ನಿಷ್ಪಾಪಿ ಸಸ್ಯಗಳು (ಭಾಗ ೯೭) ಕನಕಾಂಬರ ಗಿಡ

ನಿಷ್ಪಾಪಿ ಸಸ್ಯಗಳು (ಭಾಗ ೯೭) ಕನಕಾಂಬರ ಗಿಡ

ವರ್ಷ ಋತು ಆರಂಭವಾದರೆ ಹಸಿರಾಗುವ ನಿಸರ್ಗ ವಸಂತನಾಗಮನದ ಜೊತೆ ಹೂವು, ಕಾಯಿ, ಹಣ್ಣುಗಳ ಜೋಕಾಲಿಯಲಿ ಎಲ್ಲಡೆಯೂ ಪಕ್ಷಿಗಳ ಕಲರವ ! ಈ ಸುಂದರವಾದ ವಾರ್ಷಿಕಾವರ್ತನದಲ್ಲಿ ಊರಲ್ಲೆಲ್ಲ ದೈವ ದೇವರುಗಳ ಜಾತ್ರೆ, ಉತ್ಸವಾದಿಗಳ ಸಡಗರ, ಸಂಭ್ರಮ. ಇದೇ ಕಾಲದಲ್ಲಿ ಜನಪದದ ತುಂಬೆಲ್ಲಾ ಥಳಕು ಹಾಕಿಕೊಳ್ಳುವ ಹೂವೊಂದಿದೆ, ಯಾವುದು ಬಲ್ಲಿರಾ? ಅದೇ ಕನಕಾಂಬರ ! ಅದೇ ನಾವು ಪ್ರೀತಿಯಿಂದ ಕರೆಯುವ ಅಬ್ಬಲ್ಲಿಗೆ !.

ತಮಿಳಿನಲ್ಲಿ ಕನಕಾಂಬರಾ, ಮಲಯಾಳದಲ್ಲಿ ಪ್ರಿಯದರ್ಶಿನಿ, ಮರಾಠಿಯಲ್ಲಿ ಅಬೋಲಿ, ತೆಲುಗಿನಲ್ಲಿ ಕನಕಾಂಬರಮು, ಹಿಂದಿಯಲ್ಲಿ ಪ್ರಿಯದರ್ಶ್, ಕೊಂಕಣಿಯಲ್ಲಿ ಅಬ್ಬುಲಿ ಎಂದು ಇರುವ ಹೆಸರುಗಳಲ್ಲಿ ಸಾಮ್ಯತೆಯನ್ನು ಗಮನಿಸಬಹುದು. ಬಹುಶಃ ಇದನ್ನು ನೋಡದವರು ನಮ್ಮ ಜಿಲ್ಲೆಯಲ್ಲಿ ಯಾರೂ ಇರಲಾರರೆಂದರೂ ತಪ್ಪಲ್ಲವೇನೊ.

ತುದಿ ಚೂಪಾಗಿ, ಅಲೆಗಳಂತಿರುವ ಅಂಚುಗಳನ್ನು ಹೊಂದಿದ ಅಭಿಮುಖ ಜೋಡಣೆಯ, ಹಸುರಾದ ಎಲೆಗಳ ಕಂಕುಳಲ್ಲಿ ಮೋಹಕವಾಗಿ ಕಡುಗೆಂಪು, ಕೆಂಪು, ಕೇಸರಿ ಮಿಶ್ರಿತ ಕೆಂಪು, ಬಂಗಾರದ ಹಳದಿ, ಹಸಿರು ವರ್ಣಗಳಲ್ಲಿ ಮೃದುವಾದ ಅರ್ಧ ಸುತ್ತಷ್ಟೇ ಎಸಳ ಹೊತ್ತು ಅರಳಿ ನಗುವ ಹೂಗಳನ್ನು ನೋಡುವುದೇ ಸೊಗಸು. ಕದಿರು ಗೊಂಚಲಲ್ಲಿ ಜೋಡಣೆಯಾದ ಪುಷ್ಪಗಳು ಉಭಯ ಸಮಾಂಗತೆಯ ಮೂರರಿಂದ ಐದು ಎಸಳುಗಳನ್ನು ಹೊಂದಿರುತ್ತದೆ. ಕೇಸರಗಳು ಹೂದಳಗಳಿಗೆ ಅಂಟಿದೆ.

ಅಂಡಕೋಶದೊಳಗೆ ಚೂಪು ತುದಿಯ ಚಪ್ಪಟೆ ಬೀಜಗಳಿದ್ದು ಬಿಸಿಲಿಗೆ ಒಡೆದು ದೂರ ಎಸೆಯಲು ಮಾರ್ಪಾಡು ಹೊಂದಿದೆ. ಈ ಕನಕಾಂಬರ ಪುಷ್ಪವು ಹೂಗಳ ಪ್ರಪಂಚದಲ್ಲೇ ರಂಗಿನ ಸುಮವಾಗಿ ವಿಶಿಷ್ಠವಾದುದಾಗಿದೆ. ಮಲ್ಲಿಗೆಯಂತಹ ಘಮ ಕನಕಾಂಬರಕ್ಕಿಲ್ಲವಾದರೂ ಜನಪದರು ಇದನ್ನೇ ಇಷ್ಟಪಡುತ್ತಾರೆ. ಕಾರಣವೇನೆಂದರೆ ಈ ಹೂವೆಷ್ಟು ಮೃದುವಾಗಿದ್ದರೂ ಎರಡು ಮೂರು ದಿನಗಳವರೆಗೆ ಬಾಡಲಾರದು, ಗಾಢ ಬಣ್ಣ ಬೇಗನೆ ಸೊರಗದು, ಗಿಡ ಸಾಕಲು ಸುಲಭ.

ಕನಕಾಂಬರ ದಕ್ಷಿಣ ಭಾರತ ಹಾಗೂ ಶ್ರೀಲಂಕಾ ಗಳಿಗೆ ಸ್ಥಳೀಯವಾದ ಸಸ್ಯ. ಭಾರತದ ಮೂಲನಿವಾಸಿ ಸಸ್ಯವಾದರೂ ಏಷ್ಯಾದ ಇತರ ಭಾಗಗಳಲ್ಲಿ ಮಡಗಾಸ್ಕರ್ ದ್ವೀಪ, ಆಫ್ರಿಕಾದಲ್ಲೂ ಕಾಣಸಿಗುವುದು. ಸಾಮಾನ್ಯವಾಗಿ ನಾವು ದಕ್ಷಿಣ ಭಾರತದ ಮಲೆನಾಡು, ಅರೆ ಮಲೆನಾಡು, ಕರಾವಳಿ, ಭಾಗಗಳಲ್ಲಿ ಕಾಣುತ್ತೇವೆ. ಅಕ್ಯಾಂಥೇಸಿಯಾ (Acanthaceae) ಎಂಬ ಕುಟುಂಬದ ಹೂ ಬಿಡುವ ಸಸ್ಯದ ಪ್ರಜಾತಿ. ಕ್ರಾಸ್ಯಾಂಡ್ರ ಇನ್ಫಂಡಿಬುಲಿ (Crossandra infundibuliformis) ಇದರ ಸಸ್ಯ ಶಾಸ್ತ್ರೀಯ ಹೆಸರು. ಈ ಜಾತಿಯಲ್ಲಿ 40 ಪ್ರಭೇದಗಳನ್ನು ಗುರುತಿಸಿದ್ದಾರೆ. ಒಂದು ಮೀಟರ್ ನಷ್ಟು ಎತ್ತರ ನೇರವಾಗಿ ಬೆಳೆಯುವ ನಿತ್ಯಹರಿದ್ವರ್ಣ ಪೊದೆ ಸಸ್ಯದ ಕಾಂಡ ಎಳತರಲ್ಲಿ ಹಸಿರಾಗಿದ್ದು ಬಲಿತಮೇಲೆ ಕಂದು ಬಣ್ಣಕ್ಕೆ ತಿರುಗುತ್ತದೆ. ಮೇಲ್ಮೈ ನುಣುಪಾಗಿದ್ದು ಗಿಣ್ಣುಗಳು ಉಬ್ಬಿಕೊಂಡಿರುತ್ತವೆ. ಕನಕಾಂಬರ ಬಹು ವಾರ್ಷಿಕ ಹೂವಿನ ಬೆಳೆ. ಫಲವತ್ತಾದ ಕೆಂಪು,ಕೆಂಪು ಗೋಡು ಮಣ್ಣೆಂದರೆ ಇದಕ್ಕೆ ಬಲು ಇಷ್ಟ.ಕೊಟ್ಟಿಗೆ ಗೊಬ್ಬರ ಹಾಕಿ ಅದರ ಮೇಲೆ ಅಡಿಕೆ ಸಿಪ್ಪೆ ಇಟ್ಟು ನೀರು ಹಾಕುತ್ತಿದ್ದರೆ ಚಿನ್ನದ ಮೊಟ್ಟೆಯಿಡುತ್ತಾ ಸಾಗುವುದು ಈ ಗಿಡದ ಕೆಲಸ.

ನಮ್ಮ ಕರಾವಳಿಯ ದೈವ ದೇವರ ಅಲಂಕಾರಗಳು ಅಬ್ಬಲಿಗೆ ಇಲ್ಲದೆ ಪೂರ್ಣವಾಗಲಾರವು. ಕಾರವಾರದ ಸಮೀಪ ಜಾತ್ರೆಯಲ್ಲಿ ಈ ಹೂವಿನ ಮಾಲೆಯನ್ನು ತಲೆಗೆ ಮುಡಿದು ಹೊಟ್ಟೆಗೆ ಸೂಜಿ ಚುಚ್ಚಿಕೊಂಡು ಎರಡು ಕಿ.ಮೀ. ನಡೆದು ದೇವತಿ ದೇವಸ್ಥಾನ ಮುಟ್ಟಿ ಅಲ್ಲಿಗೆ ನೂಲು ಮತ್ತು ಸೂಜಿ ಅರ್ಪಿಸುವ ಕ್ರಮವಿದೆ. ಅಲ್ಲಿ ಆಲೆಮನೆಯ ಗಾಣದಂತಹ ಆಕೃತಿಗೆ ಕನಕಾಂಬರದ ಅಲಂಕಾರ ಮಾಡಿ ನಾವು ರಥ ಎಳೆದಂತೆ ಎಳೆಯುತ್ತಾರೆ. ಅಬ್ಬಲಿಗೆ ಹೂವನ್ನು ದೇವರಿಗೆ ಅಲಂಕಾರ ಮಾಡಿ ಪೂಜಿಸಿದರೆ ವೈರಾಗ್ಯ ಬರುವುದು ಎಂಬ ಕಾರಣಕ್ಕಾಗಿ ದೇವಪೂಜೆಯಲ್ಲಿ ಅಬ್ಬಲಿಗೆ ಬಳಸಬಾರದೆಂಬ ನಂಬಿಕೆಯೂ ಇದೆ. ತುಳುನಾಡಿನ ಬಹಪಾಲು ದೈವಗಳ ಅಲಂಕಾರಕ್ಕೆ ಈ ಹೂವಿನ ಅಗತ್ಯವಿದೆ ಮಾತ್ರವಲ್ಲದೆ ಗುಮ್ಟೆ ನಲಿಕೆ, ಪುರ್ಸೆರ್, ಕನ್ಯಾಪು ಮೊದಲಾದ ಜನಪದ ಕುಣಿತಗಳಿಗೂ ಪ್ರಮುಖ ಅಲಂಕಾರಕ್ಕೆ ಕನಕಾಂಬರವೇ ಬೇಕು.

ಕೊಪ್ಪಳ, ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ ಕನಕಾಂಬರ ಆರ್ಥಿಕ ಮೂಲವಾಗಿದೆ. ಜನವರಿಯಿಂದ ಮೇ ಅಂತ್ಯದವರೆಗೂ ಹೂ ಬಿಟ್ಟರೂ ಬೇಡಿಕೆ ಹಾಗೂ ಬೆಲೆಯಿದೆ. ಒಂದು ಎಕರೆಯಿಂದ ಏನಿಲ್ಲವೆಂದರೂ ಒಂದು ಲಕ್ಷ ಆದಾಯವಿದೆಯೆನ್ನುತ್ತಾರೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಭಿವೃದ್ಧಿ ಪಡಿಸಿದ ಅರ್ಕಾ ಚೆನ್ನಾ ಎಂಬ ಅಬ್ಬಲ್ಲಿಗೆ ಸ್ವಲ್ಪ ದಪ್ಪವಿದೆ. ನಾಟಿ ಅಬ್ಬಲಿಗೆಗೆ 60 ರಿಂದ 100 ರೂ ಧಾರಣೆ ಇದ್ದರೆ ಅರ್ಕಾ 300 ರಿಂದ 1600 ರೂ ಬೆಲೆಬಾಳುತ್ತದೆ. ಈ ಗಿಡಗಳು ಆರೇಳು ವರ್ಷ ಇಳುವರಿಯನ್ನೂ ನೀಡುತ್ತವೆ. ಹಾರ, ಕೇಶಾಲಂಕಾರ, ದೈವ ದೇವರ ಅಲಂಕಾರಗಳಿಗೆ ನಮಗಿಂತಲೂ ಬೆಂಗಳೂರಿನಂತಹ ನಗರಗಳಲ್ಲಿ ಆಕರ್ಷಣೆ ಪಡೆದಿದೆ.

ಉರಿಯೂತ ನಿವಾರಕ, ನೋವುನಿವಾರಕ, ಜ್ವರ, ಹಲ್ಲುನೋವು, ಗಾಯ ಬೇಗ ಒಣಗಲು ಎಲೆಯ ಹೂವಿನ ರಸ ಸಹಾಯಕ ಎಂದು ತಿಳಿದಿದ್ದರೂ ಔಷಧಿಗೆ ನೆಚ್ಚಿಕೊಂಡದ್ದು ಕಡಿಮೆ ಎಂದೇ ಹೇಳಬೇಕು. ಬಾಳೆಸಿಪ್ಪೆ, ಅಕ್ಕಿ ತೊಳೆದ ನೀರು ಇತ್ಯಾದಿ ಬಳಸಿ ಹೆಚ್ಚು ಹೂವು ಪಡೆಯಲು ನಡೆಸಿದ ಪ್ರಯತ್ನಗಳೇ ಹೆಚ್ಚು. ಕಡಿಮೆ ನೀರಿದ್ದರೂ ಬದುಕು ಕಾಣುವ, ಹೆಚ್ಚು ನೀರಿದ್ದರೆ ಕೊಳೆತು ನಾರುವ ಕನಕಾಂಬರಕ್ಕೆ ಹಲವಾರು ಕೀಟ, ಶಿಲೀಂಧ್ರಗಳ ಬಾಧೆಯಿದೆ. ಅವೆಲ್ಲವನ್ನೂ ಮೀರಿದ ಈ ಹೂವು "ಓ ಕನಕಾಂಬರಿ.. ನೀನು ಬಾರದೆ ಪೂಜೆಗೆ ಹೂವಿಲ್ಲ.." ಎಂದು ಕಾಯುವಂತೆ ಮಾಡುತ್ತದೆ ಅಲ್ಲವೇ?

ಚಿತ್ರ - ಬರಹ : ವಿಜಯಾ ಬಿ ಶೆಟ್ಟಿ ಸಾಲೆತ್ತೂರು, ಬಂಟ್ವಾಳ