ನಿಷ್ಪಾಪಿ ಸಸ್ಯಗಳು (ಭಾಗ ೭೫) - ಗಿಜಿ ಗಿಜಿ ಗಿಡ

ನಿಷ್ಪಾಪಿ ಸಸ್ಯಗಳು (ಭಾಗ ೭೫) - ಗಿಜಿ ಗಿಜಿ ಗಿಡ

ನಾನು ಮೊನ್ನೆ ಜುಲೈ ತಿಂಗಳಲ್ಲಿ ಒಂದು ಹೊಸ ಸಸ್ಯವನ್ನು ಗುರುತಿಸಿದೆ ಗೊತ್ತಾ! ಈ ಗಿಡದ ಹೊಳೆಯುವ ಹಸಿರಿನ ಸ್ವಲ್ಪ ದಪ್ಪನೆಯ ಎಂಟು ಹತ್ತು ಸೆಂ.ಮೀ ಉದ್ದ, ಮೂರು ನಾಲ್ಕು ಸೆಂ.ಮೀ ಅಗಲದ ಎಲೆಗಳ ಅಡಿಭಾಗ ಮಾಸಲು ಹಸಿರು. ಇತರ ಪೊದೆಗಳ ನಡುವೆ ಈ ಸಸ್ಯವು ವಿಶೇಷ ರೂಪದಲ್ಲಿ ಕಾಣಿಸುತ್ತಿತ್ತು!. ನಾನೂ ಆಕರ್ಷಣೆಗೆ ಒಳಗಾಗಿ ಒಂದೆರಡು ಫೋಟೋ ತೆಗೆದುಕೊಂಡೆ. ಅದರ ಕಾಂಡದಲ್ಲಿ ಸುತ್ತಲೂ ಶಾಖೆಗಳಿದ್ದು ನೇರವಾಗಿ ಬೆಳೆದಿದ್ದವು. ಹೂವೇನೂ ಬಂದಿರಲಿಲ್ಲ. ವಾರದಲ್ಲಿ ಒಂದೆರಡು ಬಾರಿ ಗಿಡದ ಬಳಿ ಹೋಗಿ ಬರುತ್ತಿದ್ದೆ. ನನ್ನನ್ನು ನೋಡಿ ಪರಿಚಯದ ನಗು ಬೀರುತ್ತಿತ್ತೇ ಹೊರತು ತನ್ನ ಪರಿಚಯವನ್ನದು ಮಾಡಿಕೊಳ್ಳಲೇ ಇಲ್ಲ. ನನಗೂ ಹಠವಿತ್ತು. ಒಂದಲ್ಲ ಒಂದು ದಿನ ವಸಂತಕಾಲ ಬಾರದಿರುವುದೇ... ಎಂದು ಕಾಯತೊಡಗಿದೆ. ಮೊತ್ತೊಂದು ದಿನ ಹೊಸ ಹೂಗಳು ಅರಳಿ ನಿಂತಿವೆಯೇನೊ ಎಂದು ಮಾತನಾಡಿಸಿ ಬರೋಣವೆಂದು ಹೊರಟರೆ ಗಿಡವೆಲ್ಲ ಹಳದಿ ಹೂಗಳ ತೋರಣ ಕಟ್ಟಿ ನನ್ನನ್ನೇ ಕಾಯುವಂತಿತ್ತು! "ಓ..ಸಿಕ್ಕಿ ಬಿದ್ದೆ !" ಎಂದು ನಕ್ಕೆ ನಾನು. ಗಿಡಕ್ಕೆ ವಿಸ್ಮಯವಾಯ್ತು!

ಇದರ ಎಲ್ಲಾ ಶಾಖೆಗಳ ತುದಿಯಲ್ಲಿ ನೇರವಾಗಿ ತೆನೆಯಂತೆ ಹಸಿರು ಕಡ್ಡಿಯಲ್ಲಿ ಮೇಲ್ಭಾಗದಲ್ಲಿ ದಿನ ದಿನ ಅರಳಬೇಕಾದ‌ ಮೊಗ್ಗುಗಳ ಸಾಲು ಹಾಗೂ ಕೆಳಭಾಗದಲ್ಲಿ ಚಿಟ್ಟೆಯಂತೆ ಅರಳಿದ ಹಳದಿ ಹೂಗಳಿದ್ದವು. ಆಗಸ್ಟ್ ನಿಂದ ನವೆಂಬರ್ ವರೆಗೆ ಹೂಗಳರಳುತ್ತವೆಯೆಂದು ಗಿಡ ಉಸುರಿತು. ಕೆಲವು ಪುಷ್ಪಮಂಜರಿಯಲ್ಲಿ ಕೋಡುಗಳೂ ಆಗಿದ್ದವು. ಮೂರು ನಾಲ್ಕು ಸೆ.ಮೀ ಉದ್ದದ ಕೋಡಿನೊಳಗೆ ಹತ್ತಕ್ಕಿಂತ ಹೆಚ್ಚು ಸಣ್ಣಸಣ್ಣ ಕಂದು ಬೀಜಗಳು ಕೋಡಿನ ಒಳಭಾಗದ ಗೋಡೆಗೆ ಅಂಟಿಕೊಂಡಿದ್ದವು.

ನಾನು ಈಗ ಮತ್ತೊಮ್ಮೆ ಫೋಟೋ ತೆಗೆಯತೊಡಗಿದೆ. ಮಾರ್ಗದ ಬದಿಯಲ್ಲಿ ಈ ಗಿಡ ಇದ್ದುದರಿಂದ ವಾಹನಗಳು ಹೋಗಿ ಬರುತ್ತಿದ್ದವು. ರಿಕ್ಷಾದಲ್ಲಿ ಹೋಗುತ್ತಿದ್ದ ಬೇಬಿಯಣ್ಣ "ಅದ್ಯಾಕೆ ಫೋಟೋ...? ಅದೊಂದು ಕಾಟು ಗಿಡ" ಅಂದರು. "ನಿಮಗೆ ಪರಿಚಯವಿದೆಯೇ?" ಎಂದು ಪ್ರಶ್ನಿಸಿದೆ ನಾನು. "ಹೌದು, ಅದು ಗಿಜಿ ಗಿಜಿ ಗಿಡ" ಅಂದರು ಮಾತ್ರವಲ್ಲ "ಅದೊಂದು ವಿಷಕಾರಿ ಸಸ್ಯ, ಎಲೆ ಹೂ ಕೊಯ್ಬೇಡ" ಅಂತಂದರು. 

ಬೇಬಿಯಣ್ಣನ ಮಾತಿನಿಂದ ನನಗೆ ಆ ನಿಷ್ಪಾಪಿ ಸಸ್ಯದ ಹೆಸರು ತಿಳಿಯಿತು. ಮಾತ್ರವಲ್ಲ ಸಸ್ಯವೊಂದು ವಿಷಕಾರಿಯೆ? ಎಂದು ತಿಳಿಯುವ ಕುತೂಹಲವಾಯ್ತು.

ಕ್ರೊಟಲೇರಿಯಾ ಕುಲದ ರೆಟುಸಾ ಜಾತಿಯ Crotalaria Retusa ಎಂಬ ಸಸ್ಯ ಶಾಸ್ತ್ರೀಯ ಹೆಸರಿನ ಈ ಸಸ್ಯ ಫ್ಯಾಬೇಸಿ (Fabaceae) ಕುಟುಂಬಕ್ಕೆ ಸೇರಿದೆ. ಇದು ದ್ವಿದಳ ಧಾನ್ಯದ ಕುಟುಂಬದ ಹೂಬಿಡುವ ಸಸ್ಯದ ಜಾತಿ. ರಾಟಲ್ ಪಾಡ್ಸ್, ಡೆವಿಲ್ ಬೀನ್, ರಾಟಲ್ ವೀಡ್, ಶಾಕ್ ಶಾಕ್ , ವೆಜ್ ಲೀಫ್, ರಾಟಲ್ ಪಾಡ್ ಎಂಬಿತ್ಯಾದಿ ಹೆಸರುಗಳನ್ನು ಪಡೆದಿದೆ. ಉಷ್ಣವಲಯದ ಆಗ್ನೇಯ ಏಷ್ಯ, ಆಫ್ರಿಕಾ, ಆಸ್ಟ್ರೇಲಿಯಾ, ಅಮೇರಿಕಾಗಳಲ್ಲಿ ಹರಡಿದೆ. ಭಾರತ, ಕ್ಯೂಬಾಗಳಲ್ಲಿ ಅಕ್ರಮಣಕಾರಿ ಕಳೆಯಾದ ಒಂದು ವಾರ್ಷಿಕ ಸಸ್ಯವೆಂದು ಗುರುತಿಸಲ್ಪಟ್ಟಿದೆ.

ಮರಳು, ಜೇಡಿ, ಮರಳುಗಲ್ಲು, ಕಿಂಬರ್ಲಿಯಲ್ಲಿ ಕಲ್ಲಿನ ಬಸಾಲ್ಟಿಕ್ ಮಣ್ಣಿನ ಮೇಲೆ ಬೆಳೆಯುವ ಈ ಗಿಜಿಗಿಜಿ ಕಾಯಿ ತೊರೆ, ನದಿ, ಪ್ರವಾಹ ಪ್ರದೇಶಗಳಲ್ಲಿ ಬೆಳೆಯುತ್ತದೆ. ಕ್ರೊಟಲೇರಿಯಾದ ಅನೇಕ ಪ್ರಭೇದಗಳಿಗೆ ವಿಷತ್ವದ ಪ್ರಾಥಮಿಕ ಮೂಲ ಫೈರೋಲಿಜಿಡಿನ್ ಆಲ್ಕಲಾಯ್ಡ್ ಗಳ ಉಪಸ್ಥಿತಿ ಇದೆ. ಇದು ಮಾನವನ ಆರೋಗ್ಯಕ್ಕೆ ಅಪಾಯಕಾರಿ. ತೇವಾಂಶ ಇರುವ ಭೂಮಿಯಲ್ಲಿ ಬೆಳೆದ ಈ ಕ್ರೊಟೊಲಿಯಾ ರೆಟುಸಾ ಸಸ್ಯವನ್ನು ಆಸ್ಟ್ರೇಲಿಯಾ ದಲ್ಲಿ ಕುದುರೆಗಳು ತಿಂದಾಗ ಮರಣಕ್ಕೀಡಾದುವು. ಇದನ್ನು ಕಿಂಬರ್ಲಿ ಹಾರ್ಸ್ ಡಿಸೀಸ್ ಅಥವಾ ವಾಕ್ ಔಟ್ ಎಂದು ಕರೆಯುತ್ತಾರೆ. ಕುದುರೆಗಳಿಗೆ ಈ ಸಸ್ಯದ ಮೇವಿನಿಂದಾಗಿ ಕಾಯಿಲೆ ಬಂದರೆ ನಿಧಾನಕ್ಕೆ ಜರ್ಝರಿತವಾಗಿ ಅಂಗಾಂಗ ವೈಫಲ್ಯ ಹೊಂದುತ್ತಾ ಮೂರು ನಾಲ್ಕು ತಿಂಗಳವರೆಗೆ ನರಳುತ್ತಾ ಕೊನೆಯುಸಿರೆಳೆಯುತ್ತವೆ. ಎರಡು ಮೂರು ವರ್ಷಗಳ ಬಳಿಕವೂ ಸಾಯಬಹುದಾಗಿದೆ. ತೂಕ ನಷ್ಟ, ನಿದ್ರೆ, ಖಿನ್ನತೆ ಯಿಂದಾಗಿ ಕುದುರೆಗಳು ಕೆರಳುತ್ತವೆ. ಸಾಯುವ ವರೆಗೂ ಗುರಿಯಿಲ್ಲದೆ ನಡೆಯಲು ಪ್ರಾರಂಭಿಸುತ್ತವೆ. USA ಯಲ್ಲಿ ಈ ಸಸ್ಯದ ಬೀಜಗಳು ಕೋಳಿಗಳಿಗೆ ವಿಷವೆಂದು ಕಂಡುಕೊಂಡಿದ್ದಾರೆ. ಸಾಕುಪ್ರಾಣಿಗಳಿಗೆ ಅಂಗಾಂಶ ಹಾನಿ, ದನ, ಕುರಿ, ಆಡು, ಕುದುರೆ, ಹಂದಿಗಳಿಗೆ ಶ್ವಾಸಕೋಶ, ಯಕೃತ್ತು, ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗಬಲ್ಲದು. 2019 ರಲ್ಲಿ ಬ್ರೆಜಿಲ್ ನಲ್ಲಿ ಮಣ್ಣಿನ ಸಾರಜನಕ ಹೆಚ್ಚಿಸಲು ಬೆಳೆಸಿದ್ದ ಈ ಕ್ರೊಟಲೇರಿಯಾದ ಬೀಜಗಳು ಓಟ್ಸ್ ಜೊತೆಗೆ ಕುದುರೆಗಳ ಹೊಟ್ಟೆ ಸೇರಿದಾಗ ಕುದುರೆಗಳು ಅಸ್ವಸ್ಥಗೊಂಡವು. ಇದರ ಪರಾಗ ಗಾಳಿಯಲ್ಲಿ ತಗುಲಿದರೂ ಕಣ್ಣು ಮುಖದ ಊತ, ಕುತ್ತಿಗೆ ಭುಜದ ಮೇಲೆ ದದ್ದು, ತುರಿಕೆಗಳಾಗಬಹುದು. ಅದಕ್ಕಾಗಿಯೇ ಈ ಸಸ್ಯವನ್ನು ದೆವ್ವದ ಹುರುಳಿಯೆಂದೂ ಕರೆಯುವರು.

ಕ್ರೊಟಲೇರಿಯಾದ ಅನೇಕ ಪ್ರಭೇದಗಳಿಗೆ ವಿಷವಿದೆ. ಪಕ್ಷಿಗಳಿಗೆ, ದೊಡ್ಡ ಸಸ್ತನಿಗಳಿಗೂ ವಿಷಕಾರಿ. ಈ ಕುಲವು 700 ಕ್ಕೂ ಹೆಚ್ಚು ಜಾತಿಯ ಮೂಲಿಕೆ ಸಸ್ಯಗಳನ್ನು ಹೊಂದಿದ್ದು ಆಫ್ರಿಕಾ ಒಂದರಲ್ಲೇ 400 ಕ್ಕೂ ಹೆಚ್ಚು ಜಾತಿಗಳಿವೆ. ಕೆಲವು ಅಲಂಕಾರಿಕ ಸಸ್ಯಗಳಾಗಿದ್ದರೆ ಕ್ಯೂಬಾದಂತಹ ದೇಶದಲ್ಲಿ ಆಹಾರವಾಗಿ ಬಳಕೆಯಾಗುವ ಜಾತಿಗಳೂ ಇವೆ. ಕೆಲವು ಜಾತಿಯ ಚಿಟ್ಟೆಗಳಿಗೆ ಹೂಗಳ ಮಕರಂದದ ಆಕರ್ಷಣೆಯಿದ್ದು ಗುಂಪಾಗಿ ಪ್ರಾಣ ಕಳೆದುಕೊಳ್ಳುವುದೂ ಇದೆ. ಕೆಲವು ಅಲಂಕೃತ ಪತಂಗದ ಲಾರ್ವಾಗಳು ಈ ಸಸ್ಯದ ಎಲೆಯನ್ನು ತಿನ್ನುತ್ತವೆ. ವಿಷಕಾರಿ ಸಂಯುಕ್ತವನ್ನು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮೊಳಗೆ ವಿಷಕಾರಿಗಳಾಗಿ ಬದಲಾಯಿಸಿ ಕೊಳ್ಳುವುದೂ ಇದೆ! ಪ್ರಕೃತಿಯ ಕೃತಿಗಳನ್ನು ಅಳೆಯುವ ಮಾನ ಹುಲುಮಾನವನ ಕೈಯ್ಯಲ್ಲಂತೂ ಇಲ್ಲವೇ ಇಲ್ಲ ಅಲ್ಲವೇ?

ಎಲ್ಲ ಸಸ್ಯಗಳಂತೆ ಇದೂ ಒಂದು ಮೂಲಿಕೆ. ನೋವು ನಿವಾರಕವಾಗಿ, ಉರಿಯೂತ, ಕ್ಯಾನ್ಸರ್, ಚರ್ಮದ ಕಾಯಿಲೆಗಳಿಗೂ ಬಳಕೆಯಿದೆ. ಈ ಸಸ್ಯದ ಪ್ರಯೋಜನಗಳ ಬಗ್ಗೆ ಬಹಳಷ್ಟು ಸಂಶೋಧನೆಗಳಾಗುತ್ತಿವೆ. ವಿಶ್ವದೆಲ್ಲೆಡೆ ಕಳೆಗಿಡ, ಆಕ್ರಮಣಕಾರಿಯೆಂದು ಹೇಳಲ್ಪಡುವ ಈ ಸಸ್ಯ ಗೊಬ್ಬರವಾಗಿ ಬಳಕೆಯಾಗುತ್ತದೆ. ಒಂದು ಗಿಡ ನೂರಾರು ಬೀಜಗಳನ್ನು ಗಾಳಿಗೊಡ್ಡಿ ಭೂಮಿಗೆ ಹಸಿರು ಹೊದಿಕೆಯಾಗುತ್ತದೆ. ಹೇಗಿದ್ದರೂ ಸಸ್ಯಗಳು ಪರಿಸರಕ್ಕೆ ಸಹಾಯಕವಾಗಿವೆ ಅಲ್ಲವೇ?

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ