ನೀರು ತುಂಬುವ ಹಬ್ಬ - ನನ್ನ ಒಂದು ನೆನಪು

ನೀರು ತುಂಬುವ ಹಬ್ಬ - ನನ್ನ ಒಂದು ನೆನಪು

ಇಂದು ಚತುರ್ದಶೀ. ತ್ರಯೋದಶಿಯ ರಾತ್ರಿ ನೀರುತುಂಬುವ ಹಬ್ಬ. ನಾವು ಸಣ್ಣವರಿದ್ದಾಗ ನಮ್ಮ ಮನೆಯ ಹಂಡೆ, ಕೊಳದಪ್ಪಲೆ, ಬಿಂದಿಗೆಗಳನ್ನು ರಂಗೋಲಿ, ಹುಣಸೆಹಣ್ಣು ಹಚ್ಚಿ ತೊಳೆದು ಲಕಲಕಿಸುವಂತೆ ಮಾಡಿ ಅವುಗಳಲ್ಲಿ ನೀರುತುಂಬಿ, ಪೂಜೆಮಾಡಿ ಇರಿಸುತ್ತಿದ್ದರು.
 
ನರಕ ಚತುರ್ದಶಿಯ ದಿನ ಬೆಳ್ಳಂಬೆಳಗ್ಗೆ  ನಮಗೆ ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಸಿ ಕೈಬಿಡುತ್ತಿದ್ದಂತೆಯೇ ನಾವು ಒಂದುಕೈಯಲ್ಲಿ ಪಟಾಕಿ ಪೊಟ್ಟಣ ಮತ್ತು ಇನ್ನೊಂದರಲ್ಲಿ ಕಿಡಿ ಹಚ್ಚಿದ ಎರಡಡಿ ಉದ್ದದ, ದಪ್ಪವಾದ ಊದಿನಕಡ್ಡಿ ಹಿಡಿದು ಹೊರಗೋಡಿದರೆ ಊಟದ ಹೊತ್ತಿಗೇ ಮತ್ತೆ ಒಳಗೆ ಬರುತ್ತಿದ್ದದ್ದು. ಮಧ್ಯೆ, ಮಧ್ಯೆ, ಪಟಾಕಿಯ ಮದ್ದು ಮೆತ್ತಿಕೊಂಡ  ಕೈಯಲ್ಲಿ ಊದಿನಕಡ್ಡಿ ಉರಿಯುತ್ತಿದ್ದಂತೆಯೇ ಒಳಗೆಬಂದು ಅಮ್ಮನ ಮುಂದೆ ನಿಂತು ಬಾಯಿತೆರೆದರೆ ಬಾಯೊಳಗೆ ಏನಾದರೂ ಬೀಳುತ್ತಿತ್ತು. ಅದೇನೆಂದು ಗಮನಿಸುವ ವ್ಯವಧಾನವೂ ನಮಗಿರುತ್ತಿರಲಿಲ್ಲ. ಅದನ್ನು ಅಗಿದುನುಂಗಿ ಹೊರಗೋಡುವ ಆತುರ. ಇಲ್ಲದಿದ್ದರೆ ನನ್ನ ತಮ್ಮ ನನಗಿಂತ ಹೆಚ್ಚು ಪಟಾಕಿ ಹಚ್ಚಿಬಿಡುತ್ತಿದ್ದನಲ್ಲ!
 
ಐವತ್ತು ವರುಷದ ನಂತರ ಅದೆಷ್ಟು ಬದಲಾವಣೆ! ಈಗ ಪಕ್ಕದ ಮನೆಹುಡುಗರು ಪಟಾಕಿ ಹಚ್ಚಿದರೆ ನಾನು ಸಹಿಸಲಾರೆ. ಶಬ್ದವೂ  ಆಗದು, ಹೊಗೆಯಂತೂ ಸಹಿಸಲೇ ಸಾಧ್ಯವಿಲ್ಲ. ಪಟಾಕಿ ಒತ್ತಟ್ಟಿಗಿರಲಿ. ಅದರದು ಇನ್ನೊಂದು ಕಥೆ. ಈಗ ನಾನು ಬರೆಯ ಹೊರಟದ್ದು ನೀರು ತುಂಬುವ ವಿಷಯ.
 
ನಾವು ಬೆಳೆಯುತ್ತಾ ಹೋದಂತೆ ಬೆಂಗಳೂರೂ ಬೆಳೆಯಿತು. ಊರಿನ ನಾಲ್ಕು ಹೊರಮೂಲೆ ಎಂದು  ಕೆಂಪೇಗೌಡ ಕಟ್ಟಿಸಿದ್ದ ನಾಲ್ಕು ಗೋಪುರಗಳು ಊರಿನ ಮಧ್ಯಭಾಗವಾದವು. ಒಂದರಿಂದ ತೊಂಭತ್ತರ ವರೆಗಿದ್ದ ಬಸ್ ನಂಬರಗಳು ನಾಲ್ಕುನೂರು ದಾಟಿದವು. ಹಳೆಕಟ್ಟಡಗಳು ಕೆಡವಲ್ಪಟ್ಟು ಒಂದು ಮನೆಯಿದ್ದ ಕಡೆ ನೂರುಮನೆಗಳಾದವು. ಹೆಸರಘಟ್ಟದ ಕೆರೆಯಿಂದ ಊರಿಗೆ ತರುತ್ತಿದ್ದ ನೀರು ಸಾಲದಾಗಿ, ಕಾವೇರಿಯನ್ನು ಬೆಂಗಳೂರಿನೆಡೆ ತಿರುಗಿಸಿಯಾಯಿತು. ಆದರೂ ನೀರು ಸಾಲದು. ಜತೆಗೆ ನಮ್ಮ ಮನೆಕಟ್ಟಿದಾಗ, ಅಂದರೆ, ಆಗ್ಗೆ ಮೂವತ್ತುವರುಷಗಳ ಹಿಂದೆ ಜೋಡಿಸಿದ್ದ ಕಬ್ಬಿಣದ ಕೊಳವೆಗಳು ತುಕ್ಕುಹಿಡಿದು ಕಿರಿದಾಗುತ್ತಾಬಂದವು. ನಮ್ಮ ಮನೆಯಲ್ಲಿ ನಲ್ಲಿ ತಿರುಗಿಸಿದರೆ ಸುರಿಯುತ್ತಿದ್ದ ನೀರಿನ ಧಾರೆ ಸಣ್ಣದಾಗುತ್ತಾ ಬಂದು ನಂತರ ಕೆಲವು ವರುಷಗಳ ನಂತರ ಕೆಳಮಟ್ಟದಲ್ಲಿದ್ದ ನಲ್ಲಿಗಳಲ್ಲಿ ಮಾತ್ರ ತೊಟ್ಟಿಡುತ್ತಿದ್ದು ಕ್ರಮೇಣ ನಲ್ಲಿಯಲ್ಲಿ ಬರಿಯ ಗಾಳಿಮಾತ್ರ ಸುಳಿಯುವಂತಾಯಿತು.
 
ಹೀಗಾಗಿ ನಮ್ಮ ಮನೆಯಲ್ಲಿ ದಿನವೂ ನೀರು ತುಂಬುವ ಹಬ್ಬ.  ಹೊಸದಾಗಿ ಕಟ್ಟಿದ್ದ, ಹೊಸಕೊಳವೆ ಜೋಡಿಸಿದ್ದ, ನಮ್ಮ ಎದುರುಮನೆ ನಲ್ಲಿಯಿಂದ ಪ್ರತಿದಿನ ಸಂಜೆ ನೀರು ಹಿಡಿದು ತಂದು ನಮ್ಮ ಪ್ಲಾಸ್ಟಿಕ್ ಡ್ರಮ್ಮು ಮತ್ತು ಬಕೆಟ್ಟುಗಳಿಗೆ ತುಂಬಿಸಿಕೊಳ್ಳುತ್ತಿದ್ದೆವು! ಕೆಲಕಾಲದ ನಂತರ ನಮ್ಮ ಮನೆಯ ಮುಂದೆ ತಗ್ಗಿನಲ್ಲಿ ಒಂದು ತೊಟ್ಟಿ ಕಟ್ಟಿಸಿ ಅದರಲ್ಲಿ ಶೇಖರವಾಗುತ್ತಿದ್ದ ನೀರನ್ನು ಪಂಪ್ ಮೂಲಕ ಮನೆಯೊಳಕ್ಕೆ ಬರಮಾಡಿಕೊಂಡೆವು. ನಮ್ಮ ಮನೆಯ ನೀರುತುಂಬುವ ಹಬ್ಬದ ಪೂಜೆ ಹಂಡೆ - ಬಿಂದಿಗೆಯಿಂದ, ಪ್ಲಾಸ್ಟಿಕ್ ಡ್ರಮ್ಮು- ಬಕೆಟ್ಟುಗಳಿಗೆ ಸಂದು, ನಂತರ ಪಂಪು - ನಲ್ಲಿಗೆ ಸಲ್ಲಿಕೆಯಾಗತೊಡಗಿತು!
 
ಈ ತೊಟ್ಟಿ -  ಪಂಪಿನ ವ್ಯವಸ್ಥೆ ಏನೂ ಪೂರ್ಣ ಸಮಾಧಾನಕರವಾಗಿರಲಿಲ್ಲ. ನಮ್ಮ ತೊಟ್ಟಿಗೆ ರಾತ್ರಿಯಿಡೀ ತೊಟ್ಟಿಕ್ಕುತ್ತಿದ್ದ ನೀರು ಆಗಿಂದಾಗ್ಗೆ ಕೈಕೊಟ್ಟರೆ ನಮ್ಮ ಎದುರುಮನೆಯಿಂದ ನೀರು ಹೊರುವುದು ನಡೆದೇ ಇತ್ತು. ನೀರಿನ ಋಣ ಎನ್ನುತ್ತಾರಲ್ಲಾ ಅದೇನಾದರೂ ಇರುವುದೇ ಆದರೆ ನಮ್ಮ ಎದುರುಮನೆಯವರ (ಶ್ರೀ ವೆಂಕಟಸ್ವಾಮಿ ರೆಡ್ಡಿಯವರ ಸಂಸಾರ - ಶ್ರೀಯುತ ರೆಡ್ಡಿಯವರು ಈಗಿಲ್ಲ. ಅವರ ಸುಪುತ್ರ ಹಾಗೂ ಸಂಸಾರ ಅಲ್ಲಿಯೇ ಇದ್ದಾರೆ. ಅವರ ಹೊಟ್ಟೆ ತಣ್ಣಗಿರಲಿ) ನೀರಿನ ಋಣ ಸಲ್ಲಿಸಲು ನಮಗೆ ಏಳೇಳು ಜನುಮವೂ  ಸಾಲದು!
 
ನನ್ನ ತಂಗಿಯ ವಿವಾಹವಾಗಿ, ನಮ್ಮ ಮನೆಯಲ್ಲಿ  ಮೊದಲ ದೀಪಾವಳಿಗೆ ಭಾವನವರು ಬರುವ ಸಂಭ್ರಮ. ರಾಯರ ಮನೆಯಲಿ ಮಲ್ಲಿಗೆಹೂಗಳ ಪರಿಮಳ ತುಂಬಿತ್ತೋ ಇಲ್ಲವೋ ನೆನಪಿಲ್ಲ,  ಬಾಗಿಲ ಬಳಿ ಮಾತ್ರ  ಕಾಲಿಗೆ ಬಿಸಿನೀರಿನ ತಂಬಿಗೆಯ ಬದಲು  ಖಾಲಿಯ ಬಿಂದಿಗೆ ರಾಯರ ಎದುರಿತ್ತು! ನಮ್ಮ ಭಾವನವರ ಆಗಮನವಾದಾಗ ನಾವು ಎದುರುಮನೆಯಿಂದ ನೀರು ಹೊರುತ್ತಿದ್ದೆವು. ನಮ್ಮ ಭಾವನವರೂ ಬೆಂಗಳೂರಿನವರೇ ಆದದ್ದರಿಂದ ಈ ಪರಿಸ್ಥಿತಿ ಅವರಿಗೆ ಹೊಸದೇನಲ್ಲ. ಪಂಚೆಮೇಲಕ್ಕೆ ಕಟ್ಟಿ ಅವರೂ ಒಂದು ಬಕೆಟ್ಟು ಹಿಡಿದು ನಮ್ಮ ಜತೆ ಸೇರಿದರು. ನಾವು ಅದೇ ಅವಕಾಶ ಹಿಡಿದು ಮನೆಯಲ್ಲಿದ್ದ ಡ್ರಮ್ಮು, ಕೊಳದಪ್ಪಲೆ, ಬಕೆಟ್ಟುಗಳಷ್ಟೇ ಅಲ್ಲದೆ ಅಡಿಗೆಮನೆಯ ತಪ್ಪಲೆ, ಪ್ರೆಶರ್ ಕುಕ್ಕರು, ತಂಬಿಗೆ, ಲೋಟಗಳಿಗೂ ನೀರು ತುಂಬಿಸಿಟ್ಟೆವು. ನಮ್ಮ ಭಾವನವರಿಗೆ ಅವರೇ ಹೊತ್ತು ತಂದ ನೀರಿನಿಂದ ಅಭ್ಯಂಜನವಾಗಿ, ಮೊದಲ ದೀಪಾವಳಿ ಸಾಂಗವಾಗಿ ನೆರವೇರಿತು.
 
ಈಗ ದೇವರ ದಯದಿಂದ ಗೋವೆಯಲ್ಲಿನ ನಮ್ಮ ಮನೆಯಲ್ಲಿ ಇದುವರೆಗೂ ನೀರಿಗೆ ಬರವಿಲ್ಲ. ಮನೆಯಮೇಲಿನ ನೀರಿನ ತೊಟ್ಟಿಗೆ ನೀರು ತುಂಬಿಕೊಳ್ಳುತ್ತದೆ. ಆದ್ದರಿಂದ ನಮ್ಮ ಮನೆಯಲ್ಲಿ ಹಂಡೆ, ಡ್ರಮ್ಮುಗಳು ಕಾಣಸಿಗವು. ನೀರು ತುಂಬುವ ಹಬ್ಬದ ದಿನ ನನ್ನ ಪತ್ನಿ ನಲ್ಲಿಗೇ ಅರಿಶಿನ ಕುಂಕುಮ ಸಲ್ಲಿಸುತ್ತಾಳೆ. ನಮ್ಮ ಬೆಂಗಳೂರಿನ ಪಂಪು, ಪೈಪಿನ ಪೂಜೆ ನೆನಪಿಗೆ ಬರುತ್ತದೆ. ನೀರು ಹೊತ್ತು ಹೊತ್ತು ಮೈಕೈ ಎಲ್ಲಾ ನೋವಾಗುತ್ತಿದ್ದದ್ದು ನಿಜವಾದರೂ ನೋವಿನ ನೆನಪು ಭಾದಿಸದು.  ಮನೆಯವರೆಲ್ಲ ಒಟ್ಟಿಗೆ ಸೇರಿ ದಣಿದು ಮಾಡಿದ ನೀರುತುಂಬುವ ಹಬ್ಬದ ಮುದ ಮಾತ್ರ ಮನದಲ್ಲಿ ಉಳಿದಿದೆ.