ನೀರು:ಮಿತವ್ಯಯ ಹಿತ
ನೀರು:ಮಿತವ್ಯಯ ಹಿತ
ಟೆಕ್ಸಾಸ್ ಪ್ರಾಂತ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ.ಮಳೆಯ ಅಭಾವವೇ ಇದಕ್ಕೆ ಮುಖ್ಯ ಕಾರಣ.ಅಲ್ಲಿನ ರೈತರು,ಬೆಳೆಗಳಿಗೆ ನೀರುಣಿಸಲು ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿ ಬಂದಿದೆ.ನೀರಾವರಿ ವ್ಯವಸ್ಥೆಯೂ ಮಿತ ಪ್ರಮಾಣದಲ್ಲಿ ಮಾತ್ರಾ ನೀರುಣಿಸಲು ಶಕ್ತವಾಗಿದೆ.ಹಾಗಾಗಿ ನೀರಿನ ಮಿತ ಬಳಕೆ ಮತ್ತು ಸಮರ್ಪಕ ನಿರ್ವಹಣೆಯತ್ತ ಅಲ್ಲಿನ ರೈತರು ಗಮನಹರಿಸಬೇಕಾಗಿ ಬಂದಿದೆ.ಅವರು ನೀರಿನ ಮಿತವ್ಯಯ ಮಾಡುವ ಮೂಲಕ,ರಾಸಾಯಿನಿಕ ಗೊಬ್ಬರಗಳು ಮತ್ತು ಕ್ರಿಮಿನಾಶಕಗಳ ಬಳಕೆಯನ್ನೂ ಮಿತಗೊಳಿಸಲು ಬರುತ್ತದೆ.ಹಾಗೆಯೇ ಪಂಪ್ ಮಾಡಲು ಅಗತ್ಯವಾದ ವಿದ್ಯುಚ್ಛಕ್ತಿಯ ಬಿಲ್ ಕೂಡಾ ಕಡಿಮೆಯಾಗುತ್ತದೆ.ಗದ್ದೆಗಳಲ್ಲಿ ನೀರಿನ ಪಸೆಯನ್ನಳೆದು,ಅಗತ್ಯವಾದರೆ ಮಾತ್ರಾ ನೀರುಣಿಸುವ ತಂತ್ರಜ್ಞಾನವನ್ನು ಸ್ಥಾಪಿಸುವ ಮೂಲಕ ಅವರು ನೀರಿನ ಮಿತ ಬಳಕೆಯತ್ತ ಹೆಜ್ಜೆಯಿಟ್ಟಿದ್ದಾರೆ.ನೆಲದಡಿಯ ಮಣ್ಣಿನಲ್ಲಿ ಪ್ರತಿ ನಾಲ್ಕಿಂಚು ಆಳದಲ್ಲಿ ಲಭ್ಯವಿರುವ ನೀರಿನ ತೇವಾಂಶವನ್ನು ಅಳೆಯುವ ಸೌರ ವಿದ್ಯುತ್ ಆಧಾರಿತ ವ್ಯವಸ್ಥೆಯನ್ನವರು ಸ್ಥಾಪಿಸಿಕೊಂಡಿದ್ದಾರೆ.ಈ ಸ್ಥಾವರಗಳಿಂದ ನೀರಿನಂಶದ ಬಗೆಗಿನ ಮಾಹಿತಿಯು,ಪ್ರತಿ ಸ್ಥಾವರದಲ್ಲಿರುವ ಸೆಲ್ಫೋನ್ ಮೂಲಕ ಮುಖ್ಯ ನಿಯಂತ್ರಣ ಕೇಂದ್ರವನ್ನು ತಲುಪುತ್ತದೆ.ಗದ್ದೆಯಲ್ಲಿರುವ ಬೆಳೆಯ ಅಗತ್ಯಾನುಸಾರ,ಪ್ರತಿ ರೈತನಿಗೆ ನೀರುಣಿಸಲು ಅಗತ್ಯವಾದಾಗಲೆಲ್ಲಾ ಎಸ್ಸೆಮ್ಮೆಸ್ ಸಂದೇಶ ರವಾನೆಯಾಗುತ್ತದೆ.ಹೀಗಾಗಿ,ಅನಗತ್ಯ ನೀರಾವರಿ ಆಗದು.ಬೆಳೆಗಳೂ ಒಣಗುವ ಭಯವೂ ಇಲ್ಲ.ನೀರಿನ ಮಿತವ್ಯಯವನ್ನೂ ಸಾಧಿಸಿದಂತಾಯಿತು.ಈ ವ್ಯವಸ್ಥೆಯ ನಿರ್ವಹಣೆಗೆ ತಿಂಗಳಿಗೆ ಎಕರೆಯೊಂದಕ್ಕೆ ಒಂದೂವರೆ ಡಾಲರು ಖರ್ಚು ಬರುತ್ತದಂತೆ.ಹತ್ತಿಯಂತಹ ಬೆಳೆಗಳಿಗೆ ಇದು ಹೆಚ್ಚು ಹೊಂದುತ್ತದೆ ಎಂದು ವರದಿ.
---------------------------------------------------
ಮರಳಿ ಅಂಚೆಗೆ
ಮಿಂಚಂಚೆಯೊಂದನ್ನು ಬರೆದು http://snailmailmyemail.org/ ಅಂತರ್ಜಾಲ ತಾಣಕ್ಕೆsnailmailmyemail@gmail.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿದರೆ ಸರಿ.ನಿಮ್ಮ ಮಿಂಚಂಚೆಯನ್ನು ಬರೆದು,ಅದನ್ನು ಸಾಮಾನ್ಯ ಅಂಚೆಯಲ್ಲಿ ಸೂಚಿಸಿದ ವಿಳಾಸಕ್ಕೆ ಕಳುಹಿಸುವ ಏರ್ಪಾಡಾಗುತ್ತದೆ.ಜುಲೈ ಹದಿನದರಿಂದ ಒಂದು ತಿಂಗಳ ಕಾಲ ಲಭ್ಯವಿರುವ ಈ ಸೇವೆಯು,ಸಾಮಾನ್ಯ ಅಂಚೆಯ ಹಿರಿಮೆಯನ್ನು ನೆನಪಿಸಲು ಹಮ್ಮಿಕೊಳ್ಳಲಾಗಿರುವ ಚಳುವಳಿಯಾಗಿದೆ.ಕೈಬರಹದ ಪತ್ರಗಳನ್ನು ಪಡೆದಾಗ ಅಗುವ ಖುಷಿಯನ್ನು ಮಿಂಚಂಚೆ ನೀಡದು.ಕೈಬರಹದ ಪತ್ರಗಳು ವ್ಯಕ್ತಿಯ ಸ್ವಂತಿಕೆಯನ್ನು ಮೆರೆದು,ಅದನ್ನು ಪಡೆದವರಲ್ಲಿ ವ್ಯಕ್ತಿಗೆ ತಮ್ಮ ಮೇಲೆ ಇರುವ ಕಾಳಜಿಯನ್ನು ವ್ಯಕ್ತಪಡಿಸುತ್ತವೆ ಎನ್ನುವುದು,ಈ ಚಳುವಳಿಯನ್ನು ಹಮ್ಮಿಕೊಂಡ ಇವಾನ್,ಲ್ಯೂಸಿ ಮುಂತಾದವರ ನಂಬಿಕೆ.ಆ ಆನ್ಲೈನ್ ಚಳುವಳಿಗೆ ಹೆಚ್ಚೇನೂ ಪ್ರತಿಕ್ರಿಯೆ ಬರದೆಂದುಕೊಂಡು,ತಾಣವನ್ನು ಆರಂಭಿಸಿದ ಅವರಿಗೆ ಸಾವಿರಗಟ್ಟಲೆ ಮಿಂಚಂಚೆಗಳು ಬಂದಾಗ ಖುಷಿ ಮತ್ತ್ತು ಗಾಬರಿ-ಗಾಬರಿ ಯಾಕೆಂದರೆ,ಆ ಸಂದೇಶಗಳನ್ನು ಬರೆದು ಪತ್ರ ಮುಖೇನ ಕಳುಹಿಸಲು ಬೇಕಾದ ಜನಬೆಂಬಲ ಬೇಕಲ್ಲಾ? ಅದಕ್ಕೂ ಅಂತರ್ಜಾಲವೇ ನೆರವಾಯಿತು.ಪತ್ರ ಬರೆಯುವುದು ಹವ್ಯಾಸವಾಗಿರುವ ಜನರು,ಈ ಕಾರ್ಯದಲ್ಲಿ ಕೈಗೂಡಿಸಲು ಸ್ವಯಂಸೇವಕರಾಗಿ ಮುಂದೆ ಬಂದರು.ಮೊದಲು ಮಿಂಚಂಚೆ ಕಳುಹಿಸಿ,ತಮಗಾಗಿ ಇತರರು ಪತ್ರ ಬರೆಯಲಿ ಎಂದು ಅಪೇಕ್ಷಿಸಿದವರು,ನಂತರದಲ್ಲಿ ತಾವೇ ಕೈಗೂಡಿಸಿದರು.ಆಗಸ್ಟ್ ಹದಿನೈದರ ನಂತರವೂ ಈ ತಾಣ ಮುಂದುವರಿದರೆ ಅಚ್ಚರಿಯಿಲ್ಲ.
--------------------------------------------------
ಮೊಬೈಲ್ ಬ್ಯಾಂಕಿಂಗ್:ನಾನಾ ಬಗೆಮೊಬೈಲ್ ಬ್ಯಾಂಕಿಂಗ್ ಈಗಿನ ಹೊಸ ಕ್ರಮ.ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಲು ಬ್ಯಾಂಕ್ಗಳವರು ಮೂರು ಮಾದರಿಗಳನ್ನು ಬಳಸಬಹುದಾಗಿದೆ.ಸ್ಮಾರ್ಟ್ಫೋನುಗಳಲ್ಲಿ ಮೊಬೈಲ್ ಬ್ಯಾಂಕಿಂಗ್ ತಂತ್ರಾಂಶವನ್ನು ಅನುಸ್ಥಾಪಿಸಿಕೊಂಡು,ಬ್ಯಾಂಕಿನಲ್ಲಿ ಸ್ಮಾರ್ಟ್ಫೋನ್ ನಂಬರನ್ನು ನೋಂದಾಯಿಸಿಕೊಂಡು ಸೇವೆ ಪಡೆಯುವುದು ಒಂದು ಮಾದರಿ.ಇನ್ನೊಂದು ಮಾದರಿಯಲ್ಲಿ,ಬ್ಯಾಂಕ್ ತಾಣವನ್ನು ಮೊಬೈಲ್ ಬ್ರೌಸರಿನ ಮೂಲಕ ಸಂಪರ್ಕಿಸಿ,ಅಂತರ್ಜಾಲ ತಾಣದ ಮೂಲಕ ಪಡೆಯಬಹುದಾದ ಸೇವೆ.ಮೂರನೇ ರೀತಿಯಲ್ಲಿ,ಎಸ್ ಎಂ ಎಸ್ ಸಂದೇಶಗಳನ್ನು ಕಳುಹಿಸುವ ಮೂಲಕ ಸೇವೆ ಪಡೆಯಬಹುದಾಗಿದೆ.ಬೇಕಾದ ಸೇವೆಯನ್ನು ಸೂಚಿಸಲು ಸಂದೇಶದ ವಿಷಯವನ್ನು ಬದಲಿಸಬೇಕು.ಇವುಗಳ ಪೈಕಿ,ಅಂತರ್ಜಾಲ ತಾಣದ ಮೂಲಕ ಪದೆಯುವ ಬ್ರೌಸರ್ ಅಧಾರಿತ ಮಾದರಿಯೇ ಮೇಲುಗೈ ಪಡೆಯುತ್ತಿರುವುದು ವಿಶ್ವದಾದ್ಯಂತ ಕಂಡು ಬರುತ್ತಿರುವ ಪ್ರವೃತ್ತಿಯಾಗಿದೆ.ಹಾಗಾಗಿ,ಬ್ಯಾಂಕುಗಳು ಅಂತಹ ಸೇವೆಯನ್ನೇ ಅವಲಂಬಿಸುವುದು ಸೂಕ್ತವಾಗಿದೆ.ತಂತ್ರಾಂಶ ಅನುಸ್ಥಾಪನೆ,ಸ್ಮಾರ್ಟ್ಫೋನಿನ ಸ್ಮರಣಶಕ್ತಿಯ ಮೇಲೆ ಒತ್ತಡ ತರುವುದು ಈ ಮಾದರಿ ಕಡಿಮೆ ಜನಪ್ರಿಯವಾಗಿರುವುದಕ್ಕೆ ಕಾರಣವಾಗಿರಬಹುದು.
---------------------
ಮುಖ ನೋಡಿ ಮಣೆ!
ಫೇಸ್ಬುಕ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಚಿತ್ರಗಳನ್ನು ಹಾಕಿಕೊಳ್ಳುವುದಿದೆ.ಇಂತಹ ಜಾಲತಾಣಗಳ ಜನಪ್ರಿಯತೆ ಮುಗಿಲುಮುಟ್ಟಿದೆ.ವ್ಯಕ್ತಿಯ ಚಿತ್ರವನ್ನು ಅಂತಹ ತಾಣಗಳಿಂದ ಪಡೆದು,ಅವನ ಆಸಕ್ತಿ ಇತ್ಯಾದಿಗಳನ್ನು ಅರಿತು,ಆತನು ಅಂಗಡಿ-ಮುಂಗಟ್ಟಿನ ಬಳಿ ಬಂದಾಗ,ಆತನ ಮುಖ ಪರಿಚಯವನ್ನು ತಾಣದ ಚಿತ್ರದ ಮೂಲಕ ಪಡೆದು,ಆತನ ಗಮನ ಸೆಳೆಯುವ ಜಾಹೀರಾತುಗಳನ್ನು ಭಿತ್ತರಿಸುವ ಮಟ್ಟದ ವಾಣಿಜ್ಯೀಕರಣ ಈಗ ಸಾಧ್ಯವಾಗಿದೆ.ಹೀಗೆ ಮಾಡಿದರೆ,ವ್ಯಕ್ತಿಯ ಖಾಸಗಿತನದ ಉಲ್ಲಂಘನೆಯಾಗುತ್ತದೆ ಎನ್ನುವ ಮಾಮೂಲೀ ಕೂಗೂ ಕೇಳಿ ಬರುತ್ತಿದೆ.ಹಾಗೆ ಖಾಸಗಿತನ ಬೇಕಾದವರು ತಮ್ಮ ಚಿತ್ರವನ್ನು ತಾಣಗಳಿಂದ ತೆಗೆದು ಬಿಟ್ಟರಾಯಿತು ಅಂದಿರಾ?
-------------------------
ಜಿ ಪಿ ಎಸ್:ಸೌರ ಚಟುವಟಿಕೆಯಿಂದ ಬಾಧಿತ
ಜಿಪಿಎಸ್ ಎನ್ನುವುದು ಸ್ಥಾನ ಗುರುತಿಸುವ ವ್ಯವಸ್ಥೆ.ಮೊಬೈಲ್ ಸೆಟ್ಟಿನಲ್ಲಿ ಜಿಪಿಎಸ್ ವ್ಯವಸ್ಥೆಯಿದ್ದರೆ,ವಾಹನ ಚಾಲನೆಗೆ ನಿಮಗೆ ಜಿಪಿಎಸ್ ನೆರವು ಪಡೆಯುವುದು ಸಾಧ್ಯ.ವಾಹನ ಸಾಗಬೇಕಾದ ದಾರಿಯನ್ನು ಮೊಬೈಲ್ ಮೂಲಕ ಪಡೆಯುತ್ತಿರಬಹುದು.ಆದರೆ ಸೂರ್ಯನ ಮೇಲ್ಮೈಯಲ್ಲಿ ನಡೆಯುವ ಚಟುವಟಿಕೆಗಳು ಉಂಟು ಮಾಡುವ ವಿಕಿರಣಗಳು ಈ ಜಿಪಿಎಸ್ ವ್ಯವಸ್ಥೆಯನ್ನು ಬಾಧಿಸುವುದರಿಂದ,ವಾಹನ ಚಾಲನೆಗೆ ಅದರ ಅವಲಂಬನೆ ಅಡ್ಡಿಯಾಗಬಹುದಂತೆ.ಜಿಪಿಎಸ್ ಅನ್ನು ವಿಮಾನ ಹಾರಾಟಕ್ಕೂ ಬಳಸುತ್ತಾರೆ.ಹಾಗಾಗಿ ವಿಮಾನ ಬರೇ ಜಿಪಿಎಸ್ ಅನ್ನು ವಲಂಬಿಸುವುದು ಶ್ರೇಯಸ್ಕರವಲ್ಲವೆಂದು ಸಂಶೋಧಕರು ಎಚ್ಚರಿಸಿದ್ದಾರೆ.
-------------------------------------------
ತುಷಾರ:ವಾರ್ಷಿಕ ಚಂದಾ ಗೆಲ್ಲಿ!ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.
*ಪ್ರಯೋಗಾರ್ಥ ಬಳಕೆಯಲ್ಲಿರುವ ಹೊಸ ವೋಟಿಂಗ್ ಮೆಶೀನ್ಗಳಲ್ಲಿ ಆಗಿರುವ ಬದಲಾವಣೆ ಏನು?
(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS43 ನಮೂದಿಸಿ.)
ಕಳೆದ ವಾರದ ಬಹುಮಾನಿತ ಉತ್ತರ:
*ಕಂಪ್ಯೂಟರ್ ಚಿತ್ರಗಳು ಅಪೇಕ್ಷಿಸುವ ಸ್ಮರಣಶಕ್ತಿ ಗಾತ್ರ ತಗ್ಗಿಸಲು, ಜೆಪೆಗ್,ಜಿಫ಼್ ತೆರನ ಚಿತ್ರಗಳು ಸೂಕ್ತ.ಬಹುಮಾನ ಗೆದ್ದವರು ಅಜಿತ್ ಬಿ ಜೆ,ಕಾಂಞಗಾಡ್,ಕೇರಳ.ಅಭಿನಂದನೆಗಳು.
*ಅಶೋಕ್ಕುಮಾರ್ ಎ
Udayavani