ನೀರಿನ ಸಮಸ್ಯೆಗೆ ಉತ್ತರ: ಪಾರಂಪರಿಕ ಜ್ನಾನ ಮತ್ತು ಸಂರಚನೆಗಳ ಬಳಕೆ
ಮೇ ೨೦೧೯ರಲ್ಲಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟ (ಎನ್.ಡಿ.ಎ.) ಕೇಂದ್ರ ಸರಕಾರದಲ್ಲಿ ಅಧಿಕಾರ ವಹಿಸಿದಾಗ ಕೈಗೊಂಡ ಮೊದಲ ನಿರ್ಧಾರಗಳಲ್ಲೊಂದು: ನೀರಿಗೆ ಸಂಬಂಧಿಸಿದ ವಿವಿಧ ಮಂತ್ರಾಲಯ ಮತ್ತು ಇಲಾಖೆಗಳನ್ನು ಜಲಶಕ್ತಿ ಮಂತ್ರಾಲಯವಾಗಿ ಒಗ್ಗೂಡಿಸಿದ್ದು.
ಈ ಮಂತ್ರಾಲಯದ ಬಹು ದೊಡ್ಡ ಜವಾಬ್ದಾರಿ: ದೇಶದಲ್ಲಿ ಬಿಗಡಾಯಿಸುತ್ತಿರುವ ನೀರಿನ ಕೊರತೆ ನಿಭಾಯಿಸುವುದು ಮತ್ತು ೨೦೨೪ರೊಳಗೆ ದೇಶದ ಪ್ರತಿಯೊಂದು ಮನೆಗೂ ಕೊಳವೆಯಲ್ಲಿ ಕುಡಿಯುವ ನೀರು ಒದಗಿಸುವುದು. ಈ ಉದ್ದೇಶ ಸಾಧನೆಗಾಗಿ ಒಂದೇ ತಿಂಗಳಿನಲ್ಲಿ ಅದು “ಜಲಶಕ್ತಿ ಅಭಿಯಾನ” ರೂಪಿಸಿತು.
ಮುಂದಿನ ನಾಲ್ಕು ತಿಂಗಳುಗಳಲ್ಲಿ, ದೇಶದ ೨೫೬ ನೀರಿನ ಕೊರತೆಯ ಜಿಲ್ಲೆಗಳ ೧,೫೯೨ ತಾಲೂಕುಗಳಲ್ಲಿ ಅಂತರ್ಜಲ ಮರುಪೂರಣಕ್ಕಾಗಿ ಮತ್ತು ಕೆರೆ ಹಾಗೂ ಹೊಂಡಗಳಂತಹ ಪಾರಂಪರಿಕ ಜಲಸಂರಕ್ಷಣಾ ಸಂರಚನೆಗಳ ಪುನರುಜ್ಜೀವನಕ್ಕಾಗಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಯಿತು. ಈ ಮಹಾನ್ ಕಾಯಕಕ್ಕೆ ಅಂತರ್ಜಲ ಪರಿಣತರು, ವಿಜ್ನಾನಿಗಳು ಮತ್ತು ಸರಕಾರಿ ಅಧಿಕಾರಿಗಳು ಕೈಜೋಡಿಸಿದರು.
ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರಕಟಿಸಿರುವ ಪ್ರಗತಿಯ ಅಂಕೆಸಂಖ್ಯೆಗಳು ಹೀಗಿವೆ: ಜಲಶಕ್ತಿ ಅಭಿಯಾನದ ಮೊದಲ ಹಂತವನ್ನು ಜುಲಾಯಿ ೧ರಿಂದ ಸಪ್ಟಂಬರ್ ೨೦೧೯ರ ಅವಧಿಯಲ್ಲಿ ಜ್ಯಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ೧,೫೪,೦೦೦ ಜಲಸಂರಕ್ಷಣೆಯ ಮತ್ತು ಮಳೆನೀರು ಕೊಯ್ಲಿನ ಕಾಮಗಾರಿಗಳನ್ನು; ೧,೨೩,೦೦೦ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ಮತ್ತು ೬೫,೦೦೦ ನೀರಿನ ಮರುಬಳಕೆ ಮತ್ತು ಜಲಮರುಪೂರಣ ಸಂರಚನೆಗಳನ್ನು ಪೂರ್ತಿ ಮಾಡಲಾಗಿದೆ. ಜೊತೆಗೆ ೨೦,೦೦೦ ಪಾರಂಪರಿಕ ನೀರಿನಾಕರಗಳನ್ನು ಪುನರುಜ್ಜೀವನ ಮಾಡಲಾಗಿದೆ. ೩೦ ನವಂಬರ್ ೨೦೧೯ರಂದು ಮುಕ್ತಾಯವಾದ ಎರಡನೆಯ ಹಂತದಲ್ಲಿ, ಆಂಧ್ರಪ್ರದೇಶ, ಕರ್ನಾಟಕ, ಪಾಂಡಿಚೇರಿ ಮತ್ತು ತಮಿಳ್ನಾಡಿನ ೬,೦೦೦ ಸ್ಥಳಗಳಲ್ಲಿ ಅಂತಹ ಸಂರಚನೆಗಳನ್ನು ನಿರ್ಮಿಸಲಾಗಿದೆ – ಹಿಂಗಾರು ಮಳೆನೀರಿನ ಕೊಯ್ಲು ಮತ್ತು ಸಂರಕ್ಷಣೆಗಾಗಿ.
ಈ ಸಂರಚನೆಗಳಿಂದ ಆಗಬಹುದಾದ ಅನುಕೂಲಗಳು ಅಗಾಧ – ಅವುಗಳ ಉಸ್ತುವಾರಿ ಸರಿಯಾಗಿದ್ದರೆ ಮತ್ತು ನಿರ್ಲಕ್ಷ್ಯದಿಂದಾಗಿ ಅವು ನಾಶವಾಗದಿದ್ದರೆ. ಇದುವೇ ೧೩೭ ಕೋಟಿ ಜನರಿರುವ ನಮ್ಮ ದೇಶದ ಮುಂದಿರುವ ಬಹು ದೊಡ್ಡ ಸವಾಲು. ಯಾಕೆಂದರೆ, ಮಳೆನೀರು ಕೊಯ್ಲು ಮತ್ತು ಜಲಸಂರಕ್ಷಣೆಯ ಪಾರಂಪರಿಕ ಜ್ನಾನವನ್ನು ಜನಸಮುದಾಯದ ಒಳಿತಿಗಾಗಿ ಬಳಸುವುದರಲ್ಲಿ ನಮ್ಮ ದೇಶ ಮತ್ತೆಮತ್ತೆ ಎಡವಿದೆ.
ಮನೆಗಳ ಚಾವಣಿಗಳಿಂದ ಮತ್ತು ಗುಡ್ಡಗಳಲ್ಲಿ ಮಳೆನೀರು ಕೊಯ್ಲು ಮಾಡಿ, ಅದನ್ನು ಹೊಂಡ, ಕೆರೆ, ಸರೋವರ ಮತ್ತು ಭೂಗರ್ಭದಲ್ಲಿ ಶೇಖರಿಸಿಡುವುದರ ಪ್ರಾಮುಖ್ಯತೆ ನಮ್ಮ ಪೂರ್ವಜರಿಗೆ ಪ್ರಾಚೀನ ಕಾಲದಿಂದಲೂ ಗೊತ್ತಿತ್ತು. ಭಾರತದ ೩೨೯ ದಶಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ಸುರಿಯುವ ಮಳೆಯ ಪರಿಮಾಣ ೪೦೦ ದಶಲಕ್ಷ ಹೆಕ್ಟೇರ್ ಮೀಟರ್. ಆದರೆ ಇದು ಎಲ್ಲ ಭೂಪ್ರದೇಶದಲ್ಲಿ ಸಮಾನ ಪರಿಮಾಣದಲ್ಲಿ ಸುರಿಯೋದಿಲ್ಲ ಎಂಬುದೇ ಸಮಸ್ಯೆ. ಆದ್ದರಿಂದಲೇ, ಆಯಾ ಪ್ರದೇಶದ ಭೌಗೋಳಿಕ ವಿಶಿಷ್ಠತೆ ಮತ್ತು ಇಕಾಲಜಿಯ ಸಂರಕ್ಷಣೆಗಾಗಿ ಮಳೆಕೊಯ್ಲು ಮಾಡಲಿಕ್ಕಾಗಿ ನಮ್ಮ ಪೂರ್ವಜರು ನೂರಾರು ತಂತ್ರಜ್ನಾನ ಅಭಿವೃದ್ಧಿ ಪಡಿಸಿದರು. ೧೫ ಇಕೊ-ವಲಯಗಳಲ್ಲಿ ಶತಮಾನಗಳಿಂದ ಬಳಕೆಯಲ್ಲಿರುವ ಅಂತಹ ೪೫ ಪ್ರಧಾನ ಪಾರಂಪರಿಕ ಮಳೆನೀರು ಕೊಯ್ಲು ತಂತ್ರ / ವಿಧಾನಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಶೇ.೩೦ ಕೆರೆಗಳು ಮತ್ತು ಹೊಂಡಗಳು ಎಂಬುದು ಗಮನಾರ್ಹ. ದೆಹಲಿಯ ವಿಜ್ನಾನ ಮತ್ತು ಪರಿಸರ ಕೇಂದ್ರ ೧೯೯೭ರಲ್ಲಿ ಪ್ರಕಟಿಸಿದ “ಡೈಯಿಂಗ್ ವಿಸ್ಡಮ್: ರೈಸ್, ಫಾಲ್ ಆಂಡ್ ಪೊಟೆನ್ಷಿಯಲ್ ಆಫ್ ಇಂಡಿಯಾಸ್ ಟ್ರೆಡಿಷನಲ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್” ಎಂಬ ಪುಸ್ತಕದಲ್ಲಿ ಈ ಪಾರಂಪರಿಕ ಜ್ನಾನವನ್ನು ಭಟ್ಟಿಯಿಳಿಸಿ ನೀಡಲಾಗಿದೆ.
ವಿಜ್ನಾನ ಮತ್ತು ಪರಿಸರ ಕೇಂದ್ರ (ಸಿ.ಎಸ್.ಇ.)ದ ಸ್ಥೂಲ ಲೆಕ್ಕಾಚಾರದ ಅನುಸಾರ, ನಮ್ಮ ದೇಶದಲ್ಲಿ ಮಳೆನೀರು ಕೊಯ್ಲು ಮಾಡಿದರೆ ಕುಡಿಯುವ ಮತ್ತು ಅಡುಗೆಯ ಅಗತ್ಯ ಪೂರೈಸಲು ಅದು ಖಂಡಿತ ಸಾಕು. ಮರುಭೂಮಿಯಲ್ಲಿ ಸುರಿಯುವ ಸರಾಸರಿ ಮಳೆ ೧೦೦ ಮಿಮೀ. ಒಂದು ಹೆಕ್ಟೇರಿನಲ್ಲಿ ಅಷ್ಟು ಮಳೆ ಬಿದ್ದರೆ, ಹತ್ತು ಲಕ್ಷ ಲೀಟರ್ ಮಳೆನೀರು ಕೊಯ್ಲು ಮಾಡಲು ಸಾಧ್ಯ. ಇದೇನು ಕಡಿಮೆ ನೀರಲ್ಲ. ಐದು ಜನರಿರುವ ಕುಟುಂಬಕ್ಕೆ ಕುಡಿಯಲು ಮತ್ತು ಅಡುಗೆಗೆ ದಿನಕ್ಕೆ ೧೦-೧೫ ಲೀಟರ್ ನೀರು ಸಾಕು. ಹಾಗಾಗಿ, ಒಂದು ಹೆಕ್ಟೇರಿನಲ್ಲಿ ಕೊಯ್ಲು ಮಾಡಿದ (ಆ ಪರಿಮಾಣದ) ಮಳೆನೀರು ೨೦೦-೩೦೦ ಕುಟುಂಬಗಳ ನೀರಿನ ಅಗತ್ಯ ಪೂರೈಸಲು ಸಾಕು.
ಭಾರತದ ಅತ್ಯಂತ ಪುರಾತನ ಮಳೆನೀರು ಕೊಯ್ಲಿನ ವ್ಯವಸ್ಥೆ ಪುಣೆಯಿಂದ ೧೩೦ ಕಿಮೀ ದೂರದಲ್ಲಿ ಪಶ್ಚಿಮಘಟ್ಟಗಳ ನಾನೇಘಾಟಿನಲ್ಲಿದೆ. ಅವು ಅಲ್ಲಿನ ಪ್ರಾಚೀನ ವ್ಯಾಪಾರಿ ಮಾರ್ಗದಲ್ಲಿ ಹಾದುಹೋಗುವ ವ್ಯಾಪಾರಿಗಳಿಗೆ ಕುಡಿಯುವ ನೀರು ಒದಗಿಸಲಿಕ್ಕಾಗಿ, ಕಲ್ಲುಬಂಡೆಗಳನ್ನು ಕೊರೆದು ನಿರ್ಮಿಸಿದ ಕೊಳಗಳು. ಅಲ್ಲಿನ ಹಲವಾರು ಕೋಟೆಗಳಲ್ಲಿ, ಬಂಡೆಗಲ್ಲುಗಳನ್ನು ಕೊರೆದು ನಿರ್ಮಿಸಿದ ಹೊಂಡಗಳು, ಕೊಳಗಳು ಮತ್ತು ಬಾವಿಗಳನ್ನು ಒಳಗೊಂಡ ಮಳೆನೀರು ಕೊಯ್ಲು ಮತ್ತು ನೀರು ಶೇಖರಣಾ ವ್ಯವಸ್ಥೆ ಇಂದಿಗೂ ಬಳಕೆಯಲ್ಲಿದೆ. ಪಶ್ಚಿಮ ರಾಜಸ್ಥಾನ, ಮಧ್ಯಪ್ರದೇಶದ ಬುರ್ಹಾನ್ಪುರ, ಹೈದರಾಬಾದಿನ ಗೊಲ್ಕೊಂಡಾ, ಕರ್ನಾಟಕದ ಬಿಜಾಪುರ, ಮಹಾರಾಷ್ಟ್ರದ ಔರಂಗಾಬಾದ್ – ಈ ಎಲ್ಲ ಪ್ರದೇಶಗಳಲ್ಲಿ ನಮ್ಮ ಪೂರ್ವಿಕರು ನಿರ್ಮಿಸಿದ ಮಳೆನೀರು ಕೊಯ್ಲು ಮತ್ತು ಜಲಸರಂಕ್ಷಣಾ ಸಂರಚನೆಗಳು ಇಂದಿಗೂ ಬಳಕೆಯಲ್ಲಿವೆ. ಕೆಲವನ್ನು ಆಯಾ ಕುಟುಂಬಗಳು, ಇನ್ನು ಕೆಲವನ್ನು ಅಲ್ಲಿನ ಸಮುದಾಯಗಳು ಉಳಿಸಿಕೊಂಡು ಬಂದಿವೆ.
ಆದರೆ, ಹಲವೆಡೆ ಅಂತಹ ಪಾರಂಪರಿಕ ಸಂರಚನೆಗಳು ಈಗ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅದಕ್ಕೆ ಕಾರಣವೇನೆಂದು ತಿಳಿದುಕೊಂಡು, ಆ ತಪ್ಪುಗಳನ್ನು ಮಾಡದಿರುವುದು ೨೦೧೯ರಲ್ಲಿ ಜಲಶಕ್ತಿ ಅಭಿಯಾನದಲ್ಲಿ ನಿರ್ಮಿಸಿದ ಅಥವಾ ಪುನರುಜ್ಜೀವನಗೊಳಿಸಿದ ಲಕ್ಷಗಟ್ಟಲೆ ಸಂರಚನೆಗಳ ಬಳಕೆ ನಿರಂತರವಾಗಿ ಮುಂದುವರಿಯಲು ಅತ್ಯಗತ್ಯ. ಆಗ ಮಾತ್ರ, ಜಲಶಕ್ತಿ ಅಭಿಯಾನದಲ್ಲಿ ಕಾಲಬದ್ಧವಾಗಿ, “ಮಿಷನ್” ವಿಧಾನದಲ್ಲಿ ಸಾಧಿಸಿದ ಅಗಾಧ “ಪ್ರಗತಿ”, ಸುಸ್ಥಿರವಾಗಲು ಸಾಧ್ಯ, ಅಲ್ಲವೇ?