ನೀಲಿ ಕಪ್ಪೆಗಳೆಂಬ ವಿಷಕಾರಿ ಜೀವಿ
ಮಳೆಗಾಲ ಪ್ರಾರಂಭವಾದೊಡನೆಯೇ ನಮಗೆ ಕಪ್ಪೆಗಳ ದನಿ ಕೇಳಲು ಪ್ರಾರಂಭವಾಗುತ್ತದೆ. ಮಳೆ ಬಂತೆಂದರೆ ಕಪ್ಪೆಗಳಿಗೆ ಹರ್ಷವೋ ಹರ್ಷ. ನಮ್ಮ ದೇಶದ ಬಹುತೇಕ ಕಪ್ಪೆಗಳು ಅಪಾಯಕಾರಿಯಲ್ಲ, ಬದಲಿಗೆ ಹಲವಾರು ಕೀಟಗಳನ್ನು ಭಕ್ಷಿಸಿ ನಮಗೆ ಉಪಕಾರವನ್ನು ಮಾಡುತ್ತವೆ. ಆದರೆ ನಾವು ಹೊರ ಜಗತ್ತಿನ ಕಪ್ಪೆಗಳ ಬಗ್ಗೆ ಗಮನಿಸುತ್ತಾ ಹೋದರೆ ನಮಗೆ ಅತ್ಯಂತ ಅಪಾಯಕಾರಿ ಕಪ್ಪೆಯ ಪ್ರಭೇಧಗಳು ಕಾಣ ಸಿಗುತ್ತವೆ. ಅವುಗಳಲ್ಲಿ ಒಂದು ನೀಲಿ ಕಪ್ಪೆ.
ನೀಲಿ ಕಪ್ಪೆಯ ವೈಜ್ಞಾನಿಕ ಹೆಸರು ‘ಡೆಂಡ್ರೋಬೇಟ್ಸ್ ಟಿಂಕೋರಿಯಸ್' (Dendrobates tinctorius). ಇದು ‘ಡೆಂಡ್ರೋ ಬೇಟಿಡೆ' (Dendrobatidae) ಕುಟುಂಬಕ್ಕೆ ಸೇರಿದೆ. ಇದು ‘ಅಜುರೇಸ್' ಎಂಬ ಉಪ ಪಂಗಡಕ್ಕೆ ಸೇರಿದೆ. ಅಜುರೆ (azure) ಎಂದರೆ ನೀಲಿ ಎಂದರ್ಥ. ಇದು ಉಭಯವಾಸಿಯಾದುದರಿಂದ ಈ ನೀಲಿ ಕಪ್ಪೆಗಳು ಸದಾ ಕಾಲ ತೇವಾಂಶ ಹೊಂದಿರುವ ಜವುಗು ಪ್ರದೇಶಗಳಲ್ಲಿ ನೆಲೆಸಲು ಇಷ್ಟ ಪಡುತ್ತವೆ. ನೀಲಿ ಕಪ್ಪೆಗಳು ಉತ್ತರ ಬ್ರೆಜಿಲ್ ನ ಸುರಿನಾಮದ ದಟ್ಟ ಕಾಡುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಅಧಿಕ ಮಳೆಯಾಗುವ ದಕ್ಷಿಣ ಅಮೇರಿಕಾದ ಕಾಡುಗಳು, ಉಷ್ಣ ವಲಯದ ವೆನಿಜುವೆಲಾ, ಪ್ರೆಂಚ್ ಗಯಾನಾ, ಪೆರು, ಪನಾಮಾ ಮತ್ತು ಹವಾಯಿ ದ್ವೀಪಗಳಲ್ಲೂ ಕಂಡು ಬರುತ್ತವೆ.
ನೀಲಿ ಕಪ್ಪೆಗಳಿಗೆ ವಿಷಕಾರಿ ಕಪ್ಪೆಗಳು ಎಂಬ ಹೆಸರಿದೆ. ಏಕೆಂದರೆ ಇವುಗಳು ತಮ್ಮ ಬೇಟೆಯನ್ನು ಸಾಯಿಸಲು ಅಥವಾ ಪ್ರಜ್ಞೆ ತಪ್ಪಿಸಲು ವಿಷವನ್ನು ಬಳಸುತ್ತವೆ. ಇವುಗಳಲ್ಲಿ ಕಂಡು ಬರುವ ಕೆಲವು ಪ್ರಭೇಧದ ಕಪ್ಪೆಗಳು ಬೇರೆ ಬೇರೆ ಆಕರ್ಷಕ ಬಣ್ಣಗಳಲ್ಲಿ ಕಂಡು ಬರುತ್ತವೆ. ಹಳದಿ, ಕೆಂಪು, ಹಸಿರು, ಕಪ್ಪು ಹೀಗೆ ಗಾಢ ಬಣ್ಣಗಳಲ್ಲಿ ಕಂಡು ಬರುವ ಕಪ್ಪೆಗಳು ನೋಡಲು ಎಷ್ಟು ಆಕರ್ಷಕವೋ ಅಷ್ಟೇ ವಿಷಕಾರಿ. ಕಪ್ಪೆಗಳ ಮೈ ಬಣ್ಣ ಅಧಿಕ ಗಾಢವಾಗಿದ್ದರೆ ಅವುಗಳಲ್ಲಿನ ವಿಷದ ಪ್ರಮಾಣವೂ ಅಧಿಕ ಎಂದು ತಿಳಿಯಬಹುದು. ಕಪ್ಪೆಯ ವಿಷ ಸುಮಾರು ಸಾವಿರಕ್ಕೂ ಅಧಿಕ ಇಲಿಗಳನ್ನು ಸಾಯಿಸಲು ಸಾಕಾಗುವಷ್ಟಿರುತ್ತದೆ. ಮನುಷ್ಯನನ್ನೂ ಕೆಲವೊಮ್ಮೆ ಇದರ ವಿಷ ಸಾಯಿಸುವ ಸಾಧ್ಯತೆ ಇದೆ.
ನೀಲಿ ಕಪ್ಪೆಗಳು ಮಧ್ಯಮ ಗಾತ್ರದವುಗಳಾಗಿದ್ದು ಸುಮಾರು ೮ ರಿಂದ ೧೦ ಗ್ರಾಂ ತೂಕ ಹೊಂದಿರುತ್ತದೆ. ಮೂರರಿಂದ ನಾಲ್ಕುವರೆ ಸೆಂ.ಮೀ.ವರೆಗೆ ಬೆಳೆಯುವ ಇವುಗಳಲ್ಲಿ ಹೆಣ್ಣು ಕಪ್ಪೆ ಗಂಡು ಕಪ್ಪೆಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ನೀಲಿ ಕಪ್ಪೆಯ ಮೈ ಮೇಲೆ ಕಪ್ಪಗಿನ ಕಲೆಗಳು ಇರುತ್ತವೆ. ಈ ಕಲೆಗಳು ಕಪ್ಪೆಯಿಂದ ಕಪ್ಪೆಗೆ ಬೇರೆ ಬೇರೆಯಾಗಿರುತ್ತದೆ. ನೀಲಿ ಕಪ್ಪೆಗಳು ಐದರಿಂದ ಏಳು ವರ್ಷ ಬದುಕಿರುತ್ತವೆ. ನೀಲಿ ಕಪ್ಪೆಗಳು ವಿಶೇಷ ರೀತಿಯ ಧ್ವನಿಯನ್ನು ಹೊರಡಿಸುತ್ತವೆ.
ನೀಲಿ ಕಪ್ಪೆಗಳು ತಿಗಣೆ, ಇರುವೆ, ಗೆದ್ದಲು, ಮಿಡತೆ, ಹಾರಾಡುವ ಸಣ್ಣ ಸಣ್ಣ ಕೀಟಗಳನ್ನು ತಿನ್ನುತ್ತವೆ. ಎಲ್ಲಾ ವಿಧಧ ಕಪ್ಪೆಗಳಂತೆ ತನ್ನ ನಾಲಗೆಯ ಸಹಾಯದಿಂದ ಬೇಟೆಯಾಡುತ್ತವೆ. ಇದರ ಉದ್ದವಾದ ನಾಲಗೆಗೆ ಇರುವ ಅಂಟಿನಿಂದಾಗಿ ಸಿಕ್ಕಿ ಬೀಳುವ ಕೀಟಗಳು ತಪ್ಪಿಸಿಕೊಳ್ಳಲು ಆಗುವುದಿಲ್ಲ.
ನೀಲಿ ಕಪ್ಪೆಗಳ ಸಂತಾನಾಭಿವೃದ್ಧಿಯು ಬಾಹ್ಯ ಗರ್ಭಧಾರಣೆಯ ಮೂಲಕ ಆಗುತ್ತದೆ. ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಗಂಡು ಕಪ್ಪೆಯು ಕಲ್ಲು ಬಂಡೆಗಳ ಮೇಲ್ಗಡೆ ಕುಳಿತು ತನ್ನ ವಿಶಿಷ್ಟ ಧ್ವನಿ ಮೂಲಕ ಕೂಗುವುದರಿಂದ ಹೆಣ್ಣು ಕಪ್ಪೆಯನ್ನು ಆಕರ್ಷಿಸುತ್ತದೆ. ಹೀಗೆ ಬಂದ ಹೆಣ್ಣು ಕಪ್ಪೆ ಗಂಡು ಕಪ್ಪೆ ಜೊತೆ ಕಾದಾಡುತ್ತದೆ. ಆ ಹೆಣ್ಣು ಕಪ್ಪೆಯನ್ನು ಗಂಡು ಕಪ್ಪೆ ಎಳೆದು ಕೊಂಡು ನೀರು ಇರುವ ಜಾಗಕ್ಕೆ ಕರೆದುಕೊಂಡು ಹೋಗುತ್ತದೆ. ನೀರಿನಲ್ಲಿ ಮೊಟ್ಟೆ ಇಡಲು ಸೂಕ್ತವಾದ ಸ್ಥಳವನ್ನು ಗಂಡು ಕಪ್ಪೆಯು ಆಯ್ಕೆ ಮಾಡುತ್ತದೆ. ಅಲ್ಲಿ ಹೆಣ್ಣು ಕಪ್ಪೆಯು ಮೊಟ್ಟೆಗಳನ್ನು ಇಡುತ್ತದೆ. ಅದರ ಮೇಲೆ ಗಂಡು ಕಪ್ಪೆಯು ತನ್ನ ವೀರ್ಯಾಣುವನ್ನು ಉದುರಿಸುತ್ತದೆ. ಗಂಡು ಕಪ್ಪೆಯು ಮೊಟ್ಟೆಯ ರಕ್ಷಣೆಯನ್ನೂ ಮಾಡುತ್ತದೆ. ಫಲಿತಗೊಂಡ ಮೊಟ್ಟೆಗಳು ೧೪ ರಿಂದ ೧೮ ದಿನಗಳಲ್ಲಿ ಕಪ್ಪೆಯ ಮರಿಗಳು ಮೊಟ್ಟೆಯಿಂದ ಹೊರಗೆ ಬರುತ್ತವೆ. ಕಪ್ಪೆಯ ಮರಿಗಳು ೧೦-೧೨ ವಾರಗಳಲ್ಲಿ ಪ್ರೌಢ ಕಪ್ಪೆಯಾಗಿ ಪರಿವರ್ತನೆಯಾಗುತ್ತವೆ.
ನೀಲಿ ಕಪ್ಪೆಗಳಲ್ಲಿ ಸುಮಾರು ೧೦೦ಕ್ಕೂ ಅಧಿಕ ಪ್ರಭೇಧಗಳೀವೆ. ಅವುಗಳಲ್ಲಿ ಫಿಲೋ ಬೇಟ್ಸ್ ಟೆರಿಬಿಲಿಸ್ ಎಂಬ ಪ್ರಭೇಧವು ಅತ್ಯಂತ ವಿಷಕಾರಿ ಎಂದು ಗುರುತಿಸಲ್ಪಟ್ಟಿದೆ. ಇದರ ದೇಹದಲ್ಲಿರುವ ವಿಷದಿಂದ ಸುಮಾರು ೧೦ ಜನರನ್ನು ಕೊಲ್ಲಬಹುದಂತೆ. ಈ ಕಪ್ಪೆಗಳ ವಿಷಗಳು ವೈದ್ಯಕೀಯ ಜಗತ್ತಿನಲ್ಲಿ ನೋವು ನಿವಾರಕ ಔಷಧಿಯಾಗಿ ಉಪಯೋಗಿಸಲಾಗುತ್ತದೆ. ಈ ಕಾರಣದಿಂದ ಈ ನೀಲಿ ಕಪ್ಪೆಗಳ ಅವ್ಯಾಹತ ಬೇಟೆ ನಡೆಯುತ್ತಿದೆ. ಅದರ ಜೊತೆ ಪೃಕೃತಿಯಲ್ಲಿ ನಡೆಯುವ ಮಾನವನ ದೌರ್ಜನ್ಯದಿಂದಾಗಿ ನೀರಿನ ಸೆಲೆಗಳು ಮಲಿನವಾಗಿವೆ. ಈ ಕಪ್ಪೆಗಳು ಅಳಿವಿನ ಅಂಚಿಗೆ ಬಂದು ತಲುಪಿವೆ. ನಾವು ಈಗಲೇ ಜಾಗೃತರಾಗದಿದ್ದರೆ, ಇದರ ಸಂರಕ್ಷಣೆ ಮಾಡದೇ ಇದ್ದರೆ ಮುಂದೊಂದು ದಿನ ನೀಲಿ ಕಪ್ಪೆಯಂತಹ ಅಪರೂಪದ ಪ್ರಭೇಧಗಳು ಈ ಜಗತ್ತಿನಿಂದ ಕಣ್ಮರೆಯಾದೀತು.
ಚಿತ್ರ ಕೃಪೆ: ೨೧-೦೮-೨೦೨೦