ನೆಟ್ ದೈವ

ನೆಟ್ ದೈವ

ಬರಹ

ಅಂತರ್ಜಾಲ ನಿಸರ್ಗವೇ?
ನಿಸರ್ಗ ದೇವರೇ?
ಕಣ್ಣಿಗೆ ಕಾಣದು, ಕಿವಿಗೆ ಕೇಳದು, ಮುಟ್ಟಲಾಗದು ನಿಸರ್ಗ
ಅಂತೆಯೇ ಅಂತರ್ಜಾಲ ಇಂದ್ರಿಯಗಳಿಗೆ ನಿಲುಕದು
ಯಾರ ಕೈಗೂ ಸಿಲುಕದು
ಆದರೂ ತನ್ನ ಕರಾಮತ್ತು ತೋರುವುದು

ಜಾಲದಿ ಸಿಲುಕಿದವರು ಒಬ್ಬರನೊಬ್ಬರು
ನೋಡದವರು, ಅರಿಯದವರು,
ಆದರೂ ಚಿರಪರಿಚಿತರು
ಚಾಟು ಪದ್ಯ ತಿಳಿಯದ, ಚಾಟ್ ತಿನ್ನದ
ಮಂದಿಯೂ ಚಾಟಿಸುವವರು ಚಿರಪರಿಚಿತರಂತೆ

ಯಾರ ಮನೆಯನೂ ಭಿಡೆಯಿಲ್ಲದೇ ಹೊಕ್ಕುವ
ಎಲ್ಲರ ಮನದಲೂ ನೆಲೆಸಿ ನಲಿದಾಡುವ
ಹೃದಯಕೆ ಲಗ್ಗೆ ಹಾಕುವ
ತಿಳಿವಿಗೆ ಬರದೇ ಪ್ರೇಮವ ಬೆಸೆಯುವ
ತಿಳಿಯದೆಯೇ ಪರಕಾಯ ಪ್ರವೇಶಿಸುವ
ಪರಮ ಶಕ್ತನ ಸ್ವರೂಪ

ನಯವಾಗಿ ಹಿತಚಿಂತಕವಾಗಿ
ತಿಳಿವಿಗೆ ಬರದೇ ವಂಚಿಸುವ
ಎಲ್ಲರೊಳಲೊಂದಾಗಿ ಎಲ್ಲರ ಒಂದಾಗಿಸಿ
ಒಂದನು ನುಚ್ಚು ನೂರಾಗಿಸಿ
ಸಿಗಿದು ಬಗೆದು ಅಟ್ಟಹಾಸಗೈಯುವ
ವೀರ ಪರಾಕ್ರಮಿಯವತಾರ

ಕ್ಷಣಮಾತ್ರದಲಿ
ಎಲ್ಲ ವಿಷಯಗಳ ಬಲ್ಲ ಪಂಡಿತನಂತೆ
ಸೂಕ್ತ ಉತ್ತರ ಸಲಹೆ ಒದಗಿಸುವ
ಭೂತ ಭವಿಷ್ಯತ್ತನು ನಿಖರವಾಗಿ ತಿಳಿಸುವ
ಮಿತ್ರ, ತತ್ವಜ್ಞಾನಿ, ದಾರಿದೀಪ
ದೈವಾಂಶ ಸಂಭೂತನಲ್ಲದಿನ್ನೇನು?

ಕ್ಷಣ ಮಾತ್ರದಲಿ ಒಂದೆಡೆಯಿಂದ ಇನ್ನೊಂದೆಡೆಗೆ
ಹಾರುವ ಹಾರಿಸುವ ಶಕ್ತಿಯ ಸ್ವರೂಪ
ಅಶರೀರವಾಣಿ ಮೂಡಿಸುವ
ಕೂತಲ್ಲೇ ವಿಶ್ವರೂಪ ತೋರಿಸುವ
ಬಗೆ ಬಗೆ ಜ್ಞಾನಾರ್ಜನೆಯ ಸಾಧನ
ದೇವನಲ್ಲದೇ ಮತ್ತೇನು.

ಈಗ ಘಂಟಾಘೋಷವಾಗಿ ಹೇಳಬಲ್ಲಿರೇ
ಅಂತರ್ಜಾಲ ನಿಸರ್ಗದ ಅಂಶ
ದೈವತ್ವದ ಸ್ವರೂಪ.