ನೂರೆಂಟು ಮಾತು (ಭಾಗ ೨)

ನೂರೆಂಟು ಮಾತು (ಭಾಗ ೨)

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ -೫೮೦೦೨೦
ಪುಸ್ತಕದ ಬೆಲೆ
೧೨೦.೦೦, ಮುದ್ರಣ: ೨೦೦೭

ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹವೇ ‘ನೂರೆಂಟು ಮಾತು'. ಈ ಪುಸ್ತಕವು ಎರಡನೇ ಭಾಗವಾಗಿದೆ. ವಿಶ್ವೇಶ್ವರ ಭಟ್ ಅವರ ಬರವಣಿಗೆಯ ಶೈಲಿಯ ಪ್ಲಸ್ ಪಾಯಿಂಟ್ ಎಂದರೆ ಅವರ ಬರಹಗಳಲ್ಲಿ ವಿವಿಧತೆ ಇದೆ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅವರು ಬರೆಯುವ ಬರಹಗಳಿಗೆ ಸೂಕ್ತ ದಾಖಲೆಗಳನ್ನೂ ಕೊಡುತ್ತಾರೆ. ಐದು ವರ್ಷಗಳಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳನ್ನು ಬೇರೆ ಬೇರೆ ಭಾಗಗಳಾಗಿ ಓದುಗರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಅವರೇ ತಮ್ಮ ಮಾತಿನಲ್ಲಿ ಹೇಳುವುದಾದರೆ “ನನ್ನ ಜೀವನಕ್ಕೆ ಶಿಸ್ತು, ಸಂಯಮ ಹಾಗೂ ನಿಶ್ಚಿತತೆಯನ್ನು ರೂಪಿಸಿದ್ದು ಈ ಬರಹಗಳು. ಈ ಅಂಕಣ ನನಗೆ ನೀಡಿದ ತೃಪ್ತಿ ಅಷ್ಟಿಷ್ಟಲ್ಲ. ಇಲ್ಲಿನ ಬರಹಗಳನ್ನು ಮೆಚ್ಚಿ, ಟೀಕಿಸಿ ಅನೇಕರು ಬರೆದಿದ್ದಾರೆ. ಓದುಗರ ಈ ‘ಪ್ರೀತಿ'ಯೇ ನನ್ನ ಬರಹವನ್ನು ಜೀವಂತವಾಗಿಟ್ಟಿದೆ. ಒಂದು ವಾರ ಸಹ ಜಡಕ್ಕೆ ಬಿದ್ದು, ನೆಪ ಹೇಳಿ ತಪ್ಪಿಸಿಕೊಂಡವನಲ್ಲ. ಓದುಗರ ಪ್ರೀತಿ ಮುಂದೆ ಜ್ವರ, ಆಲಸ್ಯ, ಅಸೌಖ್ಯವೆಲ್ಲವೂ ಕಾಲು ಕಿತ್ತಿವೆ.” 

೩೪ ಬರಹಗಳನ್ನು ಒಳಗೊಂಡಿರುವ ಈ ಪುಸ್ತಕದ ಪ್ರತಿಯೊಂದು ಬರಹವೂ ಓದಲು ಅರ್ಹ. ಕೆಲವೊಂದು ಉತ್ತಮ ಬರಹಗಳ ಶೀರ್ಷಿಕೆಗಳು ಹೀಗಿವೆ -ಉತ್ತಮ ಪತ್ರಕರ್ತನಿಗೆ ಸುದ್ದಿಮನೆಯಲ್ಲಿ ಸ್ಥಾನವೊಂದು ಸದಾ ಕಾದಿರುತ್ತದೆ, ನಮ್ಮ ವಿಶ್ವಾಸವನ್ನೇ ಕೊಲ್ಲಲು ದೇಗುಲಕ್ಕಿಂತ ಬೇರೆ ಟಾರ್ಗೆಟ್ ಏನಿದೆ?, ಕೃತಕ ಕಾಲು ಕಟ್ಟಿಕೊಂಡು ಆತ ಹಿಮಾಲಯದ ನೆತ್ತಿ ಗುದ್ದಿ ಬಂದ, ಚಿಂತಕರ ಚಾವಡಿ ಅಲ್ಲ, ಈಗ ರಾಜ್ಯಸಭೆ ಶುದ್ಧ ಲೇವಡಿ!, ಈ ಸಲವೂ ಅಲ್ಲಿನ ಚುನಾವಣೆಯಲ್ಲಿ ಸತ್ತವರು ಮತಹಾಕಲಿದ್ದಾರೆ!, ದಿಕ್ಕೆಟ್ಟ ರಾಜ್ಯದ ಮತದಾರನಿಗೊಂದು ಬಹಿರಂಗ ಪತ್ರ, ಅಧಿಕಾರವಿದ್ದಾಗ ಬೇರೆ ಭಂಗಿ, ಇಲ್ಲದಿದ್ದಾಗ ಏಕಾಂಗಿ!, ವಾಜಪೇಯಿ ಇಲ್ಲದಿದ್ದರೂ ಬಿಜೆಪಿ ಇರುತ್ತದೆ, ಹೇಗಿರುತ್ತದೆ ಅನ್ನೋದೇ ಪ್ರಶ್ನೆ!, ಬದುಕೇ ನೀರು ಪಾಲಾಗುವ ಸಂದರ್ಭದಲ್ಲೂ ಹೋರಾಟ ನಿಲ್ಲಿಸದ ನೀರೆ!, ಪ್ರಾಣ ಹೋಗುವುದೆಂದು ತಿಳಿದ ನಂತರವೂ ಆತ ಪ್ರಾಮಾಣಿಕತೆ ಬಿಡಲಿಲ್ಲ, ಹನ್ನೊಂದು ಸೂತ್ರಗಳಲ್ಲಿ ರಾಜ್ಯದ ಪ್ರಗತಿಯ ಪಾಠ ಹೇಳಿದ ಕಲಾಂ ಮೇಷ್ಟ್ರು! ಎಲ್ಲಾ ಲೇಖನಗಳ ಶೀರ್ಷಿಕೆಯೇ ಇಷ್ಟೊಂದು ಆಕರ್ಷಕವಾಗಿದೆ ಎಂಬ ಮೇಲೆ ಲೇಖನಗಳು ಹೇಗಿರ ಬಹುದು? ವಿಶ್ವೇಶ್ವರ ಭಟ್ ಅವರು ತಮ್ಮ ಲೇಖನಕ್ಕೆ ರಸವತ್ತಾದ ಶೀರ್ಷಿಕೆ ನೀಡುವುದರಲ್ಲಿ ಸಿದ್ಧ ಹಸ್ತರು. 

ಸುಮಾರು ೨೦೦ ಪುಟಗಳ ಈ ಪುಸ್ತಕವನ್ನು ಲೇಖಕರು ಅರವಿಂದ ಲಿಂಬಾವಳಿಗೆ ಅರ್ಪಿಸಿದ್ದಾರೆ. ಶಕುಂತಲಾ ಅಯ್ಯರ್ ಇವರು ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ ‘ಒಂದು ಅಂಕಣ ಯಾವ ಪರಿ ನನ್ನನ್ನು ಹಿಡಿದಿಟ್ಟಿದೆಯೆಂದರೆ, ಗುರುವಾರಕ್ಕಾಗಿ ನಾನು ‘ವಿಜಯ ಕರ್ನಾಟಕ'ವನ್ನು ಕಾಯುವಂತೆ ಮಾಡಿದೆ. ಗುರುವಾರ ಓದಿದ ಬಳಿಕ ಮುಂದಿನ ವಾರದ ಆ ದಿನದ ತನಕ ಏನೋ ಕಾತರ, ಚಡಪಡಿಕೆ. ಮುಂದಿನ ಗುರುವಾರ ಬರುವ ತನಕ ಹಿಂದಿನ ಗುರುವಾರದ ಲೇಖನದ ನೆನಪು, ಗುಂಗು. ಪದೇ ಪದೆ ಕೈಹಿಡಿದು ಜಗ್ಗುವ ಆ ಲೇಖನದ ಸೆಳೆತ. ಇದೂ ಒಂಥರ ಮಧುರ ಯಾತನೆ! ಒಂದು ಪ್ರೀತಿ ಯಾವ ರೀತಿ ಹುಡುಗ - ಹುಡುಗಿಯನ್ನು ಕಲಕಬಹುದೋ, ಹಿಡಿದಿಡಬಹುದೋ ಅದೇ ರೀತಿ ಈ ಬರಹಗಳೂ. ನೆನಪಿರಲಿ, ನಿಮಗೂ ಅದೇ ಅನುಭವವಾದೀತು.’