ನೀಲಾಗಸದಲ್ಲಿ ಮೇಘಗಳ ವೈಭವ

ನೀಲಾಗಸದಲ್ಲಿ ಮೇಘಗಳ ವೈಭವ

 ಆಗಸದ ನೀಲವರ್ಣದಲ್ಲಿ ಬೆಳ್ಳನೆಯ, ಕಪ್ಪನೆಯ, ವರ್ಣಮಯ ಮೇಘಗಳ ವೈಭವ ಕಂಡು ಏನೋ ಮಹಾಕವಿ ಕಾಳಿದಾಸ ಮೇಘ ಸಂದೇಶ ಕಾವ್ಯ ಬರೆದಿರಬಹುದು. ಹಿಂಜಿದ ಅರಳೆಯು ಗಾಳಿಗೆ ತೂರಿ ಮೋಡಗಳಾಗಿಹವೆ? ಎಂದು ಕವಿಯೊಬ್ಬರು ಮಗುವಿನ ತೊದಲ್ನುಡಿಯಲ್ಲಿ ಪ್ರಶ್ನಿಸಿದ್ದಾರೆ. 

ಬರಿದಾದ ನೀಲ ಆಗಸಕ್ಕಿಂತ ಮೋಡಗಳಿರುವ ಬಾನೇ ಸುಂದರ ಎಂದು ಯಾರಿಗಾದರೂ ಅನಿಸದೇ ಇರದು. ಖಾಲಿ ಆಗಸ ಖಾಲಿ ಮನಸಿನ ಸಂಕೇತವೆಂದೇನೋ ಮೋಡಗಳಿಂದೊಡಗೂಡಿದ ಆಗಸವನ್ನು ಎಲ್ಲರೂ ಬಯಸುತ್ತಾರೆ. ಕವಿಗಳಿಗೆ ಅದು ಪ್ರಿಯತಮೆಗೆ ಕರೆದೊಯ್ಯುವ ಮೇಘ ಸಂದೇಶವಾದರೆ, ರೈತರಿಗೆ ಜೀವದಾಯಿನಿಯಾಗಿದೆ. ಬಿಳಿಯ ಮೋಡಗಳು ಸುಂದರವಾದರೂ ಅದರಿಂದ ಮಳೆ ಬರುವುದಿಲ್ಲವಾದ್ದರಿಂದ ರೈತರು ಬಿಳಿ ಮೋಡಗಳನ್ನು ಇಷ್ಟಪಡುವುದಿಲ್ಲ. ಕಪ್ಪನೆಯ ಮೋಡಗಳು ಆಗಸವನ್ನೆಲ್ಲ ಆವರಿಸಿದೊಡನೆ ರೈತರಿಗೆ ಮಳೆಯ ಮುನ್ಸೂಚನೆಯ ಸಂತಸ. ಮಕ್ಕಳಿಗೆ ಕುಣಿದು ಕುಪ್ಪಳಿಸುವ ಸಂದರ್ಭದ ಅವಕಾಶ. ಚಿತ್ರ ನಿರ್ದೇಶಕನಿಗೆ ಸುಂದರ ಭಾವನೆಗಳ ಕಥಾಹಂದರ. ಒಟ್ಟಿನಲ್ಲಿ ಅವರವರ ಭಾವಕ್ಕೆ ತಕ್ಕಂತೆ ಆಗಸದ ಮೋಡಗಳು ರೂಪುಗೊಂಡಿರುತ್ತವೆ. ಕ್ಷಣ ಕಾಲ ಎಲ್ಲವನ್ನೂ ಮರೆತು ಆಗಸದತ್ತಲೇ ದಿಟ್ಟಿ ನೆಟ್ಟು ಕೇವಲ ಮೋಡಗಳನ್ನೇ ನೋಡುತ್ತಿದ್ದರೆ ಮೂರ್ತತೆಯಿಂದ ಅಮೂರ್ತತೆಯೆಡೆ ಒಯ್ಯುವ ಭಾವ ಬಾರದೇ ಇರದು. 
ಮೋಡಗಳಲ್ಲೂ ಎಷ್ಟೊಂದು ವಿಧ? ಕ್ಯಾಮೆರಾದ ಕಣ್ಣಿಗೆ ಕಂಡದ್ದು, ಹೊಳೆದದ್ದು, ಮೂಡಿದ್ದು ಎಲ್ಲವೂ ಕಣ್ಣೆದುರಿಗಿದೆ.
 

Comments