ನೀನೇ ರಾಜಕುಮಾರ

ನೀನೇ ರಾಜಕುಮಾರ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಶರಣು ಹುಲ್ಲೂರು
ಪ್ರಕಾಶಕರು
ಸಾವಣ್ಣ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೩೦೦.೦೦, ಮುದ್ರಣ: ೨೦೨೧

ಪುನೀತ್ ರಾಜಕುಮಾರ್ ಅವರ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಲೇಖಕ, ಪತ್ರಕರ್ತರಾದ ಡಾ.ಶರಣು ಹುಲ್ಲೂರು ಇವರು. ಪುನೀತ್ ಬದುಕಿರುವಾಗಲೇ ಈ ಪುಸ್ತಕವನ್ನು ಹೊರ ತರಬೇಕೆಂದು ಲೇಖಕರಿಗೆ ಬಹಳ ಮನಸ್ಸಿತ್ತು. ಆದರೆ ಪುನೀತ್ ತಮ್ಮ ತಂದೆ ಹಾಗೂ ತಾಯಿಯವರ ಪುಸ್ತಕಗಳ ಜೊತೆ ತಮ್ಮ ಪುಸ್ತಕ ಇರಿಸಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿ ಲೇಖಕರಿಗೆ ನಿರಾಸೆ ಮಾಡಿದ್ದರು. ಆದರೆ ಪುನೀತ್ ಅಕಾಲ ಮರಣಕ್ಕೀಡಾದಾಗ ಅವರು ಮಾಡಿದ ಸಾಧನೆಗಳು ಒಂದೊಂದಾಗಿಯೇ ಹೊರಬರಲಾರಂಭಿಸಿತು. ಶರಣು ಅವರೂ ಅಪ್ಪುವಿನ ಜೀವನಗಾಥೆಯನ್ನು ಹೊರ ತರಲೇ ಬೇಕೆಂದು ಹಠ ಹಿಡಿದು, ಒಂದು ಉತ್ತಮ ಕೃತಿಯನ್ನು ಸಾಹಿತ್ಯಲೋಕಕ್ಕೆ ಅರ್ಪಿಸಿದ್ದಾರೆ.

‘ಸಿನೆಮಾ ರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನೆಮಾ ರಂಗದವರಿಂದಲೂ ಪತ್ರಿಕೋದ್ಯಮಕ್ಕೆ ಅಷ್ಟೇ ಇದೆ. ಇದೊಂದು ಕೂಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ ನಮ್ಮವರನ್ನೇ ಕಳೆದುಕೊಂಡಷ್ಟು ಸಂಕಟ. ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಪತ್ರಕರ್ತ ಮಿತ್ರರು ಎಷ್ಟೊಂದು ಸಂಕಟ ಪಟ್ಟಿದ್ದಾರೆಂದು ಬಲ್ಲೆ. ಸ್ಟುಡಿಯೋದಲ್ಲಿ ಕೂತ ನಿರೂಪಕ, ನಿರೂಪಕಿಯರು ಅಳುತ್ತಲೇ ಸುದ್ದಿ ಓದಿದ್ದಾರೆ. ವರದಿಗಾರರು ಭಾವುಕರಾಗಿಯೇ ವರದಿ ಮಾಡಿದ್ದಾರೆ. ಇದಕ್ಕೆ ಕಾರಣ ಅಪ್ಪು ಅವರು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ' ಎಂದು ಪುಸ್ತಕದ ಲೇಖಕರೂ, ಪತ್ರಕರ್ತರೂ ಆದ ಡಾ.ಶರಣು ಹುಲ್ಲೂರು ಇವರು ಅಭಿಪ್ರಾಯ ಪಟ್ಟಿದ್ದಾರೆ.

‘ನೀನೇ ರಾಜಕುಮಾರ' ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಲೇಖಕ, ಪತ್ರಕರ್ತ ಜೋಗಿ. ಅವರು ಬೆನ್ನುಡಿಯಲ್ಲಿ ಬರೆಯುತ್ತಾರೆ “ನಿಮ್ಮ ತಾಯಿ ಕಪ್ಪಗಿಲ್ಲವೇ? ಅವರು ನಮ್ಮಮ್ಮ, ಹೇಗಿದ್ದರೂ ಸರಿ. ಈ ಪ್ರಶ್ನೋತ್ತರವನ್ನು ಕೇಳಿದಾಗೆಲ್ಲ ನನಗೆ ಆ ಪ್ರಶ್ನೆಯನ್ನು ಕೇಳಿದವರ ಮೇಲೆ ಸಿಟ್ಟೂ, ಅದಕ್ಕೆ ತಕ್ಕ ಉತ್ತರ ಕೊಟ್ಟ ಪುಟ್ಟ ಪುನೀತ್ ಮೇಲೆ ಪ್ರೀತಿಯೂ ಉಕ್ಕುತ್ತಿತ್ತು. ಅವತ್ತಿನಿಂದಲೂ ಪುನೀತ್ ನನಗೆ ಮುಗಿಯದ ಅಚ್ಚರಿ. ಅವರನ್ನು ಭೇಟಿ ಆದಾಗೆಲ್ಲ ಹೊಸತೇನಾದರೂ ಹೇಳುತ್ತಾ, ತನ್ನ ಸದ್ಯದ ಚಟುವಟಿಕೆಗಳನ್ನು ವಿವರಿಸುತ್ತಾ ಇರುತ್ತಿದ್ದ ಪುನೀತ್ ನಾನು ನೋಡಿದ ಅತ್ಯಂತ ಸಂತೃಪ್ತ ವ್ಯಕ್ತಿಗಳಲ್ಲಿ ಒಬ್ಬರು. ಅವರು ಮನಸ್ಸು ಕೆಡಿಸಿಕೊಂಡದ್ದನ್ನು ನಾನು ಅಷ್ಟಾಗಿ ನೋಡಿಲ್ಲ.

ಪುನೀತ್ ಎಲ್ಲವನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ತಮಗೆ ಇಷ್ಟವಾಗದೇ ಇದ್ದದ್ದನ್ನು ಥಟ್ಟನೆ ನಿರಾಕರಿಸುತ್ತಿದ್ದರು. ತನ್ನ ಸಾಮರ್ಥ್ಯ ಮತ್ತು ಮಿತಿ ಎರಡೂ ಅವರಿಗೆ ಗೊತ್ತಿತ್ತು. ಒಬ್ಬ ನಟ ತನ್ನ ಸೀಮೆಯನ್ನು ವಿಸ್ತರಿಸಿಕೊಳ್ಳಬೇಕು ಎಂದು ನಂಬಿ ನಡೆದವರು ಅವರು. 

ಪುನೀತ್ ಸಂಕ್ರಮಣ ಕಾಲದಲ್ಲಿರುವ ಹೊತ್ತಿಗೇ ನಮ್ಮನ್ನು ಬಿಟ್ಟು ಹೊರಟರು. ಅವರ ಕನಸು, ನಿರೀಕ್ಷೆ, ದೂರದರ್ಶಿತ್ವ, ಪ್ರತಿಭೆ ಮತ್ತು ಫಲಿತಾಂಶಗಳ ಒಂದು ಪುಟ್ಟ ಭಾಗವನ್ನಷ್ಟೇ ನಾವು ನೋಡಿದ್ದೇವೆ ಅಂತ ಅವರನ್ನು ಕಳಕೊಂಡ ನಂತರ ಅನ್ನಿಸುತ್ತಿದೆ.

ಶರಣು ಹುಲ್ಲೂರು ಇಡೀ ಕುಟುಂಬದ ಚರಿತ್ರೆಯನ್ನು ಈ ಪುಸ್ತಕದೊಳಗೆ ತಂದಿದ್ದಾರೆ. ಹೇಗೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಕುಟುಂಬದ ಪುನೀತ್, ಕಲೆ, ಅಧ್ಯಾತ್ಮ, ವೈಚಾರಿಕತೆ, ಆಡಳಿತ, ಜನಾನುರಾಗ-ಇವನ್ನೆಲ್ಲ ಎಷ್ಟು ಸೊಗಸಾಗಿ ಮೈಗೂಡಿಸಿಕೊಂಡಿದ್ದರು ಅನ್ನುವುದನ್ನು ಈ ಪುಸ್ತಕ ಸಮರ್ಥವಾಗಿ ವಿವರಿಸಿದೆ.

ಪುನೀತ್ ಸತ್ವ, ಸಮತೆ, ಸಾಮರ್ಥ್ಯ ಮತ್ತು ಸಜ್ಜನಿಕೆಯನ್ನು ಬಲ್ಲವನಿಗೆ ಇದು ಮರು ಓದು. ಒಂದು ತಲೆಮಾರಿನ ಅಭಿನಯ ಕಥನ. ಅಕಾಲದಲ್ಲಿ ಅಗಲಿದ ಪ್ರತಿಭಾವಂತನ ಪೂರ್ಣಚರಿತೆ. “ ಪುಸ್ತಕದಲ್ಲಿ ೩೪ ಅಧ್ಯಾಯಗಳಿದ್ದು, ೨೬೪ ಪುಟಗಳನ್ನು ಹೊಂದಿದೆ.