ನೀರನ್ನು ಕುಡಿಯುವ ಸರಿಯಾದ ವಿಧಾನ
ಇನ್ನೇನು ಬೇಸಿಗೆ ಕಾಲ ಬಂದೇ ಬಿಟ್ಟಿದೆ. ಬಾಯಾರಿಕೆಯೂ ಅಧಿಕ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದೂ ಅವಶ್ಯಕ. ದೇಹದಲ್ಲಿ ನೀರಿನ ಕೊರತೆಯುಂಟಾದರೆ ನಮಗೆ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಮೂತ್ರಜನಕಾಂಗದ ಸಮಸ್ಯೆಯೂ ಕಾಡಬಹುದು. ನಾವು ಬಾಯಾರಿದಾಗ ನೀರು ಕುಡಿಯುತ್ತೇವೆ ಸರಿಯಷ್ಟೇ... ಆದರೆ ನಾವು ನೀರು ಕುಡಿಯುವ ವಿಧಾನ ಸರಿಯಾಗಿದೆಯೇ? ಈ ಬಗ್ಗೆ ನೀವು ಆಲೋಚನೆ ಮಾಡಿರುವಿರಾ? ಸ್ವತಃ ವೈದ್ಯರೂ, ವಿಜ್ಞಾನ ಸಂವಹನಕಾರರೂ ಆಗಿರುವ ಡಾ. ನಾ.ಸೋಮೇಶ್ವರ ಅವರು ‘ಸೂತ್ರ' ಪತ್ರಿಕೆಯಲ್ಲಿ ನೀರನ್ನು ಕುಡಿಯುವ ಸರಿಯಾದ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ. ನೀವೂ ಒಮ್ಮೆ ಓದಿ, ಅದೇ ವಿಧಾನದಲ್ಲಿ ನೀರು ಕುಡಿಯಿರಿ, ಆರೋಗ್ಯವಾಗಿರಿ.
“ಊಟಕ್ಕೆ ಮೊದಲು, ಊಟದ ನಡುವೆ ಮತ್ತು ಊಟದ ನಂತರ ನೀರನ್ನು ಕುಡಿಯಬಹುದು. ಆದರೂ ಊಟದ ನಡುವೆ ನೀರನ್ನು ಕುಡಿಯುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳಿತು. ಏಕೆಂದರೆ ನಮಗೆ ನೀರನ್ನು ಕುಡಿಯುವ ಸರಿಯಾದ ವಿಧಾನವೇ ಗೊತ್ತಿಲ್ಲ. ನೀರನ್ನು ಕುಡಿಯುವಾಗ ನಾವು ಕೇವಲ ನೀರನ್ನು ಮಾತ್ರ ಕುಡಿಯಬೇಕೇ ಹೊರತು ಗಾಳಿಯನ್ನಲ್ಲ. ನೀರಿನ ಲೋಟವನ್ನು ಕಚ್ಚಿಕೊಂಡು, ಗಾಳಿಯು ಒಳಹೋಗದ ಹಾಗೆ, ತುಟಿಗಳಿಂದ ಲೋಟದ ಅಂಚನ್ನು ಮುಚ್ಚಿ, ಅಷ್ಟು ನೀರನ್ನು, ಒಂದೇ ಸಲಕ್ಕೆ ಕುಡಿದು ಮುಗಿಸಬೇಕು. ಹೀಗೆ ಕುಡಿಯಬೇಕಾದರೆ, ಉಸಿರನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗುತ್ತದೆ ಎನ್ನುವುದನ್ನು ನೆನಪಿಡಿ. ಆದರೆ ಎಲ್ಲರೂ ಹೀಗೆ ಮಾಡುವುದಿಲ್ಲ. ಊಟ ಮಾಡುವಾಗ ಗುಟುಕು ಗುಟುಕು ನೀರನ್ನು ಕುಡಿಯುವುದನ್ನು ನಾವು ನೋಡಬಹುದು. ನೀರನ್ನು ಮೇಲಕ್ಕೆತ್ತಿ ಕುಡಿಯುವುದನ್ನೂ ನೋಡಬಹುದು ಅಥವಾ ಹರಟೆ ಹೊಡೆಯುತ್ತಾ, ಟಿವಿ ನೋಡುತ್ತಾ ನೀರನ್ನು ಹೀರುವುದನ್ನು ನೋಡಬಹುದು. ಇಂತಹ ಸಂದರ್ಭಗಳಲ್ಲಿ ನೀರಿನ ಜೊತೆಯಲ್ಲಿ ಗಾಳಿಯು ಸಾಕಷ್ಟು ಒಳಹೋಗುತ್ತದೆ. ಹೊಟ್ಟೆ ಉಬ್ಬರಿಕೆ, ತೇಗು, ಅಪಾನವಾಯು ಹೆಚ್ಚುತ್ತದೆ. ಆಹಾರ ಜೀರ್ಣವಾಗುವುದಕ್ಕೆ ತೊಂದರೆಯಾಗಬಹುದು.”
ಕೃಪೆ: ‘ಸೂತ್ರ’ ಪತ್ರಿಕೆ
ಚಿತ್ರ ಕೃಪೆ: ಅಂತರ್ಜಾಲ ತಾಣ