ನೀತಿ ಸಂಹಿತೆ ಸಡಿಲಿಕೆ : ಆಡಳಿತ ಯಂತ್ರ ಚುರುಕಾಗಲಿ

ನೀತಿ ಸಂಹಿತೆ ಸಡಿಲಿಕೆ : ಆಡಳಿತ ಯಂತ್ರ ಚುರುಕಾಗಲಿ

ದೇಶದಲ್ಲೀಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಳೆದೆರಡು ತಿಂಗಳಿಂದ ಜಾರಿಯಲ್ಲಿರುವ ಚುನಾವಣ ನೀತಿ ಸಂಹಿತೆಯಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಲು ಕೇಂದ್ರ ಚುನಾವಣ ಆಯೋಗ ರಾಜ್ಯ ಸರಕಾರಕ್ಕೆ ಅನುಮತಿ ನೀಡಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆ ನಡೆದು ಎರಡು ವಾರ ಕಳೆದರೂ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದಾಗಿ ತುರ್ತು ಕೆಲಸಕಾರ್ಯಗಳನ್ನು ನಡೆಸಲು ಸರಕಾರಕ್ಕೆ ಕಷ್ಟ ಸಾಧ್ಯವಾಗಿತ್ತು. ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಅತ್ಯಂತ ಅಗತ್ಯವಾದ ತುರ್ತಾಗಿ ಕೈಗೆತ್ತಿಕೊಳ್ಳಬೇಕಿರುವ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆಯನ್ನು ಸಡಿಲಿಸುವಂತೆ ಮನವಿ ಮಾಡಿಕೊಂಡಿತ್ತು. ಅದರಂತೆ ಆಯೋಗ ರಾಜ್ಯದಲ್ಲಿ  ಚುನಾವಣ ನೀತಿ ಸಂಹಿತೆಯಲ್ಲಿ ಷರತ್ತುಬದ್ಧ ಸಡಿಲಿಕೆಗೆ ಅನುಮತಿಯನ್ನು ನೀಡಿದೆ. ಇದರೊಂದಿಗೆ ಬರ ಪರಿಹಾರ, ಮುಂಗಾರು ಪೂರ್ವ ಕಾಮಗಾರಿಗಳು, ಮೂಲ ಸೌಕರ್ಯ ಕಾಮಗಾರಿಗಳನ್ನು ನಡೆಸಲು ಸರಕಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ. 

ಲೋಕಸಭೆ ಚುನಾವಣೆ ಘೋಷಣೆಯಾದಂದಿನಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಬಹುತೇಕ ಚುನಾವಣ ಕೆಲಸಕಾರ್ಯಗಳಲ್ಲಿ ತಲ್ಲೀನವಾಗಿತ್ತು. ಇದರಿಂದಾಗಿ ತುರ್ತು ಸಂದರ್ಭಗಳನ್ನು ಹೊರತುಪಡಿಸಿದಂತೆ ಬಹುತೇಕ ಸರಕಾರಿ ಕೆಲಸಕಾರ್ಯಗಳು ಸ್ಥಗಿತಗೊಳ್ಳುವಂತಾಗಿತ್ತು. ಕೊನೆಗೂ ಚುನಾವಣ ಆಯೋಗ ನೀತಿ ಸಂಹಿತೆಯಲ್ಲಿ ಸಡಿಲಿಕೆ ಮಾಡಲು ಸಮ್ಮತಿಸಿದೆ. 

ಈವರೆಗೆ ಎಲ್ಲದಕ್ಕೂ ನೀತಿ ಸಂಹಿತೆಯ ನೆಪವೊಡ್ಡುತ್ತಿದ್ದ ಆಡಳಿತ ವ್ಯವಸ್ಥೆ ಇನ್ನಾದರೂ ಜನರ ಅಳಲಿಗೆ ತುರ್ತಾಗಿ ಸ್ಪಂದಿಸಬೇಕು. ಕುಡಿಯುವ ನೀರು, ಬರ ಪರಿಹಾರ ವಿತರಣೆ, ಬರ ಪರಿಹಾರ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಸಂತ್ರಸ್ತರ ನೆರವಿಗೆ ಧಾವಿಸಬೇಕು. ಜನಪ್ರತಿನಿಧಿಗಳು ರಾಜಕೀಯ ಚಟುವಟಿಕೆಗಳಿಂದ ಹೊರಬಂದು ಈ ಎಲ್ಲ ಕೆಲಸ ಕಾರ್ಯಗಳ ಸ್ವಯಂ ಮೇಲ್ವಿಚಾರಣೆ ನಡೆಸುವ ಜತೆಯಲ್ಲಿ ಸರಕಾರದಿಂದ ಅಗತ್ಯ ನೆರವನ್ನು ದೊರಕಿಸಿಕೊಡುವಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನ ನಡೆಸಬೇಕು.

ಬರದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಈಗ ಮುಂಗಾರುಪೂರ್ವ ಮಳೆಯ ಸಮಸ್ಯೆ ಆರಂಭವಾಗಿದೆ. ಮೇ ಆರಂಭದಿಂದೀಚೆಗೆ ರಾಜ್ಯದ ಅಲ್ಲಲ್ಲಿ ಭಾರೀ ಗಾಳಿಯೊಂದಿಗೆ ಸಿಡಿಲು ಸಹಿತ ಮಳೆಯಾಗುತ್ತಿದ್ದು ಪ್ರಾಣ ಹಾನಿಯ ಜತೆಜತೆಯಲ್ಲಿ ಬೆಳೆ ಹಾನಿಯೂ ಸಂಭವಿಸಿದೆ. ಜಿಲ್ಲಾಡಳಿತಗಳು ಮತ್ತು ರಾಜ್ಯ ಸರಕಾರ ಇತ್ತ ತುರ್ತು ಗಮನ ಹರಿಸಿ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು. ಇನ್ನು ಮುಂಗಾರು ಮಾರುತಗಳು ರಾಜ್ಯ ಪ್ರವೇಶಿಸಲು ದಿನಗಣನೆ ಆರಂಭವಾಗಿದ್ದು ರಾಜ್ಯದ ಬಹುತೇಕ ಕಡೆ ಮುಂಗಾರು ಎದುರಿಸಲು ಸ್ಥಳೀಯಾಡಳಿತ ಮತ್ತು ನಗರಾಡಳಿತ ಸಂಸ್ಥೆಗಳು ಇನ್ನೂ ಸಜ್ಜಾಗಿಲ್ಲ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ವಾರಗಳಲ್ಲಿ ಮುಂಗಾರು ಮಳೆ ರಾಜ್ಯದಲ್ಲಿ ಆರಂಭಗೊಳ್ಳಲಿದ್ದು ಅದರೊಳಗಾಗಿ ಎಲ್ಲ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ. ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಕಾಲುವೆ ಹೂಳೆತ್ತುವಿಕೆ, ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ, ವಿದ್ಯುತ್ ತಂತಿ ಹಾದು ಹೋಗಿರುವ ಪ್ರದೇಶಗಳಲ್ಲಿನ ಮರಗಳ ಕೊಂಬೆಗಳ ಕಟಾವು, ಅಪಾಯಕಾರಿ ಮರ ಕಟ್ಟಡಗಳ ತೆರವು, ನೆರೆ ಪರಿಸ್ಥಿತಿಯನ್ನು ಎದುರಿಸಲು ಅವಶ್ಯವಾಗಿರುವ ಸಾಧನ, ಸಲಕರಣೆಗಳ ಜೋಡಣೆ, ಕೃಷಿ ಚಟುವಟಿಕೆಗಳಿಗೆ ಅವಶ್ಯವಾಗಿರುವ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ದಾಸ್ತಾನು, ಸರಕಾರಿ ಆಸ್ಪತ್ರೆಗಳಲ್ಲಿ ಜನರ ದೈನಂದಿನ ಆರೋಗ್ಯ ಸೇವೆಗಳಿಗೆ ಅಡಚಣೆಯಾಗದಂತೆ ಪೂರಕ ವ್ಯವಸ್ಥೆ, ಶಾಲಾ ಕಾಲೇಜು ಕಟ್ಟಡಗಳ ದುರಸ್ತಿ, ಮೂಲಸೌಕರ್ಯಗಳ ಒದಗಣೆ ಮತ್ತಿತರ ಕೆಲಸಕಾರ್ಯಗಳನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕಿದೆ. ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪದೇಪದೆ ಸಭೆ ಕರೆದು, ಪರಾಮರ್ಶೆ ನಡೆಸಿ ಸಲಹೆ ಸೂಚನೆಗಳನ್ನು ನೀಡುವ ಬದಲು ಸ್ವಯಂ ಕಾರ್ಯಕ್ಷೇತ್ರಕ್ಕೆ ಮುಂದಾದಲ್ಲಿ ಇವೆಲ್ಲವನ್ನೂ ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೧-೦೫-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ