಹಾಗಾಗಿ ಮಕ್ಕಳ ಕಣ್ಣಿಂದ ನೀರುಕಡ್ಡಿಯೂ ದೂರವಾಗಿದೆ. Pepper elder, Shining bush plant, Crab clene hard, Man to man ಎಂಜಿತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಈ ಸಸ್ಯ ಹಳ್ಳಿಯಲ್ಲಿ ನೀರ್ಕಡ್ಡಿ ಗಿಡ ಎಂದೇ ಚಿರಪರಿಚಿತ. ವರ್ಷ ಋತುವಿನ ಆಗಮನದ ಜೊತೆ ಹಲವಾರು ಸಸ್ಯಗಳು ಉದಿಸಿ ಮಳೆ ನಿಲ್ಲುತ್ತಲೇ ಕಣ್ಮರೆಯಾಗುವ ಹಲವಾರು ಸಸ್ಯಗಳಲ್ಲಿ ಈ ನೀರುಕಡ್ಡಿಯೂ ಒಂದು. 6ರಿಂದ 18 ಇಂಚು ಎತ್ತರ ಬೆಳೆಯುವ ನೀರ್ ಕಡ್ಡಿಯ ಕಾಂಡ ರಸಭರಿತವಾಗಿರುತ್ತದೆ. ತಿಳಿ ಹಸಿರಾದ ಎಲೆಗಳು ಪರ್ಯಾಯವಾಗಿ ಅಭಿಮುಖವಾಗಿರುತ್ತವೆ. ಗಿಡದ ಶಾಖೆಗಳು ದೂರ ದೂರ ಗಂಟುಗಳನ್ನೊಳಗೊಂಡು ಗಂಟುಗಳಲ್ಲಿ ಎರಡೆರಡು ಎಲೆಗಳು ಹೂ ಕಾಯಿಗಳು ಇರುತ್ತವೆ. ನಮ್ಮ ಕಣ್ಣಿನ ರೆಪ್ಪೆಯ ಕೂದಲಿಗಿಂತಲೂ ತೆಳ್ಳಗಿನ ಉದ್ದ ತೊಟ್ಟಿನಲ್ಲಿ ಗುಲಾಬಿ ವರ್ಣದ ಪುಟ್ಟ ಎರಡೆಸಳಿನ ಪುಷ್ಪ ಪುಟಾಣಿ ಪುಷ್ಪಪಾತ್ರೆಯಲ್ಲಿ ಮೂಡಿ ಕೆಳಭಾಗದಲ್ಲಿ ಸಣ್ಣ ಬಾಲದಂತಹ ರಚನೆ ಇರುತ್ತದೆ. ಪುಟ್ಟ ಶಲಾಕಾಗ್ರವು ಹಸಿರಿನ ಪುಟ್ಟ ಮಾಡಿನಂತಹ ರಕ್ಷಣೆಯಲ್ಲಿ ಫಲಿತಗೊಂಡು ಹಸಿರು ಆವರಣ ಭರಿತ ಕಾಯಿಯಾಗುತ್ತದೆ. ಬೆಳೆದ ಕಾಯಿಯು ಒಣಗಿ ಒಡೆದು ಸಾಸಿವೆಗಿಂತಲೂ ಅತೀ ಸಣ್ಣ ಬೀಜಗಳು ಸುತ್ತಲೂ ಹಾರಿ ಬೀಳುವ ಮೂಲಕ ಬೀಜ ಪ್ರಸಾರಗೊಳ್ಳುತ್ತದೆ. ಆಗಸ್ಟ್ ನಿಂದ ಫೆಬ್ರವರಿಯವರೆಗೆ ಹೂವು ಕಾಯಿಗಳಾಗುತ್ತವೆ. ಬಿಸಿಲು ಹೆಚ್ಚಿದ್ದ ದಿನ ಸಂಜೆಗೆ ಇಡೀ ಗಿಡ ಬಾಗಿ ನಿಲ್ಲುತ್ತದೆ. ನೀವು ಸ್ವಲ್ಪ ನೀರು ಹಾಕಿದರೆ ಕೂಡಲೇ ಮೈಕೊಡವಿ ನಿಂತು ನಗತೊಡಗುತ್ತದೆ.
ನಮ್ಮಲ್ಲಿ ನೀರ್ ಕಡ್ಡಿ ಒಂದು ಕಳೆ ಸಸ್ಯವೆಂದು ಪರಿಗಣಿಸಲ್ಪಟ್ಟಿದ್ದರೂ ಇದು ಆಹಾರ ವಾಗಿಯೂ ಔಷಧೀಯ ಮೂಲಿಕೆಯಾಗಿಯೂ ಬಳಕೆಯಲ್ಲಿದೆ ಗೊತ್ತೇ? ಈ ನಿಷ್ಪಾಪಿ ಸಸ್ಯವು ಉತ್ತಮ ನೋವು ನಿವಾರಕವಾಗಿದೆ. ಕಿಬ್ಬೊಟ್ಟೆಯ ನೋವು, ಹುಣ್ಣು, ಮೊಡವೆ, ಆಯಾಸ, ಮೂತ್ರಪಿಂಡದ ಅಸ್ವಸ್ಥತೆ, ರಕ್ತಸ್ರಾವ ನಿಲ್ಲಿಸಲು, ದಡಾರ, ಅತಿಸಾರ, ಶೀತ ಕೆಮ್ಮು ಇತ್ಯಾದಿಗಳಿಗೆ ಬಳಸಲಾಗುತ್ತದೆ.
ಪೆಪರೋಮಿಯಾ ಪೆಲ್ಲುಸಿಡಾ (Peperomia Pellucida) ಎಂಬ ವೈಜ್ಞಾನಿಕ ಹೆಸರುಳ್ಳ ನೀರು ಕಡ್ಡಿ ಪೆಪರಾಸಿಯೆ (Piperaceae) ಕುಟುಂಬದ ಸದಸ್ಯ. ಬ್ರೆಸಿಲ್ ದೇಶದಲ್ಲಿ ಕೊಲೆಸ್ಟರಾಲ್ ಕಡಿಮೆಗೊಳಿಸಲು, ಅಮೆಜಾನ್ ಪ್ರದೇಶದಲ್ಲಿ ಜನಪ್ರಿಯ ಕೆಮ್ಮು ನಿವಾರಕವಾಗಿದೆ. ನೈಜೀರಿಯಾ ದಲ್ಲಿ ಅಧಿಕ ರಕ್ತದೊತ್ತಡ, ನಿದ್ರಾ ಹೀನತೆ, ಮೂತ್ರನಾಳದ ಸೋಂಕಿಗೆ ಬಳಸುವರು. ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆಗೆ, ಅಧಿಕ ರಕ್ತದೊತ್ತಡಕ್ಕೂ ಸಹಕಾರಿಯಾಗಿದೆ ಎನ್ನಲಾಗಿದೆ. ಈ ಸಸ್ಯದ ಮೂಲ ದಕ್ಷಿಣ ಅಮೆರಿಕವೆನ್ನಲಾಗಿದೆ. ಫಿಲಿಪೈನ್ಸ್ ಸರಕಾರ ಅನುಮೋದಿಸಿದ ಹತ್ತು ಔಷಧೀಯ ಸಸ್ಯಗಳಲ್ಲಿ ಇದೂ ಒಂದು! . ಸಡಿಲವಾದ, ಆರ್ದ್ರ, ಉಷ್ಣ ಮತ್ತು ಉಪವಷ್ಣವಲಯದ ಮಬ್ಬಾದ, ತೇವದ ಮಣ್ಣಿನಲ್ಲಿ ಬೆಳೆಯುತ್ತದೆ. ಕರ್ಣಕುಂಡಲ ಅಥವಾ ಗೌರೀ ಹೂವು ಕೂಡ ಇದರ ಜಾತಿಗೇ ಸೇರುತ್ತದೆ. ಇದನ್ನು ಹೆಚ್ಚಾಗಿ ಅಲಂಕಾರಿಕ ಗಿಡವಾಗಿ ಬೆಳೆಸಿದರೆ ನೀರುಕಡ್ಡಿ ಮಣ್ಣಿನ ದಂಡೆ, ಗುಡ್ಡದ ಇಳಿಜಾರು, ಗದ್ದೆಯ ಬದು, ಕ್ಷೀಣಿಸಿದ ಹಸಿರು ಹಾದಿಯಲ್ಲೆಲ್ಲ ಕಾಣಿಸುತ್ತದೆ.
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ