ನಿಷ್ಪಾಪಿ ಸಸ್ಯಗಳು (ಭಾಗ ೯೧) - ಈಟಿನ ಗಿಡ


ಮಕ್ಕಳೇ, ಹೇಗಿದ್ದೀರಿ? ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಿರಲ್ಲವೇ? ಈ ನಡುವೆ ನಾವಿಂದು ಉತ್ತಮ ಕೃಷಿಕರೆಂದು ಪ್ರಸಿದ್ಧಿ ಪಡೆದಿರುವ ರೈತರೊಬ್ಬರ ತೋಟಕ್ಕೆ ಭೇಟಿ ನೀಡೋಣ, ಬನ್ನಿ. ಇದು ಉಪ್ಪಿನಂಗಡಿಯ ಸಮೀಪವಿರುವ ಕರಾಯ ಎಂಬ ಒಂದು ಪುಟ್ಟ ಊರು. ಇದು ಈ ಊರಿನಲ್ಲಿರುವ ಗಣೇಶ್ ಐತಾಳರೆಂಬ ರೈತರ ಮನೆ. ಇವರು ಹತ್ತಿಪ್ಪತ್ತು ವರ್ಷಗಳಿಂದ ಅಡಿಕೆ ತೆಂಗು ಬೆಳೆಯುತ್ತಿದ್ದಾರೆ. ಕೊಕ್ಕೋ, ಚಿಕ್ಕು, ಬಾಳೆ ಬೇಸಾಯವೂ ಇದೆ. ವಿಶೇಷವೇನೆಂದರೆ ಇವರು ಸಾವಯವ ಕೃಷಿಕರು. ಅಂದರೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನೇ ಮಾಡಿಲ್ಲವಂತೆ. ಆದರೂ ಇವರ ತೋಟದಲ್ಲಿ ಫಸಲು ದಾಖಲೆಯ ಮಟ್ಟದಲ್ಲಿದ್ದು "ಉತ್ತಮ ಕೃಷಿಕ" ಎಂಬುದಾಗಿ ಕೃಷಿ ಇಲಾಖೆ ಗೌರವಿಸಿದೆ. ಅವರ ಈ ಯಶಸ್ಸಿನ ಗುಟ್ಟೇನೆಂದು ಕೇಳಿ ತಿಳಿದುಕೊಳ್ಳೋಣ ಆಗದೇ..?
ಬನ್ನಿ..ತೋಟದಲ್ಲಿರುವ ಗಣೇಶ್ ಐತಾಳರ ಬಳಿಗೇ ಹೋಗಿ ಮಾತನಾಡಿಸೋಣ.
ಶಿಕ್ಷಕಿ: ಐತಾಳರೇ ನಮಸ್ತೆ.. ನೀವು ಸಾವಯವ ಕೃಷಿಕರೆಂದು ಪ್ರಸಿದ್ಧರಾಗಿದ್ದೀರಿ. ಇದು ಹೇಗೆ ಸಾಧ್ಯವಾಯಿತೆಂದು ತಿಳಿಯಲು ನಮ್ಮ ವಿದ್ಯಾರ್ಥಿಮಿತ್ರರು ಕಾತರರಾಗಿದ್ದಾರೆ.. ದಯಮಾಡಿ ವಿವರಿಸಿ.
ಗಣೇಶ್: ಬಹಳ ಸಂತೋಷವಾಯಿತು. ಬನ್ನಿ ನಮ್ಮ ತೆಂಗಿನ ತೋಟಕ್ಕೆ ಹೋಗೋಣ.
ಭವಾನಿ: ಹೋ! ಇಲ್ಲಿ ತೆಂಗಿನ ಮರಗಳ ತಲೆಗಳು ಮಾತ್ರ ಕಾಣಿಸುತ್ತಿವೆ... ಬುಡಗಳೆಲ್ಲ ಈಟಿನ ಗಿಡಗಳಿಂದ ಮುಚ್ಚಿ ಹೋಗಿದೆ.
ಶಾಹಿಕ್: ನಾವು ನಮ್ಮ ರಜಾಕಾಲದಲ್ಲಿ ಮನೆ ಕಟ್ಟುವ ಆಟ ಆಡುತ್ತಿದ್ದೆವು.. ಆ ಮನೆಗಳ ಮಾಡು ಮಾಡಲು ಈ ಈಟಿನ ಗಿಡಗಳೇ ಆಗಬೇಕಿತ್ತು. ಮಾತ್ರವಲ್ಲ ಇದರ ಸುಂದರವಾದ ಎಲೆಗಳೇ ಮನೆಯ ಅಲಂಕಾರ!.
ಗಣೇಶ್ : ಹ್ಹಾಂ....ಅದನ್ನೇ ಆಟಕ್ಕೇಕೆ ಉಪಯೋಗಿಸಿದಿರಿ ಎಂದೂ ನನಗೊತ್ತು ಮಗು! ಅದನ್ನು ಕಡಿಯಲು ಬಹಳ ಸುಲಭ. ತುಂಬಾ ಮೆತ್ತಗಿನ ಗಿಡಗಳವು. ಎಲೆಗಳೂ ಒತ್ತೊತ್ತಾಗಿದ್ದು ನುಣುಪಾಗಿವೆ. ಬಣ್ಣವನ್ನು ನೋಡಿ, ಗಾಢ ಹಸಿರು!
ನಂದನ್: ಹೌದು ಗಣೇಶಣ್ಣಾ... ನಿಮ್ಮ ಮಾತು ಸತ್ಯ. ಅಂದ ಹಾಗೆ.. ಇದರ ಕನ್ನಡದ ಹೆಸರೇನು?
ಗಣೇಶ್: ಮಗೂ ಇದನ್ನು ತುಳು ಭಾಷೆಯಲ್ಲಿ 'ಈಟ್ ದ ದೈ 'ಎಂದೂ ಕನ್ನಡದಲ್ಲಿ ಗೊಬ್ಬರದ ಗಿಡ, ಗೊಬ್ಬರದ ಕಡ್ಡಿ ಎಂದೂ ಕರೆಯುವರು. ಸಸ್ಯ ಶಾಸ್ತ್ರೀಯ ವಾಗಿ ಗ್ಲಿರಿಸೀಡಿಯ ಸೆಪಿಯಮ್ ಎನ್ನುವರು. ಇದು ಫ್ಯಾಬೇಸಿಯೇ ಕುಟುಂಬದ ಸದಸ್ಯ ಸಸ್ಯ. ಇದಕ್ಕೆ ಬಂಗಾಳಿ ಭಾಷೆಯಲ್ಲಿ ಸಾರಂಗ, ಮರಾಠಿಯಲ್ಲಿ ಗಿರಿಪುಷ್ಪವೆಂದೂ ಸುಂದರವಾದ ಹೆಸರುಗಳಿವೆ.
ಶಿಕ್ಷಕಿ: ನೀವು ಸಾವಯವ ಕೃಷಿಕರೆಂಬುದನ್ನು ತಿಳಿದಿದ್ದೇವೆ. ಎಲ್ಲೆಡೆ ರಾಸಾಯನಿಕ ಗೊಬ್ಬರದ ಬಳಕೆಯೇ ಇರುವಾಗ ಅದು ಹೇಗೆ ಸಾಧ್ಯವಾಗಿದೆ... ತಿಳಿಸುವಿರಾ?
ಗಣೇಶ್: ಖಂಡಿತಾ ಮೇಡಂ... ನಾನು ನನ್ನ ತೋಟಕ್ಕೆ ಯಾವುದೇ ರಸಾಯನಿಕ ಗೊಬ್ಬರಗಳನ್ನಾಗಲೀ, ಸಿಂಪರಣೆಗಳನ್ನಾಗಲೀ ಬಳಸುವುದಿಲ್ಲ. ನೀವೀಗ ನೋಡುತ್ತಿರುವಿರಲ್ಲ... ಈ ನಿಷ್ಪಾಪಿ ಸಸ್ಯವಾದ ಗೊಬ್ಬರ ಗಿಡವೇ ನಮ್ಮ ಸ್ನೇಹಿತ. ಇಲ್ಲಿ ಈ ಗಿಡಗಳು ಕಳೆ ಗಿಡಗಳಾಗಿ ಬೆಳೆದಿಲ್ಲ. ನಾವೇ ಮಳೆಗಾಲದ ಆರಂಭದಲ್ಲಿ ಅದರ ಗೆಲ್ಲುಗಳನ್ನು ನೆಟ್ಟು ಬೆಳೆಸಿರುವುದು. ಕೆಲವೆಡೆ ಬೀಜದಲ್ಲೂ ಗಿಡ ಬೆಳೆಸಿ ನೆಟ್ಟದ್ದಿದೆ.
ಭವಾನಿ: ಹೌದಾ! ಇದು ತೋಟದ ಗೊಬ್ಬರ ತಿಂದು ಸೊಕ್ಕಿದೆ ಎಂದನಿಸ್ತಿದೆ. ಅದಕ್ಕೇ ಸೊಂಪಾಗಿ ಬೆಳೆದಿದೆ!
ಗಣೇಶ್: ಹಾಗೆ ನಾವು ಇತರ ಗೊಬ್ಬರ ಹಾಕೋದಿಲ್ಲ ಮಕ್ಕಳೇ. ಈ ಗೊಬ್ಬರದ ಗಿಡವೇ ನಮ್ಮ ಸಾವಯವ ಗೊಬ್ಬರದ ಗುಟ್ಟು! ಇದನ್ನು ವರ್ಷದಲ್ಲಿ ಮೂರು ಬಾರಿ ಕಟಾವು ಮಾಡಿ ಇದೇ ತೆಂಗಿನ ಮರಗಳ ಬುಡಗಳಿಗೆ ಹಾಕುತ್ತೇವೆ. ಅಡಿಕೆ ತೋಟದಲ್ಲೂ ಈ ಗಿಡಗಳಿವೆ ನೋಡಿ... ಅದೇ ಅಲ್ಲಿಗೂ ಗೊಬ್ಬರ. ನಾವು ರಾಸಾಯನಿಕ ಗೊಬ್ಬರ ಹಾಕುವುದೇ ಇಲ್ಲ.
ಶಾಹಿಕ್: ಪ್ರತೀ ಗಿಡದಲ್ಲೂ ಸೊಪ್ಪಿನ ರಾಶಿಯೇ ಇದೆ!
ಗಣೇಶ್: ಹೌದು. ಈ ಸೊಪ್ಪು , ಅದರ ಕೋಲುಗಳನ್ನು ಮಣ್ಣಿಗೆ ಸೇರಿಸಿದರೆ ಕೆಲವೇ ದಿನಗಳಲ್ಲಿ ಕೊಳೆತು ಹೋಗಿ ಕಾಣಿಸುವುದೇ ಇಲ್ಲ. ಇದು ತೋಟಕ್ಕೆ ನೆರಳನ್ನೂ ಕೊಡುತ್ತದೆ. ಮಣ್ಣಿಗೆ ಸೇರಿಸಿದಾಗ ಹಲವಾರು ಜೀವಿಗಳಿಗೆ ಆಹಾರವಾಗುತ್ತದೆ. ಯಾವುದೇ ಕೀಟ ಬಾಧೆಗಳು ಇವುಗಳಿಗೆ ಇರದ ಕಾರಣ ಬೆಳೆಗಳ ರಕ್ಷಣೆಗೂ ಕಾರಣವಾಗುತ್ತದೆ. ಇದನ್ನು ಬೇಲಿಯಾಗಿಯೂ ನೆಟ್ಟು ಬೆಳೆಸಿದ್ದೇವೆ. ನಮ್ಮ ಜಾಗದ ಗಡಿ ಗುರುತು ಈ ಗೊಬ್ಬರ ಸಸ್ಯದ ಜೀವಂತ ಗಿಡಗಳ ಬೇಲಿಯಿಂದಾಗಿದೆ. ಒಮ್ಮೆ ನೆಟ್ಟರೆ ಇಪ್ಪತ್ತು ಮೂವತ್ತು ವರ್ಷ ಇರುತ್ತದೆ. ಈ ಗಿಡಗಳನ್ನು ವರ್ಷದಲ್ಲಿ ಮೂರು ಬಾರಿ ಕಡಿಯದಿದ್ದರೆ ರಾಕ್ಷಸಾಕಾರ ತಳೆದು ಕಳೆ ಸಸ್ಯವಾಗಿ ಪರಿಣಮಿಸಬಹುದು. ನಾವು ಹಾಗಾಗಲು ಬಿಡುವುದಿಲ್ಲ.
ಭವಾನಿ: ಅಲ್ಲಿ ನೋಡಿ... ಅದೇ ಗಿಡಗಳಲ್ಲಿ ಹೂಗಳ ರಾಶಿ! ಎಷ್ಟು ಸುಂದರವಾಗಿದೆಯಲ್ವಾ?ಗುಲಾಬಿ, ಬಿಳಿ ಬಣ್ಣದ ಹೂಗಳ ಬುಡಭಾಗಕ್ಕೆ ಹಳದಿ ಬಣ್ಣ ಸವರಿದಂತಿದೆ. ಕೆಲವು ಕೋಡುಗಳೂ ಇವೆ.
ಗಣೇಶ್: ಹೌದು. ಆ ಕೋಡುಗಳು ಈಗ ಹಸಿರಾಗಿವೆ. ಒಣಗಿದಾಗ ಕಂದು ಬಣ್ಣಕ್ಕೆ ತಿರುಗುತ್ತವೆ. ಇದರೊಳಗೆ ನಾಲ್ಕರಿಂದ ಹತ್ತು ಬೀಜಗಳಿರುತ್ತವೆ. ಒಣಗಿದಾಗ ಸಿಡಿದು ಇಪ್ಪತ್ತು ನಲವತ್ತಡಿ ದೂರದವರೆಗೂ ಬೀಜಗಳು ಬೀಳುತ್ತವೆ. ಬೀಜಗಳ ಮಾರಾಟವನ್ನೂ ಮಾಡುತ್ತೇವೆ. ಹೂಗಳಿಗಾಗಿಯೇ ಅಲ್ಲಿ ಕಡಿಯದೆ ಬಿಟ್ಟಿದ್ದೇವೆ. ನಮ್ಮ ಮನೆಗೆ ಬರುವ ದಾರಿಯ ಇಕ್ಕೆಲಗಳಲ್ಲೂ ನೆಟ್ಟ ಗಿಡಗಳಲ್ಲೀಗ ಹೂವು ತುಂಬಿ ಕಣ್ಣಿಗೆ ಹಬ್ಬವಾಗಿದೆ. ಹೂವುಗಳು ಏಕೆ ಬೇಕೆಂದರೆ ಸೌಂದರ್ಯಕ್ಕಾಗಿ, ಪರಾಗಸ್ಪರ್ಶ ಕ್ಕಾಗಿ, ಬೀಜಗಳಿಗಾಗಿ! ಜೇನು ನೊಣಗಳು ಹಾಗೂ ಇತರ ಮಧು ಹೀರುವ ಕೀಟಗಳು ಬಂದರೆ ನಮ್ಮ ತೋಟದ, ಹಣ್ಣಿನ ಗಿಡಗಳ ಇಳುವರಿಯೂ ಹೆಚ್ಚಾಗುತ್ತದೆಯಲ್ಲವೇ? ಶಿಸ್ತಿನಿಂದ ಸೊಂಪಾಗಿ ಬೆಳೆದ ಗಿಡಗಳಿದ್ದಲ್ಲಿ ರಭಸವಾಗಿ ಗಾಳಿಯೂ ಬೀಸುವುದಿಲ್ಲ. ಆಗ ಮಣ್ಣಿನ ಸವೆತವೂ ನಿಲ್ಲುತ್ತದೆ. ಮಣ್ಣಿನ ತೇವಾಂಶವೂ ಬಿಸಿಲಿಗೆ ನಷ್ಟವಾಗದೆ ಫಲವತ್ತತೆ ಹೆಚ್ಚಲು ಸಹಕಾರಿಯಾಗುತ್ತದೆ.
ಶಿಕ್ಷಕಿ: ಈ ಸೊಪ್ಪನ್ನು ಜಾನುವಾರಗಳಿಗೆ ಬಳಸುತ್ತೀರಾ?
ಗಣೇಶ್: ಇದಕ್ಕೆ ಸ್ವಲ್ಪ ಕಟು ವಾಸನೆ ಇರೋದ್ರಿಂದ ದನಕರುಗಳು ತುಂಬಾ ಇಷ್ಟ ಪಟ್ಟು ತಿನ್ನದಿದ್ದರೂ ಬಾಡಿಸಿ ಬೇರೆ ಹುಲ್ಲಿನ ಜೊತೆ ಹಾಕಿದಾಗ ತಿನ್ನುತ್ತವೆ. ಮೇಕೆ ಕುರಿಗಳು ಇಷ್ಟಪಟ್ಟು ತಿನ್ನುತ್ತವೆ. ನಮ್ಮಲ್ಲಿ ಮಲೆನಾಡು ಗಿಡ್ಡ ತಳಿಯ ದನಗಳು ಖುಷಿಯಿಂದಲೇ ಹಸಿ ಸೊಪ್ಪು ತಿನ್ನುತ್ತವೆ.
ಶಿಕ್ಷಕಿ: ಅರಣ್ಯ ಪ್ರದೇಶ ಬೋಳಾದಲ್ಲೆಲ್ಲ ಈ ಗೊಬ್ಬರದ ಗಿಡ ಸಲೀಸಾಗಿ ಬೆಳೆಯಬಲ್ಲುದು. ಬೀಜ ಎರಚಿಯೂ ಗಿಡ ಬೆಳೆಸಬಹುದು. ಈ ಬಗ್ಗೆ ಪ್ರಯತ್ನಗಳಾಗಬೇಕನಿಸುತ್ತದೆ. ಉರುವಲಿಗಾಗಿಯೂ ಬಳಸಬಹುದು.ಇದನ್ನು ಇಲಿ ವಿಷ ಎನ್ನುವರಲ್ಲ ಏಕೆ?
ಗಣೇಶ್: ಇದು ಇಲಿ ಹೆಗ್ಗಣಗಳಿಗೆ ವಿಷವಾಗಿದೆ. ಇದರ ತೊಗಟೆಯನ್ನು ಅನ್ನದ ಜೊತೆಬೇಯಿಸಿ ಹಾಕಿದರೆ ಇಲಿ ಹೆಗ್ಗಣಗಳು ನಾಶವಾಗುತ್ತವೆ. ಗ್ಲಿರಿಸೀಡಿಯಾ ಎಂಬುವುದು ಗ್ರೀಸ್ ದೇಶದ ಹೆಸರು. ಮೂಲತ: ಗ್ರೀಸ್ ದೇಶದ ಸಸ್ಯ. ನಮ್ಮಲ್ಲಿಗೆ 1900 ರ ಸುಮಾರಿಗೆ ಚಹಾ ತೋಟಕ್ಕೆ ನೆರಳಿಗಾಗಿ ಬಂತೆನ್ನುತ್ತಾರೆ. ಗ್ಲಿರಿ ಎಂದರೆ ಗ್ರೀಸ್ ಭಾಷೆಯಲ್ಲಿ ಇಲಿ, ಸಿಡಿಯ ಎಂದರೆ ಪಾಶಾಣ. ಜಾನುವಾರು ಹಾಗೂ ನಾಯಿಗಳನ್ನು ತೊಳೆಯಲು ಇದರ ಶಾಂಪೂ ಬಳಸುತ್ತಾರೆ. ಇದರಿಂದಾಗಿ ಪರಾವಲಂಬಿ ಜೀವಿಗಳು ನಾಶವಾಗುತ್ತವೆ.
ಶಿಕ್ಷಕಿ: ಇದರಿಂದ ಸಸ್ಯಗಳಿಗೆ ನೈಟ್ರೋಜನ್ ಸಿಗುತ್ತದೆ ಎನ್ನುವರು. ಅದು ಹೇಗೆ?
ಗಣೇಶ್: ಹೌದು, ಈ ಗೊಬ್ಬರದ ಗಿಡದ ಬೇರುಗಳನ್ನು ಗಮನಿಸಿ. ಇದರಲ್ಲಿ ಗಂಟುಗಳಿವೆ.. ಗ್ಲಿರಿಸಿಡಿಯಾ ಇದ್ದಲ್ಲಿ ರೈತರಿಗೆ ಗೊಬ್ಬರದ ಟೆನ್ಷನ್ ಇಲ್ಲ. ಇದು ಬರೀ ಸೊಪ್ಪಿನಿಂದಾಗಿ ಮಾತ್ರವಲ್ಲ. ಇದರ ಬೇರಿನಲ್ಲಿರುವ ಸೂಕ್ಷ್ಮ ಜೀವಿಗಳು ವಾತಾವರಣದಿಂದ ಸಾರಜನಕವನ್ನು ಹೀರಿಕೊಂಡು ಭೂಮಿಗೆ ವರ್ಗಾಯಿಸುತ್ತದೆ. ಸಾರಜನಕದ ಸ್ಥಿರೀಕರಣಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲದೆ ರಂಜಕ, ಪೊಟಾಷಿಯಂ , ಯೂರಿಯಾ, ನೈಟ್ರೋಜನ್, ಫಾಸ್ಪರಸ್, ಕ್ಯಾಲ್ಸಿಯಂ, ಮೆಗ್ನೀಸಿಯಂ ಎಲ್ಲವೂ ದೊರೆಯುತ್ತದೆ ಎಂದರೆ ನೀವು ನಂಬಲೇ ಬೇಕು. ರಾಸಾಯನಿಕ ಗೊಬ್ಬರಗಳ ವಿವೇಚನಾ ರಹಿತ ಬಳಕೆಯಿಂದ ಭೂಮಿ ಬರಡಾಗಿದೆ. ಈ ಕಾರಣದಿಂದಾಗಿಯೇ ಇಂದು ಗೊಬ್ಬರದ ಗಿಡವೆಂಬ ನಿಷ್ಪಾಪಿ ಸಸ್ಯ ರೈತರಿಗೆ ವರದಾನವಾಗಿದೆ. ಖರ್ಚೂ ಕಡಿಮೆ.
ನಂದನ್ : ಅಬ್ಬಾ! ಈ ಗೊಬ್ಬರದ ಗಿಡ ಎಷ್ಟೊಂದು ಉಪಕಾರಿ ಅಲ್ವಾ! ಇಡೀ ಗಿಡವೇ ಗೊಬ್ಬರವಾಗಿದೆ. ಮಣ್ಣಿನ ತೇವಾಂಶ ಕಾಯುತ್ತದೆ. ಮಣ್ಣಿನಲ್ಲಿ ಜೈವಿಕ ಕ್ರಿಯೆಗಳು ನಡೆಯುವಂತೆ ಮಾಡುತ್ತವೆ. ಪಕ್ಷಿಗಳಿಗೆ ಕ್ರಿಮಿಕೀಟಗಳಿಗೆ ರಕ್ಷಣೆ ನೀಡುತ್ತದೆ. ಪುಷ್ಪಗಳು ಸೊಬಗಿನ ಜೊತೆ ಪರಾಗಸ್ಪರ್ಶ ಕ್ಕೆ ಉತ್ತೇಜನ ನೀಡುತ್ತವೆ....!
ಶಾಹಿಕ್ : ಮಣ್ಣಿನಲ್ಲೂ ವಿಷ, ಜನಸಾಮಾನ್ಯರ ಹೊಟ್ಟೆಯಲ್ಲೂ ವಿಷ ಇರುವ ಈ ಕಾಲದಲ್ಲಿ ಈ ಒಂದು ಸಸ್ಯದಿಂದ ಮಾನವನ ಬದುಕೇ ಬದಲಾಗಬಲ್ಲುದು. ಎಷ್ಟು ಕಡಿದರೂ ಮತ್ತೆ ಚಿಗುರುವ ಈ ಗೊಬ್ಬರದ ಗಿಡವನ್ನು ನಾವೆಲ್ಲರೂ ಬೆಳೆಸಲೇಬೇಕು. ವಾತಾವರಣದ ಬಿಸಿಯನ್ನೂ ತಗ್ಗಿಸಿಕೊಳ್ಳಬಹುದು. ಮುಳ್ಳಿರದ. ಒರಟಿರದ, ಮೃದುವಾದ ಈ ಸಸ್ಯದ ಪ್ರಯೋಜನವನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.
ಶಿಕ್ಷಕಿ : ಗೊಬ್ಬರ ಗಿಡದ ಬಗ್ಗೆ ನಮಗಿಷ್ಟೆಲ್ಲ ಮಾಹಿತಿ ನೀಡಿದ ಗಣೇಶ್ ಕಾಮತ್ ರವರಿಗೆ ಎಲ್ಲರ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸೋಣ.
ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ