ನೀಲಿ ಚಡ್ಡಿ
ಗುಂಡ ಮನೆಗೆ ಬಂದವನೇ "ಗುಂಡೀ . . ." ಎಂದು ಹೆಂಡತಿಗೆ ಜೋರಾದ ಕೂಗು ಹಾಕಿದ. ಮನೆ ಕೆಲಸದಲ್ಲಿ ಮುಳುಗಿಹೋಗಿದ್ದ ಗುಂಡಿ "ಏನ್ರೀ ಅದೂ ಸೂರು ಹಾರಿ ಹೋಗೋಹಾಗೆ ಕಿರುಚಿಕೋತಿದೀರಿ, ರಸ್ತೆಯಲ್ಲಿ ಏನಾದರೂ ಹುಚ್ಚು ನಾಯಿ ಕಚ್ಚಿತೇನು? ಎಷ್ಟು ಸಾರಿ ಹೇಳಿದ್ದೀನಿ, ಒಬ್ಬೊಬ್ರೆ ರಸ್ತೇಲಿ ಓಡಾಡಬೇಡೀಂತ. ಯಾರಾದರೂ ಗಂಡಸರನ್ನು ಜೊತೇಲಿ ಕರ್ಕೊಂಡು ಹೋಗಬಾರದೇ? ಇದೇ ಆಯ್ತು ನಿಮ್ಮ ಗೋಳು . . ." ಅವಳ ವಾಗ್ಝರಿ ಹರಿಯುತ್ತಲೇ ಇತ್ತು, ಆದರೆ ಆಗಮನವಾಗಲಿಲ್ಲ.
ಗುಂಡ "ಲೇ ಗುಂಡೀ . . ಗುಂಡಮ್ಮಾ . . . ಸ್ವಲ್ಪ ಬಾರೇ ಇಲ್ಲಿ, ನನಗೆ ಯಾವ ಹುಚ್ಚು ನಾಯಿಯೂ ಕಡೀಲಿಲ್ಲ, ನಾನು ಸರಿಯಾಗೇ ಇದ್ದೀನಿ. ಈಗ ಹೊರಕ್ಕೆ ಬಾ, ಬಂದು ನೋಡು ಏನು ತಂದಿದ್ದೀನಿ ಅಂತಾ" ಪ್ರೀತಿಯ ಹೊನಲು ಹರಿಯಿತು.
ಸೀರೆ ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಹೊರಬಂದ ಗುಂಡಿ "ಏನ್ರೀ ಅದೂ ನಿಮ್ ಗೋಳು. ಮಾರ್ಕೆಟ್ ಗೇನಾದ್ರೂ ಹೋಗಿದ್ರಾ, ಚೀಪಾಗಿ ಸಿಕ್ತೂಂತಾ ಕೊಳಕು, ಹುಳುಕು ತರಕಾರಿ ತಗೊಂಡ್ ಬಂದ್ರಾ . .? ತಂದಿದ್ರೆ ಸೀದಾ ತಗೊಂಡು ಹೋಗಿ ತಿಪ್ಪೆಗೆ ಸುರೀರಿ, ನಾನು ಆ ಕೊಳಕಿನಲ್ಲಿ ಕೈ ಆಡಿಸಲಾರೆ" ಎಂದಳು.
"ಏ . . ಏನೇ ಅದು ನಿಂದು ವಟ ವಟ. ಏನೋ ಒಂದ್ಸಾರಿ ತರಕಾರಿ ತಂದಿದ್ದು ಕೆಟ್ಟೋಗಿದ್ರೆ, ಪ್ರತಿ ಸಾರೀನೂ ಹಾಗೇ ಆಗುತ್ತಾ. . .? ನೀನೇನ್ ಮಹಾ ಬುದ್ಧಿವಂತೆ, ನೀನೂ ಎಷ್ಟೋಸಾರಿ ಕೊಳಕು, ಹುಳುಕು ತರಕಾರಿ ತಂದಿಲ್ವಾ? ಇರಲಿ ಬಿಡು, ಈಗ ನೋಡು ನಾನು ಮನೆಯೋರಿಗೆಲ್ಲಾ ಏನು ತಂದಿದ್ದೀನಿ ಅಂತಾ . . ." ಬ್ಯಾಗಿನಲ್ಲಿದ್ದ ಪ್ಯಾಕೆಟ್ಟನ್ನು ತೆಗೆದು ಟೇಬಲ್ಲಿನ ಮೇಲೆ ಹಾಕಿದ.
"ಎನ್ರೀ ಅದು, ಬೋನಸ್ ಗೀನಸ್ ಏನಾದ್ರೂ ಬಂತೇನು? ಏನೋ ದೊಡ್ಡ ಗಂಟನ್ನೇ ಹಿಡಕೊಂಡು ಬಂದಿದ್ದೀರಿ . . ಅಲ್ರೀ ತರೋಕ್ ಮೊದ್ಲು ನನಗೆ ಫೋನ್ ಮಾಡಿ ಏನ್ ಬೇಕು ಅಂತಾ ಕೇಳೋ ಬುದ್ಧೀನೂ ಇಲ್ವಲ್ರೀ. . ನಿಮಗೆ ಏನಾದ್ರೂ ತಂದ್ಕೊಳ್ಳಿ, ನಂಗೆ, ನನ್ ಮಗ ಹಾಗು ಮಗಳಿಗೆ ಮಾತ್ರ ಅವರವರಿಗೆ ಏನು ಬೇಕೋ ಅದನ್ನೇ ಕೊಡಿಸ್ಬೇಕು. ನಾನು ಕುಬೇರನ್ ಸಿಲ್ಕಲ್ಲಿ ಸೀರೆ ನೋಡಿ, ಆರಿಸಿ ಇಟ್ಟು ಬಂದಿದ್ದೀನಿ. ಮಗನಿಗೆ ಅದೇನೋ ಬ್ರಾಂಡಿಂದು ಟೀ ಶರ್ಟ್ ಬೇಕಂತೆ, ಮಗಳು ಕೂಡ ಶಾರ್ಟ್ ಪ್ಯಾಂಟ್, ಶರ್ಟ್ ಕೇಳ್ತಾ ಇದ್ಲು, ಸರಿ ನೋಡೋಣ, ಅದೇನು ತಂದಿದ್ದೀರಿ ಅಂತಾ . . ." ಎಂದು ಬ್ಯಾಗಿಗೆ ಕೈ ಹಾಕಹೋದಳು.
"ಲೇ ಇರೂ, ಮೊದ್ಲು ನಿಮ್ ನಿಮ್ ಪ್ರಾಬ್ಲಮ್ಸ್ ಏನಾದ್ರೂ ಇದ್ರೆ ಹೇಳಿ. ಅಂದ್ರೆ, ಪರೀಕ್ಷೆ, ಟೆಸ್ಟು, ಚಾಲೆಂಜು, ಅದೂ ಇದೂ ಎಟ್ಸೆಟ್ರಾ . . " ಎಂದ ಗುಂಡ. "ಅಯ್ಯೋ ಇದೇನ್ರೀ ಒಗಟಾಗಿ ಮಾತನಾಡ್ತಿದ್ದೀರಿ, ಏನೋ ಬಟ್ಟೆ ಗಂಟು ಹಿಡ್ಕೊಂಡು ಬಂದು, ಏನೇನೋ ಪ್ರಶ್ನೆ ಕೇಳ್ತಾ ಇದ್ದೀರಿ. ಪಿತ್ತ ಗಿತ್ತ ಏನಾದ್ರೂ ಜಾಸ್ತಿ ಆಗಿದ್ಯಾ . . .ಡಾಕ್ಟ್ರ ಹತ್ರ ಹೋಗೋಣ್ವಾ . ." ಹತ್ತಿರ ಬಂದು ಗಂಡನ ಹಣೆ ಮುಟ್ಟಿ ನೋಡಿದಳು.
ಗುಂಡ "ನೋಡು, ಬಟ್ಟೆ ಗಂಟೂಂತ ಹಗುರವಾಗಿ ಮಾತನಾಡ್ಬೇಡ. ಈ ಬಟ್ಟೆಗಳಿಗೋಸ್ಕರ ಮಾರ್ಕೆಟ್ಟೆಲ್ಲಾ ಸುತ್ತಿ, ದೊಡ್ಡ ಕ್ಯೂನಲ್ಲಿ ಗಂಟೆಗಟ್ಲೆ ನಿಂತ್ಕೊಂಡು, ಅಂಗಡಿಯೋನಿಗೆ ಸಲಾಮು ಹೊಡ್ದು ತಂದಿದ್ದೀನಿ. ಅದಿರ್ಲಿ, ಈಗ ಹೇಳಿ, ನಿಮಗೆ ಪರೀಕ್ಷೆ ಪ್ರಾಬ್ಲಮ್ ಏನಾದ್ರೂ ಇದ್ಯಾ? " ಎಂದ.
ಅದಕ್ಕೆ ಮರಿಗುಂಡಿ "ಹೌದು ಡ್ಯಾಡಿ, ಮುಂದಿನ ವಾರದಿಂದ ನಮ್ಗೆ ಕ್ಲಾಸ್ ಎಕ್ಸಾಮ್ಸ್ ಇವೆ" ಎಂದ್ಲು. ಮರಿಗುಂಡ "ನನ್ಗೂ ಕೂಡ ಡ್ಯಾಡಿ, ನಮ್ ಫ್ರೆಂಡ್ಸ್ ಹತ್ರ ಚಾಲೆಂಜ್ ಮಾಡಿದ್ದೀನಿ. ಹನಿ ಐ ಲವ್ ಯೂ ಚಿತ್ರಾನ ಮೊದಲ ದಿನವೇ, ಮೊದಲ ಶೋನೇ ನೋಡೇ ನೋಡ್ತೀನಿ ಅಂತಾ. ಏನಾದ್ರೂ ಮಾಡಿ ಡ್ಯಾಡಿ, ನಂಗೆ ಒಂದು ಟಿಕೆಟ್ ತಂದು ಕೊಡಿ" ಎಂದ. ನಂತರ ಗುಂಡಿ "ರೀ ನಮ್ ಕ್ಲಬ್ಬಲ್ಲಿ ಯಾನು ಯಾವಾಗ್ಲೂ ತಂಬೋಲಾದಲ್ಲಿ ಸೋಲ್ತಾನೇ ಇರ್ತೀನಿ, ಗೆಲ್ಲುಕ್ಕೆ ಏನಾದ್ರೂ ಮಾಡಿ" ಎಂದಳು.
ಗುಂಡ, "ನೋಡಿದ್ರಾ, ಈಗ ನಾನು ತಂದಿರೋ ವಸ್ತುಗಳು ಎಂತಾ ಪರೀಕ್ಷೇನೂ ಸುಲಭವಾಗಿ ನಿಭಾಯಿಸುತ್ವೆ. ಮುಂಬಯಿನಲ್ಲಿ ಇದನ್ನ ಹಲವಾರು ಶಾಲಾಕಾಲೇಜು ಹುಡುಗರು ಹುಡುಗೀರು ಚೆಕ್ ಮಾಡಿ ಸಕ್ಸಸ್ ಆಗಿದ್ದಾರೆ. ಅದಕ್ಕೇ ಬೆಂಗಳೂರಿನಲ್ಲೂ ಅವಕ್ಕೆ ಡಿಮ್ಯಾಂಡಪ್ಪೋ ಡಿಮಾಂಡ್’ ಎಂದು ನಾಟಕೀಯವಾಗಿ ನುಡಿದ.
ಕುತೂಹಲವನ್ನು ಇನ್ನೋ ಹೆಚ್ಚು ಹೊತ್ತು ತಾಳಲಾರದೆ ಮರಿಗುಂಡ ಮತ್ತು ಮರಿಗುಂಡಿ ಓಡಿ ಹೋಗಿ ಅಪ್ಪ ತಂದಿದ್ದ ಗಂಟನ್ನು ತಂದು ಅವರುಗಳ ಮಧ್ಯೆ ಸುರಿದರು. ತಪ ತಪನೆ ಉದುರಿದವು ನೀಲಿ ಬಣ್ಣದ ಒಳ ಉಡುಪುಗಳು !!! ಒಂದಲ್ಲಾ, ಎರಡಲ್ಲಾ, ಎಲ್ಲರಿಗೂ ನಾಲ್ಕು ನಾಲ್ಕು ಸೆಟ್ಟುಗಳು . . .!
ಗುಂಡಿಯ ಕಣ್ಣಾಲಿಗಳು ಗಿರಗಿರನೆ ತಿರುಗಿದವು. ಮುಖ ಕೆಂಡಾಮಂಡಲವಾಯಿತು. "ಏನ್ರೀ ಇದು, ನಮಗೆಲ್ಲಾ ಒಳ ಉಡುಪುಗಳನ್ನೇಕೆ ತಂದಿದ್ದೀರಿ? ಒಂದು ರಾಶಿ ದುಡ್ಡು ಹಾಳು ಮಾಡಿಕೊಂಡು . . . ಏನು, ನಾವುಗಳೆಲ್ಲಾ ಫ್ಯಾಶನ್ ಶೋಗೆ ಹೋಗಬೇಕೇನು ಈ ಒಳ ಉಡುಪನ್ನು ಹಾಕಿಕೊಂದು, ಥೂ ನಿಮ್ ಜನ್ಮಕ್ಕಿಷ್ಟು . . ." ಮಾತಿಗಿಂತ ಉಗುಳೇ ಜೋರಾಗಿತ್ತು.
ಗುಂಡ "ಲೇ ತಡ್ಕೊಳ್ಳಿ, ತಡ್ಕೊಳ್ಲೆ, ಮೊನ್ನೆ ನ್ಯೂಸ್ ಪೇಪರಿನಲ್ಲಿ ನೋಡ್ಲಿಲ್ವಾ, ಬೊಂಬಾಯಿನಲ್ಲಿ ಎಲ್ಲಾ ಶಾಲಾ ಕಾಲೇಜು ಮಕ್ಕಳೂ ಪರೀಕ್ಷೇಲಿ ಪಾಸಾಗಬೇಕಂದ್ರೆ, ಒಳ್ಳೊಳ್ಳೆ ಮಾರ್ಕ್ಸ್ ತಗೋಬೇಕಂದ್ರೆ ನೀಲಿ ಬಣ್ಣದ ಒಳ ಉಡುಪುಗಳನ್ನು ಹಾಕ್ಕೊಂಡು ಹೋಗ್ತಾರಂತೆ. ರಿಸಲ್ಟು ಹಂಡ್ರೆಡ್ ಪರ್ಸೆಂಟ್ ಡೆಫನೆಟ್ಟಂತೆ. ಅದಕ್ಕೇ ಬೆಂಗಳೂರಲ್ಲೂ ಈಗ ಪಿಯೂಸಿ ಪರಿಕ್ಷೇ ಶುರುವಾಗಿದೆಯಲ್ಲಾ, ನೀಲಿ ಒಳ ಉಡುಪುಗಳಿಗೆ ಬಹಳಾ ಡಿಮ್ಯಾಂಡಾಗಿ ಹೋಗಿದೆ. ಕಷ್ಟ ಪಟ್ಟು ಇಷ್ಟನ್ನು ಹೊಂದಿಸ್ಕೊಂಡು ಬಂದಿದ್ದೀನಿ. ಅದೂ, ಬ್ಲಾಕಲ್ಲಿ ಕೊಂಡುಕೊಂಡು. ನೀವುಗಳು ಪೇಪರ್ ಓದೋಲ್ವಲ್ಲಾ, ಅದಕ್ಕೇ ನಿಮ್ಗೆ ಗೊತ್ತಾಗೊಲ್ಲಾ ಇವೆಲ್ಲಾ" ಎಂದ. ಮುಖ ಇಂಗು ತಿಂದ ಮಂಗನಂತಾಗಿದ್ದುದೇನೋ ನಿಜ.
ಗುಂಡಿ ತಲೆ ಚಚ್ಚಿಕೊಳ್ಳುತ್ತಾ, "ರೀ ನಿಮ್ಗೆ ಸ್ವಲ್ಪಾನಾದ್ರೂ ಕಾಮನ್ ಸೆನ್ಸ್ ಇದ್ಯೇನ್ರೀ, ಪರೀಕ್ಷೇಗೂ ನೀಲಿ ಚೆಡ್ಡೀಗೂ ಏನ್ರೀ ಸಂಬಂಧ? ಇಷ್ಟೊಂದು ಬಟ್ಟೆಗಳನ್ನ ತಂದಿದ್ದೀರಲ್ಲಾ, ನಾಳೆ ನೀವು ಸಂಡೇ ಬಜಾರಿನಲ್ಲಿ ಇವುಗಳನ್ನೆಲ್ಲಾ ಇಟ್ಕೊಂಡು ಮಾರಿ ಬನ್ನಿ, ನನಗಂತೂ ಒಂದೂ ಬೇಡ" ಎಂದಳು. ಮರಿಗುಂಡ, ಮರಿಗುಂಡಿಯರೂ ಅವಳ ಜೊತೆಗೂಡಿಸಿದವು.
"ದಡ್ರೂ, ದಡ್ರೂ ನೀವೆಲ್ಲಾ ದಡ್ರೇ ಸರಿ. ಅಲ್ಲಮ್ಮಾ, ನಮ್ ಕ್ರಿಕೆಟ್ ಪಟುಗಳು ನೀಲಿ ಬಟ್ಟೆ ಯಾಕೆ ಹಾಕ್ಕೋತಾರೆ ಹೇಳಿ? ಅವರಿಗೇನು ಬುದ್ಧಿ ಇಲ್ವಾ?" ಸಮಜಾಯಿಸಿಕೊಳ್ಳಲು ಹೋದ ಗುಂಡ.
"ನಮ್ ಕ್ರಿಕೆಟ್ಟಿಗರು ನೀಲಿ ಹೊರ ಉಡುಪು ಹಾಕ್ಕೊಳೋದು, ಅವರ ಒಳ ಉಡುಪನ್ನು ಹೋಗಿ ನೋಡಿದ್ರೇನು ನೀವು? ಅಲ್ದೆ ಅವರು ಗೆದ್ದಿರೋದು ಎಷ್ಟು ಸಾರಿ, ಸೋತಿರೋದು ಎಷ್ಟು ಸಾರಿ ಸ್ಟಾಟಿಸ್ಟಿಕ್ಸ್ ತೆಗೆದು ನೋಡಿ, ನಿಮಗೇ ತಿಳಿಯುತ್ತೆ ನೀಲಿ ಬಣ್ಣದ ಮಹಿಮೆ" ಮರಿಗುಂಡ ಅಮ್ಮನ ಜೊತೆಗೂಡಿಸಿದ. ಮರಿಗುಂಡಿಯೂ ಹೂಂ ಎಂದಳು.
ಅಸ್ಟರಲ್ಲಿ ಹೊರಗಡೆ "ಸ್ಟೀಲ್ ಪಾತ್ರೆ ಸಾಮಾನ್ . . . ." ಧ್ವನಿ ಕೇಳಿಸಿತು. ಗುಂಡಿ ಎಲ್ಲಾ ಬಟ್ಟೆಗಳನ್ನೂ ತೆಗೆದುಕೊಂಡು ಹಾಗಿಂದ ಹಾಗೆಯೇ ಹೊರಕ್ಕೆ ಹೊರಟಳು.
ಎ.ವಿ. ನಾಗರಾಜು