ನೂರೊಂದು ನೆನಪು ಎದೆಯಾಳದಿಂದ..........

ನೂರೊಂದು ನೆನಪು ಎದೆಯಾಳದಿಂದ..........

        ಯಾಕೋ ಗೊತ್ತಿಲ್ಲ ನಾ ಇಂದು ನಿನ್ನ ಸಂಬಂಧಕ್ಕೆ ವಿದಾಯ ಹೇಳಬೇಕಂತ ಇದ್ದೀನಿ ಗೆಳೆಯ ...ಕಾರಣ ನಿನಗೂ ಗೊತ್ತು . ಪದೇ ಪದೇ ಕಾಡುವ ನಿನ್ನ ನೆನಪು ನನಗೆ  ಬೇಡ. ಈಗಾಗಲೇ ಸಾಕಷ್ಟು ನೊಂದಿದ್ದೇನೆ .ನೊಂದ ಮನಸಿಗೆ ಇನ್ನು ನೋವು ನೀಡುವುದಕ್ಕೆ ನನಗೆ ಇಷ್ಟವಿಲ್ಲ . ಎಷ್ಟಂತ ಈ ಪುಟ್ಟ ಮನಸ್ಸು ನಿನ್ನ ಮೋಸವನ್ನು  ಸಹಿಸುತ್ತೆ ಹೇಳು ?

      ನೀ ಯಾಕೆ ನನ್ನ ಬಿಟ್ಟು ಹೋದೆ ಅಂತ ನಾ ನಿನ್ನ ಕೇಳಲ್ಲ. ನಿನ್ನ ಜೀವನ ,ನಿನ್ನ ಸ್ವತಂತ್ರಕ್ಕೆ ನಾ ಯಾವತ್ತು ಅಡ್ಡಿ ಬರಲ್ಲ .ಆದ್ರೆ ಒಂದೇ ಒಂದು ನೋವು!  ಹೋಗುವಾಗ ನಿಂಗೆ ನನ್ನ ನೆನಪು ಆಗ್ಲಿಲ್ವಾ  ಹೇಳು ? ನೀನಿಲ್ಲದೆ ನಾ ಹೇಗಿರುವೆ ಅಂತ ಒಂದು ಸಲವಾದ್ರು ಯೋಚನೆ ಮಾಡಿದೆಯಾ ?

      ಇವತ್ತು ನಿನ್ನೆಲ್ಲಾ ನೆನಪಿಗೆ ತಿಲಾಂಜಲಿ ಇಡಬೇಕೆಂದುಕೊಂಡಿದ್ದೇನೆ .ಜೀವನದಲ್ಲಿ ಮೊದಲ ಬಾರಿ ಒಂದು ಒಳ್ಳೆಯ  ನಿರ್ಧಾರ ಮಾಡುತ್ತಿದ್ದೇನೆ . ನೀನಿಲ್ಲದೆ ಬಾಳುತ್ತೇನೆ ಅನ್ನುವ ಹುಂಬ ಸಾಹಸಕ್ಕೆ ಕೈ ಹಾಕುತ್ತಿದ್ದೇನೆ . ಆದರೂ ನಿನ್ನ ನೆನಪು ಬಿಡದೆ ನನ್ನ ಕಾಡುತ್ತೆ ನೀನೇ ಹೇಳು ನಾ  ಏನ್ ಮಾಡಲಿ ?

      ಆ ತೀರದಲ್ಲಿ ನಾನು  ನೀನು ನಡೆದ ಹೆಜ್ಜೆ ಗುರುತು   ಹುಡುಕಿ ಸೋತಿದ್ದೇನೆ . ಪ್ರತಿ ಕ್ಷಣ ಕಾಡುವ ನಿನ್ನ ನೆನಪುಗಳು ನನ್ನ  ಜೀವ ಹಿಂಡುತ್ತಿದೆ. ಪುನಃ ನನ್ನ ಪ್ರೀತಿಸು ಅಂತ ನಾ ನಿನಗೆ  ದಮ್ಮಯ್ಯ ಹಾಕಲ್ಲ . ಯಾಕೆಂದರೆ ಪ್ರೀತಿನ ಪ್ರೀತಿಸಿ ಪಡೆಯಬೇಕೇ ಹೊರತು ಬೇಡಿ ಪಡೆಯ ಬಾರದು . ನಂಗೆ ನೀ ಇಷ್ಟ ಇಲ್ಲ ಅನ್ನುವ ಒಂದು ಮಾತು ನೀ ಹೇಳಿದ್ದರೆ ಸಾಕಿತ್ತು ನಾ ನಿನ್ನ ಜೀವನದಲ್ಲಿ ಎಂದೋ ದೂರ ಹೋಗುತ್ತಿದ್ದೆ.
     ನಿನ್ನ ಮೇಲೆ ಬೆಟ್ಟದಷ್ಟು ಕನಸು ಕಟ್ಟಿ ಕೊಳ್ಳುತ್ತಿರಲಿಲ್ಲ . ನಿನ್ನ ಬರವಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರಲಿಲ್ಲ  . ನಿನ್ನ ಒಂದು ಮಾತು ಕೇಳುದಕ್ಕಾಗಿ ಈ ಜೀವ ಚಡಪಡಿಸುತ್ತಿರಲಿಲ್ಲ. ಹೇಳು ಯಾಕೆ ನೀ ಹೀಗೆ ಮಾಡಿದೆ ? ನಿನಗೇನು, ಸಾವಿರಾರು ಹುಡುಗಿಯರು ಇದ್ದಾರೆ . ಆದ್ರೆ ನನಗೆ ನಿನ್ನ ಬಿಟ್ಟು ಬೇರೆ ಯಾರಿದ್ದಾರೆ ಹೇಳು ?

      ಯಾಕೋ ಸುಮ್ಮನೇ ಕುಳಿತಾಗ ನೀ ತುಂಬಾನೇ ನೆನಪಾಗ್ತಿಯ. ಬೆಳದಿಂಗಳ ರಾತ್ರಿಯಲ್ಲೂ ಮೈ ಮನ ಬೆವರುತ್ತೆ. ನಿನ್ನ ತೋಳ ತೆಕ್ಕೆಯಲ್ಲಿ ಕಂಡ ಕನಸು ನೆನಪಾಗುತ್ತೆ. ಅದಕ್ಕೆ ನಾ ಏನ್ ಉತ್ತರ ಕೊಡಲಿ ?  ನೀ ಬೇಕೆಂದು ಈ ಮನಸ್ಸು ರಚ್ಚೆ ಹಿಡಿದು ಕುಳಿತು ಬಿಟ್ಟಾಗ ನಾ ಹೇಗೆ ಅದನ್ನ ಸಮಾಧಾನ ಮಾಡಲಿ ?

     ನನ್ನ ಯಾವುದೇ ಪ್ರಶ್ನೆಗಳಿಗೆ ನಿನ್ನ ಬಳಿ ಉತ್ತರ ಇಲ್ಲ ಅನ್ನೋದು ನನಗೆ ಗೊತ್ತು .ಆ ದಿನ ನನ್ನ ಕನಸಿನ ಹೆಜ್ಜೆಗೆ ಗೆಜ್ಜೆ ಕಟ್ಟಿ ಪ್ರೀತಿ ಎನ್ನುವ ವೇದಿಕೆಗೆ ಸಜ್ಜು ಮಾಡುವಾಗ ಇದ್ದ ನಿನ್ನ ಪ್ರೀತಿ ಈಗ ಎಲ್ಲಿ ಹೋಯಿತು  ? ಹರೆಯದ ಪೊರೆ ಕಳಚಿದಾಗ ನಿನ್ನ ಮೋಹದ ಕೂಪಕ್ಕೆ ನಾ ಬಿದ್ದೆ . ನಿನ್ನೂಡನೆ ಕಳೆದ ಪ್ರತಿ ಕ್ಷಣ ನನ್ನ ಜೀವನದಲ್ಲಿ ಮರೆಯುವುದಕ್ಕೆ  ಆಗಲ್ಲ ಕಣೋ .....

     ಪ್ರೇಮಿಗಳ ದಿನ ಸನಿಹ ಬರುತಿದೆ .ನೀ ಕೊಟ್ಟ ಆ ಚಿಕ್ಕ ಲವ್ ಬರ್ಡ್ ನನ್ನ ಹಾಗೇ ಮೂಕವಾಗಿದೆ. .ಅದಕ್ಕೂ ಇಂದು ಸ್ವತಂತ್ರ ಕೊಟ್ಟಿದ್ದೇನೆ .ಬಾನೆತ್ತರಕ್ಕೆ ಅದು ಹಾರಿಹೊಗಲೆಂದು.ಹಾಗೆಯೇ ನನ್ನ ಮನಸ್ಸಿನಲ್ಲಿ ಮನೆ ಮಾಡಿರುವ ನಿನ್ನ ನೆನಪುಗಳು ಸಹ ಶಾಶ್ವತವಾಗಿ ನನ್ನಿಂದ ದೂರವಾಗಲಿದೆ.ಇನ್ನೆಂದೂ ತಿರುಗಿ ನೋಡುವ ಪ್ರಯತ್ನ ಮಾಡಬೇಡ.

Comments